ಬೆಂಗಳೂರು, ಸೆ.7 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳ ಮೇಲ್ವಿಚಾರಣೆಗಾಗಿ “ಡೆಂಗ್ಯೂ ಮೇಲ್ವಿಚಾರಣಾ ತಂತ್ರಾಂಶ” ಆಪ್ ವನ್ನು ಅನಾವರಣಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳನ್ನು ತಡೆಯುವ ಹಾಗೂ ಇನ್ನಿತರೆ ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿಯ ಸಭಾಂಗಣ-01 ರಲ್ಲಿ ಗುರುವಾರ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕಳೆದ 2 ತಿಂಗಳಿಂದ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಔಷಧಿ ಸಿಂಪಡಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ರಮೇಣವಾಗಿ ಡೆಂಗ್ಯೂ ಪ್ರಕರಣಗಳು ನಿಯಂತ್ರಣಕ್ಕೆ ತರುಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಡೆಂಗ್ಯೂ ಮುನ್ಸೂಚನಾ ತಂತ್ರಾಂಶ ಅನಾವರಣ:
ಡೆಂಗ್ಯೂ ಪ್ರಕರಣಗಳನ್ನು ಒಂದು ತಿಂಗಳ ಮುಂಚಿತವಾಗಿಯೇ ತಿಳಿಯುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಒಂದು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರಿಂದ ಮುಂಚಿತವಾಗಿಯೇ ಮಾಹಿತಿ ಲಭ್ಯವಾಗಲಿದ್ದು, ಶೀಘ್ರದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡು ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಅನುಕೂಲವಾಗಲಿದೆ. ನಾಳೆ ಈ ತಂತ್ರಾಂಶವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ನಗರದಲ್ಲಿ ಜುಲೈ ನಲ್ಲಿ 1649, ಆಗಸ್ಟ್ ನಲ್ಲಿ 1589, ಸೆಪ್ಟಂಬರ್ ನಲ್ಲಿ 416 ಪ್ರಕರಣಗಳು ಪತ್ತೆಯಾಗಿವೆ. ಮುಖ್ಯವಾಗಿ ಮಳೆಯಾಗಿ ನೀರು ನಿಂತ ಕಾರಣ ಸೊಳ್ಳ್ಳೆಗಳ ಲಾರ್ವಾ ಉತ್ಪತ್ತಿಯಾಗಿರುವುದರಿಂದ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಈ ಸಂಬಂಧ ಎಲ್ಲಾ ಕಡೆ ಔಷಧಿ ಸಿಂಪಡಣೆ ಮಾಡಲಾಗುತ್ತಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಲು ಸೂಚನೆ ನಿಡಲಾಗಿದೆ. ಅಲ್ಲದೇ ಎಲ್ಲಾ ಆರೋಗ್ಯ ವೈದ್ಯಾಧಿಕಾರಿಗಳಿಗೆ ಹೆಚ್ಚು ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ನಮ್ಮ ಕ್ಲಿನಿಕ್ ಸೇವೆ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ :
ಬಿಬಿಎಂಪಿ ವ್ಯಾಪ್ತಿಯಲ್ಲಿ 50 ನಮ್ಮ ಕ್ಲಿನಿಕ್ ಗಳು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಈ ಸಮಯದಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಲ್ಯಾಬ್ ಟೆಕ್ನಿಷಿಯನ್ ಗಳು ಹಾಗೂ ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆಯವರೆಗೆ ವೈದ್ಯರು, ನರ್ಸ್ ಗಳಿರುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಪಾಲಿಕೆಯ ವ್ಯಾಪ್ತಿಯಲ್ಲಿ 6 ಹೈಟೆಕ್ ಲ್ಯಾಬ್ ಗಳಿದ್ದು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್ ಗಳಲ್ಲಿ ಸಂಗ್ರಹ ಮಾಡುವ ಬ್ಲಡ್ ಸ್ಯಾಂಪಲ್ ಗಳನ್ನು ಲ್ಯಾಬ್ ಗಳಿಗೆ ಕಳುಹಿಸಲು ರವಾನೆ(ಹಬ್ ಅಂಡ್ ಸ್ಪೋಕ್ ಮಾಡಲ್) ಹಾಗೂ ಇನ್ನಿತರೆ ಸೌಲಭ್ಯಗಳ ಅವಶ್ಯಕತೆಯಿದೆ. ಇದಕ್ಕೆ ಅನುದಾನ ಬೇಕಾಗಿದ್ದು, ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪಾಲಿಕೆ ಸಹಯೋಗದೊಂದಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದಿಂದ ಒದಗಿಸಲಾಗುವುದು ಎಂದು ಹೇಳಿದರು.
ನಗರದಲ್ಲಿ ಎಲ್ಲಾ ಆರೋಗ್ಯ ಸೇವೆಗಳನ್ನು ಸಮನಾಂತರವಾಗಿ ತರುವ ಉದ್ದೇಶದಿಂದ ಬಿಬಿಎಂಪಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಪರಿಗಣಿಸಲು ನಿರ್ಧಾರ ಮಾಡಲಾಗಿದ್ದು, ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು, ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರ ಸಂಖ್ಯೆಯನ್ನು ಹೆಚ್ಚಿಸುವ ಜೊತೆಗೆ ಅವರ ವೇತನವನ್ನು ಕೂಡಾ ಕಾರ್ಮಿಕ ಇಲಾಖೆ ಕಾಯ್ದೆ ಕನಿಷ್ಟ ವೇತನ ಹೆಚ್ಚಳ ಮಾಡಬೇಕಿದೆ. ಅದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ. ರಂದೀಪ್, ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ.ತ್ರಿಲೋಕ್ ಚಂದ್ರ, ಎನ್.ಹೆಚ್.ಎಂ ನ ಅಭಿಯಾನ ವೀಕ್ಷಕರಾದ ನವೀನ್ ಭಟ್, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ.ಬಾಲಸುಂದರ್, ಡಾ.ನಿರ್ಮಲಾ ಬುಗ್ಗಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.