ಬೆಂಗಳೂರು, ಏ.1 www.bengaluruwire.com :ಹೊಸ ಆರ್ಥಿಕ ವರ್ಷದಿಂದ (ಏ.1 ರಿಂದ) ಅನ್ವಯವಾಗುವಂತೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಟೋಲ್ ಉದ್ಘಾಟನೆಯಾದ ಎರಡು ವಾರದಲ್ಲೇ ದರ ಏರಿಕೆಯಾದ ಬಗ್ಗೆ ತೀವ್ರ ವಿರೋಧ ಹಿನ್ನಲೆಯಲ್ಲಿ ಹಿಂದಿನ ದರವನ್ನೇ ನಿಗದಿ ಮಾಡಲಾಗಿದೆ. ಹೊಸ ದರವನ್ನು ತಡೆಹಿಡಿಯಲಾಗಿದೆ.
ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಸೋಷಿಯಲ್ ಮೀಡಿಯಾ ಮೂಲಕ ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇಯಲ್ಲಿ ಇನ್ನೂ ಕೆಲವು ಕಾಮಗಾರಿಗಳು ನಡೆಯುತ್ತಿರುವುದರಿಂದ ಈ ಎಕ್ಸ್ ಪ್ರೆಸ್ ವೇಗೆ ಟೋಲ್ ದರ ಹೆಚ್ಚಳವಾಗುವುದು ಬೇಡ, ತಾತ್ಕಾಲಿಕವಾಗಿ ತಡೆ ಹಿಡಿಯಿರಿ ಎಂದು ಸಂಸದರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೆ ಎಂದಿದ್ದರು.
ಐದಲ್ಲ, ಹತ್ತಲ್ಲ ಸರಾಸರಿ ಶೇ 22ರಷ್ಟು ದರ ಹೆಚ್ಚಳವನ್ನು ಹೆದ್ದಾರಿ ಪ್ರಾಧಿಕಾರ ಮಾಡಿ ಆದೇಶಿಸಿತ್ತು. ಆದರೆ ಈಗ ದರ ಹೆಚ್ಚಳ ನಿರ್ಧಾರವನ್ನು ಪ್ರಾಧಿಕಾರ ಮುಂದೂಡಿದೆ. ಕಾರು, ವ್ಯಾನ್, ಜೀಪ್‌ಗಳ ಏಕಮುಖ ಟೋಲ್ ದರವನ್ನು 135ರಿಂದ 165 ರೂ. ಏರಿಸಲಾಗಿತ್ತು. ದ್ವಿಮುಖ ಸಂಚಾರ ದರವನ್ನು 250ಕ್ಕೆ ಏರಿಕೆ ಮಾಡಲಾಗಿತ್ತು. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ 220 ರೂ. ರಿಂದ 270 ರೂ. ಹಾಗೂ ದ್ವಿಮುಖ ಸಂಚಾರಕ್ಕೆ 405 ರೂ. ( ಅಂದರೆ 75 ರೂ. ಹೆಚ್ಚಳ) ನಿಗದಿಪಡಿಲಾಗಿತ್ತು. ಆದರೀಗ ಹಳೆಯ ದರವೇ ಮುಂದುವರೆಯಲಿದೆ.
ಟ್ರಕ್, ಬಸ್, ಎರಡು ಅಕ್ಸೆಲ್ ವಾಹನಗಳ ಏಕಮುಖ ಟೋಲ್ ಬರೋಬ್ಬರಿ 565ರೂ.ಗಳಿಗೆ ಏರಿಕೆ ಆಗಿತ್ತು.(ಅಂದರೆ 105 ರೂ. ಹೆಚ್ಚಳ). ದ್ವಿಮುಖ ಸಂಚಾರಕ್ಕೆ 850 ರೂ. ನಿಗದಿಪಡಿಸಲಾಗಿತ್ತು. (ಅಂದರೆ 160 ರೂ.ಗೆ ಹೆಚ್ಚಳವಾಗಿತ್ತು).
ಮೂರು ಆಕ್ಸಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವನ್ನು 615 ರೂ.(115 ರೂ. ಏರಿಕೆ), ಹಾಗೂ ದ್ವಿಮುಖ ಸಂಚಾರಕ್ಕಾಗಿ 925 ರೂ. (222 ರೂ. ಹೆಚ್ಚಳ) ಏರಿಕೆಯಾಗಿದೆ. ಭಾರೀ ವಾಹನಗಳ ಏಕಮುಖ ಟೋಲ್ ದರ 885 ರೂ. (165 ರೂ. ಹೆಚ್ಚಳ), ದ್ವಿಮುಖ ಸಂಚಾರಕ್ಕೆ 1330 (250 ರೂ. ಹೆಚ್ಚಳ) ನಿಗದಿಪಡಿಸಲಾಗಿತ್ತು. ಏಳು ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸಿಲ್ ವಾಹನಗಳ ದರವು 1,080 (200 ರೂ. ಹೆಚ್ಚಳ) ಹಾಗೂ ದ್ವಿಮುಖ ಸಂಚಾರಕ್ಕೆ 1,620 ರೂ. (305 ರೂ. ಏರಿಕೆ) ನಿಗದಿ ಮಾಡಿತ್ತು.
ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಉದ್ಘಾಟನೆ ಮಾಡಿದ್ದರು. ಇದರ ಬೆನ್ನಲ್ಲೇ ಮಾ.14ರಂದು ಬೆಂಗಳೂರು ದಕ್ಷಿಣ ತಾಲೂಕಿನ ಕಣ್ ಮಿಣಕಿ ಹಾಗೂ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಆರಂಭವಾಗಿತ್ತು.
ಹೊಸ ಟೋಲ್ ದರ ನಿಗದಿ ಬಗ್ಗೆ ಸಾರ್ವಜನಿಕರು ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ವೀಸ್ ರಸ್ತೆ ಕಾಮಗಾರಿಗಳು ಬಾಕಿಯಿರುವಾಗ ಉದ್ಘಾಟನೆಯಾದ ಎರಡು ವಾರದಲ್ಲೇ ಟೋಲ್ ದರ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಹೆದ್ದಾರಿ ಪ್ರಾಧಿಕಾರ ಈ ನೂತನ ಪರಿಷ್ಕರಣೆಯನ್ನು ಹಿಂಪಡೆಯಬೇಕು ಎಂದು ಹಲವು ಸಂಘಟನೆಗಳು ಆಗ್ರಹಪಡಿಸಿದ್ದವು.
ಕೆಐಎಎಲ್ ವಿಮಾನ ನಿಲ್ದಾಣದ ಟೋಲ್ ದರ ಏರಿಕೆ :
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಸಹ ಈಗ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಏಕೆಂದರೆ ಕಾರಿನಲ್ಲಿ ಏಕಮುಖ ಪ್ರಯಾಣದ ಟೋಲ್ 105 ರೂ. ನಿಂದ 110 ರೂ.ಗೆ ಏರುತ್ತದೆ ಮತ್ತು ಹಿಂದಿರುಗುವ ಪ್ರಯಾಣಕ್ಕೆ 170 ರೂ. ಶುಲ್ಕ ವಿಧಿಸಲಾಗುತ್ತದೆ. ಹಿಂದಿನ 160 ರೂ. ಇತ್ತು. ಎಲ್‌ಸಿವಿ ಮತ್ತು ಮಿನಿ ಬಸ್‌ನ ಶುಲ್ಕವನ್ನು ಏಕಮುಖ ಪ್ರಯಾಣಕ್ಕೆ ₹170ಕ್ಕೆ ( ಹಿಂದೆ 165 ರೂ. ಇತ್ತು) ಮತ್ತು ರಿಟರ್ನ್ ಟ್ರಿಪ್‌ಗೆ 260ಕ್ಕೆ (ಮೊದಲಿನ ದರ 245 ರೂ. ಇತ್ತು) ಹೆಚ್ಚಿಸಲಾಗಿದೆ. ಬಸ್ಸುಗಳ ಟೋಲ್ ಅನ್ನು ಏಕಮುಖ ಮತ್ತು ದ್ವಿಮುಖ ಪ್ರಯಾಣಕ್ಕೆ ಕ್ರಮವಾಗಿ ₹345 ಮತ್ತು ₹495 ಕ್ಕೆ ಹೆಚ್ಚಿಸಲಾಗಿದೆ.