ಎಆರ್ ಪಿ 220 ಅಲ್ಟ್ರಾಲುಮಿನಸ್ ಇನ್ಫ್ರಾರೆಡ್ ಗ್ಯಾಲಕ್ಸಿ (ULIRG) ಯನ್ನು ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸೆರೆ ಹಿಡಿದಿದೆ. ಇದು ಕ್ಷೀರಪಥಕ್ಕಿಂತ 300 ಪಟ್ಟು ಹೆಚ್ಚು ಬೆಳಕನ್ನು ಹೊರಸೂಸುತ್ತದೆ.
ವೆಬ್‌ನ ವಿಶೇಷತೆಯಾದ ಅತಿಗೆಂಪು ಬೆಳಕಿನಲ್ಲಿ ಇದು ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಈ ಎಆರ್ ಪಿ ಗ್ಯಾಲಾಕ್ಸಿಯ ಬೆಳಕು ಒಂದು ಲಕ್ಷ ಕೋಟಿ ಸೂರ್ಯನ ಬೆಳಕನ್ನು ಹೊಂದುವಷ್ಟು ಪ್ರಕಾಶಮಾನವಾಗಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.
ಈ ಯುಎಲ್ ಐಆರ್ ಜಿ ಗ್ಯಾಲಕ್ಸಿ 250 ಮಿಲಿಯನ್ ಬೆಳಕಿನ ವರ್ಷಗಳ (Light Year) ದೂರದಲ್ಲಿದೆ. ಎಆರ್ ಪಿ 220 ಹತ್ತಿರದ ಯುಎಲ್ ಐಆರ್ ಜಿ ಮತ್ತು ನಮಗೆ ಹತ್ತಿರವಿರುವ 3 ಗ್ಯಾಲಕ್ಸಿಯ ವಿಲೀನಗಳಲ್ಲಿ ಅತ್ಯಂತ ಪ್ರಕಾಶಮಾನವಾದದ್ದಾಗಿದೆ. ಇದು ಸುಮಾರು 700 ಮಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾದ 2 ಸುರುಳಿಯಾಕಾರದ ಗ್ಯಾಲಕ್ಸಿಗಳ ನಡುವಿನ ಘರ್ಷಣೆಯ ಪರಿಣಾಮವಾಗಿ ಉತ್ಪತ್ತಿಯಾಗಿದೆ. ಈ ಘರ್ಷಣೆಯ ಕಾರಣದಿಂದ ನಕ್ಷತ್ರ ರಚನೆಯ ದೊಡ್ಡ ಸ್ಫೋಟವನ್ನೇ ಹುಟ್ಟುಹಾಕಿತು.
ಘರ್ಷಣೆಯ ಗ್ಯಾಲಕ್ಸಿಗಳ ಮೂಲವು ಕೇವಲ 1,200 ಜ್ಯೋತಿರ್ವರ್ಷಗಳ ಅಂತರದಲ್ಲಿವೆ ಎಂದು ನಾಸಾ ಹಬಲ್ ( NASAHubble) ಟೆಲಿಸ್ಕೋಪ್ ಈ ಹಿಂದೆ ಬಹಿರಂಗಪಡಿಸಿತು. ವೆಬ್‌ನ ಹೊಸ ನೋಟವು ಗ್ಯಾಲಕ್ಸಿಗಳಲ್ಲಿ ಗುರುತ್ವಾಕರ್ಷಣೆಯಿಂದ ಹೊರತೆಗೆಯಲಾದ ವಸ್ತುವನ್ನು ನೀಲಿ ಬಣ್ಣದಲ್ಲಿ ತೋರಿಸಲಾಗಿದೆ. ಹಾಗೆಯೇ ಹವಳದ ಬಣ್ಣದ ಸಾವಯವ ವಸ್ತುಗಳ ತೊರೆಗಳು ಮತ್ತು ತಂತುಗಳನ್ನು ಬಹಿರಂಗಪಡಿಸುತ್ತದೆ.