ಬೆಂಗಳೂರು, ಮಾ.29 www.bengaluruwire.com : ರಾಜ್ಯದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಚುನಾವಣಾ ಅಕ್ರಮಗಳ ವಿಷಯದಲ್ಲಿ ವಿವಿಧ ಪ್ರಕರಣದಲ್ಲಿ ಹಲವು ಇಲಾಖೆಗಳ ತಂಡಗಳು ಮಾ.27ರ ತನಕ 57.72 ಕೋಟಿ ರೂ. ಮೊತ್ತದ ನಗದು, ಮದ್ಯ, ಚಿನ್ನ ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳು, ಪಕ್ಷಗಳು ಅಥವಾ ವಿವಿಧ ಸಂಸ್ಥೆಗಳು ಮತದಾರರಿಗೆ ಆಮಿಷವೊಡ್ಡಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಖಡಕ್ ಸೂಚನೆ ನೀಡಿದೆ.
ರಾಜ್ಯ ಚುನಾವಣಾ ಆಯೋಗವು ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು, ಒಟ್ಟಾರೆ 58,282 ಮತಗಟ್ಟೆಗಳಲ್ಲಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಂಡಿದೆ. ಇದರ ನಡುವೆ ಮತದಾರರ ಮೇಲೆ ಆಮೀಷವೊಡ್ಡಲು ರಾಜಕೀಯ ಪಕ್ಷಗಳ ಮುಖಂಡರು ಅವರ ಹಿಂಬಾಲಕರು, ಚುನಾವಣಾ ಆಕಾಂಕ್ಷಿಗಳು ಮತ್ತಿತರರು ನಗದು, ಉಡುಗೊರೆ, ಕೊಡುಗೆಗಳನ್ನು ನೀಡುವ ಬಗ್ಗೆ ಆಯೋಗವು ವಿಚಕ್ಷಣೆಗಾಗಿ ಫ್ಲೈಯಿಂಗ್ ಸ್ಕ್ವಾಡ್, ಸ್ಥಿರ ವಿಚಕ್ಷಣಾ ತಂಡಗಳನ್ನು ರಚಿಸಿದೆ. ಅಲ್ಲದೆ ವಿವಿಧ ತನಿಖಾ ತಂಡಗಳು ಚುನಾವಣಾ ಭ್ರಷ್ಟಾಚಾರಗಳ ಮೇಲೆ ವಿಚಕ್ಷಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು.
ಪೊಲೀಸ್ ಇಲಾಖೆ 34.36 ಕೋಟಿ ರೂ. ಮೌಲ್ಯದ ವಸ್ತು, 14.24 ಕೋಟಿ ರೂ. ನಗದು, 530 ಕೆಜಿ ಡ್ರಗ್ಸ್, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿ ಸೇರಿದಂತೆ 11.20 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ ಹಾಗೂ ಕೊಡುಗೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ. ಇನ್ನು ಅಬಕಾರಿ ಇಲಾಖೆಯು 6.84 ಕೋಟಿ ರೂ. ಮೌಲ್ಯದ 1,38,847 ಲೀಟರ್ ಮದ್ಯ ಹಾಗೂ 43 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದೆ. ಆದಾಯ ತೆರಿಗೆ ಇಲಾಖೆಯು ಒಟ್ಟು 1.16 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದೆ.
ಇನ್ನು ವಾಣಿಜ್ಯ ತೆರಿಗೆ ಇಲಾಖೆಯು ಒಟ್ಟು 5.02 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (Directorate of Revenue Intelligence)ವು ವಿವಿಧ ಪ್ರಕರಣಗಳಲ್ಲಿ ಮತದಾರರಿಗೆ ಆಮಿಷವೊಡ್ಡಲು, ಅನುಮಾನಸ್ಪದವಾಗಿ ಕೊಂಡೊಯ್ಯುತ್ತಿದ್ದ, ಮಾರಾಟ ಮಾಡುತ್ತಿದ್ದ ಇನ್ನಿತರ ಪ್ರಕರಣಗಳಲ್ಲಿ 1.03 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಮಾದಕವಸ್ತು ನಿಗ್ರಹ ದಳ (NCB) 57.15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹಾಗೂ ಕೇಂದ್ರೀಯ ಸುಂಕ ಹಾಗೂ ಪರೋಕ್ಷ ತೆರಿಗೆ ಮಂಡಳಿ (CBIC) 3.97 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಅದೇ ರೀತಿ ರಾಜ್ಯ ನಾಗರೀಕ ವಿಮಾನಯಾನದಿಂದ 69.40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ.
ಒಟ್ಟಾರೆ ಮಾ.9ರಿಂದ 27ನೇ ತಾರೀಖಿನ ಅವಧಿಯಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಹಿನ್ನಲೆಯಲ್ಲಿ ವಿವಿಧ ತನಿಖಾ ತಂಡಗಳು ಚುನಾವಣಾ ಅಕ್ರಮಗಳನ್ನು ಪತ್ತೆಹಚ್ಚಿ ಒಟ್ಟಾರೆ 1,985 ಎಫ್ ಐಆರ್ ಗಳನ್ನು ದಾಖಲಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯ ಚುನಾವಣಾ ವೆಚ್ಚದ ಒಟ್ಟಾರೆ ಮಿತಿಯನ್ನು ಚುನಾವಣಾ ಆಯೋಗವು 40 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಕಣ್ಣಿಡಲು 234 ಸಹಾಯಕ ವೆಚ್ಚ ನಿರೀಕ್ಷಕರನ್ನು ಚುನಾವಣಾ ಆಯೋಗ ನೇಮಿಸಿದೆ.