ಬೆಂಗಳೂರು, ಆ.7 www.bengaluruwire.com :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2019-20 ರಿಂದ 2022-23 ರವರೆಗೆ ನಡೆದಿರುವ ಯೋಜನೆಗಳು, ಕಾರ್ಯಕ್ರಮಗಳ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ವ್ಯಾಪಕ ದೂರಿನ ಹಿನ್ನಲೆಯಲ್ಲಿ ಸಂಪೂರ್ಣವಾದ ತನಿಖೆಗಾಗಿ ರಾಜ್ಯ ಸರ್ಕಾರ ಪ್ರತ್ಯೇಕವಾದ ತಜ್ಞರ ತನಿಖಾ ಸಮಿತಿ ರಚಿಸಿದೆ.
ಕಾಮಗಾರಿಗಳನ್ನು ನಿರ್ವಹಿಸದೆಯೇ ಬಿಲ್ ಪಾವತಿಸಿರುವುದು, ಟೆಂಡರ್ ನೀಡುವಲ್ಲಿ ಕೆ.ಟಿ.ಪಿ.ಪಿ ನಿಯಮಗಳನ್ನು ಉಲ್ಲಂಘಿಸಿರುವುದು, ಹೆಚ್ಚಿನ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡದಿರುವುದು ಹಾಗೂ ಅನುಮೋದಿತ ಕಾಮಗಾರಿಗಳನ್ನು ಅನುಷ್ಟಾನಗೊಳಿಸದಿರುವ ಬಗ್ಗೆ ದೂರುಗಳು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಸಚಿವರೂ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶೇಷ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿ ಪತ್ರ ಬರೆದಿದ್ದರು.
ಈ ಕುರಿತಂತೆ ತನಿಖೆ ನೀಡಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯು ನಾಲ್ಕು ತನಿಖಾ ಸಮಿತಿಗಳನ್ನು ಪ್ರತ್ಯೇಕವಾಗಿ ರಚಿಸಿ ಆದೇಶ ಹೊರಡಿಸಿದೆ. ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳ ತನಿಖಾ ಸಮಿತಿಗೆ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ನೇತೃತ್ವದ ನಾಲ್ವರ ತನಿಖಾ ಸಮತಿ, ರಸ್ತೆ ಆಭಿವೃದ್ಧಿ ಕಾಮಗಾರಿಗಳು ಮತ್ತು ಓಎಫ್ ಸಿ ಕೇಬಲ್‌ಗಳಿಗೆ ಅನುಮತಿ ನೀಡಿರುವ ಬಗ್ಗೆ ತನಿಖಾ ಸಮಿತಿಗೆ ಐಎಎಸ್ ಅಧಿಕಾರಿ ಅಮ್ಲಾನ್ ಆದಿತ್ಯಾ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಆರು ಮಂದಿಯ ಸದಸ್ಯರ ಸಮಿತಿಯನ್ನು ಆ.5ರಂದು ರಚಿಸಲಾಗಿದೆ. ಈ ಸಮಿತಿಯು 30 ದಿನದ ಒಳಗೆ ತನ್ನ ಅಭಿಪ್ರಾಯ ಹಾಗೂ ಶಿಫಾರಸ್ಸಿನೊಂದಿಗೆ ವರದಿ ಸಲ್ಲಿಸಲು ಸೂಚಿಸಿದೆ.
ಇನ್ನು ಬೃಹತ್ ನೀರುಗಾಲುವೆ ಕಾಮಗಾರಿಗಳು, ಕೇಂದ್ರ, ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ (OC) ನೀಡಿರುವ ಬಗ್ಗೆ ಐಎಎಸ್ ಅಧಿಕಾರಿ ಪಿ.ಸಿ.ಜಾಫರ್ ಅಧ್ಯಕ್ಷತೆಯ ನಾಲ್ವರ ಸಮತಿಯನ್ನು ಸರ್ಕಾರವು ರಚನೆ ಮಾಡಿದೆ. ಜೊತೆಗೆ ಕೆರೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳು ಮತ್ತು ವಾರ್ಡ್ ಮಟ್ಟದ ಕಾಮಗಾರಿಗಳ ತನಿಖೆ ನಡೆಸಲು ಡಾ.ವಿಶಾಲ್ ಅಧ್ಯಕ್ಷತೆಯಲ್ಲಿ ಆರು ಮಂದಿಯ ತನಿಖಾ ಸಮಿತಿಯನ್ನು ಸರ್ಕಾರ ರಚಿಸಿ ಆದೇಶ ಹೊರಡಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳು, ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಓಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿಗಳು, ಕೇಂದ್ರ ಹಾಗೂ ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ ಸ್ವಾಧೀನಾನುಭವ ಪತ್ರ ನೀಡುವಿಕೆ ಸಂಬಂಧ ಪ್ರಮುಖವಾಗಿ ತನಿಖಾ ಸಮಿತಿಗಳು ತನಿಖೆ ನಡೆಸಲಿವೆ.
ವಿವಿಧ ನಾಲ್ಕು ತನಿಖಾ ಸಮತಿಗಳ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರ ವಿವರ :
ಇದಲ್ಲದೇ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿನ ಕಾಮಗಾರಿಗಳು ಮತ್ತು ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾದ ದೂರು ಪ್ರಕರಣಗಳನ್ನು ಸಹಜ ನ್ಯಾಯ ತತ್ವದ ಅಡಿಯಲ್ಲಿ ಗಂಭೀರ ಪ್ರಕರಣವೆಂದು ಪರಿಗಣಿಸಿ ಸರ್ಕಾರವು ಬಾಹ್ಯ ಮೂಲದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಆಯಾ ವಿಷಯ ವ್ಯಾಪ್ತಿಗೊಳಪಟ್ಟಂತೆ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಪರಿಣಿತರು, ತಜ್ಞರುಗಳನ್ನು ನೇಮಿಸಿ ತನಿಖಾ ಸಮಿತಿಗಳಿಂದ ಸ್ವತಂತ್ರ ವಿಚಾರಣೆ ನಡೆಸಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.
2019-20 ರಿಂದ 2022-23 ರವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತದ ಅವಧಿ ಮುಗಿದ ಕಾರಣ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಈ ಅವಧಿಯಲ್ಲಿ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿಯು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಡೆಸುವ ಕಾಮಗಾರಿಗಳಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿತ್ತು.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಪರ್ಸೆಂಟ್ ಕಮಿಷನ್ ವಿಚಾರವನ್ನು ಚುನಾವಣಾ ತಂತ್ರದಲ್ಲಿ ಪ್ರಮುಖವಾಗಿ ಪ್ರಯೋಗಿಸಿ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಏರುವಲ್ಲಿ ಮಹತ್ವದ ಪಾತ್ರವಹಿಸಿತ್ತು. ಇದೀಗ ಮುಂದಿನ ವರ್ಷ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ, ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳನ್ನು ಜನರ ಎದುರಿಗೆ ಇಡಲು ಸ್ವತಂತ್ರ ವಿಚಾರಣೆ ನಡಿಸಲು ನಾಲ್ಕು ಪ್ರತ್ಯೇಕ ಸಮಿತಿಗಳನ್ನು ರಚಿಸುವ ತಂತ್ರಕ್ಕೆ ಕೈ ಹಾಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ತನಿಖಾ ಸಮಿತಿ ರಚನೆಆ.1ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪಾಲಿಕೆ ವ್ಯಾಪ್ತಿಯಲ್ಲಿ 2019-20ರಿಂದ 2022-23ನೇ ಸಾಲಿನ ತನಕ ಪಾಲಿಕೆಯಲ್ಲಿ ಕೈಗೊಂಡ ಕಾಮಾಗಾರಿಗಳು, ಟೆಂಡರ್ ಮತ್ತಿತರ 26 ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಪತ್ರ ಬರೆದಿದ್ದರು. ಈ ಪತ್ರವು ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಈ ವಿಚಾರವು ಪಾಲಿಕೆಯಲ್ಲಿ ಕಾಮಗಾರಿಗಳ ಗುತ್ತಿಗೆ ನಿರ್ವಹಿಸಿ ಬಾಕಿ ಮೊತ್ತ ಪಾವತಿಗಾಗಿ ಕಾಯುತ್ತಿರುವ ನೂರಾರು ಗುತ್ತಿಗೆದಾರರ ಅಸಮಾಧಾನ ಹಾಗೂ ತೀವ್ರ ಆಕ್ಷೇಪಕ್ಕೂ ಕಾರಣವಾಗಿದೆ.
ಇದೀಗ ಸರ್ಕಾರ ಈ ನಾಲ್ಕು ವರ್ಷಗಳ ಅವಧಿಯ ಕಾಮಗಾರಿಗಳ ತನಿಖೆಗೆ ಸಮಿತಿ ರಚಿಸಿರುವುದರಿಂದ ಪಾಲಿಕೆ ಗುತ್ತಿಗೆದಾರರಿಗೆ ಪಾಲಿಕೆಯ ವ್ಯಾಪ್ತಿಯಲ್ಲಿ ರಾಜ್ಯ, ಕೇಂದ್ರ ಸರ್ಕಾರ ಹಾಗೂ ಬಿಬಿಎಂಪಿ ಅನುದಾನದಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಸಂಪೂರ್ಣವಾದ ತನಿಖೆ ಪೂರ್ಣಗೊಂಡು, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿ ಅದು ಮುಂದಿನಕ್ರಮ ಕೈಗೊಳ್ಳುವ ತನಕ ಬಿಲ್ ಪಾವತಿಯಾಗುವುದು ಅನುಮಾನವಾಗಿದೆ.