ಬೆಂಗಳೂರು, ಜು.19 www.bengaluruwire.com : ರಾಜ್ಯ ಸರ್ಕಾರದಿಂದ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ರಿಯಾಯಿತಿ ದರದಲ್ಲಿ “ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ” ಯೋಜನೆಯಡಿ ಇದೇ ಜುಲೈ 29ರಂದು ನಾಲ್ಕನೇ ಟ್ರಿಪ್ಪಿನ ವಿಶೇಷ ರೈಲು ಬೆಂಗಳೂರಿನಿಂದ ಹೊರಡಲಿದ್ದು, ಆಸಕ್ತ ಯಾತ್ರಾರ್ಥಿಗಳು ವಿಶೇಷ ರೈಲಿನ ಟಿಕೆಟ್ ಬುಕಿಂಗ್ ಮಾಡಬಹುದು.
ಈ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಈ (https://www.irctctourism.com) ಲಿಂಕ್ ಮೂಲಕ ಅಥವಾ ಐ.ಆರ್.ಸಿ.ಟಿ.ಸಿ (IRCTC) ಪೋರ್ಟಲ್ ಮೂಲಕ ತಮ್ಮ ಟಿಕೇಟ್ ಅನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಈಗ ಹೊಸದಾಗಿ ಸುಸಜ್ಜಿತ ಎಲ್ ಎಚ್ ಬಿ (LHB) ಕೋಚ್ಗಳನ್ನು ಅಳವಡಿಸಲಾಗಿದೆ. ಇದು ಸುಸಜ್ಜಿತವಾದ ಸ್ಥಳದಲ್ಲಿಯೇ ಅಡುಗೆ ತಯಾರು ಮಾಡುವ ಅಡುಗೆ ಮನೆ (PANTRY CAR) ಒಳಗೊಂಡಿರುತ್ತದೆ. ಹಾಗೂ ಯಾತ್ರಾರ್ಥಿಗಳ ಹಿತ ದೃಷ್ಟಿಯಿಂದ ಇಬ್ಬರು ವೈದ್ಯರು ಸಹ ಪ್ರಯಾಣಿಸುತ್ತಾರೆ.ಈ ಸೌಲಭ್ಯವನ್ನು ರಾಜ್ಯದ ಎಲ್ಲಾ ಭಕ್ತಾಧಿಗಳು ಸದುಪಯೋಗ ಪಡಿಸಿಕೊಂಡು, ಶ್ರೀ ಕಾಶಿ ವಿಶ್ವನಾಥ ಸ್ವಾಮಿಗಳ ದರ್ಶನವನ್ನು ಪಡೆಯಬಹುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಯೋಜನೆಯಡಿ ಈವರೆಗೆ ಒಟ್ಟು 3 ಟ್ರಿಪ್ಗಳನ್ನು ಪೂರೈಸಿದ್ದು, ವಿಶೇಷ ರೈಲಿನಲ್ಲಿ ಒಟ್ಟು 1,644 ಯಾತ್ರಾರ್ಥಿಗಳು ಯಾತ್ರೆ ಪೂರೈಸಿದ್ದು, ಈ ಯಾತ್ರಾರ್ಥಿಗಳಿಗೆ ಪ್ರಯಾಣದ ಒಟ್ಟು ಪ್ಯಾಕೇಜ್ದರ 20,000 ರೂ.ಗಳ ಪೈಕಿ ಸರ್ಕಾರದಿಂದ ತಲಾ 5,000 ರೂ.ಗಳಂತೆ 82.20 ಲಕ್ಷ ರೂ.ಗಳ ಸಹಾಯಧನವನ್ನು ಈವರೆಗೆ ವಿತರಿಸಲಾಗಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2022-23ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಿಂದ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಪ್ಯಾಕೇಜ್ ರೂಪಿಸಿ “ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ” ಯೋಜನೆಯನ್ನು ಐಆರ್ ಸಿಟಿಸಿ (IRCTC) ಮತ್ತು ಭಾರತೀಯ ರೈಲ್ವೇ (Indian Railway) ಇಲಾಖೆಯ ಸಹಯೋಗದೊಂದಿಗೆ ವಿಶೇಷ ರೈಲಿನ ಮೂಲಕ ಕೈಗೊಳ್ಳಲಾಗುತ್ತಿದೆ.
ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ 20,000 ರೂ.ಗಳಂತೆ ಪ್ಯಾಕೇಜ್ ರೂಪಿಸಿದ್ದು, ಈ ಮೊತ್ತದಲ್ಲಿ ತಲಾ 5,000 ರೂ.ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಿ ಉಳಿದ ಮೊತ್ತ ರೂ. 15,000 ರೂ. ಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ. ಈ ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಿದ್ದು, ಇದು ಒಟ್ಟು 07 ದಿನಗಳ ಪ್ರವಾಸವಾಗಿರುತ್ತದೆ.