ಬೆಂಗಳೂರು, ಜೂ.7 www.bengaluruwire.com : ಎರಡು ವರ್ಷ ಎಂಟು ತಿಂಗಳುಗಳಿಗೂ ಹೆಚ್ಚು ಕಾಲದಿಂದ ಜನಪ್ರತಿನಿಧಿಗಳ ಆಡಳಿತವಿಲ್ಲದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಸನ್ನಿಹಿತವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದ್ದ ಕಾಂಗ್ರೆಸ್ ಗೆ ಪಾಲಿಕೆಯಲ್ಲೂ ಇದೇ ಅಲೆಯನ್ನು ಬಳಸಿ ರಾಜಧಾನಿಯ ಆಡಳಿತ ಕೈವಶಪಡಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನೇಮಿಸಿದ್ದ 10 ಮಂದಿ ಸದಸ್ಯರ ‘ಬಿಬಿಎಂಪಿ ಚುನಾವಣಾ ಪೂರ್ವ ಸಮಿತಿ’ 243 ವಾರ್ಡ್ ಗಳಿಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಸಲು ಅಭಿಪ್ರಾಯ ಪಟ್ಟಿದೆ.
ಈ ಸಂಬಂಧ ಎರಡು ಮೂರು ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಈ ಸಂಬಂಧ ವರದಿ ನೀಡಲಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿದೆ.
10 ಮಂದಿ ಸದಸ್ಯರ ‘ಬಿಬಿಎಂಪಿ ಚುನಾವಣಾ ಪೂರ್ವ ಸಮಿತಿ’ಯನ್ನು ಕೆಪಿಸಿಸಿ ಅಧ್ಯಕ್ಷರು ಮೇ.24ರಂದು ರಚಿಸಿ 15 ದಿನಗಳಲ್ಲಿ ಸಂಪೂರ್ಣ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದರು.
ಸೋಮವಾರ ರಾತ್ರಿ ನಿಗೂಢ ಸ್ಥಳದಲ್ಲಿ ನಡೆದ ಸಮಿತಿ ಸದಸ್ಯರ ಸಭೆಯಲ್ಲಿ ಬಿಬಿಎಂಪಿ ಚುನಾವಣೆ ಸಂಬಂಧ ಗಂಭೀರ ಚರ್ಚೆಯಾಯಿತು. ಆಗ ಬಿಬಿಎಂಪಿ ವಾರ್ಡ್ ಮರು ವಿಂಗಡಣೆಗೆ ಮತ್ತೆ ಕೈಹಾಕುವ ಬದಲು ಹೇಗಿದ್ದರೂ ಬಿಬಿಎಂಪಿ ಕಾಯ್ದೆ ತಿದ್ದುಪಡಿ ಮಾಡಿ 243 ವಾರ್ಡ್‌ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈಗ ಕೇವಲ ಮೀಸಲಾತಿಯನ್ನು ಪ್ರಕಟಿಸಿ, ಈ ವರ್ಷದ ಅಂತ್ಯಕ್ಕೆ ಚುನಾವಣೆ ಪ್ರಕ್ರಿಯೆ ಮುಗಿಸಿ ಇದರ ಲಾಭ ಪಡೆಯಬೇಕು ಎನ್ನುವ ಅಭಿಪ್ರಾಯ ಸಮಿತಿಯಲ್ಲಿ ವ್ಯಕ್ತವಾಯಿತು.
ಈ ಸಭೆಯಲ್ಲಿ ಪಾಲಿಕೆಯನ್ನು ಈ ಹಿಂದೆ ವಿ.ಸುಬ್ರಮಣ್ಯಮ್ ಅವರ ತಜ್ಞರ ಸಮಿತಿ ವರದಿಯಂತೆ ಎರಡು ಅಥವಾ ಮೂರು ಭಾಗಗಳಾಗಿ ಮಾಡುವ ಬಗ್ಗೆ ಚರ್ಚೆಯಾದರೂ, ಆ ಪ್ರಕ್ರಿಯೆಗೆ ಕೈ ಹಾಕಿದರೆ ಚುನಾವಣೆ ನಡೆಸಲು ತಡವಾಗುತ್ತದೆ. ಹಾಗಾಗಿ ಪ್ರಥಮವಾಗಿ ಪಾಲಿಕೆ ಚುನಾವಣೆ ನಡೆಸಿ ಬಳಿಕ ಪಾಲಿಕೆ ವಿಭಜನೆ ಬಗ್ಗೆ ಯೋಚಿಸೋಣ ಎಂಬ ಸಲಹೆಯೂ ವ್ಯಕ್ತವಾಯಿತು. ಯಾವುದಕ್ಕೂ ಕೂಡಲೇ ಮೀಸಲಾತಿ ಸಿದ್ದಪಡಿಸಿ ಸುಪ್ರೀಂಕೋರ್ಟಿಗೆ ಸಲ್ಲಿಸುವ ಬಗ್ಗೆ ಹಾಗೂ ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧವಿದೆ ಎಂಬುದನ್ನು ಕೋರ್ಟಿಗೆ ಮನದಟ್ಟು ಮಾಡಿಕೊಡಬೇಕು. ಮಾಡಲು ಸಮಿತಿ ಕೆಪಿಸಿಸಿಗೆ ಸಲ್ಲಿಸುವ ವರದಿಯಲ್ಲಿ ತಿಳಿಸಲಿದೆ ಎಂದು ಗೊತ್ತಾಗಿದೆ.
ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆಯಲ್ಲಿ ಬಿಜೆಪಿಯು ತನಗೆ ಲಾಭವಾಗುವಂತೆ ಕಾಯ್ದೆಗೆ ತಿದ್ದುಪಡಿ ತಂದು 243 ವಾರ್ಡ್ ಗಳನ್ನು ಮಾಡಿದೆ. ಅದನ್ನು ಈಗ ಪುನಃ ತಿದ್ದಪಡಿ ತಂದು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರೆಟರೆ ಕಾಂಗ್ರೆಸ್ ಆಡಳಿತದ ಮೇಲೆ ತಪ್ಪು ತಿಳುವಳಿಕೆ ಬರುವ ಸಾಧ್ಯತೆಯಿದೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಮತ್ತಷ್ಟು ಕಗ್ಗಂಟಾಗುವ ಹಿನ್ನಲೆಯಲ್ಲಿ 243 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟಿಸಿ ಚುನಾವಣೆಗೆ ಹೋಗುವುದು ಲೇಸು. ಒಂದೊಮ್ಮೆ ಈ ಪ್ರಕ್ರಿಯೆ ತಡವಾದರೂ ಚುನಾವಣಾ ಆಯೋಗ ಮತ್ತೆ ಕೋರ್ಟಿಗೆ ಹೋಗಿ ಚುನಾವಣೆ ನಡೆಸಲು ಕೋರಬಹುದು. ಇದರ ಬದಲು ಸರ್ಕಾರ ಚುನಾವಣೆಗೆ ಸಿದ್ದವಾದರೆ ಒಳಿತು ಎಂಬ ಅಭಿಪ್ರಾಯ ಸಮಿತಿಯಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ಖಚಿತಪಡಿಸಿದೆ.
ಪಾಲಿಕೆ ಚುನಾವಣೆ ನಡೆಸುವ ಸಂಬಂಧ ಸಮತಿಯು ಅಡ್ವೊಕೇಟ್ ಜನರಲ್ ಬಳಿಯೂ ಅಭಿಪ್ರಾಯ ಪಡೆದುಕೊಂಡಿತ್ತು ಎಂದು ತಿಳಿದುಬಂದಿದೆ.
ಕೆಪಿಸಿಸಿ ರಚಿಸಿದ್ದ ‘ಬಿಬಿಎಂಪಿ ಚುನಾವಣೆ ಪೂರ್ವ ತಯಾರಿ ಸಮಿತಿ’ಯಲ್ಲಿ ಕಾಂಗ್ರೆಸ್ ನ ‘ಬಿಬಿಎಂಪಿ ಮೇ ಚುನಾವಣೆ ಪೂರ್ವ ತಯಾರಿ ಸಮಿತಿ’ ಯಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಬೈರತಿ ಸುರೇಶ್, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಎನ್.ಎ. ಹ್ಯಾರೀಸ್, ಪ್ರಿಯಕೃಷ್ಣ, ಎ.ಎಸ್.ಪೊನ್ನಣ್ಣ, ಮಾಜಿ ಶಾಸಕ ರಮೇಶ್ ಬಾಬು, ಮಾಜಿ ಮೇಯರ್ ಪದ್ಮಾವತಿ ಸದಸ್ಯ ರಾಗಿದ್ದಾರೆ. ಮಾಜಿ ಮೇಯರ್ ಪಿ.ಆರ್.ರಮೇಶ್ ಸಂಚಾಲಕರಾಗಿದ್ದಾರೆ.
243 ವಾರ್ಡ್ ಗಳಿಗೆ ಪಾಲಿಕೆ ಚುನಾವಣೆ :
“ಬಿಬಿಎಂಪಿಗೆ 243 ವಾರ್ಡ್ ಗಳಿಗೆ ಚುನಾವಣೆ ನಡೆಸುವಂತೆ
ಬಿಬಿಎಂಪಿ ಚುನಾವಣೆ ಪೂರ್ವ ತಯಾರಿ ಸಮಿತಿ’ ತನ್ನ ಸಭೆಯಲ್ಲಿ ಅಭಿಪ್ರಾಯಪಟ್ಟಿದೆ. ಸದ್ಯದಲ್ಲೆ ಕೆಪಿಸಿಸಿ ನಿಗದಿಪಡಿಸಿದ ಕಾಲಾವಧಿಯಲ್ಲಿ ವರದಿ ಸಲ್ಲಿಕೆ ಮಾಡುತ್ತೇವೆ”
– ರಾಮಲಿಂಗಾರೆಡ್ಡಿ, ಅಧ್ಯಕ್ಷರು, ಬಿಬಿಎಂಪಿ ಚುನಾವಣೆ ಪೂರ್ವ ತಯಾರಿ ಸಮಿತಿ