ಬೆಂಗಳೂರು, ಮೇ.31 www.bengaluruwire.com : ಸರ್ಕಾರಿ ಶಾಲೆ ಅಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೂ ಅಷ್ಟೊಂದು ನಿರ್ಲಕ್ಷ್ಯ ಯಾಕೆ ಅಂತ ಗೊತ್ತಾಗಲ್ಲ. ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಾಲೆಗಳ 210 ಖಾಯಂ ಶಿಕ್ಷಕರ ನೇಮಕಾತಿ ಪ್ರಸ್ತಾವನೆ ಒಪ್ಪಿಗೆಗಾಗಿ ಸರ್ಕಾರಕ್ಕೆ ಕಳಿಸಿ ಹೆಚ್ಚು ಕಡಿಮೆ ಒಂದೂವರೆ ವರ್ಷ ಆಗುತ್ತಾ ಬಂದರೂ ಈತನಕ ಒಪ್ಪಿಗೆ ದೊರೆತಿಲ್ಲ.
2023-24ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಆರಂಭವಾದರೂ ಖಾಯಂ ಶಿಕ್ಷಕರ ನೇಮಕಾತಿಗೆ ಸರ್ಕಾರದಿಂದ ಅನುಮೋದನೆ ದೊರಕಿಲ್ಲ. ಪ್ರಸ್ತುತ ಬಿಬಿಎಂಪಿಯಲ್ಲಿ 164 ಶಾಲಾ, ಕಾಲೇಜುಗಳಿದ್ದು ಒಟ್ಟು 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಓದುತ್ತಿರುವ ಪಾಲಿಕೆ ಶಾಲಾ ಕಾಲೇಜುಗಳಲ್ಲಿ ಕೇವಲ 71 ಖಾಯಂ ಶಿಕ್ಷಕರಿದ್ದಾರೆ. 731 ಹೊರಗುತ್ತಿಗೆ ಶಿಕ್ಷಕರು ಹಾಗೂ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೂ ಖಾಯಂ ಶಿಕ್ಷಕರಿದ್ದರೆ ಪಾಲಿಕೆ ಶಿಕ್ಷಣ ವಿಭಾಗಕ್ಕೂ ಆ ಶಿಕ್ಷಕರ ಮೇಲೆ ಹಿಡಿತವಿರುತ್ತದೆ. ಹೊರಗುತ್ತಿಗೆ ಶಿಕ್ಷಕರ ಮೇಲೆ ಪಾಲಿಕೆ ಆಡಳಿತ ಸಂಪೂರ್ಣವಾಗಿ ಚಲಾಯಿಸಲಾಗದು. ಇದರ ಪರಿಣಾಮ ವಿದ್ಯಾರ್ಥಿಗಳ ಶಿಕ್ಷಣದ ಮೇಲಾಗಲಿದೆ.
31-12-2021ರಂದು ಪಾಲಿಕೆ ಮುಖ್ಯ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆಯ ಶಿಕ್ಷಣ ಇಲಾಖೆಯ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಖಾಲಿಯಿರುವ 210 ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಸೇವಾ ಕೃಪಾಂಕ ಹಾಗೂ ವಯೋಮಿತಿ ಸಡಲಿಕೆಯನ್ನು ಪಾಲಿಕೆ ವಿಶೇಷ ನಿಯಮಾವಳಿಗಳಲ್ಲಿ ಅಳವಡಿಸಿಕೊಂಡು ರಚಿಸಿಕೊಂಡು ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈತನಕ ಸರ್ಕಾರದಿಂದ ಒಪ್ಒಇಗೆ ದೊರತಿಲ್ಲ ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.


ಪಾಲಿಕೆಯಲ್ಲಿ 159 ಶಿಕ್ಷಣ ಸಂಸ್ಥೆಗಳಿಗೆ ಸ್ವಂತ ಕಟ್ಟಡವಿದೆ. 7 ಶಾಲಾ ಕಾಲೇಜುಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಸರ್ಕಾರದ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ 174 ಕೋಟಿ ರೂ. ಅನುದಾನದಡಿ 42 ಪಾಲಿಕೆ ಶಾಲಾ- ಕಾಲೇಜು ಕಟ್ಟಡದ ಕೊಠಡಿಗಳ ನಿರ್ಮಾಣ ಹಾಗೂ ನವೀಕರಣ ಕಾರ್ಯವು ನಡೆಯುತ್ತಿದೆ. ಇದೇ ಯೋಜನೆಯಡಿ 6 ಕೋಟಿ ರೂ. ಅನುದಾನದಲ್ಲಿ ಯೋಜನಾ ವಿಭಾಗದ ಚೀಫ್ ಎಂಜಿನಿಯರ್ ನೇತೃತ್ವದಲ್ಲಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಬಳಸಲಾಗುತ್ತಿದೆ.

ಪಾಲಿಕೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2021-22 ಹಾಗೂ 2022-23ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರ ಪ್ರಮಾಣ ಕ್ರಮವಾಗಿ ಶೇ. 71.37 ಹಾಗೂ ಶೇ.67.53ರಷ್ಟು ಫಲಿತಾಂಶ ದಾಖಲಿಸಿದೆ. ಪಾಲಿಕೆಯ ಶೈಕ್ಷಣಿಕ ವಿಭಾಗದಲ್ಲಿ ಇ-ಗ್ರಂಥಾಲಯ, ಆಧುನಿಕ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲ್ಯಾಬ್ ಮತ್ತಿತರ ಕ್ರಮಗಳಿಂದಾಗಿ ಶೈಕ್ಷಣಿಕ ಗುಣಮಟ್ಟ ಏರಿಕೆಯಾಗಿದೆ. ಆದರೆ ಇದಕ್ಕೆ ಸರಿಯಾಗಿ ಖಾಯಂ ಶಿಕ್ಷಕರ ನೇಮಕಾತಿಯಾದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ಕಲಿಕೆಯಲ್ಲಿ ಸುಧಾರಣೆ ಕಾಣಲಿದೆ ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಕರೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿನ ಬಿಬಿಎಂಪಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 210 ಖಾಯಂ ಶಿಕ್ಷಕರ ಅವಶ್ಯಕತೆಯಿದ್ದು, ಅದನ್ನು ಆದಷ್ಟು ಭರ್ತಿ ಮಾಡುವ ಅವಶ್ಯಕತೆಯಿದೆ. ಹೊಸ ಶೈಕ್ಷಣಿಕ ವರ್ಷಕ್ಕೆ ಶಾಲಾಮಕ್ಕಳಿಗೆ ಅಗತ್ಯವಾದ ಪಠ್ಯ ಪುಸ್ತಕ ಇನ್ನು ಒಂದು ವಾರದಲ್ಲಿ ಪಾಲಿಕೆ ಶಾಲೆಗಳಿಗೆ ಹಂಚಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಬಡ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಸ್ವೆಟರ್ ಹಾಗೂ ಸಮವಸ್ತ್ರ ಈ ವರ್ಷವೂ ಸೂಕ್ತ ಸಮಯದಲ್ಲಿ ಲಭ್ಯವಾಗುವುದು ಅನುಮಾನ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕಾಗಿದೆ.