ಬೆಂಗಳೂರು, ಜು.05 www.bengaluruwire.com : ಬೆಂಗಳೂರು ಪೊಲೀಸ್ ಕಮಿಷನರೇಟ್ (Bangalore City Police) ವ್ಯಾಪ್ತಿಯಲ್ಲಿನ 241 ಹೊಯ್ಸಳ ವಾಹನಗಳಲ್ಲಿದ್ದ ವೈರ್ ಲೆಸ್ ಸೆಟ್ ಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ಸಿಲಿಕಾನ್ ಸಿಟಿಯಲ್ಲಿನ ಗಸ್ತು ವ್ಯವಸ್ಥೆಗೆ ಆನೆ ಬಲ ಬಂದಗಾಗಿದೆ.
ತೊಂದರೆಯಲ್ಲಿರುವವರು 112 ಸಹಾಯವಾಣಿಗೆ ಕರೆ ಮಾಡಿದರೆ, ನಗರದಲ್ಲಿರುವ ಹೊಯ್ಸಳ ನಿಯಂತ್ರಣ ಕೇಂದ್ರದಿಂದ ಹೊಯ್ಸಳ ವಾಹನದಲ್ಲಿರುವ ಪೊಲೀಸರಿಗೆ ಸಂವಹನ ನಡೆಸಲು ನೂತನ ಡಿಜಿಟಲ್ ವೈರ್ ಲೆಸ್ ಸೆಟ್ ಬಹಳ ಸಹಕಾರಿಯಾಗಿದೆ. ಈ ಹಿಂದಿದ್ದ ಅನಲಾಗ್ ಮಾದರಿಯ ವೈರ್ ಲೆಸ್ ಸೆಟ್ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಯ ಕಾರಣದಿಂದ ಹೊಯ್ಸಳ ವಾಹನ ಹಾಗೂ ಕಂಟ್ರೋಲ್ ರೂಮ್ ಮಧ್ಯೆ ಸಂವಹನ ನಡೆಸುವಾಗ ಸ್ಪಷ್ಟತೆಯ ಸಮಸ್ಯೆಯಾಗುತ್ತಿತ್ತು. ಆದರೀಗ ಈ ಸಮಸ್ಯೆ ನಿವಾರಣೆಯಾಗಿದ್ದು, ತಡೆರಹಿತ ಸಂಹನ ವ್ಯವಸ್ಥೆಗೆ ಸಹಕಾರಿಯಾಗಿದೆ.
ನಗರದಲ್ಲಿ ಪ್ರಸ್ತುತ 111 ಕಾನೂನು ಮತ್ತು ಸುವ್ಯವಸ್ಥೆಗೆಯಡಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳು ಹಾಗೂ 42 ಸಂಚಾರ ಪೊಲೀಸ್ ಠಾಣೆಗಳಿವೆ. ದಿನಂಪ್ರತಿ ಬೆಂಗಳೂರು ವ್ಯಾಪ್ತಿಯ 112 ನಂಬರಿಗೆ ಹೊಯ್ಸಳ ಕಂಟ್ರೋಲ್ ರೂಮ್ ಗೆ ಸರಾಸರಿಯಾಗಿ 850 ರಿಂದ 950 ದೂರುಗಳು ಹೊಯ್ಸಳ ವಾಹನ ಸ್ಥಳಕ್ಕೆ ಹೋಗಿ ಸಮಸ್ಯೆಯನ್ನು ಆಲಿಸುವಂತಹ ಕರೆಗಳು ಬರುತ್ತದೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರು ಅಥವಾ ಕರೆ ಮಾಡಿದವರ ಸ್ಥಳಕ್ಕೆ ಹೊಯ್ಸಳವನ್ನು ಕಳುಹಿಸಲು ಕಂಟ್ರೋಲ್ ರೂಮ್ ಹಾಗೂ ಹೊಯ್ಸಳ ವಾಹನದ ಮಧ್ಯೆ ವೈರ್ ಲೆಸ್ ಡಿಜಿಟಲ್ ಸೆಟ್ ಬಹಳ ಪ್ರಮುಖವಾಗಿರುತ್ತದೆ.
ಅನಲಾಗ್ ವ್ಯವಸ್ಥೆಯಿಂದ ಡಿಜಿಟಲ್ ಸೆಟ್ ಗೆ ಮೇಲ್ದರ್ಜೆಗೆ :
“ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 241 ಹೊಯ್ಸಳ ವಾಹನಗಳಿಗೆ ಈ ಹಿಂದೆ ಇದ್ದ ಅನಲಾಗ್ ವೈರ್ ಲೆಸ್ ಜಾಗದಲ್ಲಿ ಡಿಜಿಟಲ್ ವೈರ್ ಲೆಸ್ ಸೆಟ್ ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಹೊಯ್ಸಳ ಗಸ್ತು ವಾಹನ ಹಾಗೂ ನಿಯಂತ್ರಣ ಕೊಠಡಿ ನಡುವೆ ತಡೆ ರಹಿತವಾಗಿ, ಸ್ಪಷ್ಟವಾಗಿ ಮಾತನಾಡುವುದು ಕೇಳಿಸಲಿದೆ. ಹೀಗಾಗಿ ಸಂವಹನದ ಗುಣಮಟ್ಟ ಸುಧಾರಿಸಲಿದ್ದು, ನಾಗರೀಕರ ಹಿತರಕ್ಷಣೆಯಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ‘ಬೆಂಗಳೂರು ವೈರ್’ ಗೆ ತಿಳಿಸಿದ್ದಾರೆ.
ಈ ಹಿಂದೆ 2017ರ ಸಂದರ್ಭದಲ್ಲಿ ಪ್ರವೀಣ್ ಸೂದ್ ನಗರ ಪೊಲೀಸ್ ಆಯುಕ್ತರಾಗಿದ್ದಾಗ ಹೊಯ್ಸಳ ವಾಹನವು, ಸರಾಸರಿಯಾಗಿ ತೊಂದರೆಗೊಳಗಾದವರ ಸ್ಥಳಕ್ಕೆ ತಲುಪುವ ಪ್ರತಿಕ್ರಿಯೆ ಸಮಯ 20 ನಿಮಿಷಗಳಾಗಿತ್ತು. ಆದರೀಗ ಆ ಸರಾಸರಿ ಸಮಯ 7.30 ನಿಮಿಷದಿಂದ 9 ನಿಮಿಷದ ಒಳಗಿದೆ. ಬೆಂಗಳೂರು ಪೊಲೀಸ್ ಇದೀಗ 241 ಹೊಯ್ಸಳ ವಾಹನದಲ್ಲೂ ಡಿಜಿಟಲ್ ವೈರೆ ಲೆಸ್ ಸೆಟ್ ಅಳವಡಿಸಿರುವುದರಿಂದ ಇನ್ನು ಮುಂದೆ ತೊಂದರೆಯಲ್ಲಿರುವವರ ಜೊತೆ ಹೊಯ್ಸಳ ಕಂಟ್ರೋಲ್ ರೂಮ್ ಗೆ ಸಂದೇಶ ರವಾನೆಯಾದ ಬಳಿಕ ಆ ಸಂದೇಶ ಸಂಬಂಧಿಸಿದ ಹೊಯ್ಸಳ ಗಸ್ತು ವಾಹನಕ್ಕೆ ತಡೆರಹಿತವಾಗಿ ತಲುಪಲು ಸಾಧ್ಯವಾಗಲಿದ್ದು, ಆ ಮೂಲಕ ಅಪರಾಧ ನಿಯಂತ್ರಣದಲ್ಲಿ ಸಹಕಾರಿಯಾಗಲಿದೆ.
“ನಗರದಲ್ಲಿ ಪ್ರತಿನಿತ್ಯ ಹೊಯ್ಸಳ ವಾಹನವು ಸ್ಥಳಕ್ಕೆ ಹೋಗಿ ಹಾಜರಾಗಿ ಕ್ರಮ ಕೈಗೊಳ್ಳುವಂತಹ 850 ರಿಂದ 950 ಸರಾಸರಿ ಕರೆಗಳು ನಿಯಂತ್ರಣ ಕೊಠಡಿಗೆ ಬರುತ್ತಿದ್ದು, ಆ ಪೈಕಿ 700 ಕರೆಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದಾಗಿದ್ದರೆ, 30 ರಿಂದ 40 ಕರೆಗಳು ಸಂಚಾರ ಹಾಗೂ 15 ರಿಂದ 25 ಸರಾಸರಿ ಕರೆಗಳು ಸೈಬರ್ ಕ್ರೈಮ್ ಗೆ ಸಂಬಂಧಿಸಿದ್ದಾಗಿವೆ. ಇಂತಹ ಕರೆಗಳಿಗೆ ಪ್ರತಿಕ್ರಿಯೆ ನೀಡಲು ಹೊಯ್ಸಳ ವಾಹನಗಳು ಸಂಬಂಧಿಸಿದ ಸ್ಥಳಕ್ಕೆ 7.30 ರಿಂದ 9 ನಿಮಿಷದ ಒಳಗಾಗಿ ಸ್ಥಳಕ್ಕೆ ಧಾವಿಸಿ ತೊಂದರೆಯಲ್ಲಿರುವವರಿಗೆ ನೆರವಾಗುತ್ತಿದೆ.” ಎಂದು ಬೆಂಗಳೂರು ನಗರ ಕಮಾಂಡ್ ಸೆಂಟರ್ ಡಿಸಿಪಿ ರವೀಂದ್ರ.ಕೆ ಗದಾಡಿ ತಿಳಿಸಿದ್ದಾರೆ.
ಬೆಂಗಳೂರಿನ ಕಮಾಂಡ್ ಸೆಂಟರ್ ಗೆ ಪ್ರತಿದಿನ ಬರುವ ಕರೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ಸಂಬಂಧಿಸಿದಂತೆ ಗಂಡ- ಹೆಂಡತಿ ಜಗಳ, ಜಾಗಕ್ಕೆ ಸಂಬಂಧಿಸಿದ ತಕರಾರು, ಕಸ ಎಸೆಯುವ ವಿಚಾರದಲ್ಲಿ ಮಾರಾಮಾರಿಯಂತಹ ವಿಷಯಗಳು ಹೆಚ್ಚಾಗಿರುತ್ತದೆ. ಉಳಿದಂತೆ ಮೊಬೈಲ್, ಚಿನ್ನದ ಸರ ಕಿತ್ತುಕೊಂಡು ಹೋಗುವ, ರಾಬರಿ, ಡಕಾಯಿತಿಯಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಸರಾಸರಿಯಾಗಿ ನಾಲ್ಕೈದು ಕರೆಗಳು ಬರುತ್ತದೆ. ನಗರದಲ್ಲಿ 241 ಹೊಯ್ಸಳ ವಾಹನಗಳು ಪ್ರತಿ ಪೊಲೀಸ್ ಠಾಣೆಗಳಿಗೆ ಆ ಪ್ರದೇಶದ ವಿಸ್ತೀರ್ಣ, ಜನಸಂಖ್ಯೆ, ಅಲ್ಲಿ ಜರಗುವ ಅಪರಾಧಗಳ ಸಂಖ್ಯೆ ಆಧರಿಸಿ ಹೊಯ್ಸಳ ವಾಹನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ನಮ್ಮ 112 ಸೇವೆಗೆ ವಾಟ್ಸಪ್ ಮೂಲಕವೂ ನೆರವಿಗೆ ಕೋರಿಕೆ :
ಬೆಂಗಳೂರಿನ ನಾಗರೀಕರು ನಮ್ಮ 112 (Namma 112) ಜೊತೆ ಅಂತರ್ಗತವಾಗಿರುವ 9480801000 ವಾಟ್ಸಪ್ ನಂಬರ್ ಮೂಲಕವೂ ಸಂದೇಶ ರವಾನಿಸಿ ಪೊಲೀಸರಿಗೆ ದೂರು ನೀಡಿ, ನೆರವಿಗೆ ಕೋರಿಕೆ ಸಲ್ಲಿಸಬಹುದಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.