ಬೆಂಗಳೂರು, ಮಾ.26 www.bengaluruwire.com : ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿ ಕಾಡುಪಾಪ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭಾನುವಾರ ಬೆಳಗ್ಗೆ ವಾಯು ವಿಹಾರಕ್ಕೆಂದು ಬರುವ ಸಾರ್ವಜನಿಕರು ಇದನ್ನು ಗಮನಿಸಿ ಬಿಬಿಎಂಪಿಯ ವನ್ಯಜೀವಿ ಕಾರ್ಯಕರ್ತರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಕತ್ತಲೆಯಲ್ಲಿ ತಿರುಗಾಡುವ ಈ ಕಾಡುಪಾಪ ದೇಶದ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಳವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ವಿರಳವಾಗಿ ಕಂಡು ಬರುವ ಕಾಡುಪಾಪ ಬೆಂಗಳೂರಿನಲ್ಲಿ ಅದರಲ್ಲೂ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಕಂಡು ಬಂದಿರುವುದು ಆಶ್ಚರ್ಯ ಮೂಡಿಸಿದೆ. ಇವು ಸಾಮಾನ್ಯವಾಗಿ ಗುಂಪಿನಲ್ಲಿ ವಾಸಿಸುವ ಪ್ರಾಣಿ. 1960ರ ದಶಕದ ಬೆಂಗಳೂರಿನಲ್ಲಿ ಇವುಗಳ ಸಂತತಿ ಕಂಡು ಬರುತ್ತಿತ್ತು. ಆದರೀಗ ನೆಲಮಂಗಲ ದಾಟಿದ ಮೇಲೂ ಇವುಗಳು ಕಂಡುಬರುವುದು ಕಡಿಮೆ’ ಎನ್ನುತ್ತಾರೆ ಬೆಂಗಳೂರು ನಗರ ಜಿಲ್ಲೆ ಪ್ರಾಣಿ ಕಲ್ಯಾಣ ಪರಿಪಾಲಕ ಬಿ.ಪ್ರಸನ್ನ ಕುಮಾರ್.
‘ಸಾಮಾನ್ಯವಾಗಿ ಗುಂಪಿನಲ್ಲಿ ವಾಸಿಸುವ ಈ ಕಾಡುಪಾಪಗಳು ಇನ್ನಷ್ಟು ಸಂಖ್ಯೆಯಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಇರಬಹುದು. ಒಂದು ವರ್ಷದ ಹಿಂದೆ ಇಲ್ಲಿ ನಾಯಿಗಳ ದಾಳಿಯಿಂದ ಗಾಯಗೊಂಡ ಸ್ಥಿತಿಯಲ್ಲಿ ಪುನುಗು ಬೆಕ್ಕು ಕಂಡುಬಂದಿತ್ತು. ಅದರ ತಲೆಗೆ ಗಂಭೀರ ಗಾಯವಾಗಿದ್ದರಿಂದ ಸಾವನ್ನಪ್ಪಿತು. ಅಪರೂಪದ ಪ್ರಾಣಿ- ಪಕ್ಷಿ ಸಂಕುಲಕ್ಕೆ ಆಶ್ರಯ ಒದಗಿಸಿರುವ ಬೆಂಗಳೂರು ವಿಶ್ವವಿದ್ಯಾಲಯದ ಜೈವಿಕ ವೈವಿಧ್ಯತೆಯ ಸ್ಥಳವನ್ನು ಕಾಪಾಡಲು ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕರಣ ಸಂಖ್ಯೆ 36ರಲ್ಲಿ ಸಮುದಾಯ ಬೆಂಬಲಿತ ವನ್ಯಜೀವಿ ಮೀಸಲು ಪ್ರದೇಶ (Community Wildlife Conserve Reserve) ಎಂದು ಘೋಷಿಸಲು ಅವಕಾಶವಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ’ ಎಂದು ಅವರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಸಂಜೆಯ ವೇಳೆ ರೆಂಬೆಯಿಂದ ರೆಂಬೆಗೆ ಜಿಗಿಯುತ್ತ ವಿನೋದದಿಂದ ಆಟವಾಡುವ ಇವುಗಳನ್ನು ನೋಡುವುದೇ ಒಂದು ಆನಂದ. ಈ ಪುಟಾಣಿ ವಾನರವೂ ಕೂಡ ಜೀವವಿಕಾಸದಲ್ಲಿ ನಮಗೆ ಸಂಬಂಧಿ ಎಂಬುದು ಸೋಜಿಗ! ಇವು ಭೂಮಿಯಿಂದಲೇ ಶಾಶ್ವತವಾಗಿ ಕಣ್ಮರೆಯಾಗುತ್ತಿವೆಯಲ್ಲ ಎಂಬ ಬೇಸರವಿದೆ.
ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಈಗಲೂ ಅಲ್ಲಲ್ಲಿ ಅಳಿದುಳಿದಿರುವ ಹಸಿರು ತಾಣಗಳಲ್ಲಿ ಕಾಗೆ, ಓತಿಕ್ಯಾತ, ಪಾರಿವಾಳ ಇವೇ ಮೊದಲಾದ ಜೀವಿಗಳು ಕಾಣಸಿಗುತ್ತವೆ. ನಗರೀಕರಣಗೊಂಡ ಈ ಸಿಲಿಕಾನ್ ಸಿಟಿಯಲ್ಲಿಯೂ ಅಲ್ಲಲ್ಲಿ ಉಳಿದಿರುವ ಹಸಿರುತಾಣಗಳಲ್ಲಿ ಈ ಕಾಡುಪಾಪಗಳು ಇನ್ನೂ ಉಸಿರಾಡಿಕೊಂಡಿವೆ ಎನ್ನುವುದೇ ಒಂದು ಸೋಜಿಗ!
“ದಶಕಗಳ ಹಿಂದೆ ಹಳೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಕಾಡುಪಾಪಗಳು ಕಾಣಸಿಗುತ್ತಿದ್ದವು. ನಗರದ ಸುತ್ತಲಿನ ಹಳ್ಳಿಗಳಲ್ಲೂ ಹೇರಳವಾಗಿ ಕಾಣಸಿಗುತ್ತಿದ್ದವು. ಹಳ್ಳಿಯ ಜನರು ಇವುಗಳನ್ನು ಹಿಡಿದು ತಂದು ನಗರದ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು’ ಎಂಬ ಕಥೆಗಳನ್ನೂ 1960 ರಿಂದ 1990 ರ ಮೂಲ ಬೆಂಗಳೂರಿಗರು ಹೇಳುತ್ತಾರೆ.
ಈಗ ಇವುಗಳ ಸಂಖ್ಯೆ ಅತಿ ವಿರಳವಾಗಿದೆ. ಕಾರಣ ಬೃಹದಾಕಾರವಾಗಿ ಬೆಳೆದಿದ್ದ ದೊಡ್ಡ ದೊಡ್ಡ ಮರಗಳನ್ನೆಲ್ಲಾ ನಗರೀಕರಣ ಪ್ರಭಾವದಿಂದಾಗಿ ಕಣ್ಮರೆಯಾಗಿದೆ. ಈ ಮರಗಳ ಮೇಲ್ಬಾವಣಿಯಲ್ಲಿ ಬದುಕಿದ್ದ ಕಾಡುಪಾಪಗಳು ತಮ್ಮ ನೆಲೆ ಕಳೆದುಕೊಂಡಿವೆ.
ಜೀವ ವಿಕಾಸದಲ್ಲಿ ಮಾನವನ ಪೂರ್ವಜ :
ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಮಾತ್ರ ಕಾಣಸಿಗುವ ಕೋತಿ ಜಾತಿಯ ಕಾಡುಪಾಪ, ಜೀವವಿಕಾಸ ವಾದದಲ್ಲಿ ಬರುವ ಮೊದಲ ಮಾನವರ ಪೂರ್ವಜರು.! ಕಾಡುಪಾಪಗಳು. ಇದು ಕೋತಿ ಜಾತಿಯಲ್ಲೇ ಅತಿ ಚಿಕ್ಕ ವಾನರ ಕಾಡುಪಾಪ, ರಾತ್ರಿ ವೇಳೆ ಒಂಟಿಯಾಗಿ ಕಾಣಸಿಗುವ ನಿಶಾಚರಿ. ಸಾಮಾನ್ಯವಾಗಿ ಇವು ಬೇವು, ಅಕೇಶಿಯಾ, ನೀಲಗಿರಿ, ಜಟ್ರೋಪ ಮರಗಳಲ್ಲಿ ಆಶ್ರಯ ಪಡೆದಿರುತ್ತವೆ. ತುಂಬಾ ನಾಚಿಕೆ ಸ್ವಭಾವದ ಈ ಪ್ರಾಣಿ ಮಾನವರನ್ನು ಕಂಡರೆ ಅಡಗಿಕೊಳ್ಳುತ್ತದೆ. ಭಾರತದಲ್ಲಿ ಪಶ್ಚಿಮಘಟ್ಟ ಹಾಗೂ ಪೂರ್ವಘಟ್ಟಗಳಲ್ಲಿ ಕಾಣಸಿಗುವ ಇದರ ಜೀವನಕ್ರಮದ ಬಗ್ಗೆ ಇನ್ನೂ ನಾವು ತಿಳಿಯಬೇಕಿದೆ.
ಕಾಡುಪಾಪ ದೈಹಿಕ ಗುಣಲಕ್ಷಣ ಹೀಗಿದೆ :
ಇವು ಗಾತ್ರದಲ್ಲಿ ಚಿಕ್ಕವು, ಇದರ ಕೈ- ಕಾಲುಗಳು ಪೆನ್ನಿನಷ್ಟು ಸಣ್ಣದಾಗಿದೆ. ಆರರಿಂದ ಹತ್ತು ಇಂಚು ಉದ್ದವಿರುವ ಈ ಕೋತಿ ಜಾತಿಯ ಜೀವಿಗೆ ಒಂದು ಸೆಂ.ಮೀ. ಉದ್ದದ ಬಾಲವಿದೆ! ತಲೆಯ ಮೇಲೆ ಎದ್ದು ಕಾಣುವ ಬೂದು ಬಣ್ಣದ ದೊಡ್ಡ ಕಣ್ಣುಗಳಿವೆ. ಮುಖದ ಮೇಲಿನ ಉದ್ದ ಮೂಗಿನ ತುದಿ ಹೃದಯಾಕಾರವಾಗಿದೆ. ತಲೆಯ ಮೇಲೆ ಎಂಟಾಣೆ ಗಾತ್ರದ ದುಂಡನೆಯ ಕಿವಿಗಳಿವೆ. ತಿಳಿ ಬೂದು ಕೆಂಪಿನ ಮೈಬಣ್ಣ. ಕೈಕಾಲಿನ ಮೇಲಿನ ರೋಮಗಳು ಚಿಕ್ಕವಾಗಿದ್ದು, ಬೆರಳುಗಳಲ್ಲಿ ಮಾನವರಿಗೆ ಇರುವಂತೆ ಉಗುರುಗಳಿವೆ. ಇದು ಮರದ ಮೇಲೆ ವಾಸಿಸುವ ಪ್ರಾಣಿ.
ಜೀವಿತಾವಧಿಯ ಬಹುಭಾಗ ಮರದ ಮೇಲೆ ನೆಲೆ :
ಇದು ತನ್ನ ಜೀವಿತಾವಧಿಯ ಬಹು ಭಾಗವನ್ನು ಮರದ ಮೇಲೆಯೇ ಕಳೆಯುತ್ತದೆ. ಇದರ ನಡಿಗೆ ಬಹು ನಿಧಾನ. ಆದರೆ ರೆಂಬೆಯಿಂದ ರೆಂಬೆಗೆ ಕರಾರುವಾಕ್ಕಾಗಿ ನಡೆಯುತ್ತದೆ. ಸಾಮಾನ್ಯವಾಗಿ ಗುಂಪು ಗುಂಪಾಗಿ ಬೇಟೆಯಾಡುತ್ತವೆ. ಜೋಡಿ ಕಾಡುಪಾಪಗಳು ತಮ್ಮ ಆಹಾರವನ್ನು ತಮ್ಮ ಮರಿಗಳೊಂದಿಗೆ ಹಂಚಿಕೊಂಡು ತಿನ್ನುತ್ತವೆ. ಮರದ ಪೊಟರೆಯಲ್ಲಿ ‘ವಿ’ ಆಕಾರದ ಕೊಂಬೆಗಳ ನಡುವೆ ಗುಂಪಾಗಿ ಮಲಗುತ್ತವೆ.
ಗರ್ಭಧಾರಣೆಯಾದ 166 ದಿನಕ್ಕೆ ಮರಿಗಳಿಗೆ ಜನ್ಮ :
ಸೂರ್ಯೋದಯ ಮತ್ತು ಸೂರ್ಯಾಸ್ತಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಇವು ಕೊಂಬೆಗಳ ಮೇಲೆ ಆಟವಾಡುತ್ತ ವಿನೋದದಿಂದ ಕಚ್ಚಾಡುತ್ತಾ ತುಂಬಾ ಚಟುವಟಿಕೆಯಿಂದ ಇರುತ್ತವೆ. ಪ್ರತೀ ವರ್ಷ ಎಪ್ರಿಲ್-ಮೇ ಮತ್ತು ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಗರ್ಭಧರಿಸುತ್ತವೆ. ಗರ್ಭಧಾರಣೆಯಾದ 166 ರಿಂದ 169 ದಿನಕ್ಕೆ ಒಂದು ಅಥವಾ ಎರಡು ಮರಿಗೆ ಜನ್ಮ ನೀಡುತ್ತವೆ.
ತಾಯಿ ತನ್ನ ಮರಿಗಳನ್ನು ಕೆಲವು ವಾರದವರೆಗೂ ತನ್ನ ಬಳಿಯೇ ಇಟ್ಟುಕೊಂಡಿರುತ್ತದೆ. ಮರಿಗಳು ತಮ್ಮ ತಾಯಿಯನ್ನು ಕೆಲವು ವಾರದ ನಂತರ ಕೈಕಾಲುಗಳಿಂದ ತಬ್ಬಿರುತ್ತವೆ. ಕೆಲವು ವಾರದ ನಂತರ ಮರಿಗಳನ್ನು ಸುರಕ್ಷಿತವಾದ ಕೊಂಬೆಯ ಮೇಲೆ ಕುಳ್ಳಿರಿಸಿ ತಾಯಿ ಬೇಟೆಗೆ ಹೋಗುತ್ತದೆ. ಮರಿಗಳು ಮೊದ ಮೊದಲು ಬಹಳ ನಿಧಾನವಾಗಿ ಚಲಿಸುತ್ತಾ ನಂತರ ಕಾಲ ಕಳೆದಂತೆ ಇವುಗಳ ಚಲನೆ ತೀವ್ರವಾಗುತ್ತದೆ. ಇವು 12-15 ವರ್ಷ ಜೀವಿಸಬಲ್ಲವು.
ವಿಷಕೀಟಗಳಿಂದ ರಕ್ಷಣೆಗೆ ಸಖತ್ ಉಪಾಯ :
ಇವು ಕೀಟಹಾರಿ ಜೀವಿ. ಆದರೆ ಕೆಲವು ಬಾರಿ ಚಿಗುರೆಲೆ, ಹೂ, ಕಡ್ಡಿಗಳನ್ನೂ ತಿನ್ನುತ್ತವೆ. ಸಾಂದರ್ಭಿಕ ವಾಗಿ ಮರದ ಮೇಲಿನ ಹಕ್ಕಿಗೂಡುಗಳ ಮೇಲೆ ದಾಳಿ ಮಾಡಿ ಅಲ್ಲಿನ ಮೊಟ್ಟೆ ಮರಿಗಳನ್ನು ನುಂಗಿ ಗುಳುಂ ಮಾಡುತ್ತವೆ. ಅತಿ ಕೆಟ್ಟ ವಾಸನೆ ಬೀರುವ ಕೀಟಗಳನ್ನೂ ಬಿಡದೆ ಭಕ್ಷಿಸುತ್ತವೆ, ಅಲ್ಲದೆ ತಮ್ಮ ಮೂತ್ರದಿಂದ ಕೈಕಾಲು ಮುಖ ತೊಳೆದುಕೊಂಡು ಮೂತ್ರಸ್ನಾನ ಮಾಡುತ್ತವೆ. ಈ ಸ್ವಭಾವ ಅವುಗಳನ್ನು ವಿಷಕಾರಿ ಕೀಟಗಳು ಕಚ್ಚದ ಹಾಗೆ ತಡೆಯಲು ಮಾಡಿಕೊಂಡ ಉಪಾಯವಿರಬಹುದು.
ಆದಿವಾಸಿಗಳು ಕಾಡುಪಾಪದ ದೇಹದಲ್ಲಿ ಔಷಧೀಯ, ಅತಿಮಾನುಷ ಶಕ್ತಿ ಇದೆ ಎಂದು ನಂಬಿದ್ದಾರೆ. ಈ ನಂಬಿಕೆಯೇ ಇವುಗಳ ಸಂತತಿ ಕ್ಷೀಣಿಸಲು ಕಾರಣವಾಗಿದೆ. ಆವಾಸ ನಾಶವೂ ಕೂಡ ಇವುಗಳ ಅವನತಿಗೆ ಇನ್ನೊಂದು ಕಾರಣ.
ಸಮುದಾಯ ಬೆಂಬಲಿತ ವನ್ಯಜೀವಿ ಮೀಸಲು ಪ್ರದೇಶ ಘೋಷಣೆಗೆ ಆಗ್ರಹ :
ನಮ್ಮ ರಾಜ್ಯದಲ್ಲಿ ಇರುವ ಕಾಡುಪಾಪಗಳ ಸಂಖ್ಯೆ ಎಷ್ಟು? ಈ ಪ್ರಶ್ನೆಗೆ ಜೀವ ವಿಜ್ಞಾನಿಗಳ ಬಳಿಯೇ ಉತ್ತರವಿಲ್ಲ! ಇಷ್ಟು ಚಿಕ್ಕ ಗಾತ್ರದ ನಿಶಾಚರಿ ಜೀವಿಯನ್ನು ಹುಡುಕಿ ಗುರುತಿಸಿ ರಾತ್ರಿಯ ಕತ್ತಲೆಯಲ್ಲಿ ನಿಖರವಾಗಿ ಲೆಕ್ಕ ಹಾಕುವುದಾದರೂ ಹೇಗೆ? ಇತ್ತೀಚಿನವರೆಗೂ ಈ ಪುಟಾಣಿ ಜೀವಿಯ ಬಗ್ಗೆ ನಾವು ತಲೆಕೆಡಿಸಿಕೊಂಡಿದ್ದೇ ಕಡಿಮೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈಗಾಗಲೇ ನವಿಲು, ಹಾವು, ಮೊಲ, ಚಿರತೆ, ಪುನಗು ಬೆಕ್ಕು ಸೇರಿದಂತೆ ನಾನಾ ರೀತಿಯ ವನ್ಯಜೀವಿಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಈ ಸ್ಥಳವನ್ನು ಸಮುದಾಯ ಬೆಂಬಲಿತ ವನ್ಯಜೀವಿ ಮೀಸಲು ಪ್ರದೇಶವೆಂದು ಘೋಷಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.