ಬೆಂಗಳೂರು, ಮಾ.30 www.bengaluruwire.com : ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಸರ್ಕಾರ, ನಾಡಿನ ಪ್ರಮುಖ ಯೋಜನೆಯಾದ ಕ್ಷೀರಭಾಗ್ಯದಡಿ ಜನವರಿ ತಿಂಗಳಿನಿಂದ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳ ಮಕ್ಕಳಿಗೆ ಹಾಲು ಪೌಡರ್ ಸರಬರಾಜು ನಿಲ್ಲಿಸಿರುವ ಬಹಿರಂಗವಾಗಿದೆ.
ಈ ಕುರಿತಂತೆ ಮುಖ್ಯಮಂತ್ರಿಗಳು ತುರ್ತಾಗಿ ಈ ವಿಷಯದಲ್ಲಿ ಮದ್ಯಪ್ರವೇಶಿಸಿ ಈ ಯೋಜನೆಯಡಿಯಲ್ಲಿ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿದ್ದ ಹಾಲು (ಪೌಡರ್) ಸರಬರಾಜನ್ನು ಪುನಃ ಪ್ರಾರಂಭಿಸುವಂತೆ ಆಹಾರ ನಮ್ಮ ಹಕ್ಕು ಕರ್ನಾಟಕ ಸಂಘಟನೆಯು ಆಗ್ರಹಿಸಿದೆ.
ಈ ಕುರಿತಂತೆ ಮಾಧ್ಯಮದಲ್ಲಿನ ವರದಿ ಆಧರಿಸಿ ಗುರುವಾರ ಮುಖ್ಯಮಂತ್ರಿಗಳ ಕಚೇರಿಗೆ ಇಮೇಲ್ ಮೂಲಕ ಮನವಿ ಸಲ್ಲಿಸಿರುವ ಸಂಘಟನೆ, ಜನವರಿ 2023 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಾಲು (ಪೌಡರ್) ತೊಡಕಿನ ಕುರಿತು ಸರ್ಕಾರದ ಗಮನ ಸೆಳೆದಿದೆ.
“ಕೆಎಂಎಫ್‌ನಿಂದ ಪೂರೈಕೆಯಾಗುತ್ತಿದ್ದ ಹಾಲಿನ ಪೌಡರ್ ಪೈಕಿ 11 ಜಿಲ್ಲೆಗಳಿಗೆ ಸರಬರಾಜನ್ನು ಜನವರಿಯಿಂದ ನಿಲ್ಲಿಸಲಾಗಿದೆ. ಇವುಗಳಲ್ಲಿ ಗದಗ, ಬೀದರ್, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಹಸಿವು ಮತ್ತು ಅಪೌಷ್ಟಿಕತೆಯ ಪ್ರಮಾಣ ಹೆಚ್ಚಿದೆ’ ಎಂದು ಆಹಾರ ನಮ್ಮ ಸಂಘಟನೆಯ ಡಾ.ಸಿಲ್ವಿಯಾ ಕರಪಗಮ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಕಳೆದ ದಿನದ ಊಟ ಹಾಗೂ ಪ್ರಸಕ್ತ ದಿನದ ಮಧ್ಯಾಹ್ನದ ಬಿಸಿಯೂಟ (ಮಧ್ಯಾಹ್ನ 12 ಗಂಟೆಗೆ) ಸಿಗುವವರೆಗೂ ಈ ನಡುವೆ 15-16 ಗಂಟೆಗಳ ಕಾಲ ಅವರು ಹಸಿವಿನಿಂದಿರುವ ಸಂದರ್ಭದಲ್ಲಿ ಈ ಒಂದು ಲೋಟ ಹಾಲು ಮಾತ್ರವೇ ಅವರಿಗೆ ಸಿಗುವ ಆಹಾರವಾಗಿದೆ. ಬಹುಕೋಟಿ ಪ್ರಾಜೆಕ್ಟುಗಳಾದ ಮೆಟ್ರೋ ರೈಲು ಹಾಗೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ಉದ್ಘಾಟಿಸುವ ರಾಜ್ಯ ಸರ್ಕಾರಕ್ಕೆ ಮೂರು ತಿಂಗಳಿನಿಂದಲೂ ಈ ಜಿಲ್ಲೆಗಳ ಶಾಲೆಗಳಿಗೆ ಕಡಿತವಾಗಿರುವ ಹಾಲಿನ ಪೌಡರ್ ಸರಬರಾಜನ್ನು ಮರುಸ್ಥಾಪಿಸಲು ಇನ್ನೂ ಸಾಧ್ಯವಾಗಿಲ್ಲ ಎಂಬುದು ಅತ್ಯಂತ ಬೇಸರದ ಹಾಗೂ ಖೇದಕರ ಸಂಗತಿಯಾಗಿದೆ ಎಂದಿದೆ.
ಹೈದರಾಬಾದಿನ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯು ಇತ್ತೀಚಿನ ತನ್ನ ವರದಿಯಲ್ಲಿ ಹಾಲು ಉತ್ತಮ ಜೀರ್ಣಪ್ರಕ್ರಿಯೆಯ ಅಂಶಗಳನ್ನು ಮಾತ್ರವಲ್ಲದೆ ಉತ್ತಮ ಗುಣಮಟ್ಟದ ಪ್ರೊಟೀನುಗಳನ್ನು ಸಹ ಹೊಂದಿದ್ದಾಗಿ ತಿಳಿಸಿದೆ. ಈ ಹಿನ್ನಲೆಯಲ್ಲಿ ಕೆಎಂಎಫ್ ಬಳಿ ಸದ್ಯ ಉಳಿದಿರುವ ಹಾಲಿನ ಪೌಡರ್ ಪ್ರಮಾಣವನ್ನು ಇತರರ ಯಾವುದೇ ಕಾರ್ಯಕ್ಕೆ ವಿನಿಯೋಗಿಸದೆ ಕ್ಷೀರಭಾಗ್ಯ ಯೋಜನೆಯಡಿಯಲ್ಲಿನ ಉದ್ದೇಶಗಳಿಗೆ ಮಾತ್ರ ಸರಬರಾಜು ಮಾಡಲು ಕೆಎಂಎಫ್‌ಗೆ ನಿರ್ದೇಶನವನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಜೊತೆಗೆ ಭವಿಷ್ಯದಲ್ಲಿ, ಕೆಎಂಎಫ್ ತುರ್ತು ಸಂಗ್ರಹವಾಗಿ ಸಾಕಷ್ಟು ಪ್ರಮಾಣದ ಹಾಲಿನ ಪೌಡರ್ ಅನ್ನು ಇಂತಹ ಅಭಾವಗಳನ್ನು ನೀಗಿಸುವ ಸಲುವಾಗಿ ಸಂಗ್ರಹಿಸಿಡಬೇಕು. ಇಂತಹ ಸಂಗ್ರಹವನ್ನು ನಿಭಾಯಿಸುವುದಕ್ಕೆ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಮುಂಗಡ ಹಣವನ್ನು ಕೆಎಂಎಫ್‌ಗೆ ಪಾವತಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಆಹಾರ ನಮ್ಮ ಹಕ್ಕು ಕರ್ನಾಟಕ ಸಂಘಟನೆ ಸಲಹೆ ನೀಡಿದೆ.
ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಪೂರೈಕೆಯಾಗುತ್ತಿದ್ದ ಹಾಲಿನ ಪೌಡರ್ ಸರಬರಾಜು ಕಡಿತಗೊಂಡಿರುವುದು ಕೆಎಂಎಫ್, ರೈತರಿಂದ ಖರೀದಿಸುತ್ತಿದ್ದ ಉತ್ಪನ್ನಗಳ ಪ್ರಮಾಣದಲ್ಲಿ ಇಳಿಕೆಯಾದ್ದರಿಂದ ಎಂದು ಹಲವು ವರದಿಗಳು ಹೇಳಿವೆ. ಹೀಗಾಗಿ ನವೆಂಬರ್ 2022 ರಿಂದ ನಿಲ್ಲಿಸಲಾಗಿರುವ ಒಂದು ಲೀಟರ್ ಹಾಲಿಗೆ ನೀಡುತ್ತಿದ್ದ 5 ರೂ. ಪ್ರೋತ್ಸಾಹ ಧನ ಬಾಕಿ ಪಾವತಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಕೆಎಂಎಫ್ ಸಾಕಷ್ಟು ಪ್ರಮಾಣದಲ್ಲಿ ಅಗತ್ಯವಾದ ಹಾಲನ್ನು ಪಡೆದುಕೊಳ್ಳುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಹಾಲಿನ ಚಿಲ್ಲರೆ ದರವನ್ನು ಹೆಚ್ಚಿಸುವಂತೆ ತಿಳಿಸಿದೆ.