ನವದೆಹಲಿ, ಸೆ.30 www.bengaluruwire.com : ಇಸ್ರೊದ ಹೆಮ್ಮೆಯ ಬಾಹ್ಯಾಕಾಶ ಯೋಜನೆ ಆದಿತ್ಯ ಎಲ್1 (Aditya L1) ಇದೀಗ ಮಹತ್ವ ಘಟ್ಟ ತಲುಪಿದೆ.
ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯು ಭೂಮಿಯಿಂದ 9.2 ಲಕ್ಷ ಕಿಲೋಮೀಟರ್‌ಗಳಷ್ಟು ದೂರ ಕ್ರಮಿಸಿದ್ದು, ಭೂಮಿಯ ಪ್ರಭಾವದ ಗೋಳದಿಂದ ಯಶಸ್ವಿಯಾಗಿ ಪಾರಾಗಿ, ಈಗ ಸೂರ್ಯ-ಭೂಮಿಯ ಲಾಗ್ರೇಂಜ್ ಪಾಯಿಂಟ್ 1 (L1) ಕಡೆಗೆ ತನ್ನ ಮಾರ್ಗದತ್ತ ಪ್ರಯಾಣ ಬೆಳೆಸಿದೆ. ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದ ವರೆಗೆ ನೌಕೆ ಕ್ರಮಿಸಲಿದೆ. ಈ ಪಯಣದಲ್ಲಿ ನೌಕೆಯು ಈಗಾಗಲೇ 9.2 ಲಕ್ಷ ಕಿಲೋಮೀಟರ್‌ಗಳಷ್ಟು ದೂರವನ್ನು ಪೂರೈಸಿದೆ.
ಇಸ್ರೋ ಭೂಮಿಯ ಪ್ರಭಾವದ ಗೋಳದ ಹೊರಗೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಳುಹಿಸುತ್ತಿರುವುದು ಇದು ಎರಡನೆಯ ಬಾರಿ. ಮೊದಲನೆ ಸಲ ಮಂಗಳಯಾನ ಯೋಜನೆಯಲ್ಲೂ ಭೂಮಿಯ ಪ್ರಭಾವ ಗೋಳದಿಂದ ಆಚೆಗೆ ಇರುವ ಮಂಗಳ ಗ್ರಹದತ್ತ ಇಸ್ರೊ ಮಾರ್ಸ್ ಆರ್ಬಿಟರ್ ಮಿಷನ್ (Mars Orbitor Mission) ಹಮ್ಮಿಕೊಂಡಿತ್ತು.
ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಆದಿತ್ಯ-ಎಲ್1 ಮಿಷನ್ ಯೋಜನೆಲ್ಲಿ ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಇದು ಬಾಹ್ಯಾಕಾಶ ಹವಾಮಾನದ ಡೈನಾಮಿಕ್ಸ್ ಮತ್ತು ಕಣಗಳು ಮತ್ತು ಕ್ಷೇತ್ರಗಳ ಪ್ರಸರಣವನ್ನು ಸಹ ಅಧ್ಯಯನ ನಡೆಸಲಿದೆ.