ನವದೆಹಲಿ, ಮಾ.29 www.bengaluruwire.com : ರಾಜ್ಯದಲ್ಲಿ ಇಂದಿನಿಂದ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿದ್ದು, ಏ.13ಕ್ಕೆ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಮೇ.10ಕ್ಕೆ ಚುನಾವಣೆ ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಮೇ 23 ರೊಳಗೆ ನೂತನ ವಿಧಾನಸಭೆ ಅಸ್ತಿತ್ವಕ್ಕೆ ಬರಬೇಕಿದೆ ಈ ಹಿನ್ನಲೆಯಲ್ಲಿ ಮೇ.10ರ ಬುಧವಾರಕ್ಕೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ, 13ರ ಶನಿವಾರ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 5.21 ಕೋಟಿ ಅರ್ಹ ಮತದಾರರಿದ್ದು, 12.15 ಲಕ್ಷ 80 ವರ್ಷ ಮೇಲ್ಪಟ್ಟ ಮತದಾರರಿದ್ದಾರೆ. 9.58 ಲಕ್ಷ ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 41,312 ತೃತೀಯ ಲಿಂಗಿ ಮತದಾರರಿದ್ದಾರೆ. 5.60 ಲಕ್ಷ ವಿಕಲಚೇತನ ಮತದಾರರು, 16 ಸಾವಿರ ಶತಾಯುಷಿಗಳಿದ್ದಾರೆ.ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳಿದ್ದು, ನಗರಪ್ರದೇಶದಲ್ಲಿ ಒಟ್ಟು 24,063 ಮತಗಟ್ಟೆಗಳಿದ್ದರೆ, 34,291 ಗ್ರಾಮೀಣ ಮತಗಟ್ಟೆಗಳಿವೆ. ಹಾಗೂ 12,000 ಸೂಕ್ಷ್ಮ ಮತಗಟ್ಟೆಗಳಿವೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡುವ ಮೂಲಕ ಹೊಸ ಪ್ರಯೋಗಕ್ಕೆ ಚುನಾವಣಾ ಆಯೋಗ ಮುಂದಡಿ ಇಟ್ಟಿರುವುದಾಗಿ ರಾಜೀವ್ ಕುಮಾರ್ ಹೇಳಿದ್ದಾರೆ.
400ಕ್ಕೂ ಅಧಿಕ ಪರಿಸರ ಸ್ನೇಹಿ ಮತಗಟ್ಟೆಗಳ ಸ್ಥಾಪನೆಯನ್ನು ಆಯೋಗ ಮಾಡಲಿದೆ. ಪ್ರತಿ ಮತಗಟ್ಟೆಯಲ್ಲಿ 883 ಜನರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಿದ್ದೇವೆ.
ಮಹಿಳೆಯರಿಗಾಗಿಯೇ 1,320 ಮತಗಟ್ಟೆಗಳು, ಗುಡ್ಡಗಾಡು ಜನರಿಗಾಗಿ 40ಕ್ಕೂ ಹೆಚ್ಚು ಮತದಾನ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯೋಗವು ಬೆಂಗಳೂರಿನಲ್ಲಿ ಕಡಿಮೆ ಪ್ರಮಾಣದ ಮತದಾನ ದಾಖಲು ಬಗ್ಗೆ ಆಯೋಗ ಕಳವಳ ವ್ಯಕ್ತಪಡಿಸಿದ್ದು, ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಿದೆ.
ಎಲೆಕ್ತಾನ್- ಮತದಾರರ ಹೆಸರು ನೋಂದಣಿ, ಮತ ಚಲಾವಣೆಗೆ ಜಾಗೃತಿ, ಚುನಾವಣೆಯಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು, ಐಟಿಬಿಟಿ, ಸ್ಟಾರ್ಟಪ್, ಇನ್ನೋವೇಷನ್ ಇತ್ಯಾದಿ ಕ್ಷೇತ್ರದ ಯುವಜನರಿಗೆ ಉತ್ತೇಜನ, ಯುವಕರಿಂದಲೇ 224 ಮತಗಟ್ಟೆಗಳ ನಿರ್ವಹಣೆ ಮಾಡಲು ಆಯೋಗ ನಿರ್ಧರಿಸಿದೆ.
ಮತಗಟ್ಟೆಗೆ ಯುವಜನರನ್ನು ಸೆಳೆಯಲು ವಿಶ್ವವಿದ್ಯಾನಿಲಯಗಳ ಬಳಕೆ ಮಾಡಲಿದ್ದು, ಅಭ್ಯರ್ಥಿಗಳ ಮಾಹಿತಿ, ಪ್ರಮಾಣಪತ್ರ ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ. ಮೊಬೈಲ್ ಆ್ಯಪ್ ನಲ್ಲೂ ಅಭ್ಯರ್ಥಿಗಳ ಮಾಹಿತಿ, ಪ್ರಮಾಣಪತ್ರ ಅಪ್ಲೋಡ್, ಮತದಾರರು ದೂರು ಸಲ್ಲಿಸುವುದಕ್ಕೂ ಅವಕಾಶವಿರಲಿದೆ.
ಚುನಾವಣಾ ಅಕಮ ತಡೆಗೆ ಜೀರೋ ಟಾಲರೆನ್ಸ್ ಇರಲಿದ್ದು, ಇದಕ್ಕಾಗಿ 2,400 ತಂಡಗಳ ರಚನೆ ಮಾಡಲಿದ್ದು, ಎಲ್ಲ ತನಿಖಾ ಸಂಸ್ಥೆಗಳ ಬಳಕೆಯಾಗಲಿದೆ. ಚುನಾವಣಾ ಅಕ್ರಮಕ್ಕೆ ನಿಷ್ಠುರ ಕಡಿವಾಣ ಹಾಕಲಿದ. ವಿಮಾನನಿಲ್ದಾಣ ಸಹಿತ ಎಲ್ಲೆಡೆ ವ್ಯಾಪಕ ಮತ್ತು ತೀವ್ರ ನಿಗಾಕ್ಕೆ ನಿರ್ದೇಶನ ನೀಡಲಾಗಿದೆ. 19 ಜಿಲ್ಲೆಗಳಲ್ಲಿ 171 ಅಂತಾರಾಜ್ಯ ಚೆಕ್ ಪೋಸ್ಟ್ ಗಳನ್ನು ಹಾಕಲಾಗುತ್ತದೆ. ದೊಡ್ಡ ಮೊತ್ತದ ಬ್ಯಾಂಕ್ ವ್ಯವಹಾರಗಳ ಮೇಲೆ ಆಯೋಗವು ಹದ್ದಿನ ಕಣ್ಣಿಡಲಿದೆ.