ನವದೆಹಲಿ, ಜೂ.1 www.bengaluruwire.com : ದೇಶಾದ್ಯಂತ 18 ಮಾರ್ಗಗಳಲ್ಲಿ ಪ್ರಾರಂಭವಾಗಿರುವ ವಂದೇ ಭಾರತ್ ರೈಲು ಈತನಕ 36 ಕಡೆಗಳಲ್ಲಿ ಸೇವೆ ಆರಂಭಿಸಿದೆ. ಉಳಿದಂತೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲಿನ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲು ರಷ್ಯಾ ದೇಶದ ಸಾರಿಗೆ ದೈತ್ಯ ಕಂಪನಿ ಟಿಎಂಎಚ್ (Transmashholding – TMH) ಜೊತೆಗೆ ದೇಶದ ರೈಲು ವಿಕಾಸ ನಿಗಮ (RVNL) 120 ವಂದೇ ಭಾರತ್ ರೈಲುಗಳನ್ನು ಜಂಟಿಯಾಗಿ ಉತ್ಪಾದಿಸುವ ಯೋಜನೆಗೆ ಆರಂಭದಲ್ಲೇ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ದೇಶಾದ್ಯಂತ ಪ್ರಸ್ತುತ 22 ರಾಜ್ಯಗಳಲ್ಲಿ ಹಾಗೂ 100ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು ಇದೀಗ ದೇಶೀಯ ಜನರ ಹೆಮ್ಮೆಯ ಪ್ರತೀಕವಾಗಿದೆ. ಇದರಿಂದ ಸ್ಪೂರ್ತಿ ಪಡೆದ ಕೇಂದ್ರ ಸರ್ಕಾರ ಈ ಸೇವೆಯನ್ನು ದೇಶದ ಇತರ ರಾಜ್ಯಗಳಿಗೂ ವಿಸ್ತಿರಿಸಲು ಹೊಸದಾಗಿ 120 ವಂದೇ ಭಾರತ್ ರೈಲುಗಳನ್ನು ಉತ್ಪಾದಿಸಲು ಸುಮಾರು 40 ಸಾವಿರ ಕೋಟಿ ರೂ. ಬೃಹತ್ ಮೊತ್ತ ಯೋಜನೆಯನ್ನು ರೂಪಿಸಿತ್ತು. ಈ ಯೋಜನೆಯನ್ನು ರಷ್ಯಾದ ಟೆಎಂಎಚ್ ಹಾಗೂ ಕೇಂದ್ರ ಸಾರ್ವಜನಿಕ ಉದ್ದಿಮೆಯಾದ ಆರ್ ವಿಎನ್ಎಲ್ ಪಡೆದು 45 ದಿನಗಳಾಗುತ್ತಾ ಬಂದರೂ ಈ ನಿಟ್ಟಿನಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆರಂಭವಾಗಿಲ್ಲ.
ಮಾಧ್ಯಮಗಳ ವರದಿಯಂತೆ ಜಂಟಿ ಸಹಭಾಗಿತ್ವದಲ್ಲಿ 120 ರೈಲುಗಳ ಉತ್ಪಾದನೆಗೆ ಕಾರ್ಯಕ್ಷಮತಾ ಬ್ಯಾಂಕ್ ಖಾತ್ರಿಯನ್ನು ಈತನಕ ಈ ಸಂಸ್ಥೆಗಳು ಪಾವತಿಸಿಲ್ಲ. ಜಂಟಿ ಸಹಭಾಗಿತ್ವದ ಈ ಗುತ್ತಿಗೆ ಯೋಜನೆಯಲ್ಲಿ ಪಾಲಿಗೆ ಸಂಬಂಧಿಸಿದಂತೆ ಮಾತುಕತೆ ಬಗೆಹರಿಯದ ಕಾರಣ ರಷ್ಯಾದ ಟಿಎಂಎಚ್ ತನ್ನ ಪಾಲಿನ ಬ್ಯಾಂಕ್ ಖಾತ್ರಿಯಾದ 200 ಕೋಟಿ ರೂ. ಹಣವನ್ನು ಇನ್ನೂ ಪಾವತಿಸಿಲ್ಲ. ಇದರಿಂದಾಗಿ ಈ ಕಂಪನಿಗೆ ಭಾರತೀಯ ರೈಲ್ವೆಯು ದಂಡ ಹಾಕುವ ಸಾಧ್ಯತೆಯಿದೆ. ಆರ್ ವಿಎನ್ಎಲ್ ಸಂಸ್ಥೆಯು ಈ ಜಂಟಿ ಸಹಭಾಗಿತ್ವ ಯೋಜನೆಯಲ್ಲಿ ಸಣ್ಣ ಪಾಲುದಾರನಾಗಿದ್ದರೆ, ರಷ್ಯಾದ ಟಿಎಮ್ಎಚ್ ಅತಿದೊಡ್ಡ ಷೇರು ಹೊಂದಿದ ಉದ್ದಿಮೆಯಾಗಿದೆ. ಈ ಹಿಂದೆ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಮಲಗುವ ಸೌಲಭ್ಯವನ್ನು ಒಳಗೊಂಡಂತೆ ಪ್ರತಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ 120 ಕೋಟಿ ರೂ. ವೆಚ್ಚದಲ್ಲಿ ಉತ್ಪಾದಿಸುವುದಾಗಿ ಅತಿ ಕಡಿಮೆ ಬಿಡ್ ಮಾಡಿ ಈ ಯೋಜನೆಯನ್ನು ಪಡೆದುಕೊಂಡಿತ್ತು. ಆದರೀಗ ಎರಡು ಸಂಸ್ಥೆಗಳ ನಡುವಣ ಗೊಂದಲ ಬಗೆಹರಿದಿಲ್ಲ.

ಯೋಜನೆ ಅನುಷ್ಠಾನಕ್ಕೆ ತೊಡಕಾದ ರಷ್ಯಾ- ಉಕ್ರೇನ್ ಯುದ್ಧ? :

ಇನ್ನೊಂದೆಡೆ ರಷ್ಯಾ- ಉಕ್ರೇನ್ ರಾಷ್ಟ್ರಗಳ ನಡುವಣ ಕದನದಿಂದಾಗಿ ವಿವಿಧ ದೇಶಗಳು ರಷ್ಯಾ ಮೇಲೆ ಸಾಕಷ್ಟು ದಿಗ್ಭಂಧನ ವಿಧಿಸಿರುವುದರಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉತ್ಪಾದನೆಗೆ ಅಗತ್ಯವಾದ ಬಿಡಿ ಭಾಗಗಳ ಪೂರೈಕೆಯಾಗುತ್ತಿಲ್ಲ. ಕಳೆದ ಮಾರ್ಚ್ ಆರಂಭದಲ್ಲಿ 120 ವಂದೇ ಭಾರತ್ ರೈಲು ಉತ್ಪಾದನೆಗೆ ಟ್ರಾನ್ಸ್ ಮಾಷ್ ಹೋಲ್ಡಿಂಗ್ ಮತ್ತು ರೈಲು ವಿಕಾಸ ನಿಗಮವು ಯಶಸ್ವಿಯಾಗಿ ಟೆಂಡರ್ ತಮ್ಮದಾಗಿಸಿಕೊಂಡರೂ, ರೈಲು ಉತ್ಪಾದನೆಗೆ ಆರಂಭಿಕ ವಿಘ್ನ ಎದುರಾಗಿದೆ ಎಂದು ಮಾಧ್ಯಮಗಳು ತಮ್ಮ ವರದಿಯಲ್ಲಿ ತಿಳಿಸಿವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತ್ವರಿತ ವೇಗವರ್ಧನೆ ಮತ್ತು ಸಮಕಾಲೀನ ಪ್ರಯಾಣಿಕರ ಸೌಕರ್ಯಗಳೊಂದಿಗೆ ಭಾರತದ ಮೊದಲ ಸೆಮಿ ಹೈಸ್ಪೀಡ್ ರೈಲು. ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 15 ಫೆಬ್ರವರಿ 2019 ರಂದು ನವದೆಹಲಿ ಮತ್ತು ಯುಪಿಯ ವಾರಣಾಸಿ ನಡುವೆ ಉದ್ಘಾಟಿಸಿದ್ದರು. ಫ್ಲ್ಯಾಗ್ ಆಫ್ ಮಾಡಿದರು. ವಂದೇ ಭಾರತ್ ರೈಲುಗಳು ಮೇಕ್ ಇನ್ ಇಂಡಿಯಾ (Make In India) ಉಪಕ್ರಮದ ಪ್ರಮುಖ ಉದಾಹರಣೆಯಾಗಿದೆ. ಈ ಅತ್ಯಾಧುನಿಕ ಸೆಮಿ ಹೈ ಸ್ಪೀಡ್ ಡಿಸ್ಟ್ರಿಬ್ಯೂಟ್ ಪವರ್ ಟ್ರೈನ್‌ಗಳನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಪ್ರಸ್ತುತ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ.
ಈತನಕ 38.43 ಲಕ್ಷ ಕಿ.ಮೀ ಕ್ರಮಿಸಿದ ವಂದೇ ಭಾರತ್ ರೈಲು :
ಈ ರೈಲುಗಳು ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ (ಕವಾಚ್) ಸೇರಿದಂತೆ ಎಲ್ಲಾ ಅಂತರರಾಷ್ಟ್ರೀಯ ಸುರಕ್ಷತೆ ಮತ್ತು ಸೌಕರ್ಯ ಸಂಬಂಧಿತ ಮಾನದಂಡಗಳನ್ನು ಪೂರೈಸುತ್ತಿವೆ. ಗಂಟೆಗೆ ಪ್ರತಿ 180 ಕಿ.ಮೀ ವೇಗದಲ್ಲಿ ಪರೀಕ್ಷಿಸಲ್ಪಟ್ಟ ವಂದೇ ಭಾರತ್ ಎಕ್ಸ್‌ಪ್ರೆಸ್ ಗರಿಷ್ಠ ಗಂಟೆಗೆ 160 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ವಿಶಿಷ್ಟ ಲಕ್ಷಣಗಳಾಗಿವೆ. ಪ್ರಸ್ತುತ, ವಂದೇ ಭಾರತ್ 99 ವಿಶಿಷ್ಟ ನಿಲುಗಡೆಗಳಲ್ಲಿ ಜನರಿಗೆ ಸೇವೆ ಸಲ್ಲಿಸುತ್ತಿದೆ. ಇಲ್ಲಿಯವರೆಗೆ (21.05.2023 ರವರೆಗೆ), ವಂದೇ ಭಾರತ್ ರೈಲುಗಳು 38,43,934.12 ಕಿಮೀಗಳನ್ನು ಕ್ರಮಿಸಿದ್ದು, ಇದು ಭೂಮಿಯ 95.64 ಸುತ್ತುಗಳಿಗೆ ಸಮಾನವಾಗಿದೆ.
ಮುಂದಿನ ವಂದೇ ಭಾರತ್ ಸೇವೆಯನ್ನು ಗೋವಾ-ಮುಂಬೈ ಮಾರ್ಗಕ್ಕೆ ನಿಗದಿಪಡಿಸಲಾಗಿದೆ. ಜೂನ್ 2023 ರ ಅಂತ್ಯದ ವೇಳೆಗೆ, ಎಲ್ಲಾ ರಾಜ್ಯಗಳು ಈ ಪ್ರತಿಷ್ಠಿತ ರೈಲಿನೊಂದಿಗೆ ಸಂಪರ್ಕಗೊಳ್ಳುವ ನಿರೀಕ್ಷೆಯಿದೆ.