ಬೆಂಗಳೂರು, ಜು.21 www.bengaluruwire.com : ರಾಜ್ಯದಲ್ಲಿ ಜು.20ರಿಂದ ಜಾರಿಗೆ ಬರುವಂತೆ ಮದ್ಯದ ಬೆಲೆಯಲ್ಲಿ ಏರಿಕೆಯಾಗಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ನಲ್ಲಿ ಘೋಷಿಸಿದ ಪ್ರಕಾರ, ಮದ್ಯದ ಬೆಲೆ ಹೆಚ್ಚಳವಾಗಿದೆ. ಇದರೊಂದಿಗೆ ಗರಿಷ್ಠ ಶೇ.20ರಷ್ಟು ಹೆಚ್ಚಿನ ದರದೊಂದಿಗೆ ಹೊಸ ಬೆಲೆಯಲ್ಲಿ ಶುಕ್ರವಾರದಿಂದ ಮದ್ಯ ಮಾರಾಟವಾಗಲಿದೆ.
ಸರ್ಕಾರಿ ಆದೇಶದ ಪ್ರಕಾರ ಗುರುವಾರ ಮಧ್ಯರಾತ್ರಿಯಿಂದ ಈ ದರ ಹೆಚ್ಚಳ ಜಾರಿಗೆ ಬಂದಿದೆ. ಪ್ರಸಕ್ತ ಸಾಲಿನ ಬಜೆಟ್ನಲ್ಲಿ ರಾಜ್ಯ ಸರ್ಕಾರ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಅಂಥಹ ಇತರ ಮದ್ಯಗಳ 18 ಸ್ಲಾಬ್ ಗಳಲ್ಲಿನ ಸುಂಕವನ್ನು ಶೇ.20ರ ತನಕ ಏರಿಕೆ ಮಾಡಿದೆ. ಅಲ್ಲದೆ, ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ.10ರಷ್ಟು ಹೆಚ್ಚಿಸಿದೆ.
ಐಎಂಎಲ್ ಹಾಗೂ ಬಿಯರ್ ನ ಕೆಲವೊಂದು ಪ್ರಮುಖ ಬ್ರಾಂಡ್ ಗಳ ಹಳೆಯ ದರ ಮತ್ತು ಹೊಸ ದರ ಹಾಗೂ ಎಷ್ಟು ಬೆಲೆ ಏರಿಕೆಯಾಗಿದೆ ಮತ್ತು ಎಷ್ಟು ಶೇಕಡಾವಾರು ಹೆಚ್ಚಳವಾಗಿದೆ ಎಂಬುದರ ವಿವರ ಈ ಕೆಳಕಂಡಂತಿದೆ (ಮಾಹಿತಿ ಮೂಲ – ಫ್ರಾಫಿಟ್9 ಐ&ಬಿಟಿ ಸಂಸ್ಥೆ) :
ಆದ್ದರಿಂದ ಹಾಲಿ ದರಕ್ಕೆ ಹೋಲಿಸಿದಾಗ ಶೇ.10ರಷ್ಟು ಬಿಯರ್ ದರ ಹೆಚ್ಚಳವಾಗಿದೆ. ಭಾರತೀಯ ತಯಾರಿತ ಮದ್ಯ (IML) ಒಂದು ಪೆಗ್ (60 ಎಂಎಲ್ )ಗೆ 10ರಿಂದ 20 ರೂ. ಹಾಗೂ ಬಿಯರ್ ಬೆಲೆ ಪ್ರತಿ ಬಾಟಲ್ಗೆ ಶೇ.10ರಷ್ಟು ಹೆಚ್ಚಳವಾಗಿದೆ.
ಉದಾಹರಣೆಗೆ ಒಂದು ಬಿಯರ್ ಹಿಂದಿನ ದರ 230 ರೂ. ಇದ್ದರೆ ಅವುಗಳದರ 253 ರೂ. ನಷ್ಟು ಏರಿಕೆಯಾಗಿದ್ದರೆ, ಐಎಂಎಲ್ ಮದ್ಯವಾದ ಎಂ.ಸಿ.ವಿಸ್ಕಿ 300 ರೂ. ಇದ್ದ ದರ 360 ರೂ.ನಷ್ಟು ಹೆಚ್ಚಳವಾಗಿದೆ. ಇನ್ನು ಬ್ಲಾಕ್ ಡಾಗ್ ಫುಲ್ ಬಾಟಲ್ ದರ ಈ ಹಿಂದೆ 3,360 ರೂ. ಇದ್ದಲ್ಲಿ ಪರಿಷ್ಕೃತ ನೂತನ ದರ 4,000 ರೂ.ನಷ್ಟಾಗಲಿದೆ. ವೋಸ್ಬ್ (VOSB- Brandy) ಬ್ರಾಂದಿ ದರ ಒಂದು ಲೀಟರ್ ಗೆ ಈ ಹಿಂದೆ 480 ರೂ. ಆಗಿದ್ದರೆ ಈಗ 550 ರೂ.ನಷ್ಟಾಗಿದೆ.
“ರಾಜ್ಯ ಸರ್ಕಾರ ಮದ್ಯದ ದರ ಜಾಸ್ತಿ ಮಾಡಿದೆ. ಹಾಗೆ ಮದ್ಯ ಮಾರಾಟಗಾರರಿಗೂ ಈಗ ಇರುವ 10% ಮಾರ್ಜಿನ್ ಜೊತೆ ಇನ್ನು 5% ಮಾರ್ಜಿನ್ ಜಾಸ್ತಿ ಮಾಡಿದಿದ್ದರೆ ಮದ್ಯ ಮಾರಾಟಗಾರರಿಗೂ ಅನುಕೂಲವಾಗುತ್ತಿತ್ತು.”
– ವಸಂತ್ ರಾವ್ ಚವಾಣ್.ಎ, ಪ್ರಾಫಿಟ್ 9 ಐ&ಬಿಟಿ ಮಾಲೀಕರು
ಮದ್ಯ ಮಾರಾಟಗಾರರ ಸಂಘದವರು ಏನಂತಾರೆ? :
“ರಾಜ್ಯದಲ್ಲಿ ಸರ್ಕಾರ ಐಎಂಎಲ್ ಮದ್ಯದ ಮೇಲೆ ಶೇ.20 ರಿಂದ 25ರವರೆಗೆ ಹಾಗೂ ಬಿಯರ್ ಮೇಲೆ ಶೇ.10ರ ವರೆಗೆ ಅಬಕಾರಿ ಸುಂಕ ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗಿದ್ದು, ಗುರುವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಸರ್ಕಾರದ ಅಬಕಾರಿ ಸುಂಕದ ಹೆಚ್ಚಳದ ಜೊತೆಗೆ, ಡಿಸ್ಟಲರಿಗಳು ಕೂಡ ತಮಗಾಗುವ ವೆಚ್ಚ ಹಾಗೂ ಲಾಭವನ್ನು ಸೇರಿಸಿ ಅದನ್ನು ಮದ್ಯ ಖರೀದಿಸುವವರ ಮೇಲೆ ವರ್ಗಾಯಿಸುತ್ತಾರೆ. ಹೀಗಾಗಿ ಮದ್ಯ ಮತ್ತು ಬಿಯರ್ ಬೆಲೆ ಮತ್ತಷ್ಟು ತುಟ್ಟಿಯಾಗಲಿದೆ. ಮದ್ಯದ ದರ ವಿಪರೀತ ಹೆಚ್ಚಾಗುವುದರಿಂದ ರಾಜ್ಯದಲ್ಲಿ ಮತ್ತೆ ನಕಲಿ ಮದ್ಯದ ಹಾವಳಿ ತಲೆ ಎತ್ತುವ ಸಾಧ್ಯತೆಯಿದೆ. ಭ್ರಷ್ಟ ಅಬಕಾರಿ ಅಧಿಕಾರಿಗಳು ಸೂಕ್ತ ರೀತಿ ಕಾನೂನು ಪಾಲನೆ ಮಾಡುತ್ತಿಲ್ಲ. ಇದೆಲ್ಲದರ ಕಾರಣದಿಂದ ಅಬಕಾರಿ ತೆರಿಗೆ ಹೆಚ್ಚಳದ ಬದಲಿಗೆ ಕುಸಿಯುವ ಸಾಧ್ಯತೆಯಿದೆ.”
– ಹೊನ್ನಗಿರಿಗೌಡ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.