ಬೆಂಗಳೂರು, ಮೇ.12 www.bengaluruwire.com : ನಕಲಿ ದಾಖಲೆಗಳನ್ನು ನೀಡಿ ಸಿಮ್ ಮಾರುತ್ತಿದ್ದರೆ ಎಚ್ಚರ. ಕೇಂದ್ರ ದೂರ ಸಂಪರ್ಕ ಇಲಾಖೆ (DOT) ಹಾಗೂ ಮೊಬೈಲ್ ಸಿಮ್ ಕಾರ್ಡ್ ಸೇವಾ ಪೂರೈಕೆದಾರರು, ನಕಲಿ ದಾಖಲೆಗಳನ್ನು ಪಡೆದು ಸಿಮ್ ಕಾರ್ಡ್ ಮಾರುತ್ತಿದ್ದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಆರಂಭಿಸಿದೆ. ಅಲ್ಲದೆ ಅಂತಹವರ ವಿರುದ್ಧ ಪೂಲೀಸ್ ಠಾಣೆಗಳಲ್ಲಿ ದೂರು ದಾಖಲಿಸುತ್ತಿದೆ.
ರಾಜ್ಯದಲ್ಲಿ ಈತನಕ ನಕಲಿ ದಾಖಲೆಗಳನ್ನು ಪಡೆದು, ವಿವಿಧ ಟಿಲಿಕಾಮ್ ಕಂಪನಿಗಳ ಸುಮಾರು 25,000 ಸಿಮ್ ಕಾರ್ಡ್ ಗಳನ್ನು ಹಂಚಿಕೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ. ನಕಲಿ ಸಿಮ್ ಕಾರ್ಡ್ ಪಡೆದ ಚಂದಾದಾರರನ್ನು ಗುರ್ತಿಸಲು ದೂರ ಸಂಪರ್ಕ ಇಲಾಖೆಯು ಕೃತಕ ಬುದ್ದಿಮತ್ತೆ ಹಾಗೂ ಮುಖ ಗುರ್ತಿಸುವಿಕೆ ಆಧಾರಿತ ಎಎಸ್ ಟಿಆರ್ ತಂತ್ರಾಂಶವನ್ನು ಬಳಸಿಕೊಂಡು, ಒಂದೇ ಫೋಟೊ ಆದರೆ ವಿಭಿನ್ನ ಹೆಸರುಗಳು ಹಾಗೂ ನಕಲಿ ದಾಖಲೆಗಳನ್ನು ಬಳಸಿಕೊಂಡು ಸಕ್ರಿಯಗೊಳಿಸಿದ ಸಿಮ್ ಕಾರ್ಡ್ ಗಳನ್ನು ಕಂಡು ಹಿಡಿದಿದೆ.
ದೇಶದಲ್ಲಿ ನಡೆಯುವ ಹಲವು ಉಗ್ರಗಾಮಿ ಚಟುವಟಿಕೆ, ಭಯೋತ್ಪಾದನೆ, ಕೋಮು ಗಲಭೆ, ಬಾಂಬ್ ಸ್ಪೋಟ ಸೇರಿದಂತೆ ಮತ್ತಿತರ ವಿಧ್ವಂಸಕ ಕೃತ್ಯದಲ್ಲಿ ನಕಲಿ ಸಿಮ್ ಕಾರ್ಡ್ ಗಳನ್ನು ಬಳಸಿ ಭಯೋತ್ಪಾದಕರು, ದುಷ್ಕೃರ್ಮಿಗಳು ಪಾಯಿಂಟ್ ಆಫ್ ಸೇಲ್ ಕೇಂದ್ರಗಳಲ್ಲಿ ನಕಲಿ ದಾಖಲೆ ನೀಡಿ ಸಿಮ್ ಕಾರ್ಡ್ ಗಳನ್ನು ಬಳಸುತ್ತಿರುವುದು ಅನೇಕ ತನಿಖೆಗಳಿಂದ ಪತ್ತೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ದೂರು ಸಂಪರ್ಕ ಇಲಾಖೆಯು ರಾಜ್ಯದಲ್ಲೂ ಕಾರ್ಯಾಚರಣೆ ನಡೆಸಿ ನಕಲಿ ಸಿಮ್ ಕಾರ್ಡ್ ಗಳನ್ನು ಪತ್ತೆ ಹಚ್ಚುತ್ತಿರುವುದು ಈ ನಿಟ್ಟಿನಲ್ಲಿ ಬಹಳ ಪ್ರಮುಖ ಕಾರ್ಯವಾಗಿದೆ.
ದೂರ ಸಂಪರ್ಕ ಈ ನಿಟ್ಟಿನಲ್ಲಿ ನಕಲಿ ದಾಖಲೆಗಳನ್ನು ಪಡೆದು ಸಿಮ್ ಕಾರ್ಡ್ ವಿತರಿಸುತ್ತಿದ್ದ ಏಳು ಪಾಯಿಂಟ್ ಆಫ್ ಸೇಲ್ ಕೇಂದ್ರಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದು, ಪೊಲೀಸರು ಎಪ್ ಐಆರ್ ದಾಖಲಿಸಿದ್ದಾರೆ. ಉಳಿದವರ ಮೇಲೂ ಪ್ರಕರಣ ದಾಖಲಿಸಲು ಪರಿಗಣಿಸಲಾಗಿದೆ ಎಂದು ದೂರ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.