ಬೆಂಗಳೂರು, ಜು.20 www.bengaluruwire.com : ಕರ್ನಾಟಕ ಕಾರ್ಯನಿರತ ಪತ್ರಕರ್ತ (ಕೆಯುಡಬ್ಲ್ಯುಜೆ -KUWJ)ರ ಸಂಘದ ವತಿಯಿಂದ ಮಾಧ್ಯಮ ಕ್ಷೇತ್ರದಲ್ಲಿದ್ದು ಶಾಸಕರಾದ ಹಾಗೂ ಮಾಧ್ಯಮ ಸಂಯೋಜಕರಾಗಿರುವ ವೃತ್ತ ಬಾಂಧವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.
ಮಂಡ್ಯ ಶಾಸಕ ಪಿ.ರವಿಕುಮಾರ್ ಗೌಡ ಗಣಿಗ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾಧ್ಯಮ ಸಂಯೋಜಕ ಪಿ.ತ್ಯಾಗರಾಜ್, ಬಿ.ಎನ್.ಶೀಧರ್, ಸೋಮಶೇಖರ ಕೆರಗೋಡು, ಎಸ್.ಲಕ್ಷ್ಮಿನಾರಾಯಣ, ಟಿ.ಎಂ.ಸತೀಶ್, ಗಿರೀಶ್ ಕೋಟೆ, ಸುನೀಲ್, ಕಮಲರಾಜ್.ಎಸ್, ಸತ್ಯನಾರಾಯಣ್, ರಘುನಾಥ್, ನಾಗರಾಜ್, ಲಕ್ಷ್ಮಣ್, ದೀಪಕ್ ಕರಡೆ ಹಾಗೂ ಅ.ನ.ಪ್ರಹ್ಲಾದ್ ರಾವ್ ಅವರನ್ನು ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯುಜೆ ವತಿಯಿಂದ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತರಾಗಿದ್ದು ಶಾಸಕರಾದ ಪ್ರದೀಪ್ ಈಶ್ವರ್, ‘ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಟಿಕೆಟ್ ನಲ್ಲಿ 6 ಜನ ರೇಸ್ ನಲ್ಲಿದ್ದರು. ಆ ಪೈಕಿ ನನಗೆ ಯಾವ ರಾಜಕೀಯ ಹಿನ್ನಲೆ ಇಲ್ಲ, ಆರ್ಥಿಕ ಬಲ ಇರಲಿಲ್ಲ. ಹಾಗಿದ್ದರೂ ಅಹಿಂದ ಹುಡುಗನಾದ ನನಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗುರುತಿಸಿ ಟಿಕೆಟ್ ನೀಡಿದರು. ನನ್ನ ತಂದೆ ತಾಯಿ ಮಾಡಿದ ಒಳ್ಳೇತನದಿಂದ ನನ್ನ ಗೆಲವು ಸಾಧ್ಯವಾಯಿತು.’
‘ಇಂದು ನಮ್ಮ ಪರಿಶ್ರಮ ಅಕಾಡೆಮಿಯಿಂದ 900 ವೈದ್ಯ ಸೀಟು ಸಿಗುವಲ್ಲಿ ನೆರವಾಗಿದೆ. ನಾನು ಪವರ್ ಫುಲ್ ಪೊಲಿಟಿಕಲ್ ಲೀಡರ್ ಅಲ್ಲ ಪವರ್ ಫುಲ್ ಟೀಚರ್ ಅಂತ ಹೆಮ್ಮಯಿಂದ ಹೇಳುತ್ತೇನೆ. ಪತ್ರಕರ್ತರು ರಾಜಕೀಯ ವ್ಯಕ್ತಿಗಳ ಬಗ್ಗೆ ವಿಶ್ಲೇಷಣೆ ನಡೆಸಲಿ, ಟೀಕೆ ಮಾಡಲಿ. ಆದರೆ ವೈಯುಕ್ತಿಕ ತೇಜೋವಧೆ ಮಾಡದಿದ್ದರೆ ಒಳಿತು’ ಎಂದು ಪ್ರದೀಪ್ ಈಶ್ವರ್ ಹೇಳಿದರು.
ನಾನು ಪತ್ರಿಕೋದ್ಯಮದಲ್ಲಿ ಪತ್ರಿಕೆ ಹಾಕುತ್ತಾ, ವರದಿಗಾರ, ಸಂಪಾದಕ ಹೀಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿ ರಾಜಕೀಯಕ್ಕೆ ಬಂದು ಇಂದು ಶಾಸಕನಾಗಿ ಆಯ್ಕೆಯಾದೆ ಎಂದ ಮಂಡ್ಯ ಶಾಸಕ ರವಿ ಗಣಿಗ ಸಮಾರಂಭದಲ್ಲಿ ಮಾತನಾಡುತ್ತಾ ತಮ್ಮ ಪತ್ರಕರ್ತ ಜೀವನದ ಬಗ್ಗೆ ತೆರೆದಿಟ್ಟರು.
ಮುಖ್ಯಮಂತ್ರಿ ಅವರ ಮಾಧ್ಯಮ ಸಂಯೋಜಕ ಪ್ರಭಾಕರ್ ಮತ್ತು ಉಪಮುಖ್ಯಮಂತ್ರಿ ಮಾಧ್ಯಮ ಸಂಯೋಜಕ ಪಿ.ತ್ಯಾಗರಾಜ್ ಸುಧೀರ್ಘವಾಗಿ ತಮ್ಮ ಪತ್ರಕರ್ತರ ಅನುಭವವನ್ನು ಹಂಚಿಕೊಂಡರು. ತಮ್ಮ ಈ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ತಮ್ಮ ಕೈಲಾದ ಸಹಕಾರ ನೀಡುವುದಾಗಿ ತಿಳಿಸಿದರು.
ಕೆಯುಡಬ್ಲ್ಯುಜೆ ಸಂಘದ ನಿಧಿಯನ್ನು ತಮ್ಮ ಅವಧಿಯಲ್ಲಿ ಒಂದು ಕೋಟಿ ರೂ. ತನಕ ಸಂಗ್ರಹ ಮಾಡುವ ಗುರಿಯಿದೆ. ಶಾಸಕ ಪ್ರದೀಪ್ ಈಶ್ವರ್ ನಡೆಸುಮ ಪರಿಶ್ರಮ ಅಕಾಡೆಮಿಯಲ್ಲಿ ಅರ್ಹ ಪತ್ರಕರ್ತರ ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಅಕಾಡೆಮಿಯಿಂದ ರಿಯಾಯಿತಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ದನಿಗೂಡಿಸಿದ ಪ್ರದೀಪ್ ಈಶ್ವರ್, ಖಂಡಿತವಾಗಿ ಈ ಬಗ್ಗೆ ಸಹಕರಿಸುವುದಾಗಿ ಹೇಳಿದ್ದಲ್ಲದೆ, ಇಡೀ ರಾಜ್ಯದಲ್ಲಿ ಏಕ ಫೋಷಕ ಪತ್ರಕರ್ತರ ಮಕ್ಕಳಿಗೆ ಕೆಯುಡಬ್ಲ್ಯುಜೆಯಿಂದ ಶೈಕ್ಷಣಿಕವಾಗಿ ಸಹಾಯ ಮಾಡುವುದಾದರೆ ಅದಕ್ಕೆ ತಾವೂ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ಶೇಷಚಂದ್ರಿಕ, ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಉಪಾಧ್ಯಕ್ಷರು, ಖಜಾಂಚಿ ವಾಸುದೇವ ಹೊಳ್ಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.