ಬೆಂಗಳೂರು, ಜು.25 www.bengaluruwire.com : ಕೃಷಿ ಬೆಲೆ ಆಯೋಗದ ಅವಧಿ 2026ರವರೆಗೆ ವಿಸ್ತರಣೆ ಮಾಡಿ ಕರ್ನಾಟಕ ಕೃಷಿ ಬೆಲೆ ಆಯೋಗವನ್ನ ನಾಲ್ಕನೇ ಅವಧಿಗೆ ಮುಂದುವರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕೃಷಿ ಅಭಿವೃದ್ಧಿಗೆ ಹಾಗೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಉತ್ತಮ ಮಾರುಕಟ್ಟೆ ಕಲ್ಪಿಸಲು ರಚಿತವಾಗಿರುವ ಈ ಆಯೋಗದ ಅವಧಿಯನ್ನು ಇನ್ನೊಂದು ಅವಧಿಗೆ ಮುಂದುವರಿಸಲಾಗಿದೆ. ಕಳೆದ ಫೆಬ್ರವರಿ 10ರಂದು ನಡೆದ ಆಯೋಗದ 27ನೇ ಸಭೆಯಲ್ಲಿ ಸಲ್ಲಿಸಲಾಗಿದ್ದ ಕೃಷಿ ಆಯುಕ್ತರ ಪ್ರಸ್ತಾವನೆಯಂತೆ ಪ್ರಸಕ್ತ ವರ್ಷದ ಜೂನ್ 25ಕ್ಕೆ ಆಯೋಗದ ಅವಧಿ ಮುಗಿದಿದ್ದು, ಅದೇ ತಿಂಗಳ 26ರಿಂದ 2026ರ ಜೂನ್ 25ರವರೆಗೆ ಮತ್ತೆ ಮೂರು ವರ್ಷಗಳ ಅವಧಿಯವರೆಗೆ ವಿಸ್ತರಿಸಲಾಗಿದೆ.
ಆಯೋಗದ ಅಧ್ಯಕ್ಷರು ಹಾಗೂ ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಈ ತೀರ್ಮಾನ ಹೊರಬಿದ್ದಿದೆ. ಸಾಮಾನ್ಯವಾಗಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಕೆಲವೊಮ್ಮೆ ಸಂಕಷ್ಟಕ್ಕೀಡಾಗುತ್ತಾರೆ. ಅನೇಕ ವೇಳೆ ಕೃಷಿಗೆ ಅವರು ತೊಡಗಿಸಿದ ಹಣವೂ ದಕ್ಕುವುದಿಲ್ಲ.
ಖರ್ಚೂ ಕೂಡ ಗಿಟ್ಟುವುದಿಲ್ಲ. ಹೀಗಾಗಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಗೊಳಿಸಲು ಈ ಕೃಷಿ ಬೆಲೆ ಆಯೋಗವನ್ನು ರಚಿಸಲಾಗಿದೆ. ಈ ಆಯೋಗವು ರೈತರು, ಕೃಷಿ ತಜ್ಞರು ಹಾಗೂ ಆರ್ಥಿಕ ತಜ್ಞರನ್ನು ಒಳಗೊಂಡಿದ್ದು, ರೈತರು ಬೆಳೆದ ಬೆಳೆಗಳಿಗೆ ಯಾವ ಬೆಲೆ ನಿಗದಿಗೊಳಿಸಬೇಕೆಂಬುದರ ಕುರಿತು ವೈಜ್ಞಾನಿಕವಾಗಿ ಪರಾಮರ್ಶಿಸಲಿದೆ. ಬಳಿಕ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಸರ್ಕಾರದಿಂದ ಸೂಕ್ತ ಬೆಲೆ ನಿಗದಿಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಮತ್ತೊಂದು ವಿಶೇಷವೆಂದರೆ ಆಯೋಗವು ರೈತರು, ರೈತ ಮುಖಂಡರು, ತಜ್ಞರು, ಸ್ವಯಂಸೇವಾ ಸಂಸ್ಥೆಗಳು, ವಿವಿಧ ಇಲಾಖೆಗಳ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಸತತ ಸಂವಾದ ನಡೆಸುತ್ತಿದೆ.
ಇವರೆಲ್ಲರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ, ಗೋಷ್ಠಿಗಳ ಮೂಲಕ ರೈತ ಸಮುದಾಯ ಮತ್ತು ಸರ್ಕಾರದ ನಡುವೆ ಉತ್ತಮ ಸಾಮರಸ್ಯ ಮೂಡಿಸುತ್ತಿದೆ. ಇನ್ನು ರೈತರಿಗೆ ಲಾಭದಾಯಕ ಬೆಲೆ ಪಡೆಯುವುದಕ್ಕಾಗಿ ಸಾಮೂಹಿಕ ಚೌಕಾಸಿ ಸಾಮರ್ಥ್ಯ ಹೆಚ್ಚಿಸುವುದು, ಮಾರುಕಟ್ಟೆ ಸುಧಾರಣೆ, ಬೆಳೆವಿಮೆ, ಇ-ವ್ಯವಹಾರದ ಮೂಲಕ ಕೃಷಿ ಸಮುದಾಯದ ಎಲ್ಲಾ ವರ್ಗ ಮತ್ತು ಪ್ರದೇಶಗಳ ಹಿತ ಕಾಪಾಡುವುದು ಆಯೋಗದ ಮುಖ್ಯ ಉದ್ದೇಶವಾಗಿದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ರೈತರ ಶ್ರೇಯೋಭಿವೃದ್ಧಿಗಾಗಿ ಹಾಗೂ ಕೃಷಿ ಇಲಾಖೆಯ ಪ್ರಗತಿಗಾಗಿ ಜುಲೈ 7ರಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಅನುಮಪತಿ ಪಡೆಯುವ ಮೂಲಕ ಕೃಷಿ ಇಲಾಖೆಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಯನ್ನ ಪರಿಗಣಿಸಿ ಕೃಷಿ ಬೆಲೆ ಆಯೋಗದ ಅವಧಿಯನ್ನು ಮತ್ತೆ ಮೂರು ವರ್ಷಗಳಿಗೆ (2026ರವರೆಗೆ) ವಿಸ್ತರಿಸಲಾಗಿದೆ.
ಕೃಷಿ ಆಯೋಗ ರಚನೆ:
* ಕೃಷಿ ಅರ್ಥಶಾಸ್ತ್ರದಲ್ಲಿ ಪರಿಣಿತಿ ಹೊಂದಿರುವ ಕೃಷಿ ತಜ್ಞರ ಅಧ್ಯಕ್ಷತೆ
* ಐವರು ಸದಸ್ಯರು, ಇವರಲ್ಲಿ ಸರ್ಕಾರದಿಂದ ಒಬ್ಬ ಸದಸ್ಯ, ಕಾರ್ಯದರ್ಶಿ
* ಐವರು ಸದಸ್ಯರಲ್ಲಿ ಇಬ್ಬರು ಕೃಷಿ ಮಾರಾಟ, ನಿರ್ವಹಣೆ ತಜ್ಞರಾಗಿರುತ್ತಾರೆ
* ಪ್ರಗತಿಪರ ರೈತರೊಬ್ಬರ ಜೊತೆ ಕೃಷಿ ಉತ್ಪನ್ನ ಮಾರಾಟ ಅನುಭವ ಉಳ್ಳ ವ್ಯಕ್ತಿ
* ವಿವಿಧ ಇಲಾಖೆ, ತೋಟಗಾರಿಕೆಯಿಂದ ಇತರೆ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ
* ಕೃಷಿ ಬೆಲೆ, ಮಾರುಕಟ್ಟೆ, ವ್ಯಾಪಾರದ ತಜ್ಞರು, ವೃತ್ತಿಪರರೂ ಇದ್ದಾರೆ
ಕೃಷಿ ಆಯೋಗದ ಉದ್ದೇಶ:
* ಕೃಷಿ ಅಭಿವೃದ್ಧಿ ಮೂಲಕ ಸ್ವಾವಲಂಬಿ ಕರ್ನಾಟಕ ನಿರ್ಮಾಣದ ಉದ್ದೇಶ
* ಸಮಗ್ರ ಕೃಷಿ, ನೀರಾವರಿ, ಸಾಲ, ಬೆಲೆ, ಮಾರುಕಟ್ಟೆ ನೀತಿ ಅಧ್ಯಯನ, ವರದಿ ಸಲ್ಲಿಸೋದು
* ರಾಷ್ಟ್ರದ ಆಹಾರ ಭದ್ರತೆ ಗಮನದಲ್ಲಿಟ್ಟುಕೊಂಡು ರಫ್ತು, ಆಮದುಗಳ ಸಮಗ್ರ ಅಧ್ಯಯನ
* ಬೆಳೆ ಉತ್ಪಾದನೆ ಮತ್ತು ಬೆಲೆ ಮುನ್ನಂದಾಜು ಮಾಹಿತಿಯನ್ನು ನೀಡುವುದು
* ಕೇಂದ್ರ ಸರ್ಕಾರ ಘೋಷಿತ ಬೆಲೆ, ಮಾರುಕಟ್ಟೆ ಬೆಲೆ ವ್ಯತ್ಯಾಸ ಕಂಡುಹಿಡಿಯುವುದು
* ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸಿ ಅನ್ಯಾಯವಾಗದಂತೆ ನೋಡಿಕೊಳ್ಳುವುದು