ಬೆಂಗಳೂರು, ಜು.20 www.bengaluruwire.com : ಯಲಹಂಕ ಸಾರ್ವಜನಿಕ ಆಸ್ಪತ್ರೆ ವೈದ್ಯ, ಮಹಿಳೆಯೊಬ್ಬರ ಹೆರಿಗೆಗಾಗಿ ಲಂಚ ಪಡೆದ ಪ್ರಕರಣದ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿದೆ.
ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿರುವ ಡಾ.ಕೆ.ಸಿ.ರಾಮಚಂದ್ರ ಮಂಜುಳಾ ಎಂಬ 20 ವರ್ಷದ ಮಹಿಳೆಗೆ ಸಿಸೇರಿಯನ್ ಮಾಡಲು 15,000 ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಜುಳಾ ಅವರ ಪತಿ ಲಿಂಗಪ್ಪ ಲೋಕಾಯುಕ್ತರಲ್ಲಿ ದೂರು ನೀಡಿದ್ದರು.
ದಂಪತಿಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಲ್ಲದ ಕಾರಣ 11,000 ರೂ. ಹಣವನ್ನು ನೀಡಲು ಒಪ್ಪಿಕೊಂಡಿದ್ದರು. ಸಿಸೇರಿಯನ್ ಮುಗಿದು ಹೆಣ್ಣು ಮಗು ಜನಿಸಿದ ನಂತರ ಲಿಂಗಪ್ಪ 10,000 ರೂ. ಹಣವನ್ನು ಡಾ.ಕೆ.ಸಿ.ರಾಮಚಂದ್ರ ರವರ ಪರವಾಗಿ ಈ ಆಸ್ಪತ್ರೆಯ ಗುತ್ತಿಗೆ ನೌಕರ ವಾಹಿದ್ (ವಾರ್ಡ್ ಬಾಯ್) ಪಡೆದಿರುತ್ತಾರೆ. ದೂರುದಾರರ ಹೇಳಿಕೆಯ ಮೇರೆಗೆ ಲೋಕಾಯುಕ್ತ ಪೊಲೀಸರು ಪರಿಶೀಲನೆಗೆ ತರಳಿದಾಗ ಲಂಚ ಪಡೆದುಕೊಂಡಿರುವ ಕುರಿತು ತನಿಖಾ ತಂಡದ ಎದುರಿನಲ್ಲೇ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ.ಕೆ.ಸಿ.ರಾಮಚಂದ್ರ ಇವರು ಮೊಬೈಲ್‌ನಲ್ಲಿ ಮಾತುಕತೆ ನಡೆಸಿದ್ದು ಆರೋಪ ಸಾಬೀತಾಗಿರುತ್ತದೆ.
ಹಾಗೂ ವೈದ್ಯರ ವಿರುದ್ಧ ಸು-ಮೋಟೋ ಮೇರೆಗೆ ಲೋಕಾಯುಕ್ತರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ಈ ವೈದ್ಯರ ವಿರುದ್ಧದ ಪ್ರಕರಣವು ಗಂಭೀರ ಸ್ವರೂಪದಿಂದ ಕೂಡಿದೆ. ಇವರ ವಿರುದ್ಧದ ಕರ್ತವ್ಯಲೋಪ ಹಾಗೂ ದುರ್ನಡತೆ ಆರೋಪದ ಬಗ್ಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್ ಆದೇಶಿಸಿದ್ದಾರೆ.