ಬೆಂಗಳೂರು, ಅ.9 www.bengaluruwire.com : ಅಂತೂ ಇಂತೂ ನಮ್ಮ ಮೆಟ್ರೋದ ನೇರಳೆ ಮಾರ್ಗ (ಪೂರ್ವ – ಪಶ್ಚಿಮ ಮಾರ್ಗ) ಸಂಪೂರ್ಣ ರೈಲು ಕಾರ್ಯಾಚರಣೆ ಇಂದು ಬೆಳಗ್ಗೆ 5 ಗಂಟೆಯಿಂದ ಆರಂಭವಾಗಿದೆ.
ಇದರಿಂದಾಗಿ ಚಲ್ಲಘಟ್ಟ (Challagatta)ದಿಂದ ವೈಟ್‌ಫೀಲ್ಡ್ (Whitefield)ವರೆಗೆ ನೇರಳೆ ಮಾರ್ಗದಲ್ಲಿ ಸಂಪೂರ್ಣ ಮೆಟ್ರೋ ಸಂಚಾರ ಆರಂಭವಾಗಿದ್ದು, ಮೆಟ್ರೋ ಪ್ರಯಾಣಿಕರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ನೇರಳೆ ಸಂಪೂರ್ಣ ಮಾರ್ಗವು ಈಗ ಒಟ್ಟು 43.49 ಕಿ.ಮೀ ಉದ್ದವಿದ್ದು, 37 ನಿಲ್ದಾಣಗಳನ್ನು ಒಳಗೊಂಡಿದೆ. ಒಂದು ತುದಿಯಿಂದ ಮತ್ತೊಂದು ತುದಿಗೆ ಸಂಪರ್ಕಿಸಲು ಮೆಟ್ರೋ ನಿಗಮ 60 ರೂ. ಟಿಕೆಟ್ ದರವನ್ನು ನಿಗದಿಪಡಿಸಿದೆ.
ನೇರಳೆ ಮಾರ್ಗ ಸಂಪೂರ್ಣವಾಗಿ ತೆರೆದಿರುವುದರಿಂದ ಐಟಿ ಉದ್ಯೋಗಿಗಳು, ಸಾರ್ವಜನಿಕರಿಗೆ ಭಾರಿ ಅನುಕೂಲವಾಗಲಿದೆ. ಈ ಮೂಲಕ ನಮ್ಮ ಮೆಟ್ರೋದ ಅತಿ ಉದ್ದದ ಮಾರ್ಗ ಎನ್ನುವ ಖ್ಯಾತಿ ಈಗ ನೇರಳೆ ಮಾರ್ಗದ ಪಾಲಾಗಿದೆ. 43.49 ಕಿಮೀ ದೂರವನ್ನು ಕ್ರಮಿಸಲು ಸುಮಾರು 76 ನಿಮಿಷಗಳ ಸಮಯ ಬೇಕು ಎಂದು ಅಂದಾಜಿಸಲಾಗಿದೆ. ಕೆಆರ್ ಪುರ – ಬೈಯಪ್ಪನಹಳ್ಳಿ ನಡುವಿನ ಮೆಟ್ರೋ ಕಾಮಗಾರಿಗೆ 363.48 ಕೋಟಿ ರೂ. ಹಾಗೂ ಕೆಂಗೇರಿ – ಚಲ್ಲಘಟ್ಟ ನಡುವಿನ ಮಾರ್ಗಕ್ಕೆ 167.97 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಚಲ್ಲಘಟ್ಟ – ಕೆಂಗೇರಿ (2.05 ಕಿ.ಮೀ), ಕೆಆರ್ ಪುರ – ಬೈಯಪ್ಪನಹಳ್ಳಿ (2.10 ಕಿ.ಮೀ) ನಡುವಿನ ನೇರಳೆ ಮಾರ್ಗದಲ್ಲಿ ಸುರಕ್ಷತಾ ತಪಾಸಣಾ ಕಾರ್ಯ ನಡೆಸಿದ್ದ ಸಿಎಂಆರ್ ಎಸ್ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಆದರೆ ಅಧಿಕೃತ ಸಂಚಾರ ಆರಂಭವಾಗಿರಲಿಲ್ಲ. ಆ ಬಳಿಕ ಬಿಎಂಆರ್ ಸಿಎಲ್ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲು ಪತ್ರ ಬರೆದಿತ್ತು. ಅಕ್ಟೋಬರ್ 7ರಂದು ಈ ಮಾರ್ಗ ಉದ್ಘಾಟನೆ ಆಗುತ್ತೆ ಎನ್ನಲಾಗಿತ್ತಾದರೂ ನಂತರ ದಿನಾಂಕ ನಿಗದಿಯಾಗಿಲ್ಲ ಎಂದು ಬಿಎಂಆರ್ ಸಿಎಲ್ ಸ್ಪಷ್ಟನೆ ನೀಡಿತ್ತು.
ಇದರ ಬೆನ್ನಲ್ಲೇ ಐಟಿ ಉದ್ಯೋಗಿಗಳು, ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರಗಳ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜಕೀಯ ಲಾಭಕ್ಕೆ ಜನರಿಗೆ ತೊಂದರೆ ಕೊಡದಂತೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು ಯಾವ ಉದ್ಘಾಟನಾ ಸಮಾರಂಭವೂ ಇಲ್ಲದೆ ರೈಲು ಸಂಚಾರ ಆರಂಭಿಸಲು ಹೇಳಿದೆ.
ಪೂರ್ವ – ಪಶ್ಚಿಮ ಮಾರ್ಗ ಸಂಪೂರ್ಣವಾಗಿ ಕಾರ್ಯನಿರ್ವಹಣೆ ಅ.9ರಿಂದ ಪ್ರಾರಂಭವಾಗಿರುವುದರಿಂದ ಈಗ ನಮ್ಮ ಮೆಟ್ರೋ ಒಟ್ಟು 73.81 ಕಿಮೀ ಮೆಟ್ರೋ ಮಾರ್ಗವನ್ನು ಹೊಂದಿದಂತಾಗಿದೆ (ಹಸಿರು ಮತ್ತು ನೇರಳೆ ಮಾರ್ಗ ಸೇರಿಸಿ). ಒಟ್ಟು 66 ಮೆಟ್ರೋ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ.
ಹೊಸ ಮಾರ್ಗದ ಕಾರ್ಯಾಚರಣೆಯ ಸಮಯ ಹೀಗಿದೆ :
* ವೈಟ್‌ಫೀಲ್ಡ್ ನಿಂದ ಪಟ್ಟಂದೂರು ಅಗ್ರಹಾರ ಮಾರ್ಗದಲ್ಲಿ ಪ್ರತಿ 10 ನಿಮಿಷಗಳಿಗೆ ಒಂದು ರೈಲು ಸೇವೆ ಇರಲಿದೆ.
* ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆ ನಿಲ್ದಾಣಕ್ಕೆ ಪ್ರತಿ 5 ನಿಮಿಷಕ್ಕೆ ಒಂದು ಮೆಟ್ರೋ ರೈಲು ಸಂಚರಿಸಲಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ – ಎಂಜಿ ರಸ್ತೆ ಮಾರ್ಗದಲ್ಲಿ ದಟ್ಟಣೆಯ ಸಮಯದಲ್ಲಿ ಪ್ರತಿ 3 ನಿಮಿಷಕ್ಕೆ ಒಂದು ರೈಲು ಸಂಚಾರ ಇರಲಿದೆ.
* ಮೈಸೂರು ರಸ್ತೆಯಿಂದ – ಚಲ್ಲಘಟ್ಟ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ.
* ಕಾಡುಗೋಡಿ (ವೈಟ್‌ಫೀಲ್ಡ್) ನಿಲ್ದಾಣದಿಂದ ಕೊನೆಯ ಮೆಟ್ರೊ ರೈಲು ರಾತ್ರಿ 10.45ಕ್ಕೆ ಹೊರಡಲಿದೆ. ಬೆಳಗ್ಗೆ 5 ಗಂಟೆಗೆ ಮೊದಲ ರೈಲು ಸಂಚಾರ ಆರಂಭವಾಗಲಿದೆ.
ಕೊನೆಯ ರೈಲು ಹೊರಡುವ ಸಮಯ ಹೀಗಿದೆ :
ಕೊನೆಯ ರೈಲು ವೈಟ್ ಫೀಲ್ಡ್ (ಕಾಡುಗೋಡಿ) ನಿಂದ ರಾತ್ರಿ 10.45ಕ್ಕೆ ಹಾಗೂ ಉಳಿದ ಟರ್ಮಿನಲ್‌ಗಳಿಂದ ರಾತ್ರಿ 11.05ಕ್ಕೆ ಹೊರಡುತ್ತದೆ. ಎಲ್ಲಾ ಟರ್ಮಿನಲ್ ಗಳಿಂದ ಮೆಟ್ರೋ ರೈಲು ಸೇವೆ ಎಂದಿನಂತೆ ಬೆಳಗ್ಗೆ 5 ರಿಂದ ಆರಂಭವಾಗುತ್ತದೆ.