ಬೆಂಗಳೂರು, ಸೆ.29 www.bengaluruwire.com : ರಾಜ್ಯದಲ್ಲಿ ಕಾವೇರಿ ನೀರಿನ ಹೋರಾಟದ ಭಾಗವಾಗಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು (ಶುಕ್ರವಾರ) ಸಂಜೆ ಕಾವೇರಿ (Cauvery) ಸಮಸ್ಯೆ ಕುರಿತು ಸಲಹೆ, ಮಾರ್ಗದರ್ಶನ ಪಡೆಯಲು ಈ ಸಭೆ ಹಮ್ಮಿಕೊಂಡಿದ್ದಾರೆ.
ಸುಪ್ರೀಂಕೋರ್ಟ್, ಹೈಕೋರ್ಟ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನ್ಯಾಯಮೂರ್ತಿಗಳು, ವಕೀಲರ ಜತೆ ಸಿಎಂ ಸಭೆ ನಡೆಸಲಿದ್ದು, ಜಲತಜ್ಞರು ಹಾಗೂ ನೀರಾವರಿ ಅನುಭವಿಗಳನ್ನೂ ಸಹ ಸಭೆಗೆ ಆಹ್ವಾನ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ 4.30 ಕ್ಕೆ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಎಲ್ಲಾ ನ್ಯಾಯಮೂರ್ತಿಗಳು, ವಕೀಲರು, ನೀರಾವರಿ ತಜ್ಞರು ಹಾಗೂ ನೀರಾವರಿ ಅನುಭವಿಗಳ ಜೊತೆ ಸಮಾಲೋಚಿಸಿ, ಅವರ ಸಲಹೆ, ಮಾರ್ಗದರ್ಶನ ಪಡೆದು ಮುಂದಿನ ಹೆಜ್ಜೆ ಇಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ.ಎಂ.ಎನ್ ವೆಂಕಟಾಚಲಯ್ಯ, ನ್ಯಾ.ರಾಮಾಜೋಯಿಸ್, ನ್ಯಾ.ಸಂತೋಷ್ ಹೆಗ್ಡೆ, ಹಿರಿಯ ವಕೀಲರಾದ ಅಶೋಕ್ ಹಾರನಹಳ್ಳಿ, ಮಾಜಿ ಅಡ್ವೊಕೇಟ್ ಜನರಲ್ (AG) ಪ್ರೊ.ರವಿವರ್ಮ ಕುಮಾರ್, ಹಿರಿಯ ವಕೀಲರಾದ ಬಿ.ವಿ ಆಚಾರ್ಯ, ನ್ಯಾ.ಎ.ಜೆ ಸದಾಶಿವ, ನ್ಯಾ.ನಾಗಮೋಹನ್ ದಾಸ್, ಹಿರಿಯ ವಕೀಲ ಉದಯ್ ಹೊಳ್ಳ, ಎಂ.ಸಿ ನಾಣಯ್ಯ, ಪೊನ್ನಣ್ಣ ಸೇರಿದಂತೆ 15ಕ್ಕೂ ಹೆಚ್ಚು ಕಾನೂನು ತಜ್ಞರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.