ಬೆಂಗಳೂರು, ಜು.02 www.bengaluruwire.com : ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸಿದ್ದು, ತಡವಾಗಿ ಹೀಗಾಗಿ ಒಂದು ಕಡೆ ಮಳೆ ಕೊರತೆ ಹಾಗೂ ಮತ್ತೊಂದು ಕಡೆ ಸುಡುವ ಬೇಸಿಗೆಯಿಂದಾಗಿ ರಾಜ್ಯಾದ್ಯಂತ ಜಲಾಶಯಗಳಲ್ಲಿ ನೀರಿನ ಮಟ್ಟ ಅತ್ಯಂತ ವೇಗವಾಗಿ ಕುಸಿಯುತ್ತಿದೆ.
ರಾಜ್ಯದಲ್ಲಿ ಜು.1ರ ವರದಿ ಪ್ರಕಾರ 13 ಜಲಾಶಯ ಮತ್ತು ಅಣೆಕಟ್ಟಿನ ಪೈಕಿ ಏಳು ಜಲಾಶಯಗಳಲ್ಲಿ ನೀರಿನ ಮಟ್ಟ ಶೇ.21ರಷ್ಟಕ್ಕಿಂತ ಕಡಿಮೆಯಿರುವುದು ಈ ಬಾರಿ ಬರದ ಕರಿ ನೆರಳು ಕರ್ನಾಟಕದ ಮೇಲೆ ಬಿದ್ದಂತೆ ತೋರುತ್ತಿದೆ. 13 ಜಲಾಶಯಗಳ ಒಟ್ಟು ನೀರು ಸಂಗ್ರಹಣಾ ಸಾಮರ್ಥ್ಯ 865.20 ಟಿಎಂಸಿಯಿದ್ದರೆ, ಪ್ರಸ್ತುತ 148.22 ಟಿಎಂಸಿ ಪ್ರಮಾಣದಷ್ಟು ಮಾತ್ರ ನೀರು ಸಂಗ್ರಹವಿದೆ. ಅಂದರೆ ಒಟ್ಟಾರೆ ನೀರು ಸಂಗ್ರಹ ಸಾಮರ್ಥ್ಯದ ಶೇ.17ರಷ್ಟು ಮಾತ್ರ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಹದಿಮೂರು ಜಲಾಶಯಗಳಲ್ಲಿ 293.75 ಟಿಎಂಸಿಯಷ್ಟು (1 ಟಿಎಂಸಿ ಅಂದರೆ ಸಾವಿರ ಮಿಲಿಯನ್ ಘನ ಅಡಿ = 2,831 ಕೋಟಿ ಲೀ. ಸಮ) ನೀರು ಡ್ಯಾಮ್ ಗಳಲ್ಲಿ ಸಂಗ್ರಹವಾಗಿತ್ತು.
ತುಂಗಭದ್ರಾ ಅಣೆಕಟ್ಟಿನಲ್ಲಿ ಕಳೆದ ಬಾರಿ ಇದೇ ಅವಧಿಯಲ್ಲಿ ಶೇ.43.35ರಷ್ಟು ನೀರಿನ ಸಂಗ್ರವಿದ್ದರೆ, ಈ ಬಾರಿ ಶೇ.7.92ಕ್ಕೆ ಕುಸಿದಿದೆ. ಲಿಂಗನಮಕ್ಕಿಯಲ್ಲಿ ಕಳೆದ ಬಾರಿ ಶೇ.14.89ರಷ್ಟು ನೀರಿನ ಸಂಗ್ರವಿದ್ದರೆ, ಈ ಬಾರಿ ಅದು ಶೇ.7.34ಕ್ಕೆ ಇಳಿದಿದೆ. ವರಾಹಿಯಲ್ಲಿ ಕಳೆದ ಬಾರಿ ಶೇ.7.11ರಷ್ಟಿದ್ದು, ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಶೇ.7.68ರಷ್ಟಕ್ಕೆ ತಲುಪಿದೆ. ಇನ್ನು ಘಟಪ್ರಭಾದಲ್ಲಿ ಶೇ.16.31ರಷ್ಟಿದ್ದಿದ್ದು, 7.92ಕ್ಕೆ ಬಂದು ನಿಂತಿದೆ. ಆಲಮಟ್ಟಿಯಲ್ಲಿ ಶೇ.39.17 ಇದ್ದಿದ್ದು, ಶೇ.15.79ಕ್ಕೆ ನೀರಿನ ಸಂಗ್ರಹ ಕುಸಿದಿದೆ. ಇನ್ನು ಮಲಪ್ರಭಾ ಜಲಾಶಯದಲ್ಲಿ ಹಿಂದಿನ ವರ್ಷ ಇದೇ ಅವಧಿಯಲ್ಲಿ ಶೇ.31.06 ನೀರಿದ್ದರೆ, ಈ ಬಾರಿ ಕೇವಲ ಶೇ.18.55ರಷ್ಟಕ್ಕೆ ಇಳಿಕೆಯಾಗಿದೆ. ಇನ್ನು ಕೆಆರ್ ಎಸ್ ಅಣೆಕಟ್ಟಿನಲ್ಲಿ ಕಳೆದ ವರ್ಷ ನೀರಿನ ಸಂಗ್ರಹವು ಶೇ.59.41ರಷ್ಟಿತ್ತು ಆದರೀಗ ಶೇ.20.11ಕ್ಕೆ ಬಂದು ನಿಂತಿದೆ.
ಜಲವಿದ್ಯುತ್ ಉತ್ಪಾದನೆಗೂ ತೊಡಕು :
ಒಂದು ಮಳೆ ಕಡಿಮೆಯಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ದಿನೇ ದಿನೇ ಕುಸಿಯುತ್ತಿದ್ದು, ಕುಡಿಯುವ ನೀರು, ಕೃಷಿ, ವಿದ್ಯುತ್ ಉತ್ಪಾದನೆ ಮೇಲೆಯೂ ಕೂಡ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ಸಂಸ್ಥೆ ಅಡಿಯಲ್ಲಿ ಶರಾವತಿ, ನಾಗಜರಿ, ವಾರಾಹಿ, ಕೂಡಸಳ್ಳಿ, ಜೋಗ ಹಾಗೂ ಶಿವನ ಸಮುದ್ರದಲ್ಲಷ್ಟೆ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿರುವುದು ಕೆಪಿಟಿಸಿಎಲ್ ಪ್ರಸ್ತುತ ವಿದ್ಯುತ್ ಉತ್ಪಾದನಾ ವರದಿಯಲ್ಲಿ ಕಂಡು ಬಂದಿದೆ. ಕೆಪಿಸಿಎಲ್ ಸದ್ಯ ಪ್ರಮುಖವಾಗಿ ಉಷ್ಣವಿದ್ಯುತ್ ಉತ್ಪಾದನೆ ಮೇಲೆಯೇ ಹೆಚ್ಚು ಅವಲಂಬಿತವಾಗಿರುವುದು ತಿಳಿದು ಬಂದಿದೆ. ಮಳೆಯ ಕೊರತೆಯ ಪ್ರಮಾಣ ಹೀಗೆ ಮುಂದುವರೆದರೆ, ರಾಜ್ಯದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.
ಜೂನ್ ತಿಂಗಳಲ್ಲಿ 16 ಜಿಲ್ಲೆಗಳಲ್ಲಿ ಮಳೆ ಕೊರತೆ :
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿಯ ಪ್ರಕಾರ ಜೂನ್ ತಿಂಗಳಿನಲ್ಲಿ ರಾಜ್ಯದ 16 ಜಿಲ್ಲೆಗಳಲ್ಲಿ ಕೊರತೆಯಿರುವುದಾಗಿ ತಿಳಿಸಿದೆ. ಅದರಲ್ಲೂ 9 ಜಿಲ್ಲೆಗಳಲ್ಲಿ ತೀವ್ರ ಮಳೆಯ ಅಭಾವವಿದೆ. ಕೇವಲ ಕೋಲಾರ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚುವರಿಯಾಗಿ ಶೇ.34ರಷ್ಟು ಅಂದರೆ 88 ಮಿ.ಮೀ ಮಳೆಯಾಗಿದೆ. ಉಳಿದಂತೆ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದೆ ಎಂದು ಹೇಳಿದೆ.
ಮುಂಗಾರು ಪೂರ್ವ ಅವಧಿಯಲ್ಲಿ ಜನವರಿಯಿಂದ ಮೇ ತಿಂಗಳಾಗಿದ್ದು, ಈ ಅಧಿಯಲ್ಲಿ ರಾಜ್ಯದಲ್ಲಿ ವಾಡಿಕೆಯಂತೆ 120 ಮಿ.ಮೀ ಮಳೆಯಾಗಬೇಕಿತ್ತು. ಆದರೆ ವಾಸ್ತವವಾಗಿ 117.4 ಮಿ.ಮೀನಷ್ಟು ಮಾತ್ರ ಮಳೆಯಾಗಿದೆ. ಜನವರಿಯಿಂದ ಮಾರ್ಚ್ ತನಕ 13 ಮಿ.ಮೀ,, ಏಪ್ರಿಲ್ ನಲ್ಲಿ 32 ಮಿ.ಮೀ ಹಾಗೂ ಮೇ ತಿಂಗಳಿನಲ್ಲಿ 74 ಮಿ.ಮೀ ಮಳೆಯಾಗಿದೆ. ಜೂನ್ 1ನೇ ತಾರೀಖಿನಿಂದ ಜುಲೈ 1ನೇ ತಾರೀಖಿನ ಅವಧಿಯಲ್ಲಿ ವಾಡಿಕೆಯಂತೆ 208 ಮಿ.ಮೀ ಮಳೆಯಾಗಬೇಕಿತ್ತು ಆದರೆ 92 ಮಿ.ಮೀ ಅಂದರೆ ಶೇ.56ರಷ್ಟು ಕಡಿಮೆ ಮಳೆಯಾಗಿದೆ.
ಬಿತ್ತನೆಯ ಪ್ರಮಾಣದಲ್ಲೂ ಕುಸಿತ :
ಈ ಬಾರಿ ಮುಂಗಾರು ಪೂರ್ವದಲ್ಲಿ ರಾಜ್ಯದಾದ್ಯಂತ 2.95 ಒಟ್ಟಾರೆ ಕೃಷಿ ಭೂಮಿಯ ಪೈಕಿ ಕೇವಲ 2.48 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿದೆ. ಅದೇ ರೀತಿ ಜೂ.9ರ ಕೃಷಿ ಇಲಾಖೆ ವರದಿಯಂತೆ ಮಳೆಗಾಲದ ಅವಧಿಯಲ್ಲಿ ಒಟ್ಟಾರೆ 82.35 ಲಕ್ಷ ಕೃಷಿ ಭೂಮಿಯ ಪೈಕಿ 5.42 ಲಕ್ಷ ಹೆಕ್ಟೇರ್ (ಶೇ.7) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ರಾಜ್ಯ 13 ವಿವಿಧ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ವಿವರ ಈ ಕೆಳಕಂಡಂತಿದೆ :
ಲಿಂಗನಮಕ್ಕಿ ಜಲಾಶಯ :
ಲಿಂಗನಮಕ್ಕಿ ಜಲಾಶಯ ಪೂರ್ಣ ತುಂಬಿದಾಗ 42,971 ದಶ ಲಕ್ಷ ಲೀ. ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ 3,155 ದಶಲಕ್ಷ ಲೀ. ಅಂದರೆ ಶೇ.7.34 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.14.89 ನಷ್ಟು ನೀರು ಸಂಗ್ರಹವಿತ್ತು.
ಸೂಪಾ ಜಲಾಶಯ :
ಸೂಪಾ ಜಲಾಶಯ ಪೂರ್ಣ ತುಂಬಿದಾಗ 41,143 ದಶ ಲಕ್ಷ ಲೀ. ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ 8,645 ದಶಲಕ್ಷ ಲೀ. ಅಂದರೆ ಶೇ.21.01 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.13.32 ನಷ್ಟು ನೀರು ಸಂಗ್ರಹವಿತ್ತು.
ವರಾಹಿ ಜಲಾಶಯ :
ವರಾಹಿ ಜಲಾಶಯ ಪೂರ್ಣ ತುಂಬಿದಾಗ 8,807 ದಶ ಲಕ್ಷ ಲೀ. ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ 677 ದಶಲಕ್ಷ ಲೀ. ಅಂದರೆ ಶೇ.7.68 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.7.11 ನಷ್ಟು ನೀರು ಸಂಗ್ರಹವಿತ್ತು.
ಹಾರಂಗಿ ಜಲಾಶಯ :
ಹಾರಂಗಿ ಜಲಾಶಯ ಪೂರ್ಣ ಸಾಮರ್ಥ್ಯ 2,407 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 773 ದಶಲಕ್ಷ ಲೀ. ಅಂದರೆ ಶೇ.32.12 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.86 ನಷ್ಟು ನೀರು ಸಂಗ್ರಹವಿತ್ತು.
ಹೇಮಾವತಿ ಅಣೆಕಟ್ಟು (ಗೂರೂರು ಡ್ಯಾಮ್) :
ಹೇಮಾವತಿ ಅಣೆಕಟ್ಟು ಪೂರ್ಣ ಸಾಮರ್ಥ್ಯ 10,506 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 4,018 ದಶಲಕ್ಷ ಲೀ. ಅಂದರೆ ಶೇ.38.25 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.67.76 ನಷ್ಟು ನೀರು ಸಂಗ್ರಹವಿತ್ತು.
ಕೃಷ್ಣ ರಾಜಸಾಗರ ಅಣೆಕಟ್ಟು (KRS) :
ಕೃಷ್ಣ ರಾಜಸಾಗರ ಅಣೆಕಟ್ಟು (KRS) ಪೂರ್ಣ ಸಾಮರ್ಥ್ಯ 14,003 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 2,820 ದಶಲಕ್ಷ ಲೀ. ಅಂದರೆ ಶೇ.20.14 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.59.41 ನಷ್ಟು ನೀರು ಸಂಗ್ರಹವಿತ್ತು.
ಕಬಿನಿ ಅಣೆಕಟ್ಟು :
ಕಬಿನಿ ಅಣೆಕಟ್ಟು ಪೂರ್ಣ ಸಾಮರ್ಥ್ಯ 5,527 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 1,286 ದಶಲಕ್ಷ ಲೀ. ಅಂದರೆ ಶೇ.23.26 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.48.21 ನಷ್ಟು ನೀರು ಸಂಗ್ರಹವಿತ್ತು.
ಭದ್ರಾ ಅಣೆಕಟ್ಟು :
ಭದ್ರಾ ಅಣೆಕಟ್ಟು ಪೂರ್ಣ ಸಾಮರ್ಥ್ಯ 20,258 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 7,037 ದಶಲಕ್ಷ ಲೀ. ಅಂದರೆ ಶೇ.34.74 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.50.82 ನಷ್ಟು ನೀರು ಸಂಗ್ರಹವಿತ್ತು.
ತುಂಗಭದ್ರಾ ಅಣೆಕಟ್ಟು :
ತುಂಗಭದ್ರಾ ಅಣೆಕಟ್ಟು ಪೂರ್ಣ ಸಾಮರ್ಥ್ಯ 29,957 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 875 ದಶಲಕ್ಷ ಲೀ. ಅಂದರೆ ಶೇ.2.92 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.43.35 ನಷ್ಟು ನೀರು ಸಂಗ್ರಹವಿತ್ತು.
ಘಟಪ್ರಭಾ ಜಲಾಶಯ :
ಘಟಪ್ರಭಾ ಜಲಾಶಯ ಪೂರ್ಣ ಸಾಮರ್ಥ್ಯ 14,442 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 1,144 ದಶಲಕ್ಷ ಲೀ. ಅಂದರೆ ಶೇ.7.92 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.16.31 ನಷ್ಟು ನೀರು ಸಂಗ್ರಹವಿತ್ತು.
ಮಲಪ್ರಭಾ ಜಲಾಶಯ :
ಮಲಪ್ರಭಾ ಜಲಾಶಯ ಪೂರ್ಣ ಸಾಮರ್ಥ್ಯ 10,684 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 1,982 ದಶಲಕ್ಷ ಲೀ. ಅಂದರೆ ಶೇ.18.55 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.31.06 ನಷ್ಟು ನೀರು ಸಂಗ್ರಹವಿತ್ತು.
ಆಲಮಟ್ಟಿ ಅಣೆಕಟ್ಟು :
ಆಲಮಟ್ಟಿ ಅಣೆಕಟ್ಟು ಪೂರ್ಣ ಸಾಮರ್ಥ್ಯ 34,853 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 5,505 ದಶಲಕ್ಷ ಲೀ. ಅಂದರೆ ಶೇ.15.79 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.39.17 ನಷ್ಟು ನೀರು ಸಂಗ್ರಹವಿತ್ತು.
ನಾರಾಯಣಪುರ ಜಲಾಶಯ :
ನಾರಾಯಣಪುರ ಜಲಾಶಯ ಪೂರ್ಣ ಸಾಮರ್ಥ್ಯ 9,432 ದಶ ಲಕ್ಷ ಲೀ. ಆಗಿದೆ. ಆದರೆ ಪ್ರಸ್ತುತ 4,061 ದಶಲಕ್ಷ ಲೀ. ಅಂದರೆ ಶೇ.43.05 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.83.70 ನಷ್ಟು ನೀರು ಸಂಗ್ರಹವಿತ್ತು.