ಬೆಂಗಳೂರು, ಸೆ.25 www.bengaluruwire.com : ಕಾವೇರಿ ವಿವಾದದ ಕಾವು ಮೈಸೂರು ಭಾಗ, ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕ ಜಲಸಂರಕ್ಷಣಾ ಸಮಿತಿ ನೇತೃತ್ವದಲ್ಲಿ, ಬೆಂಗಳೂರು ಸಂಪೂರ್ಣ ಬಂದ್ ಮಾಡಲಾಗುತ್ತಿದೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರು, ನಾಳಿನ ಬೆಂಗಳೂರು ಬಂದ್ ಗೆ 250ಕ್ಕೂ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದ್ದಾರೆ.
ನೂರಾರು ಸಂಘಟನೆಗಳು ಬಂದ್ ನಲ್ಲಿ ಭಾಗಿಯಾಗಲಿವೆ. ಇದರಿಂದ ಮಂಗಳವಾರ ಬೆಂಗಳೂರು ಸಂಪೂರ್ಣ ಬಂದ್ ಆಗಲಿದೆ ಅಂತ ಹೇಳಿದ್ದಾರೆ.
ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬೆಂಗಳೂರು ಬಂದ್ ನಡೆಸಲಾಗುತ್ತಿದೆ. ಅಂದು ಟೌನ್ ಹಾಲ್ ಮೂಲಕ ಮೆರವಣಿಗೆ ಕೂಡ ನಡೆಸಲಾಗುತ್ತಿದೆ. ಬಂದ್ ಗೆ ಬೆಂಬಲ ನೀಡುವುದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಕೂಡ ತಿಳಿಸಿದ್ದಾರೆ ಎಂಬುದಾಗಿ ಹೇಳಿದರು.
ಸೆ.26ರ ನಾಳೆ ನಡೆಸಲಾಗುವ ಬೆಂಗಳೂರು ಬಂದ್ ಗೆ ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ಚಾಲಕರ ಒಕ್ಕೂಟ, ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ಕಾರ್ಮಿಕ ಒಕ್ಕೂಟ, ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ಬೆಂಗಳೂರು ಎಪಿಎಂಸಿ ವರ್ತಕರ ಸಂಘ, ಸಮತಾ ಸೈನಿಕ ದಳ, ಎಪ್ ಕೆ ಸಿ ಸಿ ಐ, ಕಾಶಿಯ ಸಣ್ಣ ಕೈಗಾರಿಕೆಗಳ ಒಕ್ಕೂಟ, ಕರ್ನಾಟಕ ಸಾಂಸ್ಕೃತಿಕ ವೇದಿಕೆ, ಬಿಡಬ್ಲ್ಯೂಎಸ್‌ಎಸ್‌ಬಿ ನೌಕರರ ಸಂಘ, ಬಿಡಿಎ ನೌಕರರ ಸಂಘ, ಬಿಡಿಎ ವಾಹನ ಚಾಲಕರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಎಐಟಿಯುಸಿ ಕೆಎಸ್ಆರ್ಟಿಸಿ ನೌಕರರ ಸಂಘ, ಬೆಂಗಳೂರು ಜ್ಯುವೆಲರ್ಸ್ ಅಸೋಸಿಯೇಷನ್, ಕರ್ನಾಟಕ ವಕೀಲರ ಸಂಘ, ಬೆಂಗಳೂರು ವಕೀಲರ ಸಂಘ, ಮಂಡ್ಯ ಕಾವೇರಿ ರೈತ ಹಿತರಕ್ಷಣ ಸಮಿತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ನಾಳಿನ “ಬೆಂಗಳೂರು ಬಂದ್” ಗೆ ಬೆಂಬಲ ನೀಡಿದ್ದಾರೆ.
ಸೆ.29ಕ್ಕೆ ಕನ್ನಡ ಒಕ್ಕೂಟದ ಆಶ್ರಯದಲ್ಲಿ “ಕರ್ನಾಟಕ ಬಂದ್” :
ಅಖಂಡ “ಕರ್ನಾಟಕ ಬಂದ್” ಕರೆ ನೀಡಿರುವ ಉದ್ದೇಶ ದೆಹಲಿವರೆಗೂ ಮುಟ್ಟಬೇಕು. ಈ ಬಂದ್ ನಡೆಸುತ್ತಿರುವ ಕಾರಣ ರಾಜ್ಯ ಸರ್ಕಾರಕ್ಕೆ ತಿಳಿಯಬೇಕು. ನಾವು ಹುಡುಗಾಟಕ್ಕಾಗಿ ಬಂದ್ ಮಾಡುತ್ತಿಲ್ಲ. ಸೆಪ್ಟೆಂಬರ್.29ರ ಶುಕ್ರವಾರದಂದು ಅಖಂಡ ಕರ್ನಾಟಕ ಬಂದ್ ಮಾಡೋದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ನಾವು ಎಂದಿಗೂ ಹೋರಾಟ ಹಮ್ಮಿಕೊಳ್ಳಲು ಹೆದರುವುದಿಲ್ಲ. ನಾಳೆ ಬೆಂಗಳೂರಲ್ಲಿ ಕಾವೇರಿ ವಿವಾದದ ಬಗ್ಗೆ ಬಂದ್ ಮಾಡೋದು ಬೇಡ ಅಂತ ನಾಳೆ ಬಂದ್ ಹಮ್ಮಿಕೊಂಡಿರೋ ಸಂಘಟನೆಗಳನ್ನು ನಡೆಸುತ್ತಿರೋರನ್ನು ಕೇಳಿದೆವು. ಆದರೆ ಅವರು ಅದಕ್ಕೆ ಒಪ್ಪಿಲ್ಲ. ಹೀಗಾಗಿ ನಾವು ಸೆ.29ರಂದು ಅಖಂಡ ಕರ್ನಾಟಕ ಬಂದ್ ಮಾಡೋದಾಗಿ ತಿಳಿಸಿದರು.
ಸೆ.29ರ ಅಖಂಡ ಕರ್ನಾಟಕ ಬಂದ್ ಗೆ ರಾಜ್ಯಾಧ್ಯಂತ 1,000ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಪ್ರವೀಣ್ ಶೆಟ್ಟಿ ಬಣ, ಕನ್ನಡ ಸೇನೆ ರಾಜ್ಯಾಧ್ಯಕ್ಷರಾದ ಕೆ.ಆರ್.ಕುಮಾರ್, ಯವರು ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಬೆಂಬಲ ಕೂಡ ಇದೆ ಎಂದರು.
ಪ್ರತಿಭಟನೆಗೆ ಕಾಂಗ್ರೆಸ್ ಸರ್ಕಾರದ ಸಹಕಾರ :
ಪ್ರತಿಪಕ್ಷಗಳು ಹಮ್ಮಿಕೊಂಡಿರುವ ಕಾವೇರಿ ನೀರಿನ ವಿಚಾರವಾಗಿ ಬಂದ್ ಹಾಗೂ ಪ್ರತಿಭಟನೆ ಕುರಿತಾಗಿ “ರಾಜ್ಯದ ಹಿತರಕ್ಷಣೆಗೆ ಪ್ರತಿಭಟನೆ ಮಾಡಲು ನಾವು ಸಹಕಾರ ನೀಡುತ್ತೇವೆ. ನೆಲ, ಜಲ, ಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು”. ಯಾರ ಹೋರಾಟಗಳಿಗೂ ಸರ್ಕಾರ ಅಡ್ಡಿಪಡಿಸುವುದಿಲ್ಲ. ಆದರೆ ಇದರಿಂದ ಜನರಿಗೆ ತೊಂದರೆ ಆಗಬಾರದು, ಶಾಂತಿ ಕಾಪಾಡಬೇಕು, ಹೋರಾಟಗಳಿಗೆ ಸರ್ಕಾರದ ಸಹಕಾರ ಇದ್ದೇ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪ್ರತಿಭಟಿಸುವುದು ಪ್ರಜಾಪ್ರಭುತ್ವದ ಹಕ್ಕು, ಯಾವ ಪಕ್ಷದವರಿಗೂ ತೊಂದರೆ, ಅಡಚಣೆ ಮಾಡಲು ನಾವು ಮುಂದಾಗುವುದಿಲ್ಲ. ನಾವು ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಪಕ್ಷದವರು ಸಹ ಏನು ಮಾಡುವುದು ಎಂದು ಕೇಳಿದರು, ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡಿ ಎಂದು ಹೇಳಿದ್ದೇವೆ.
ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪು ಬಾಕಿ ಇದೆ, ಮಾಧ್ಯಮಗಳಲ್ಲಿ ಹೆಸರು ಬರುತ್ತದೆ ಎಂದು ಹೋರಾಟಕ್ಕೆ ಕರೆ ನೀಡಿದರೆ ಲಾಭವೇನು? ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದರೆ ಏನು ಮಾಡುತ್ತಾರೆ?” ಎಂದೂ ಡಿಸಿಎಂ ಪ್ರಶ್ನಿಸಿದ್ದಾರೆ.