ಬೆಂಗಳೂರು, ಮಾ.22 www.bengaluruwire.com : ನಗರದ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವ ಆಚರಣೆಯು ಚೈತ್ರ ಪೂರ್ಣಿಮೆಯ ದಿನವಾದ ಏ.6ರಂದು ನಡೆಯಲಿದೆ. ಈ ಬಾರಿಯ ಕರಗ ಮಹೋತ್ಸವ ಚುನಾವಣಾ ನೀತಿ ಸಂಹಿತೆ ಹಾಗೂ ಕೋವಿಡ್ ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ಆಚರಣೆಯಾಗಲಿದೆ.
ಈ ಕುರಿತಂತೆ ಬುಧವಾರ “ಕರಗ ಶಕ್ತ್ಯೋತ್ಸವ” ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಕುರಿತಾದ ಆಹ್ವಾನಪತ್ರಿಕೆಯನ್ನು ಚಿಕ್ಕಪೇಟೆ ಶಾಸಕ ಡಾ.ಉದಯ್.ಬಿ.ಗರುಡಾಚಾರ್ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯಕ್ರವನ್ನು ನಡೆಸಬೇಕು. ಕರಗ ಶಕ್ತ್ಯೋತ್ಸವವು ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಕರಗ ಉತ್ಸವ ನಡೆಯುವ ಬೀದಿಗಳಲ್ಲಿ ದೀಪಗಳ ಅಳವಡಿಕೆ, ಪಾಲಿಕೆಯ ಆರೋಗ್ಯ ಇಲಾಖೆ ವತಿಯಿಂದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆ ಮಾಡುವುದು ಸೇರಿದಂತೆ ಪ್ರಮುಖ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾಗಿ ಹೇಳಿದರು.
ಕರಗಕ್ಕೆ ಬರುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಇ-ಶೌಚಾಲಯಗಳ ವ್ಯವಸ್ಥೆ, ಬಿಬಿಎಂಪಿ ವತಿಯಿಂದ ಸಂಪಂಗಿರಾಮನಗರ ಕಲ್ಯಾಣಿಯ ಸ್ವಚ್ಚತೆ ಮಾಡುವುದು ಹಾಗೂ ಜಲಮಂಡಳಿ ವತಿಯಿಂದ ಕಲ್ಯಾಣಿಗೆ ನೀರು ತುಂಬಿಸುವುದು. ಜಲಮಂಡಳಿ ವತಿಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಎಲ್ಲೂ ಕೊಳಚೆ ನೀರು ಹೊರಬಾರದಂತೆ ಅಗತ್ಯ ಕ್ರಮ ವಹಿಸುವುದು, ಸಂಚಾರ ದಟ್ಟಣೆಯಾಗದಂತೆ ಮಾರ್ಗ ಬದಲಾವಣೆ ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡುವ ಕುರಿತಂತೆ ಚರ್ಚೆ ನಡೆಸಿದ್ದಾಗಿ ವಿವರಿಸಿದರು.
ಕರಗ ಮಹೋತ್ಸವ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಸಿ ಕ್ಯಾಮೆರಾಗಳ ಅಳವಡಿಕೆ. ಭಕ್ತಾದಿಗಳು ಹಾಗೂ ಸಾರ್ವಜನಿಕರ ಭದ್ರತೆಯ ಹಿತದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲು ಸಂಬಂಧಿಸಿದವರಿಗೆ ಸೂಚಿಸಿದ್ದಾಗಿ ತಿಳಿಸಿದರು.
ಕರಗ ಮಹೋತ್ಸವಕ್ಕೆ ವ್ಯಾಪಾರಿಗಳು ಮುಂಗಡವಾಗಿ ಹಣ ಕೇಳುತ್ತಿರುವ ಹಿನ್ನಲೆಯಲ್ಲಿ 70 ಲಕ್ಷ ರೂ. ಹಣವನ್ನು ಪಾಲಿಕೆಯಿಂದ ಬಿಡುಗಡೆ ಮಾಡಬೇಕು ಎಂದು ಧರ್ಮಾರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಸಭೆಯಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಗಿರಿನಾಥ್, ಕರಗ ಉತ್ಸವಕ್ಕೆ 1 ಕೋಟಿ ರೂ. ತನಕ ಹಣ ಬಿಡುಗಡೆ ಮಾಡಲು ಅವಕಾಶವಿದೆ. ಈ ಹಣವನ್ನು 2022-23ನೇ ಆರ್ಥಿಕ ವರ್ಷ ಮುಗಿದ ಬಳಿಕವಷ್ಟೆ ಸೂಕ್ತ ಬಿಲ್ ನೀಡಿದರೆ ಏಪ್ರಿಲ್ ನಲ್ಲಿ ಕೂಡಲೇ ಹಣ ಬಿಡುಗಡೆ ಮಾಡಲಾಗುತ್ತದೆ. ಹಿಂದಿನ ಬಿಲ್ ಬಾಕಿಯಿದ್ದರೆ ಅದನ್ನು ಪರಿಶೀಲಿಸಿ ಹಣ ನೀಡಲಾಗುತ್ತದೆ ಎಂದರು.
ಈ ವೇಳೆ ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್, ಪಿ.ಎನ್. ರವೀಂದ್ರ, ಡಾ.ದೀಪಕ್.ಆರ್.ಎಲ್, ಧರ್ಮರಾಯ ಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸತೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕರಗ ಮಹೋತ್ಸವ ವೇಳಾಪಟ್ಟಿ :
ಮಾರ್ಚ್ 29ರಂದು ಕರಗ ರಥೋತ್ಸವದ ಧ್ವಜಾರೋಹಣ, 30ರಿಂದ ಏ.2ರ ತನಕ ಪ್ರತಿದಿನ ವಿಶೇಷ ಪೂಜೆ, ಏ.3ರಂದು ಆರತಿ ದೀಪಗಳು, ಏ.4ರಂದು ಹಸಿ ಕರಗ (ಸಂಪಂಗಿರಾಮನಗರ ಕೆರೆ ಅಂಗಳದಲ್ಲಿ), ಏ.5ರಂದು ಪೊಂಗಲು ಸೇವೆ, ಏ.6ರಂದು ಕರಗ ಶಕ್ತ್ಸೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾರಥೋತ್ಸವ, ಏ.7ರಂದು ದೇವಸ್ಥಾನದಲ್ಲಿ ಗಾವು ಶಾಂತಿ ಹಾಗೂ ಕೊನೆಯ ದಿನವಾದ ಏ.8ರಂದು ವಸಂತೋತ್ಸ ಹಾಗೂ ಧ್ವಜಾವರೋಹಣ ನಡೆಯಲಿದೆ.