ಬೆಂಗಳೂರು, ಅ.23 www.bengaluruwire.com : ಮಿಲಿಟರಿ ಗುಪ್ತಚರ ತಂಡ ಹಾಗೂ ಚಿತ್ರದುರ್ಗದ ಶ್ರೀರಾಂಪುರ ಪೊಲೀಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ವಶಕ್ಕೆ ಪಡೆದು, 150 ಯುವಕರನ್ನು ವಂಚಿಸಿದ ನಕಲಿ ಸೇನಾ ನೇಮಕಾತಿ ಹಗರಣವನ್ನು ಬಯಲಿಗೆಳೆದಿದೆ.
ಅಕ್ಟೋಬರ್ 20 ರಂದು ಚಿತ್ರದುರ್ಗದಲ್ಲಿ ವಂಚಕ ಮತ್ತು ಆತನ ಸಹಚರನನ್ನು ಸೆರೆಹಿಡಿಯಲು ಬೆಂಗಳೂರಿನ ಮಿಲಿಟರಿ ಗುಪ್ತಚರ ತಂಡ ಮತ್ತು ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ ಪೊಲೀಸ್ ಠಾಣೆಯ ತಂಡವು ಜಂಟಿ ಕಾರ್ಯಾಚರಣೆಯನ್ನು ನಡೆಸಿ ಬಂಧಿಸಿತು. ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯಲ್ಲಿ, ಕೆಲಸ ನೀಡುವುದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ 150 ಯುವಕರಿಗೆ ನೇಮಕಾತಿ ನೆಪದಲ್ಲಿ 1 ಕೋಟಿ ರೂ. ವಂಚಿಸಿದ್ದರು.
ದಾವಣಗೆರೆ ಜಿಲ್ಲೆಯ ಪ್ರಕಾಶ್ (31 ವರ್ಷ) ಎಂಬುವರು ಭಾರತೀಯ ಸೇನೆಯಿಂದ ಓಡಿಹೋದ ಹುಬ್ಬಳ್ಳಿಯ ನಿವಾಸಿಯಾದ ಹುಬ್ಬಳ್ಳಿಯ ಶಿವರಾಜ್ ವಟಗಲ್ (40 ವರ್ಷ) ವಿರುದ್ಧ ದೂರು ದಾಖಲಿಸಿದ್ದಾರೆ. ಶಿವರಾಜ್ ಹಾಗೂ ಆತನ ಸಹಚರರಾದ ಬೀಮವ್ವ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ಈ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿ, ಅವರಿಂದ ನಕಲಿ ಗುರುತಿನ ಚೀಟಿ ಮತ್ತು ಸೇನಾ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.