ಬೆಂಗಳೂರು, ಮಾ.21 www.bengaluruwire.ocm : ಜಲಮೂಲಗಳ ಸಂರಕ್ಷಣೆ ದೃಷ್ಟಿಯಿಂದ ಮಹತ್ವವಾಗಿರುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯವು ಪಟ್ಟಿ ಮಾಡಿರುವ ದೇಶದ 75 ಪಾರಂಪರಿಕ ಜಲ ಮೂಲಗಳ ಪಟ್ಟಿಯಲ್ಲಿ ಬೆಂಗಳೂರಿನ ಹೆಸರಘಟ್ಟ ಕೆರೆಯೂ ಸೇರಿದಂತೆ ಕರ್ನಾಟಕದ 5 ಜಲಕಾಯಗಳು ಸ್ಥಾನ ಪಡೆದುಕೊಂಡಿದೆ.
ಶತಮಾನಗಳಷ್ಟು ಇತಿಹಾಸ ಹೊಂದಿರುವ ದೇಶದ 29 ರಾಜ್ಯಗಳಲ್ಲಿನ ಜಲ ತಾಣಗಳನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಜಲಶಕ್ತಿ ಸಚಿವಾಲಯ 75ನೇ ಸ್ವಾತಂತ್ರ್ಯ ಮಹೋತ್ಸವದ ಸವಿ ನೆನಪಿಗಾಗಿ ದೇಶದಲ್ಲಿನ 75 ಜಲ ಪರಂಪರೆಯ ರಚನೆಯನ್ನು (Water Heritage Sites) ಗುರುತಿಸಲು ಸಮಿತಿ ರಚಿಸಿತ್ತು. ಈ ಸಮಿತಿಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಏಜೆನ್ಸಿಗಳು, ಎನ್‌ಜಿಒಗಳು ಮತ್ತು ಸಾರ್ವಜನಿಕರ ಮೂಲಕ ಒಟ್ಟು 421 ನಾಮನಿರ್ದೇಶನಗಳನ್ನು ಸ್ವೀಕರಿಸಿತ್ತು. ತದನಂತರ ಸಮಿತಿಯು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ 75 ಜಲ ತಾಣಗಳನ್ನು ಅಧಿಕೃತಾಗಿ ಪಾರಂಪರಿಕ ಜಲ ಮೂಲಗಳೆಂದು ಘೋಷಿಸಿದೆ. ರಾಜಸ್ಥಾನ, ತಮಿಳುನಾಡಿನ ತಲಾ 7, ಮಧ್ಯಪ್ರದೇಶದ 6 ಜಲಮೂಲಗಳು, ಕರ್ನಾಟಕ ಹಾಗೂ ಗುಜರಾತಿನ ತಲಾ 7 ಜಲತಾಣಗಳು ಸೇರಿದಂತೆ 29 ರಾಜ್ಯಗಳ 75 ಪಾರಂಪರಿಕ ಜಲತಾಣಗಳು ಈ ಪಟ್ಟಿಯಲ್ಲಿ ಸ್ಥಾನಪಡೆದಿದೆ.
ಇದುವರೆಗೆ ದೇಶದಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆ (ASI) ಅಡಿಯಲ್ಲಿ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ 1958ರ ಕಾಯಿದೆ ಅಡಿಯಲ್ಲಿ “ಜಲ ಪರಂಪರೆಯ ತಾಣ” ಎಂದು ಘೋಷಿಸಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಕೇಂದ್ರ ಜಲಶಕ್ತಿ ಸಚಿವಾಲಯವು ಜಲ ಪರಂಪರೆಯ ತಾಣಗಳನ್ನು ಗುರ್ತಿಸಲೆಂದೇ ಸಮಿತಿ ರಚಿಸಿ ಈ ಕಾರ್ಯಕ್ಕೆ ಮುಂದಾಗಿತ್ತು. ಈಗಾಗಲೇ ಜಲಸಂಪನ್ಮೂಲ ಮಾಹಿತಿ ವ್ಯವಸ್ಥೆ ಪೋರ್ಟಲ್ (WRIS Portal) ಅಡಿಯಲ್ಲಿ “ಜಲ್-ಇತಿಹಾಸ್” ಉಪ-ಪೋರ್ಟಲ್ ಅನ್ನು ತೆರೆಯಲಾಗಿದ್ದು, ಅದರಲ್ಲಿ ದೇಶದ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿನ 75 ಪಾರಂಪರಿಕ ಜಲತಾಣಗಳ ಇತಿಹಾಸ, ಛಾಯಚಿತ್ರ ಹಾಗೂ ವಿಡಿಯೋಗಳನ್ನು ಅಪಲೋಡ್ ಮಾಡಲಾಗಿದೆ.
ಹೆಸರಘಟ್ಟದಲ್ಲಿನ 1500 ಕೆರೆ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ನೂರಾರು ಎಕರೆ ಹುಲ್ಲುಗಾವಲು ಪ್ರದೇಶವನ್ನು ಸಂರಕ್ಷಿತ ಪ್ರದೇಶವನ್ನು ಘೋಷಿಸುವಂತೆ ಸಾರ್ವಜನಿಕ ವಲಯದ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರದಿಂದ ಹೆಸರಘಟ್ಟ ಕರೆಯನ್ನು ಪಾರಂಪರಿಕ ಜಾಲ ತಾಣದ ಪಟ್ಟಿಗೆ ಸೇರಿಸಿರುವುದರಿಂದ ಹೆಸರಘಟ್ಟ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕೆಂಬ ಹೋರಾಟಕ್ಕೆ ಬಲ ಬಂದಂತಾಗಿದೆ.
ಕರ್ನಾಟದಲ್ಲಿನ ಜಲ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ 5 ಜಲ ಮೂಲಗಳ ಮಾಹಿತಿ ಈ ಕೆಳಕಂಡಂತಿದೆ :
1.ಹೆಸರಘಟ್ಟ ಕೆರೆ (ಬೆಂಗಳೂರು)
1500 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿರವ ಹೆಸರಘಟ್ಟ ಕೆರೆ ಜಲ ಪಾರಂಪರಿಕ ಪಟ್ಟಿಗೆ ಸೇರಿದೆ. ಜಲ ಶಕ್ತಿ ಸಚಿವಾಲಯದ ಪ್ರಕಾರ, ಶಾಸನಗಳ ಆಧಾರದ ಮೇಲೆ, ಹೆಸರಘಟ್ಟ ಕೆರೆ 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಬೆಂಗಳೂರಿನ ಹೆಸರಘಟ್ಟದಲ್ಲಿದೆ. ಅರ್ಕಾವತಿ ನದಿಗೆ ಸಂಪರ್ಕವಿರುವ ಈ ಹೆಸರಘಟ್ಟ ಕೆರೆಯನ್ನು 1894ರಲ್ಲಿ ಚಾಮರಾಜೇಂದ್ರ ನೀರು ಯೋಜನೆಯಡಿ ವಿಸ್ತರಿಸಲಾಗಿತ್ತು. ಇದರಿಂದ ಬೆಂಗಳೂರಿಗೆ ಆಗ 3 ವರ್ಷಗಳ ಕಾಲ ನೀರು ಪೂರೈಸುವಂತೆ ರೂಪಿಸಲಾಗಿತ್ತು. ಸದ್ಯ ಹೆಸರಘಟ್ಟ ಕೆರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸುಪರ್ದಿಯಲ್ಲಿದೆ.
2. ಚೋಳನಕುಂಟೆ ಕೆರೆ (ಕೋಲಾರ)
ಚೋಳನಕುಂಟೆ ಕೆರೆಯನ್ನು ಕ್ರಿಸ್ತಶಕ 11ನೇ ಶತಮಾನದಲ್ಲಿ ಚೋಳರು ನಿರ್ಮಿಸಿದ್ದಾರೆ. ಈ ಕೆರೆ ಕೂಡ ಜಲ ಪಾರಂಪರಿಕ ತಾಣ ಪಟ್ಟಿಗೆ ಸೇರಿದೆ. ಈ ಕೆರೆಯು ದೇಶದ ಅತಿ ಹಳೆಯ ಮಳೆ ನೀರು ಸಂರಕ್ಷಣಾ ವಿಧಾನಗಳಲ್ಲಿ ರೂಪಿಸಿದ ಕರೆಯಾಗಿದೆ. ವಿಶ್ವಬ್ಯಾಂಕ್ ಜಲಸಂರ್ವಧನೆ ಯೋಜನೆಯಡಿಯಲ್ಲಿ ಈ ಕೆರೆಯನ್ನು ಜೀರ್ಣೋದ್ಧಾರ ಮಾಡಲಾಗಿತ್ತು.
3. ಹೊಸ ಮದಗಾದ ಕೆರೆ (ಚಿಕ್ಕಮಗಳೂರು)
ಚಿಕ್ಕಮಗಳೂರು ಜಿಲ್ಲೆಯ ಮದಗಾದ ಕೆರೆ ಮತ್ತೊಂದು ಜಲ ಪಾರಂಪರಿಕ ತಾಣವಾಗಿದೆ. ಈ ಕೆರೆಗೆ ಬಾಬಾಬುಡನ್ ಗಿರಿ ಬೆಟ್ಟಗಳಿಂದ ನೀರು ಹರಿದು ಬಂದು ಶೇಖರಣೆಯಾಗುತ್ತದೆ. ಇದರಿಂದ ಕೆರೆ ಸದಾ ತುಂಬಿರುತ್ತದೆ. ಈ ಕೆರೆಯನ್ನು 500 ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿತ್ತು ಎನ್ನುತ್ತದೆ ಇತಿಹಾಸ.
4. ಮೆಟ್ಟಿಲುಬಾವಿ (ಬಾಗಲಕೋಟೆ)
ಬಾಗಲಕೋಟೆ ಜಿಲ್ಲೆಯಲ್ಲಿರವ ಐಹೊಳೆಯಲ್ಲಿರುವ ದೊಡ್ಡ ದುರ್ಗಾ ದೇವಾಲಯದ ಆವರಣದಲ್ಲಿರುವ ಮೆಟ್ಟಲುಬಾವಿ, ಜಲ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದೆ. ದೇವಾಲಯವನ್ನು ಈಗಾಗಲೇ ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಿಸುತ್ತಿದೆ. ವಾರ್ಷಿಕವಾಗಿ ಲಕ್ಷಾಂತರ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ಕೊಡುತ್ತಾರೆ.
5. ವಿಜಯನಗರ ಕಾಲುವೆ
ತುಂಗಭದ್ರಾ ನದಿಗೆ ನಿರ್ಮಿಸಲಾಗಿರುವ ವಿಜಯನಗರ ಕಾಲುವೆ ಜಲ ಪಾರಂಪರಿಕ ತಾಣ ಪಟ್ಟಿಗೆ ಸೇರಿದೆ. 215 ಕಿಮೀ ಉದ್ದ ಕಾಲುವೆ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ನೀರು ಸರಬರಾಜು ಮಾಡುತ್ತದೆ. ಈ ಕಾಲುವೆಯಿಂದ 16,242 ಹೆಕ್ಟರ್ ಭೂ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತದೆ. ಸುಮಾರು 400 ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ರಾಜರು ಈ ಕಾಲುವೆಯನ್ನು ನಿರ್ಮಾಣ ಮಾಡಿದ್ದಾರೆ. ಒಟ್ಟು 19 ವಿಜಯನಗರ ಕಾಲುವೆಗಳು ಇದ್ದು, ಆ ಪೈಕಿ 18 ಕರ್ನಾಟಕದಲ್ಲಿದ್ದರೆ, ಒಂದು ಕಾಲುವೆ ಆಂಧ್ರಪ್ರದೇಶದಲ್ಲಿದೆ.
ಹೆಸರುಘಟ್ಟ ಸಂರಕ್ಷಿತ ಪ್ರದೇಶದ ಘೋಷಣೆಗಿದು ಸಕಾಲ :
“ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ 75 ಪಾರಂಪರಿಕ ಜಲತಾಣಗಳಲ್ಲಿ ಹೆಸರಘಟ್ಟ ಕೆರೆಯೂ ಸೇರಿದಂತೆ ರಾಜ್ಯದ 5 ಜಲಮೂಲಗಳು ಸ್ಥಾನ ಪಡೆದಿರುವುದು ನಿಜಕ್ಕೂ ಸಂತೋಷದ ವಿಷಯ. ಹೆಸರಘಟ್ಟ ಪ್ರದೇಶ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ನಿಟ್ಟಿನಲ್ಲಿ ಹೆಸರಘಟ್ಟ ಕೆರೆಯನ್ನು ಪಾರಂಪರಿಕ ತಾಣವೆಂದು ಕೇಂದ್ರ ಸರ್ಕಾರ ಅಧಿಕೃತ ಪಟ್ಟಿಗೆ ಸೇರಿಸಿರುವುದು, ಇಲ್ಲಿನ ಜೀವವೈವಿಧ್ಯತೆ ಸಂರಕ್ಷಣೆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಐತಿಹಾಸಿಕ ಕೆರೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಮುಂದಿನ ವನ್ಯಜೀವಿ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಈ ಸ್ಥಳಕ್ಕೆ ಗೌರವ ತಂದು ಕೊಡಲಿದೆ. ಅಲ್ಲದೆ ಇಲ್ಲಿನ ಪ್ರಾಣಿ, ಪಕ್ಷಿ ಸಂರಕ್ಷಣೆಗೂ ರಾಜ್ಯ ಸರ್ಕಾರ ಒತ್ತು ಕೊಟ್ಟಂತಾಗುತ್ತದೆ”
– ವಿಜಯ್ ನಿಶಾಂತ್, ಮರವೈದ್ಯ ಹಾಗೂ ಪರಿಸರವಾದಿ