ಬೆಂಗಳೂರು, ಜು.04 www.bengaluruwire.com : ಕೇಂದ್ರ ಸರ್ಕಾರದಿಂದ ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿ ಲಭಿಸದ ಕಾರಣ, ರಾಜ್ಯ ಸರ್ಕಾರವು ಅಕ್ಕಿ ಬದಲು ಹಣ ಕೊಡುವುದರ ವಿರುದ್ಧ ಸರ್ಕಾರಿ ಪಡಿತರ ವಿತರಕರ ಸಂಘ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ನಗರದಲ್ಲಿ ಮಂಗಳವಾರ ಸಂಘದ ಅಧ್ಯಕ್ಷ ಕೃಷ್ಣಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ತಾಲೂಕು ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಹಾಗೂ ಸಾವಿರಾರು ಮಾಲೀಕರು ಭಾಗವಹಿಸಿದ್ದರು. ಸಭೆಯಲ್ಲಿ ಆಹಾರ ಪದಾರ್ಥಗಳ ಬದಲಾಗಿ ಪಡಿತರ ಚೀಟಿದಾರರಿಗೆ ಹಣ ನೀಡಿದರೆ ಪಡಿತರ ವಿತರಕರಿಗೆ ಕಮಿಷನ್ ತುಂಬಾ ಕಡಿಮೆ ಆಗುತ್ತದೆ. ಆದ್ದರಿಂದ ಅಧಿವೇಶನದಲ್ಲಿ ಚರ್ಚಿಸಿ ನಮ್ಮ ಕಮಿಷನ್ ಹೆಚ್ಚಳ ಮಾಡಬೇಕು, ಆಹಾರ ಪದಾರ್ಥವನ್ನು ಪಡಿತರದಾರರಿಗೆ ವಿತರಣೆ ಮಾಡಬೇಕು. ಅಲ್ಲಿಯವರೆಗೆ ಗೋದಾಮಿನಿಂದ ಅಕ್ಕಿ ಎತ್ತುವಳಿ ಮಾಡುವುದನ್ನು ನಿಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸರ್ಕಾರವು ಪಡಿತರ ವಿತರಕರ ಸಂಘಟನೆಯ ಜೊತೆ ಸಭೆ ಕರೆದು ಚರ್ಚೆ ಮಾಡಿ ನಮ್ಮ ಬೇಡಿಕೆಗಳನ್ನು ಈಡೇರಿಸಿದ ನಂತರ ಎತ್ತುವಳಿ ಮಾಡೋಣ ಅದುವರೆಗೆ ರಾಜ್ಯದ ಎಲ್ಲ ಮಾಲೀಕರು ಎತ್ತುವಳಿ ಮಾಡಬಾರದೆಂದು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದ್ದಾರೆ.