ಬೆಂಗಳೂರು, ಮಾ.25 www.bengaluruwire.com : ಕೆಲಸಕ್ಕಿದ್ದ ಒಡೆಯನೇ ತನ್ನ ಆರಾಧ್ಯ ದೈವ ಎನ್ನುವ, ತನಗಾಗಿ ತನ್ನ ಜೀವನವನ್ನೇ ಸಮರ್ಪಿಸಿಕೊಂಡ ಕೆಲಸದವನನ್ನು, ಆತ ಕೆಲಸಗಾರ ಎನ್ನುವುದನ್ನು ಮರೆತು ಹೆಚ್ಚಿಗೆ ಪ್ರೀತಿ ತೋರಿಸುವ ಯಜಮಾನ.
ಹೀಗೆ 80 ದಶಕದಲ್ಲಿ ತುಳುನಾಡು ಪರಿಸರದಲ್ಲಿನ ಜಾತಿ ವ್ಯವಸ್ಥೆಗೆ ಮಾನವತೆಯ ನೂಲನ್ನು ಹಿಡಿದು ನಿರ್ಮಿಸಿದ ‘ಕೊರಮ’ ಚಿತ್ರ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡುಗರ ಮನಸೂರೆಗೊಂಡಿತು.
ಕಳೆದ 25 ವರ್ಷಗಳಿಂದ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಧ್ವಜ್ ಶೆಟ್ಟಿ ಅವರು ಬರೆದು ನಿರ್ದೇಶಿಸಿರುವ ‘ಕೊರಮ’ ಎಂಬ ತುಳು ಚಲನಚಿತ್ರ ನೋಡುಗರನ್ನು ನೆನಪಿನ ಮಳೆಯಲ್ಲಿ ತೋಯಿಸಿದ್ದಲ್ಲದೆ ಕಣ್ ರೆಪ್ಪೆಯನ್ನು ಒದ್ದೆಯಾಗಿಸಿದ್ದು ಸುಳ್ಳಲ್ಲ. ಸುಮಾರು ಎರಡು ಕಾಲು ಗಂಟೆಯ ಈ ಸಿನಿಮಾ ಮುಗಿಯುತ್ತಿದ್ದಂತೆ ಚಿತ್ರೋತ್ಸವಕ್ಕೆ ಬಂದ ವೀಕ್ಷಕರು ಚಪ್ಪಾಳೆ ತಟ್ಟಿ ತಮ್ಮ ಸಂತೋಷ ವ್ಯಕ್ತಪಡಿಸಿದರು.
ಕೊರಮನ ನಟನೆಯಲ್ಲಿ ಮೋಹನ್ ಶೇಣಿ ಅಮೋಘ ನಟನೆ ಪ್ರದರ್ಶಿಸಿ ಮಿಂಚಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮೂಲತಃ ನೀನಾಸಂ ವಿದ್ಯಾರ್ಥಿಯಾಗಿ ನಟನೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಮೋಹನ್ ಕೊರಮನ ಪಾತ್ರಕ್ಕೆ ಜೀವ ತುಂಬಿದ್ದಾರೆ.
‘ನನ್ನ ಬಾಲ್ಯದಿಂದಲೂ ನಮ್ಮ ನೆಲದಲ್ಲಿ ಕಂಡದ್ದನ್ನು ಚಿತ್ರಕ್ಕೆ ಕಥಾಹಂದರವಾಗಿ ಆಯ್ಕೆ ಮಾಡಿಕೊಂಡಿದ್ದೆ. ಪ್ರತಿ ಪಾತ್ರ ವರ್ಗವನ್ನು ನಿಧಾನವಾಗಿ ತೋರಿಸುತ್ತಾ ಅಂತ್ಯದಲ್ಲಿ ಸಿನಿಮಾಗೆ ಟ್ವಿಸ್ಟ್ ಕೊಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಹಿಂದೆ ಭೂತಕೋಲದಲ್ಲಿ ‘ಗಗ್ಗರ’ ತುಳು ಸಿನಿಮಾ ಮಾಡಿದ್ದೆ ಅದು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಕೇವಲ 14 ದಿನಗಳಲ್ಲಿ ಈ ಸಿನಿಮಾವನ್ನು ಬಹಳ ಸಮಯವನ್ನು ಹೊಂದಿಸಿಕೊಂಡು ಯೋಜಿತವಾಗಿ ಈ ಸಿನಿಮಾ ನಿರ್ಮಿಸಿದ್ದೇವೆ’ ಎಂದು ಶಿವಧ್ವಜ್ ಹೇಳಿದರು.
‘ಕೊರಮ ಗ್ರಾಮದ ಮುಖಂಡ ಮಂಜಯ್ಯ ಹೆಗ್ಗಡೆ ಅವರ ಬಲಗೈ ಬಂಟನಂತೆ ಕೆಲಸ ಮಾಡುತ್ತಾನೆ. ಮತ್ತು ಈ ಕೆಲಸ ಬಿಟ್ಟರೆ ತನಗೆ ಗುರುತು ಸಿಗುವುದಿಲ್ಲ ಎನ್ನುವಷ್ಟು ಆ ಮನೆಯ ಮೇಲೆ ಅವಲಂಬಿತನಾಗಿರುತ್ತಾನೆ. ಮಂಜಯ್ಯ ಹೆಗ್ಗಡೆಯವರ ಮಗ ಕೊರಮನನ್ನು ಒಂದಿನಿತು ಇಷ್ಟಪಡುವುದಿಲ್ಲ. ಮಂಜಯ್ಯ ಹೆಗ್ಗಡೆಯವರ ಮಗನಿಗೆ ಮದುವೆ ಆಗದ ಹೊರತು ಕೊರಮ ಮದುವೆಯ ಯೋಚನೆ ಮಾಡುವುದಿಲ್ಲ’.
‘ಉದ್ಯೋಗದಾತ ಮತ್ತು ಕೆಲಸಗಾರನ ನಡುವಿನ ಸಂಬಂಧವು ಬದಲಾಗುವ ಪರಿಸ್ಥಿತಿಗಳು ಚಿತ್ರದ ಕಥೆಯಾಗಿದೆ. ನಮ್ಮ ಜೀವನದಲ್ಲಿ ಕೊರಮ ಮತ್ತು ಮಾಜಯ್ಯ ಹೆಗ್ಗಡೆ ಅವರನ್ನು ನೋಡಿದ್ದೇವೆ, ಕಥೆ ಎಲ್ಲರನ್ನು ಮುಟ್ಟುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಶಿವಧ್ವಜ್ ಶೆಟ್ಟಿ.
“ಈ ಚಿತ್ರವನ್ನು 14ನೆಯ ಬೆಂಗಳೂರು ಅಂತರರಾಷ್ಠ್ರೀಯ ಚಲನಚಿತ್ರೋತ್ಸವದ ಪ್ರದರ್ಶನಕ್ಕೆ ಆಯ್ಕೆ ಮಾಡಿದ್ದಕ್ಕೆ ಆಯ್ಕೆ ಸಮಿತಿಗೆ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರ 80ನೇ ದಶಕದಲ್ಲಿ ನಡೆಯುವ ಕಥಾ ಹಂದರವನ್ನು ಹೊಂದಿದೆ. ನಿಮ್ಮ ಅಭಿಪ್ರಾಯಗಳನ್ನು ಎದುರು ನೋಡುತ್ತಿದ್ದೇನೆ. ನಿಮಗೆ ಚಿತ್ರ ಇಷ್ಟವಾದರೆ ಅಥವಾ ಇಷ್ಟವಾಗದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ನಟ ಹಾಗೂ ನಿರ್ದೇಶಕ ಶಿವಧ್ವಜ್ ಶೆಟ್ಟಿ ಹೇಳಿದ್ದಾರೆ.
ಚಿತ್ರದ ಮೊದಲಾರ್ಧ ಸ್ವಲ್ಪ ನಿಧಾನವಾಗಿ ಕರೆದೊಯ್ದರೂ, ಸೆಕೆಂಡ್ ಹಾಫ್ ನಲ್ಲಿ ಚಿತ್ರಕಥೆ ಬೇರೆಯದೇ ರೀತಿ ಕವಲೊಡೆದು ಅಂತಿಮವಾಗಿ ಸಮಾಜದಲ್ಲಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಸಂದೇಶವನ್ನು ನೀಡುತ್ತದೆ. ಈ ಹಂತದಲ್ಲಿ ನಡೆಯುವ ಸನ್ನಿವೇಶಗಳು ಸಿನಿ ನೋಡುಗರನ್ನು ಸೀಟಿನ ತುದಿಯಲ್ಲಿ ಕುಳಿತು ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಈ ಮೂಲಕ ‘ಕೊರಮ’ ಚಿತ್ರ ಅಂತರರಾಷ್ಟ್ರೀಯ ಪ್ರಶಸ್ತಿ ಬಾಚುವ ಎಲ್ಲ ಲಕ್ಷಣಗಳನ್ನು ಹೊಂದಿದೆ.
ಈಶ್ವರಿದಾಸ್ ಶೆಟ್ಟಿ ಮತ್ತು ರಾಜೇಶ್ವರಿ ರೈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರವನ್ನು ಅಡ್ಯಾರ್ ಮಾಧವ ನಾಯಕ್ ಅವರು ಪ್ರಸ್ತುತಪಡಿಸಿದ್ದಾರೆ. ಮೋಹನ್ ಶೇಣಿ, ಬಿಂದು ರಕ್ಷಿದಿ, ಗುರು ಹೆಗಡೆ, ರೂಪ ವರ್ಕಾಡಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಜಿನಪ್ರಸಾದ್, ದಿವ್ಯಶ್ರೀ ನಾಯಕ್ ಮತ್ತಿತರರು ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿನ ಬಹುತೇಕ ಕಲಾವಿದರು ಸ್ಥಳೀಯರು. ಸುರೇಶ್ ಭೈರಸಂದ್ರ ಅವರ ಛಾಯಾಗ್ರಹಣವಿದೆ.
ಈ ಸಿನಿಮಾ ಸಹಜತೆಯನ್ನು ಕೊನೆಯವರೆಗೂ ಕಾಯ್ದುಕೊಂಡಿದೆ. ಸುಮಾರು ಎರಡು ಗಂಟೆ ಕಳೆದು ಹೋಗಿದ್ದೆ ತಿಳಿಯದಾಯಿತು. ಇಂತಹ ಸಿನಿಮಾ ಆಯ್ಕೆ ಮಾಡಿದ ಆಯ್ಕೆ ಸಮಿತಿಗೆ ಧನ್ಯವಾದ ಎಂದು ಕಲಾವಿದೆ ರಾಧಾ ರಾಮಚಂದ್ರ ಹೇಳಿದರು.