ಬೆಂಗಳೂರು, ಮಾ.20 www.bengaluruwire.com : ಬಹುಕೋಟಿ ಹಗರಣದ ಇಂಜಾಜ್ ಇಂಟರ್ ನ್ಯಾಶನಲ್ ಗೆ ಸೇರಿದ 20.16 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (Enforcement Directorate- ED) ಜಪ್ತಿ ಮಾಡಿದೆ.
ಮಿಸ್ಬಾಹುದ್ದೀನ್ ಎಸ್. ಮತ್ತು ಸುಹೇಲ್ ಅಹ್ಮದ್ ಷರೀಫ್ ನೇತೃತ್ವದ ಇಂಜಾಜ್ ಇಂಟರ್ ನ್ಯಾಶನಲ್ ಹಾಗೂ ಸಂಬಂಧಿತ ಸಂಸ್ಥೆಗೆ ಸೇರಿದ ಸ್ಥಿರಾಸ್ಥಿಗಳನ್ನು ಸಂಸ್ಥೆಯು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಇ.ಡಿ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಜಾಜ್ ಇಂಟರ್ ನ್ಯಾಶನಲ್ ಹಾಗೂ ಅದರ ಪಾಲುದಾರ ಕಂಪನಿಗಳು 2015 ರಿಂದ 2017ರ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಹೂಡಿಕೆದಾರರಿಂದ ಜನರಿಗೆ ದುಪ್ಪಟ್ಟು ಆದಾಯ ನೀಡುವ ಆಮೀಷವೊಡ್ಡಿ ಲಕ್ಷಾಂತರ ರೂಪಾಯಿ ಹಣವನ್ನು ಸಂಗ್ರಹಿಸಿ ಹೂಡಿಕೆದಾರರಿಗೆ ವಂಚಿಸಿದ್ದರು. ಈ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಿರಲಿಲ್ಲ. ಬಳಿಕ ಈ ಪ್ರಕರಣ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಯಿತು. ಬಳಿಕ ಇದೇ ಆಧಾರದ ಮೇಲೆ ಇಡಿ ತನಿಖಾ ಸಂಸ್ಥೆಯು, ಐಪಿಸಿ ಕಾಯಿದೆ, ಬಹುಮಾನದ ಚಿಟ್ ಹಾಗೂ ಹಣ ವರ್ಗಾವಣೆ ತಡೆ ಕಾಯ್ದೆ, ಚಿಟ್ ಫಂಡ್ ಗಳ ಕಾಯ್ದೆ ಸೇರಿದಂತೆ ವಿವಿಧ ಕಾನೂನಿನ ಅಡಿಯಲ್ಲಿ ತನಿಖೆಯನ್ನು ನಡೆಸಿ ಮಿಸ್ಬಾಹುದ್ದೀನ್ ಎಸ್. ಮತ್ತು ಸುಹೇಲ್ ಅಹ್ಮದ್ ಷರೀಫ್ ನೇತೃತ್ವದ ಇಂಜಾಜ್ ಇಂಟರ್ ನ್ಯಾಶನಲ್ ಹಾಗೂ ಸಂಬಂಧಿತ ಸಂಸ್ಥೆಯು ಒಟ್ಟು 80.99 ಕೋಟಿ ರೂ. ಹಗರಣ ನಡೆಸಿರುವುದನ್ನು ಪತ್ತೆ ಹಚ್ಚಿತ್ತು.
ವಂಚನೆಯ ಉದ್ದೇಶದಿಂದ ಇಂಜಾಜ್ ಇಂಟರ್ನ್ಯಾಶನಲ್ ಮತ್ತು ಅದರ ಪಾಲುದಾರರು, ನೂರಾರು ಜನರಿಂದ ಸಂಗ್ರಹಿಸಿದ್ದ ಹಣವನ್ನು ಸಂಸ್ಥೆಗೆ ಸೇರಿದ ಬ್ಯಾಂಕ್ ಖಾತೆಯಿಂದ ಹಣವನ್ನು ತಮ್ಮ ಇತರ ವ್ಯವಹಾರಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವುದನ್ನು ಜಾರಿ ನಿರ್ದೇಶನಾಲಯ ತನಿಖೆಯಿಂದ ಪತ್ತೆ ಮಾಡಿತ್ತು. ಹೂಡಿಕೆದಾರರಿಂದ ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ವಸತಿ ಫ್ಲಾಟ್, ನಿವೇಶ ಹಾಗೂ ಕೃಷಿಯೇತರ ಜಮೀನುಗಳನ್ನು ಖರೀದಿಸಿದ್ದರು.