ಬೆಂಗಳೂರು, ಏ.18 www.bengaluruwire.com : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಧಾನಿಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಮುಖ್ಯ ಚುನಾವಣಾಧಿಕಾರಿಗಳು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದೇ ತೃತೀಯ ಲಿಂಗಿಗಳಿಂದ ಕಲಾತ್ಮಕ ವಿಧಾನದ ಮೂಲಕ ಮತದಾನ ಜಾಗೃತಿ ಕಾರ್ಯ ಕೈಗೊಂಡಿದ್ದಾರೆ.
ಇದಕ್ಕೆ ಸಾಥ್ ಕೊಟ್ಟಿರೋದು ಪ್ರತಿಭಾವಂತ ತೃತೀಯ ಲಿಂಗಿ ಕಲಾವಿದರ ತಂಡ ಅರವಾಣಿ ಆರ್ಟ್ ಪ್ರಾಜೆಕ್ಟ್. ಈ ಸಂಸ್ಥೆಯು ಗೋಡೆಗಳ ಮೇಲೆ ಚುನಾವಣಾ ಜಾಗೃತಿಯ ಚಿತ್ತಾರದ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಬುದ್ಧ, ಬಸವ, ಅಂಬೇಡ್ಕರ್ ರವರ ಸಿದ್ಧಾಂತಗಳಂತೆ ಸಮಾನತೆ, ಸಾಮಾಜಿಕ ನ್ಯಾಯ ಎಲ್ಲರಿಗೂ ದೊರೆಯಲು ತೃತೀಯ ಲಿಂಗಿಗಳು ಅಥವಾ ಲಿಂಗ ಅಲ್ಪಸಂಖ್ಯಾತರು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಹಿಂಜರಿಯುವ ಪರಿಸ್ಥಿತಿಯನ್ನು ಸುಧಾರಿಸುವ ಕೆಲಸದಲ್ಲಿ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರ ಕಚೇರಿ ಪರೋಕ್ಷವಾಗಿ ಈ ಕಾರ್ಯ ಕೈಗೆತ್ತಿಕೊಂಡಿದೆ. ಈ ಮೂಲಕ ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಆಯೋಗ ಕೈ ಹಾಕಿದೆ.
ಪ್ರತಿಭಾವಂತ ತೃತೀಯ ಲಿಂಗಿ ಕಲಾವಿದರ ಅರವಾಣಿ ಆರ್ಟ್ ಪ್ರಾಜೆಕ್ಟ್ ತಂಡ ಕರ್ನಾಟಕ ವಿಧಾನಸಭೆ 2023 ರ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯಚುನಾವಣಾಧಿಕಾರಿ ಕಚೇರಿಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ 3 ಮಹಡಿಯ ನೂತನ ಕಟ್ಟಡದ ಗೋಡೆಗಳ ಮೇಲೆ ಕಣ್ಮನ ಸೆಳೆಯುವ ಬಣ್ಣದ ಚಿತ್ತಾರವನ್ನು ಮೂಡಿಸಿದೆ. ಮತದಾನದ ಮಹತ್ವ , ಯುವಕರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲರ ಸಹಭಾಗಿತ್ವವನ್ನು ಸಾರುವ ವೈಶಿಷ್ಟ್ಯಪೂರ್ಣ ವರ್ಣಚಿತ್ರಗಳನ್ನು ಚಿತ್ತಾಕರ್ಷಕವಾಗಿ ಮೂಡಿಸಿದ್ದು ತೃತೀಯ ಲಿಂಗಿ ಕಲಾವಿದರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.