ಬೆಂಗಳೂರು, ಏ.2 www.bengaluruwire.com : ರಾಜಧಾನಿಯ ಎಚ್.ಎ.ಎಲ್. ಸಮೀಪದ ದೊಡ್ಡನೆಕ್ಕುಂದಿಯಲ್ಲಿ ಗಂಗರ ಕಾಲದ ಶಿಲಾಶಾಸನ ಪತ್ತೆಯಾಗಿದೆ. ಇದು 11ನೇ ಶತಮಾನದ ಮಹಾಸತಿ ಆಚರಣೆಯ ಅಪರೂಪದ ಮಾಸ್ತಿಗಲ್ಲಾಗಿದೆ. ರಾಜ್ಯ ಸರ್ಕಾರದ ಭಾಷಾಂತರ ನಿರ್ದೇಶನಾಲಯದ ಉಪನಿರ್ದೇಶಕಿ ಡಾ.ಸ್ಮಿತಾ ರೆಡ್ಡಿ ಅವರು ಈ ಮಾಸ್ತಿಗಲ್ಲಿನ ಮಾಹಿತಿಯನ್ನು ಹೊರಗೆಡವಿದ್ದಾರೆ.
10 ದಿನದ ಕೆಳಗೆ ಡಾ.ಸ್ಮಿತಾರೆಡ್ಡಿಯವರ ಹಳೆಯ ವಿದ್ಯಾರ್ಥಿ ದೊಡ್ಡನೆಕ್ಕುಂದಿ ಕೆರೆ ಪುನಶ್ಚೇತನ ಕಾಮಗಾರಿ ನಡೆಸುತ್ತಿದ್ದಾಗ 6 ಅಡಿ ಎತ್ತರದ ಪ್ರಾಚೀನ ಶಿಲ್ಪ ಪತ್ತೆಯಾಗಿದೆ ಎಂದು ಅದರ ಫೋಟೋಗಳನ್ನು ಇವರಿಗೆ ಕಳುಹಿಸಿದ್ದರು. ಅದನ್ನು ಕಂಡೊಡನೆ ಇದು ಅಪರೂಪದ ಶಿಲ್ಪವೆಂದು ಮನದಟ್ಟಾಗುತ್ತಿದಂತೆ ಇದನ್ನು ಖುದ್ದಾಗಿ ಕಂಡು ಅಧ್ಯಯನ ಕೈಗೊಂಡಾಗಲೇ ಇದೊಂದು 11ನೇ ಶತಮಾನದ ಮಧ್ಯಭಾಗದ ಮಹಾಸತಿ ಶಿಲಾ ಶಾಸನವೆಂದು ಅವರಿಗೆ ಮನವರಿಕೆಯಾಗಿದ್ದು. ಇದನ್ನು ಸ್ಥಳೀಯರಾದ ರಾಧಾಕೃಷ್ಣರೆಡ್ಡಿ ದೇವಾಲಯದಲ್ಲಿ ಸುರಕ್ಷಿತವಾಗಿಟ್ಟಿದ್ದಾರೆ.
“ಸಾಮಾನ್ಯವಾಗಿ ಮಹಾಸತಿ ಮಾಸ್ತಿಗಲ್ಲುಗಳು ಶಿವಮೊಗ್ಗ, ಚಿಕ್ಕಮಗಳೂರು ಮಲೆನಾಡು ಪ್ರದೇಶದಲ್ಲಿ, ಬೆಂಗಳೂರಿನಲ್ಲಿ ಕಂಡು ಬರುತ್ತದೆ. ಅಲ್ಲಿ ಒಂದು ಕೈ ಹಾಗೂ ಎರಡು ಕೈ ಎತ್ತಿರುವ ಶಿಲ್ಪಗಳನ್ನು ಕಾಣಬಹುದು. ಒಬ್ಬ ಸತಿ ಸಹಗಮನವಾದರೆ ಒಕ್ಕೈಮಾಸ್ತಿಕಲ್ಲು ಎಂದು, ಇಬ್ಬರು ಸತಿಯರು ಪತಿಯೊಂದಿಗೆ ಸಹಗಮನ ಪದ್ದತಿಯಡಿ ಚಿತೆಯೇರಿ ಮರಣ ಹೊಂದಿದ್ದರೆ ಎರಡು ಕೈ ಸಂಕೇತವಾಗಿ ಶಿಲ್ಪ ಮಾಡುತ್ತಿದ್ದರು. ಇದನ್ನು ಇಕ್ಕೈಮಸ್ತಿ ಎನ್ನುತ್ತಾರೆ. ಆದರೆ ದೊಡ್ಡನೆಕ್ಕುಂದಿಯಲ್ಲಿ ಸಿಕ್ಕ ಈ ಪ್ರಾಚೀನ ಶಿಲ್ಪದಲ್ಲಿ ಮಹಾಸತಿ ಆಚರಣೆಯ ಕೆತ್ತನೆಯನ್ನು ಕಾಣಬಹುದು. ಈ ದೃಷ್ಟಿಯಿಂದ ಇದೊಂದು ಅಪರೂಪದ ಶಿಲ್ಪವಾಗಿದೆ” ಎಂದು ಬೆಂಗಳೂರು ವೈರ್ ಗೆ ಡಾ.ಸ್ಮಿತಾರೆಡ್ಡಿ ತಿಳಿಸಿದ್ದಾರೆ.
“ಮಹಾಸತಿ ಆಚರಣೆಯಲ್ಲಿ ಎರಡು ವಿಧಾನಗಳಿವೆ. ಸಹಗಮನ ಹಾಗೂ ಅನುಗಮನ. ಸಹಗಮನದಲ್ಲಿ ವೀರನು ಮರಣ ಹೊಂದಿದಾಗ ಆತನ ಸತಿಯೂ ಆತನೊಂದಿಗೆ ಚಿತೆಯಲ್ಲಿ ಬಿದ್ದು ಮರಣ ಹೊಂದುವುದಾಗಿದೆ. ಇನ್ನು ಅನುಗಮನ ಪದ್ಧತಿ ವಿಧಾನದಲ್ಲಿ, ವೀರನು ಯುದ್ಧ ಮಾಡುತ್ತಿದ್ದಾಗ ಅಥವಾ ಬೇರೆ ಕಡೆ ಮರಣ ಹೊಂದಿದಾಗ, ವೀರನ ಪತ್ನಿಯು ಆತನ ಇಷ್ಟಪಡುವ ವಸ್ತುವನ್ನು ಹಿಡಿದುಕೊಂಡು ಚಿತೆಗೆ ಏರುವುದನ್ನು ಅನುಗಮನ ವಿಧಾನ ಎನ್ನುತ್ತಾರೆ. ದೊಡ್ಡನೆಕ್ಕುಂದಿಯಲ್ಲಿ ಸಿಕ್ಕ ಮಾಸ್ತಿಗಲ್ಲು ಹಾಗೂ ದೇಕಬ್ಬೆ ಶಾಸನ ಎರಡು ಅನುಗಮನ ಪ್ರಕಾರಕ್ಕೆ ಸೇರಿದ್ದಾಗಿದೆ” ಎಂದು ಅವರು ಹೇಳಿದ್ದಾರೆ.
ಮೂರು ಭಾಗಗಳಲ್ಲಿ ಮಹಾಸತಿ ಚಿತ್ರಣ :
‘ಮಹಾಸತಿ ಅಥವಾ ಮಾಸ್ತಿ ಶಿಲ್ಪಗಳಲ್ಲಿ ಮಹಾಸತಿ ಆಚರಣೆಯ ಇಂತಹ ಶಿಲ್ಪಗಳು ಕರ್ನಾಟಕದಲ್ಲಿ ತುಂಬಾ ವಿರಳ. ಹೆಗ್ಗಡದೇವನ ಕೋಟೆಯ ಬೆಳತೂರಿನ ದೇಕಬ್ಬೆಯ ಶಿಲ್ಪವ ಕ್ರಿಸ್ತಶಕ 1058ನೇ ಶತಮಾನದ್ದೆಂದು ಹೇಳಲಾಗುತ್ತದೆ. ಆದರೆ ಅದಕ್ಕಿಂತಲೂ ಈ ಮಹಾಸತಿ ಆಚರಣೆಯ ಶಿಲ್ಪವು ಹಳೆಯ ಶಾಸನವಾಗಿದೆ. ಈ ಶಿಲ್ಪದಲ್ಲಿ ಕಥಾಶಿಲ್ಪ ರೀತಿಯಲ್ಲಿ ಪೂರ್ಣ ಕತೆಯಿಲ್ಲ. ಆದರೆ 6 ಅಡಿ ಎತ್ತರದ ಶಾಸನವನ್ನು ಮೂರು ಹಂತದಲ್ಲಿ ಕೆತ್ತನೆ ಮಾಡಲಾಗಿದೆ. ಕೆಳಭಾಗದಲ್ಲಿ ಸತಿಯು ವಾದ್ಯಗಳೊಂದಿಗೆ ಮರೆವಣಿಗೆಯಲ್ಲಿ ಸಾಗಿ ಪ್ರಜ್ವಲಿಸುವ ಅಗ್ನಿಕುಂಡದಲ್ಲಿ ಕೂತಿದ್ದಾಳೆ. ಆಕೆ ವೀರನ ಜೊತೆ ಸಹಗಮನ ಮಾಡಿಲ್ಲ ಎಂಬುದಕ್ಕೆ ಸಾಂಕೇತಿಕವಾಗಿ ಪಕ್ಕದಲ್ಲೇ ಕುದುರೆ ಶಿಲ್ಪವನ್ನು ಚಿತ್ರಸಲಾಗಿದೆ.
ಶಿಲಾ ಶಾಸನದ ಮಧ್ಯಭಾಗದಲ್ಲಿ ಮುಖ್ಯವಾಗಿ ವೀರ ಮತ್ತು ಆತನ ಚಿತ್ರವನ್ನು ಕೆತ್ತಲಾಗಿದೆ. ಇಲ್ಲಿ ವೀರನು ಕೈ ಮುಗಿದುಕೊಂಡು ಕುಳಿತಿರುವ ಭಂಗಿಯಲ್ಲಿದೆ. ಆತನ ಬಲಭಾಗದಲ್ಲಿ ಪತ್ನಿಯು ಬಲಗೈಯಲ್ಲಿ ಶುಭ ಸೂಚನೆಗಳಾದ ಕನ್ನಡಿಯನ್ನು ಹಾಗೂ ಎಡಗೈನಲ್ಲಿ ಸಣ್ಣ ಕಳಶ ಹಾಗೂ ನಿಂಬೆಹಣ್ಣಿನಂತಹ ವಸ್ತು ಹಿಡಿದಿರುವುದು ಕಂಡು ಬಂದಿದೆ. ಮೂರನೇ ಹಂತವಾದ ಮೇಲ್ಭಾಗದಲ್ಲಿ ವೀರ ಹಾಗೂ ವೀರನ ಪತ್ನಿಯನ್ನು ಅಪ್ಸರೆಯರು ಪ್ರತ್ಯೇಕ ಪ್ರತ್ಯೇಕವಾಗಿ ಸ್ವರ್ಗಕ್ಕೆ ಕರೆದೊಯ್ಯುವ ರೀತಿಯಲ್ಲಿ ಶಿಲ್ಪವಿದೆ. ಅನುಗಮನ ಪ್ರಕಾರದಲ್ಲಿ ಪತ್ನಿಯು ಪತಿಯ ಜೊತೆ ಮರಣ ಹೊಂದಿರದ ಕಾರಣ ಪ್ರತ್ಯೇಕವಾಗಿ ಅಪ್ಸರೆಯರು ಕರೆದೊಯ್ಯುತ್ತಿದ್ದಾರೆ. ಸಾಮಾನ್ಯವಾಗಿ ಸಹಗಮನ ಪದ್ಧತಿಯಲ್ಲಿ ವೀರನು ಮರಣ ಹೊಂದಿದಾಗಿ ಅಪ್ಸೆಯರು ಜೊತೆಯಲ್ಲಿ ಪತ್ನಿಯನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಾರೆ. ಆದರೆ ಇದು ಅನುಗಮನ ಪ್ರಕಾರ ಕಾರಣಕ್ಕೆ ವಿಶೇಷವಾಗಿದೆ ಎಂದು ಸ್ಮಿತಾ ರೆಡ್ಡಿ ವಿವರಿಸಿದ್ದಾರೆ.
ಗಂಗರ ಪ್ರಾರಂಭ ಕಾಲದಲ್ಲಿ ಸ್ವರ್ಗದ ಕಲ್ಪನೆಯಿರಲಿಲ್ಲ :
ಗಂಗರ ಪ್ರಾರಂಭದ ಕಾಲವಾದ 3-4ನೇ ಶತಮಾನದಲ್ಲಿ ಅವರಲ್ಲಿ ಸ್ವರ್ಗದ ಕಲ್ಪನೆಯಿರಲಿಲ್ಲ. ಆದರೆ ಏಳು- ಎಂಟನೇ ಶತಮಾನದ ನಂತರ ಸ್ವರ್ಗದ ಪರಿಕಲ್ಪನೆ ಕಂಡು ಬಂದಿತ್ತು. ಅದಕ್ಕೆ ಈ ಶಿಲ್ಪವೇ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಮೊದಲಿಗೆ ಕ್ರಿ.ಶ 972ರ ಶಿಲಾ ಶಾಸನ ಲಭ್ಯವಾಗಿತ್ತು ಎಂದು ಸಾಹಿತಿ ಮತ್ತು ಸಂಶೋಧಕರಾದ ಚಿದಾನಂದಮೂರ್ತಿಯವರು ತಮ್ಮ ಪುಸ್ತಕವೊಂದರಲ್ಲಿ ಉಲ್ಲೇಖ ಮಾಡಿದ್ದಾರೆ.
11ನೇ ಶತಮಾನದ ಈ ಮಾಸ್ತಿಗಲ್ಲು ಶೋಧ ಹಾಗೂ ಸಂರಕ್ಷಣೆಯಲ್ಲಿ ಸ್ಥಳೀಯರಾದ ಎಸ್.ರಾಹುಲ್ ರೆಡ್ಡಿ ಹಾಗೂ ಗೋಪಾಲರೆಡ್ಡಿ ಸಹಾಯಹಸ್ತ ಚಾಚಿದ್ದರು. ಹೀಗಾಗಿಯೇ ಇಂತಹ ಅಪರೂಪದ ಶಿಲ್ಪವನ್ನು ಶೋಧಿಸಲು ಸಾಧ್ಯವಾಯಿತು ಎಂದು ಸ್ಮಿತಾರೆಡ್ಡಿಯವರು ತಿಳಿಸಿದ್ದಾರೆ.
ದೊಡ್ಡನೆಕ್ಕುಂದಿ ಹಿಂದೆ ಕೋಟೆಯ ನಗರವಾಗಿತ್ತು :
“ದೊಡ್ಡನೆಕ್ಕುಂದಿಯಲ್ಲಿ ಕಂಡು ಬಂದ ಪ್ರಾಚೀನ ಶಿಲಾ ಶಾಸನ ಮಹಾಸತಿ ಆಚರಣೆಯನ್ನು ಶಿಲ್ಪರೂಪದಲ್ಲಿ ಚಿತ್ರಿಸಿರುವುದು ಕಂಡು ಬಂದಿದ್ದು, ಇದೊಂದು ಅಪರೂದ ಶಿಲ್ಪವಾಗಿದೆ. ಬೆಂಗಳೂರನ್ನು ಕಟ್ಟುವ ಮುನ್ನ ಬೇಗೂರು ಸೀಮೆಯಲ್ಲಿನ ದೊಡ್ಡನೆಕ್ಕುಂದಿ ಕೋಟೆ ನಗರವಾಗಿತ್ತು ಎಂಬುದು ಹಲವು ಶಾಸನಗಳಿಂದ ತಿಳಿದು ಬರುತ್ತದೆ. ಈ ಭಾಗವು ವಾಣಿಜ್ಯ ಮತ್ತು ವ್ಯಾಪಾರ ಸ್ಥಳವಾಗಿದ್ದು, ಮಹಾಸತಿ ಪದ್ಧತಿ ಆಚರಣೆಗಳನ್ನು ಕಾಣಬಹುದು. ಈಗ ಸಿಕ್ಕಿರುವ ಶಾಸನ ಬಹುಶಃ ಕ್ರಿ.ಶ 1030ನೇ ಮಧ್ಯಾಭಾಗದ್ದಾಗಿರಬಹುದು. ಸಾಮಾನ್ಯವಾಗಿ ಶಿಲಾ ಶಾಸನದ ಶಿಲ್ಪಗಳಲ್ಲಿ ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ಶಿಲ್ಪ ಶೈಲಿ, ಸ್ವರೂಪ, ಶಿಲ್ಪದಲ್ಲಿನ ಭಾವ ಭಂಗಿ, ಹಾವ ಭಾವ ಎಲ್ಲವೂ ಬದಲಾಗುತ್ತಿರುತ್ತದೆ.”
ಡಾ.ಅರುಣಿ, ನಿರ್ದೇಕರು, ಭಾರತೀಯ ಇತಿಹಾಸ ಅನುಸಂಧಾನ ಪರಿಷತ್