ಬೆಂಗಳೂರು, ಏ.1 www.bengaluruwire.com :
ರಾಜ್ಯದಲ್ಲಿ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಹಾಗೂ ಭ್ರಷ್ಟಾಚಾರ ವಿಚಾರದಲ್ಲಿ ಸಾರ್ವಜನಿಕರು ದೂರು ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಕೇಂದ್ರ ಕಛೇರಿಯ ಆವರಣದಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಚುನಾವಣಾ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಭ್ರಷ್ಟ ಆಚರಣೆಗಳಿಗೆ, ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗೆ, ಇತರೆ ಚುನಾವಣಾ ಅಪರಾಧಿಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಲಬಹುದಾಗಿದೆ. ಸಾರ್ವಜನಿಕರು ದೂರು ನೀಡಲು ಬಿಬಿಎಂಪಿಯು, ಕೇಂದ್ರ ಕಛೇರಿಯ ಆವರಣದಲ್ಲಿನ ಅನೆಕ್ಸ್-3 ಕಟ್ಟಡ, 6ನೇ ಮಹಡಿಯಲ್ಲಿ ಜಿಲ್ಲಾ ದೂರು ಮೇಲ್ವಿಚಾರಣೆ ಕೋಶವನ್ನು ದಿನದ 24 ಗಂಟೆ ಕಾರ್ಯಾಚರಣೆಯಲ್ಲಿರುವಂತೆ ಸ್ಥಾಪಿಸಲಾಗಿರುತ್ತದೆ ಎಂದು ದೂರು ಪರಿಹಾರ ಮತ್ತು ಮತದಾರರ ಸಹಾಯವಾಣಿ ನೋಡಲ್ ಅಧಿಕಾರಿ ಪ್ರತೀಕ್ ಬಾಯಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆ 1950, ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ (NGRS) ಹಾಗೂ ಸಿವಿಜಿಲ್ ಆಪ್ (cVIGIL) ಮೂಲಕ ದೂರುಗಳನ್ನು ಸಲ್ಲಿಸಬಹುದಾಗಿರುತ್ತದೆ ಎಂದು ಹೇಳಿದ್ದಾರೆ.






















