ಬೆಂಗಳೂರು, ಅ.13 www.bengaluruwire.com : ಸೈಬರ್ ಕ್ರೈಮ್ ನಲ್ಲಿ ಇತ್ತೀಚೆಗೆ ಬ್ಯಾಂಕ್ ಖಾತೆ ಹೊಂದಿದವರ ಗಮನಕ್ಕೆ ಬಾರದೆ ಎಷ್ಟೋ ಜನರು ಹಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಹಣಕಾಸು ವಹಿವಾಟು ನಡೆಸುವವರು ಸೈಬರ್ ಅಪರಾಧ ಮಾಡುವವರ ಜಾಲಕ್ಕೆ ಸುಲಭವಾಗಿ ಸಿಕ್ಕಿಬೀಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಆಧಾರ್ ಕಾರ್ಡ್ ನೋಂದಾಯಿಸುವಾಗ ನಾವು ನೀಡಿದ ಬಯೋಮೆಟ್ರಿಕ್ಸ್ (ಬರಳಚ್ಚು) ಕಾರಣ ಎನ್ನುತ್ತಿದ್ದಾರೆ ಸೈಬರ್ ಕ್ರೈಮ್ ಪೊಲೀಸರು.
ಆಧಾರ್ ಕಾರ್ಡ್ ದತ್ತಾಂಶವನ್ನು ಬಳಸಿಕೊಂಡು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (Aadhar Enable Payment System – AEPS) ಮೂಲಕ ಹಣ ಪಾವತಿ, ಹಣ ತೆಗೆಯುವುದು, ನಗದು ಬಾಕಿ ವಿಚಾರಣೆ, ಹಣದ ಸಣ್ಣ ವಹಿವಾಟು ವಿವರ, ನಗದು ವರ್ಗಾವಣೆ, ದೃಢೀಕರಣ, ಭೀಮ್ ಆಧಾರ್ ಪೇ, ಇ-ಕೆವೈಸಿ, ಮೊಬೈಲ್ ಸಿಮ್ ಖರೀದಿ ಹೀಗೆ ಹಲವು ಸೇವೆಗಳನ್ನು ಪಡೆಯಬಹುದು. ಸೈಬರ್ ವಂಚಕರು ಆಧಾರ್ ಕಾರ್ಡ್ ನಲ್ಲಿರುವ ವ್ಯಕ್ತಿಯ ವೈಯುಕ್ತಿಕ ವಿವರವಾದ ಫಿಂಗರ್ ಪ್ರಿಂಟ್ (ಬೆರಳಚ್ಚು) ದತ್ತಾಂಶವನ್ನೇ ಕದ್ದು (Hack) ಆ ಮೂಲಕ ಯಾವುದೇ ಮೊಬೈಲ್ ಒಂದು ಬಾರಿಯ ಪಾಸ್ ವರ್ಡ್ (OTP) ಸಹಾಯವಿಲ್ಲದೇ, ವ್ಯಕ್ತಿಯ ಬ್ಯಾಂಕ್ ಖಾತೆ ಅಥವಾ ಹಣಕಾಸು ಸಂಸ್ಥೆಗಳಲ್ಲಿಟ್ಟ, ವ್ಯಾಲೇಟ್ ನಲ್ಲಿರುವ ಹಣವನ್ನು ದೋಚುತ್ತಿದ್ದಾರೆ.
ಇದಕ್ಕೆ ಪರಿಹಾರವೇನು? :
ತಾವು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಸೈಬರ್ ವಂಚಕರು ಹ್ಯಾಕ್ ಮಾಡುತ್ತಿರುವುದನ್ನು ತಪ್ಪಿಸಲು, https://myaadhaar.uidai.gov.in ಎಂಬ ವೆಬ್ ಸೈಟ್ ಮೂಲಕ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಬಯೋಮೆಟ್ರಿಕ್ ಲಾಕ್ ಮಾಡಬಹುದು ಅಥವಾ ನಿಮ್ಮ ಹತ್ತಿರದ ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ತೆರಳಿ ನಿಮ್ಮ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಅನ್ನು ಲಾಕ್ ಮಾಡಿಸಿ, ಸಾಧ್ಯವಾದಷ್ಟು ಫಿಂಗರ್ ಪ್ರಿಂಟ್ ಕೋರುವ ಯಾವುದೇ ಮೊಬೈಲ್ ಅಪ್ಲಿಕೇಷನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಬಳಕೆ ಮಾಡದಿದ್ದರೆ ಒಳಿತು. ಒಂದು ವೇಳೆ ನೀವು ಎಇಪಿಎಸ್ ಮೂಲಕ ವಂಚನೆಗೆ ಒಳಗಾದಲ್ಲಿ ತಕ್ಷಣವೇ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ https://cybercrime.gov.in ವೆಬ್ ಸೈಟ್ ನಲ್ಲಿ ನೇರವಾಗಿ ದೂರು ದಾಖಲಿಸಬಹುದು.
ಬಳ್ಳಾರಿ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಅ.10ರಂದು ಆಧಾರ್ ಆಧಾರಿತ ಬಯೋಮೆಟ್ರಿಕ್ ದತ್ತಾಂಶ ಬಳಸಿಕೊಂಡು ಸೈಬರ್ ವಂಚನೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಗಮನವಹಿಸುವಂತೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ದೇಶದಲ್ಲಿ 2021ರಲ್ಲಿ 53 ಸಾವಿರ ಸೈಬರ್ ಅಪರಾಧ ಪ್ರಕರಣ ದಾಖಲು :
ದೇಶದಲ್ಲಿ ಅಪರಾಧಗಳ ಅಂಕಿ-ಅಂಶಗಳನ್ನು ಸಂಗ್ರಹಿಸಿ ಪ್ರಕಟಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB), ಭಾರತದಲ್ಲಿ ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಕೆಲವು ವಿವರಗಳನ್ನು ಬಹಿರಂಗಪಡಿಸಿದೆ. ಅದೇನೆಂದರೆ 2019 ರಲ್ಲಿ 44,735, ಅದೇ ರೀತಿ 2020ನೇ ಇಸವಿಯಲ್ಲಿ 50,035 ಮತ್ತು 2021 ರಲ್ಲಿ 52,974 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದೆ. ಇನ್ನು ಅದೇ ವರ್ಷಗಳಲ್ಲಿ ಸೈಬರ್ ವಂಚನೆ (Cyber Fraud) ಪ್ರಕರಣಗಳ ಸಂಖ್ಯೆ ಕ್ರಮವಾಗಿ 6,229, 10,395 ಮತ್ತು 14,007 ದಾಖಲಾಗಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In, ಇದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಡಿಯಲ್ಲಿ ಬರುವ ಸಂಸ್ಥೆ) 2019ನೇ ಇಸವಿಯಲ್ಲಿ 11,58,208 ಹಾಗೂ 2020ನೇ ಇಸವಿಯಲ್ಲಿ 14,02,809 ಮತ್ತು 2021ನೇ ಸಾಲಿನಲ್ಲಿ ಒಟ್ಟು 13,91,457 ಸಂಖ್ಯೆಯ ಸೈಬರ್ ಭದ್ರತಾ ಘಟನೆಗಳು ಅಂದರೆ ಫಿಶಿಂಗ್, ದುರುದ್ದೇಶಪೂರಿತ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ರಾನ್ ಸಮ್ವೇರ್ (ransomware) ಪ್ರಕರಣಗಳು ನಡೆದಿದ್ದು, ಅದನ್ನು ಸಿಇಆರ್ ಟಿ-ಇನ್ ಗಮನಿಸಿ ಅವುಗಳನ್ನು ನಿರ್ವಹಿಸಿದೆ.
ದೇಶದಲ್ಲಿರೋದು ಕೇವಲ 312 ಸೈಬರ್ ಕ್ರೈಮ್ ಸ್ಟೇಷನ್ ಗಳು :
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ (ಎನ್‌ಬಿಎಫ್‌ಐ) ಸಂಗ್ರಹಿಸಿದ ಅಧಿಕೃತ ಮಾಹಿತಿ ಬಹಿರಂಗವಾಗಿದೆ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಐಗಳು ವರದಿ ಮಾಡಿದಂತೆ, 2021 ಆರ್ಥಿಕ ವರ್ಷದಲ್ಲಿ, ವಂಚನೆಯ ಪ್ರಕರಣಗಳು 7.05 ಲಕ್ಷದಷ್ಟಿದ್ದು, ಅದರ ಮೌಲ್ಯ 542.7 ಕೋಟಿ ರೂ.ಗಳಾಗಿದೆ. ಇನ್ನು ಆರ್ಥಿಕ ವರ್ಷ 2022 ರಲ್ಲಿ, ವಂಚನೆ ಪ್ರಕರಣಗಳು 12.27 ಲಕ್ಷಕ್ಕೆ ಏರಿತು, ಅದರ ಒಟ್ಟು ಮೌಲ್ಯವು 1,357.06 ಕೋಟಿ ರೂ., ಇನ್ನು 2023ನೇ ಆರ್ಥಿಕ ವರ್ಷದಲ್ಲಿ ಅವುಗಳ ಸಂಖ್ಯೆ 19.94 ಲಕ್ಷಕ್ಕೆ ಏರಿತು, ಈ ವಂಚನೆ ಪ್ರಕರಣಗಳ ಮೌಲ್ಯ 2,537.35 ಕೋಟಿ ರೂ.ಗಳಾಗಿತ್ತು. 2021 ರಲ್ಲಿ, ಎಟಿಎಂ ಮತ್ತು ಇತರರ ಪ್ರಕರಣಗಳಲ್ಲಿ ವರದಿಯಾದ ಒಟ್ಟು ವಂಚನೆಗಳ ಸಂಖ್ಯೆ ಸುಮಾರು 10.8 ಲಕ್ಷ, ವಂಚನೆಯಾದ ಮೌಲ್ಯ 1,119 ಕೋಟಿ ರೂ. ಅಂದರೆ, ಪ್ರತಿ 67,000 ಎಟಿಎಂ ವಹಿವಾಟಿಗೆ ಒಂದು ವಂಚನೆ ನಡೆಯುತ್ತಿದೆ. ಇದೊಂದು ಗಂಭೀರವಾದ ವಿಚಾರ. ಸೈಬರ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ, ಭಾರತದಲ್ಲಿ ಕೇವಲ 312 ಸೈಬರ್ ಪೊಲೀಸ್ ಠಾಣೆಗಳು ಮತ್ತು ಅಪರಾಧಗಳನ್ನು ಎದುರಿಸಲು ಬಲವಾದ ಕಾನೂನುಗಳ ಕೊರತೆಯಿದೆ.
ರಾನ್ ಸಮ್ವೇರ್ ಎಂದರೇನು? :
ರಾನ್ ಸಮ್ವೇರ್ ಒಂದು ರೀತಿಯ ಕ್ರಿಪ್ಟೋವೈರಲಾಜಿಕಲ್ ಮಾಲ್‌ವೇರ್ ಆಗಿದ್ದು ಅದು ವ್ಯಕ್ತಿಯೊಬ್ಬನ ವೈಯಕ್ತಿಕ ಡೇಟಾವನ್ನು ಪ್ರಕಟಿಸಲು ಅಥವಾ ಸುಲಿಗೆ ಪಾವತಿಸದ ಹೊರತು ಅವರಿಗೆ ತಮ್ಮ ಅಂತರ್ಜಾಲ ಖಾತೆಯ ಪ್ರವೇಶವನ್ನು ಶಾಶ್ವತವಾಗಿ ನಿರ್ಬಂಧಿಸುವ ಕುರಿತಂತೆ ಬೆದರಿಕೆ ಹಾಕುತ್ತದೆ.