ಬೆಂಗಳೂರು, ಅ.09 www.bengaluruwire.com : “ಬ್ರ್ಯಾಂಡ್ ಬೆಂಗಳೂರು (Brand Bengaluru) ಯೋಜನೆ ಅಡಿಯಲ್ಲಿ ಬೆಂಗಳೂರಿನ ನಾಗರೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ‘ನನ್ನ ಸ್ವತ್ತು’, ‘ಸ್ವಯಂ ಚಾಲಿತ ನಕ್ಷೆ ಅನುಮೋದನೆ’ ಹಾಗೂ ವಾರ್ಡ್ ಮಟ್ಟದಲ್ಲಿ ‘ರಾಜಕೀಯೇತರ ಸಾರ್ವಜನಿಕ ಸಮಿತಿ’ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಸರ್ಕಾರ ಕೈಗೊಳ್ಳಲಿರುವ ಕ್ರಾಂತಿಕಾರಿ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.
“ತಕ್ಷಣವೇ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಆಲೋಚನೆ ಸರ್ಕಾರಕ್ಕಿಲ್ಲ. ಎಲ್ಲಿ ತೆರಿಗೆ ಪೋಲಾಗುತ್ತಿದೆ, ಯಾರು ಕಟ್ಟುತ್ತಿಲ್ಲ. ಹೀಗಾಗಿ ನಗರದಲ್ಲಿ ಆಸ್ತಿಗಳ ಮರು ಸಮೀಕ್ಷೆ ನಡೆಸಿ, ಆಸ್ತಿ ಪಟ್ಟಿಯನ್ನು ಡಿಜೀಟಲೀಕರಣ ಮಾಡಿ ಎಲ್ಲಾ ದಾಖಲೆಗಳು ಜನರಿಗೆ ಸುಲಭವಾಗಿ ಸಿಗುವಂತೆ ಯೋಜನೆ ರೂಪಿಸಲಾಗುವುದು. ಮರು ಸಮೀಕ್ಷೆ ಆದ ನಂತರ ಪ್ರಸ್ತುತ ಇರುವ ತೆರಿಗೆ ಸಂಗ್ರಹಕ್ಕಿಂತ ಎರಡು- ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ” ಎಂದು ತಿಳಿಸಿದರು.
“ಮನೆ ನಿರ್ಮಾಣದ ನಕ್ಷೆ ಅನುಮೋದನೆ (Plan Sanction) ನೀಡುವ ವಿಚಾರದಲ್ಲಿ, ಸ್ವಯಂ ಚಾಲಿತ ನಕ್ಷೆ ಮಂಜೂರಾತಿ ಗೆ ಚಾಲನೆ ನೀಡಲು ಚಿಂತಿಸಿದ್ದೇವೆ. ಇದರಿಂದ ಮನೆ ಕತ್ತಲು ಪ್ಲಾನ್ ಅನುಮೋದನೆ ಪಡೆಯಲು ಸರ್ಕಾರಿ ಕಚೇರಿ ಅಲೆಯುವಂತಿಲ್ಲ” ಎಂದು ವಿವರಿಸಿದರು.
“ಪ್ರತಿ ವಾರ್ಡ್ ಉದ್ಯಾನವನ, ಆಟದ ಮೈದಾನಗಳ ನಿರ್ವಹಣೆಗೆ “ರಾಜಕೀಯೇತರ ಸಾರ್ವಜನಿಕರ ಸಮಿತಿ” ಮಾಡುವ ಆಲೋಚನೆಯಿದ್ದು, ಅದಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ, ಜನರೇ ಸೇರಿ ಉದ್ಯಾನ ಮತ್ತು ಆಟದ ಮೈದಾನಗಳನ್ನು ಸ್ಥಳೀಯ ಸಿಎಸ್ಆರ್ ನಿಧಿ ಬಳಸಿ ಅಭಿವೃದ್ದಿ ಮಾಡುವ, ಒತ್ತುವರಿಯಿಂದ ರಕ್ಷಣೆ ಮಾಡುವ ಯೋಜನೆಯ ಬಗ್ಗೆ ಚಿಂತನೆ ನಡೆಯುತ್ತಿದ್ದು, ಸ್ಥಳೀಯ ಶಾಸಕರ ಬಳಿ ಚರ್ಚೆ ಮಾಡಿ ನೀತಿ ನಿರೂಪಣೆ ತಯಾರು ಮಾಡಲಾಗುವುದು” ಎಂದರು.
“ಸಂಚಾರ ದಟ್ಟಣೆ ನಿವಾರಣೆ, ತೆರಿಗೆ ಸಂಗ್ರಹ ಹೆಚ್ಚಳ, ಕಸ ವಿಲೇವಾರಿ ಈ ಮೂರು ವಿಚಾರಗಳೇ ಸರ್ಕಾರದ ಹಾಗೂ ನನ್ನ ಪ್ರಮುಖ ಗುರಿ” ಎಂದು ತಿಳಿಸಿದರು.
“ಸಾರ್ವಜನಿಕ ಕುಂದು- ಕೊರತೆ, ದೂರುಗಳ ವಿಚಾರಗಳಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ದಿ ಸಚಿವರ ಕಚೇರಿಯಿಂದಲೇ ನೇರವಾಗಿ ನಿರ್ವಹಣೆ ಮಾಡುವ ಆಲೋಚನೆಯಿದೆ. “ಸಹಾಯಹಸ್ತ” ಎನ್ನುವ ವೆಬ್ಸೈಟ್ ಅಭಿವೃದ್ದಿ ಮಾಡುತ್ತಿದ್ದು, ಇದರಿಂದ ನಾವೇ ನೇರವಾಗಿ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಅಗತ್ಯ ಪರಿಹಾರ ನೀಡುವ ಯೋಚನೆಯಿದೆ. ಜನರು ಪಾಲಿಕೆಗೆ ಮನವಿ ನೀಡಿ ಕಾಯುವ ಕೆಲಸ ಹೊಸ ಆಲೋಚನೆಯಿಂದ ತಪ್ಪುತ್ತದೆ” ಎಂದು ತಿಳಿಸಿದರು.
“ಸಂಚಾರ ದಟ್ಟಣೆ ಕಡಿಮೆ ಮಾಡಲು ಮೇಲ್ಸೆತುವೆ, ಮೆಟ್ರೋ ಹಾಗೂ ಸುರಂಗ ರಸ್ತೆ ಈ ಮೂರು ಬಗೆಯ ಪರಿಹಾರ ಮಾತ್ರ ಇರುವುದು. ಈಗ ರಸ್ತೆ ಅಗಲೀಕರಣ ಕಷ್ಟದ ಕೆಲಸ, ಭೂಸ್ವಾದೀನದ ಬೆಲೆ ಹೊಸ ಕಾನೂನು ಬಂದ ನಂತರ ಹೆಚ್ಚಳವಾಗಿದೆ. ಜನ ನಮಗೆ ಸಹಕಾರ ನೀಡುವುದು ಸಹ ಕಷ್ಟವಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿರುವ ಐಟಿ ಪಾರ್ಕ್ ಉದ್ಯೋಗಿಗಳ ಕಚೇರಿ ಸಮಯ ಹಾಗೂ ಶಾಲೆಗಳ ಸಮಯದಲ್ಲಿ ಬದಲಾವಣೆ ಬಗ್ಗೆ ಚರ್ಚೆ ನಡೆಸಲು ಸಂಚಾರಿ ಪೊಲೀಸ್ ವಿಭಾಗಕ್ಕೆ ಸೂಚಿಸಲಾಗಿದ್ದು, ಅವರು ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬಂದು ವರದಿ ಸಲ್ಲಿಸಲಿದ್ದಾರೆ” ಎಂದು ತಿಳಿಸಿದರು.
“ರಾಜಕಾಲುವೆ ವಿಚಾರವಾಗಿ ಬಿಬಿಎಂಪಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ನೀರು ಹರಿಯಲು ಎಲ್ಲೆಲ್ಲಿ ತೊಡಕುಂಟಾಗಿದೆ ಅಲ್ಲೆಲ್ಲಾ ಮುಂಚಿತವಾಗಿಯೇ ಒತ್ತುವರಿ ತೆರವುಗೊಳಿಸಲು ಸೂಚಿಸಲಾಗಿದೆ” ಎಂದು ಹೇಳಿದರು.
“ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದೇವೆ. ಕಸವನ್ನು ಒಂದು ಕಡೆ ಮಾತ್ರ ಹಾಕಲಾಗುತ್ತಿದ್ದು ಸರಿಯಾಗಿ ವಿಂಗಡಣೆಯಾಗುತ್ತಿಲ್ಲ. ಆದ ಕಾರಣ ಪರಿಸರ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಮಂಗಳವಾರ (ಅ.10) ಕರೆಯಲಾಗಿದೆ. ಒಮ್ಮೆ ಕಸವನ್ನು ಒಂದು ಕಡೆ ಹಾಕಿದರೆ ಮುಂದಿನ 50 ವರ್ಷಗಳು ಆ ಸ್ಥಳದಲ್ಲಿ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳಬಾರದು. ಆ ಸ್ಥಳದಲ್ಲೇ ಕಸವನ್ನು ಗೊಬ್ಬರ ಹಾಗೂ ವೈಜ್ಞಾನಿಕ ವಿಂಗಡಣೆ ಮಾಡಲಾಗುವುದು” ಎಂದು ಹೇಳಿದರು.
“750 ದಶಲಕ್ಷ ಲೀ. ನೀರು ಪೂರೈಸುವ ಕಾವೇರಿ 5 ನೇ ಹಂತ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿದಂತಾಗುತ್ತದೆ. 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಒಳಚರಂಡಿ ನೀರಿನ ಶುದ್ದೀಕರಣ ಮಾಡುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅನೇಕಲ್, ಅತ್ತಿಬೆಲೆ ಹಾಗೂ 110 ಹಳ್ಳಿಗಳಿಗೆ ಶೀಘ್ರ ಕಾವೇರಿ ನೀರು ನೀಡಲಾಗುವುದು” ಎಂದು ತಿಳಿಸಿದರು.
“ಬಿಡಿಎ ಅಪಾರ್ಟ್ಮೆಂಟ್ ಮತ್ತು ನಿವೇಶನಗಳ ಕುರಿತು ಎರಡು ದಿನಗಳಲ್ಲಿ ಪತ್ರಿಕಾಗೋಷ್ಟಿ ಕರೆದು ವಿವರಣೆ ನೀಡಲಾಗುವುದು. ಇದರ ಬಗ್ಗೆ ವಿಶೇಷವಾದ ಯೋಜನೆ ರೂಪಿಸುತ್ತಿದ್ದು ಪ್ರತ್ಯೇಕ ಚರ್ಚೆ ನಡೆಸಲಾಗುವುದು” ಎಂದು ತಿಳಿಸಿದರು.
“ಬೆಂಗಳೂರು ಯೋಜಿತವಾದ ನಗರವಲ್ಲ, ಒಂದಷ್ಟು ಭಾಗ ಮಾತ್ರ ಸಮರ್ಪಕವಾಗಿತ್ತು, ಆನಂತರ ಬೆಳೆದು, ಈಗ 28 ವಿಧಾನಸಭಾ ಕ್ಷೇತ್ರಗಳು ಒಳಗೆ ಸೇರಿಕೊಂಡಿವೆ. ಪ್ರತಿ ವರ್ಷ 2- 3 ಲಕ್ಷ ಜನರು ಹೊರಗಿನಿಂದ ಬಂದು ಬೆಂಗಳೂರು ಸೇರಿಕೊಳ್ಳುತ್ತಿದ್ದಾರೆ. 1.48 ಕೋಟಿ ಜನ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದು ಎಲ್ಲರೂ ವಾಸಿಸುವ ಯೋಗ್ಯ ನಗರವನ್ನಾಗಿ ರೂಪಿಸಲಾಗುವುದು.
ವಿದ್ಯುತ್ ಸಂಪರ್ಕಗಳು ಎಷ್ಟು ಹೆಚ್ಚಳವಾಗುತ್ತಿವೆ ಎನ್ನುವ ಆಧಾರದ ಮೇಲೆ ಅಂದಾಜು ಸಿಗುತ್ತಿದೆ. ಕುಡಿಯುವ ನೀರು, ಸಂಚಾರ ದಟ್ಟಣೆ ಸೇರಿದಂತೆ ಅನೇಕ ಸಮಸ್ಯೆಗಳು ಹೆಚ್ಚುತ್ತಿದ್ದು, ಇದರ ನಿವಾರಣೆಗೆ 8 ತಂಡಗಳನ್ನು ಮಾಡಿದ್ದು ಅವುಗಳು ನೀಡುವ ವರದಿಯ ಮೇಲೆ ಯೋಜನೆ ರೂಪಿಸಲಾಗುವುದು” ಎಂದು ತಿಳಿಸಿದರು.
ಸ್ವಂತ ಮನೆ ಕಟ್ಟುವವರಿಗೆ ಸ್ವಯಂಚಾಲಿತ ನಕ್ಷೆ ಮಂಜೂರಾತಿ ಅನುಕೂಲಕಾರಿ :
ಮನೆ ಕಟ್ಟುವಾಗ ಸ್ವಯಂಚಾಲಿತ ನಕ್ಷೆ ಮಂಜೂರಾತಿ ಹೇಗೆ ಕೆಲಸ ಮಾಡುತ್ತದೆ ಎಂದು ಕೇಳಿದಾಗ, “ಬೆಂಗಳೂರಿನಲ್ಲಿ ಬಿಡಿಎಯಿಂದ ಹಂಚಿಕೆ ಮಾಡುತ್ತಿರುವ ದೊಡ್ಡ ನಿವೇಶನಗಳಲ್ಲಿ 50/ 60 ಅಳತೆಯ ನಿವೇಶನಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತಿದೆ. ಸದಾಶಿವನಗರ ಹಾಗೂ ಎರಡು ಮೂರು ಕಡೆ ಮಾತ್ರ ದೊಡ್ಡ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.
ಪ್ರಮಾಣಿಕೃತ ಯೋಜನಾ ತಜ್ಞರು, ವಿನ್ಯಾಸಕಾರರೇ ಯೋಜನೆ ತಯಾರಿಸಿ ಅಪ್ಲೋಡ್ ಮಾಡಿದರೆ, ಆ ಯೋಜನೆ ಸರಿಯಾಗಿದ್ದರೆ ಕಂಪ್ಯೂಟರ್ ಅದನ್ನು ಪ್ರಮಾಣೀಕರಿಸಿ ಒಪ್ಪಿಗೆ ನೀಡುತ್ತದೆ. ಇದರಿಂದ ಜನರು ಕಚೇರಿಗೆ ಅಲೆಯುವುದು ತಪ್ಪುತ್ತದೆ. ನಿಗಧಿತ ಶುಲ್ಕ ಪಾವತಿ ಮಾಡಿದರೆ ಸಾಕು, ನೇರವಾಗಿ ಯೋಜನೆಯ ನಕ್ಷೆ ಕೈ ಸೇರುತ್ತದೆ. ಅಪಾರ್ಟ್ ಮೆಂಟ್ ನಿರ್ಮಾಣಕ್ಕೆ ಇದು ಅನ್ವಯವಾಗುವುದಿಲ್ಲ. ಸ್ವಂತ ಮನೆ ಕಟ್ಟುವವರಿಗೆ ಇದು ಹೆಚ್ಚು ಉಪಯೋಗವಾಗುತ್ತದೆ. ಎಲ್ಲಾ ಕಟ್ಟಡ ವಾಸ್ತುಶಿಲ್ಫಿಗಳಿಗೆ ಅವಕಾಶವಿಲ್ಲ. ಪ್ರಮಾಣೀಕೃತರಿಗೆ ಮಾತ್ರ ಅವಕಾಶ” ಎಂದು ತಿಳಿಸಿದರು.
ಆಸ್ತಿ ತೆರಿಗೆ ಸಂಗ್ರಹಕ್ಕೆ ಹೊಸ ತಂಡ :
ಸ್ವಯಂ ಆಸ್ತಿ ತೆರಿಗೆ ಘೋಷಣೆ ಹಳಿ ತಪ್ಪುತ್ತಿದೆಯೇ ಎಂದು ಕೇಳಿದಾಗ, “ಹೌದು, ಜನರು ತಮ್ಮ ಸ್ವಂತ ಆಸ್ತಿ ಘೋಷಣೆ ವೇಳೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. 5,000 ಚದರ ಅಡಿ ಕಟ್ಟಡವಿದ್ದರೆ 2,೦೦೦ ಚದರ ಅಡಿ ಮಾತ್ರ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯುತ್, ನೀರಿನ ಬಿಲ್ ಬಳಕೆಯಿಂದ ತಪ್ಪು ಆಸ್ತಿ ಘೋಷಣೆ ಮಾಡುತ್ತಿರುವುದು ತಿಳಿಯುತ್ತಿದೆ. ಶೀಘ್ರ ಈ ಸಮಸ್ಯೆ ನಿವಾರಣೆಗೆ ಯೋಜನೆ ರೂಪಿಸಲಾಗುವುದು. ಮಂಗಳೂರಿನಲ್ಲಿ ಈ ಬಗ್ಗೆ ಯೋಜನೆಯಿದ್ದು, ಎಲ್ಲದರ ಬದಲಾಗಿ ನಾನೇ ಖುದ್ದಾಗಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೊಸ ತಂಡ ಮಾಡುತ್ತಿದ್ದೇನೆ” ಎಂದರು.
ರಸ್ತೆಗುಂಡಿ ಸಮಸ್ಯೆಗೆ ಮತ್ತೊಂದು ಡಿಜಿಟಲ್ ವೇದಿಕೆ ಅಗತ್ಯವೇ?:
ರಸ್ತೆಗುಂಡಿ ಸಮಸ್ಯೆಗೆ ಈಗಾಗಲೇ ಆಪ್ ಇದ್ದು, ಇಲ್ಲಿ ಬರುವ ದೂರುಗಳನ್ನೇ ನಿರ್ವಹಣೆ ಮಾಡಲು ಆಗುತ್ತಿಲ್ಲ. ಈಗ ಮತ್ತೊಂದು ಡಿಜಿಟಲ್ ವೇದಿಕೆ ಸೃಷ್ಟಿಸುವ ಅಗತ್ಯವಿದೆಯೇ ಎಂದು ಕೇಳಿದಾಗ, “ಹೊಸ ವೇದಿಕೆಯಲ್ಲಿ ಪೊಲೀಸರನ್ನು ಒಳಗೊಂಡು ಯೋಜನೆ ರೂಪಿಸಲಾಗಿದೆ. ಪ್ರತಿ ಏರಿಯಾಗಳ ಸಂಚಾರಿ ಪೊಲೀಸರು ಗಮನ ಹರಿಸಿ ಸಮಸ್ಯೆ ಇರುವ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅನೇಕ ಕಡೆ ಸಾರ್ವಜನಿಕರು ಮಾಹಿತಿ ನೀಡುತ್ತಿದ್ದಾರೆ. ಕೆಲವು ಕಡೆ ನೀಡುತ್ತಿಲ್ಲ. ಪಾಲಿಕೆ ಹಾಗೂ ಸಂಚಾರಿ ಪೊಲೀಸ್ ಇಲಾಖೆ ಜಂಟಿಯಾಗಿ ಕೆಲಸ ಮಾಡಲಿವೆ”
ಕೆರೆ ಒತ್ತುವರಿ ತೆರವು ಕೆಲಸ ನಡೆಯುತ್ತಿದೆ :
ಕೆರೆಗಳ ಒತ್ತುವರಿ, ಕೆರೆಗಳ ನಿರ್ವಹಣೆಗೆ ಹಣ ಮತ್ತು ಇಂಜಿನಿಯರ್ ಗಳ ಕೊರತೆ ಸೇರಿದಂತೆ ಬೆಂಗಳೂರಿನ ಕೆರೆಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆಯಲ್ಲಾ ಎಂದು ಮಾಧ್ಯಮದವರು ಕೇಳಿದಾಗ, “ಈಗಾಗಲೇ ಕೆರೆ ಅಭಿವೃದ್ಧಿ ಪ್ರಾಧಿಕಾರ ಚಾಲ್ತಿಯಲ್ಲಿದೆ. ಆದ್ಯತೆಯ ಮೇರೆಗೆ ಕೆರೆಗಳನ್ನು ಸ್ವಚ್ಚಗೊಳಿಸುವ, ಒತ್ತುವರಿ ತೆರವು ಮಾಡುವ ಕೆಲಸ ನಡೆಯುತ್ತಿದೆ. ಕೆರಗಳಿಗೆ ಕೊಳಚೆ ನೀರು ಹರಿಯದಂತೆ ಕೆಲಸ ಮಾಡಲಾಗುತ್ತದೆ” ಎಂದು ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎನ್.ಎ.ಹ್ಯಾರೀಸ್, ದಿನೇಶ್ ಗೂಳಿಗೌಡ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಮ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಎಂಆರ್ ಸಿಎಲ್ ಎಂ.ಡಿ. ಅಂಜುಮ್ ಪರ್ವೆಜ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್, ಬಿಬಿಎಂಪಿ ವಿಶೇಷ ಆಯುಕ್ತರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.