ಉಡುಪಿ, ಮಾ.20 www.bengaluruwire.com : ಕರಾವಳಿಯಲ್ಲಿನ ಬ್ರಹ್ಮಾವರ ತಾಲ್ಲೂಕಿನ ಬಾರಕೂರಿನ ಪುರಾಣ ಕಾಲದ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ ಇದೇ ತಿಂಗಳ ಮಾ.29 ರಂದು ನಡೆಯಲಿದೆ. ಇದಕ್ಕು ಮುನ್ನ, ಶ್ರೀ ದೇವಸ್ಥಾನಕ್ಕೆ ನೂತನ ರಜತ ಪಲ್ಲಕ್ಕಿ ಸಮರ್ಪಣೆ ಮಾಡಲಾಯಿತು.
ದೇವಾಲಯಗಳ ಪಟ್ಟಣ ಎಂದೇ ಕರೆಯಲ್ಪಡುವ ಬಾರಕೂರು ಸಂಸ್ಥಾನದಲ್ಲಿ 365 ದೇವಸ್ಥಾನಗಳಿದ್ದು ವಿಶಿಷ್ಟವಾದ ವಾಸ್ತುಶಿಲ್ಪವನ್ನು ಹೊಂದಿದ್ದು, ವರ್ಷದ ಎಲ್ಲ ದಿನವೂ ಇಲ್ಲಿ ಪೂಜೆಯಾಗುತ್ತಿತ್ತು. ಬಾರ್ಕೂರಿನ ದೇವಾಲಯಗಳು ಇಳಿಜಾರಾದ ಟೆರಾಕೋಟಾ ಹೆಂಚಿನ ಛಾವಣಿಗಳು ಕೇರಳದ ದೇವಾಲಯಗಳನ್ನು ಹೋಲುತ್ತವೆ, ಆದರೆ ಅವುಗಳು ಗೋಪುರಗಳನ್ನು ಹೊಂದಿಲ್ಲ, ಇದು ದ್ರಾವಿಡ ಶೈಲಿಯ ದಕ್ಷಿಣ ಭಾರತದ ದೇವಾಲಯಗಳ ಸಾಮಾನ್ಯ ಲಕ್ಷಣವಾಗಿದೆ. ಇಂತಹ ಊರಿನಲ್ಲಿ ಪುರಾಣ ಕಾಲದ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಪ್ರಮುಖವಾದುದು. ಇಲ್ಲಿನ ಬ್ರಹ್ಮರಥೋತ್ಸವವನ್ನು ಬಾರಕೂರಿನ ಊರ ಹಬ್ಬವಾಗಿ ಸ್ಥಳೀಯರು ಆಚರಿಸುತ್ತಾರೆ.
ಇದೇ ಪ್ರಥಮ ಬಾರಿಗೆ ಬಾರ್ಕೂರಿನ ಹಿರಿಯ ಪುರೋಹಿತರಾದ ವೇದಮೂರ್ತಿ ಬಿ.ಹೃಷಿಕೇಶ ಬಾಯರಿ ಹಾಗೂ ಅವರ ಮನೆಯವರು ಇತಿಹಾಸ ಪ್ರಸಿದ್ಧ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮಾ.19ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಬೆಳ್ಳಿ ಪಲ್ಲಕ್ಕಿಯನ್ನು ಸೇವಾ ರೂಪದಲ್ಲಿ ಮಾ.19ರಂದು ಸಮರ್ಪಿಸಿದ್ದಾರೆ.
ದೇವಸ್ಥಾನದ ಸ್ಥಳ ಪುರಾಣವೇನು? :
ಪುರಾಣಕಾಲದಲ್ಲಿ ಮಾರ್ಕಾಂಡೇಯ ಮುನಿಗಳು ಭೂ ಸಂಚಾರದಲ್ಲಿರುವಾಗ ಶಿವನ ತಪಸ್ಸಿಗೆ ಯೋಗ್ಯ ಸ್ಥಳದ ಅನ್ವೇಷಣೆಯಲ್ಲಿರುವಾಗ ಉತ್ತರಗಾಮಿನಿ ಸೀತಾ ನದಿಯ ತಟ ಬಾರಕನ್ಯಾಪರ ಪ್ರಶಸ್ತ ಸ್ಥಳ ಎಂದು ಅಶರೀರವಾಣಿ ಕೇಳಿಬಂತು. ಅದರಂತೆ ಈಗಿನ ಈ ಬಾರಕೂರಿನಲ್ಲಿ ತಪಸ್ಸನ್ನು ಮಾಡಿ ಈಶ್ವರನನ್ನು ಭೂಮಿಗೆ ಬರುವಂತೆ ಮಾಡಿದರು.
ಮಾರ್ಕಾಂಡೇಯರಿಗೆ ಒಲಿದ ಶಿವ ಶ್ರೀ ಪಂಚಲಿಂಗೇಶ್ವರನಾಗಿ ಪ್ರತಿಷ್ಠಿತನಾದನೆಂದು ಪ್ರತೀತಿ ಇದೆ. ಪಾರ್ವತಿ ಸಹಿತನಾದ ಶ್ರೀ ಶಿವನು ಇಲ್ಲಿ ಒಂದೇ ಪಾಣಿ ಪೀಠದಲ್ಲಿ 5 ಲಿಂಗಗಳಲ್ಲಿ ಅವಿರ್ಭೂತನಾಗಿದ್ದಾನೆ. 1. ವಾಮದೇವ 2. ಸದ್ಯೋಜಾತ 3. ಈಶಾನಾ 4. ತತ್ಪುರುಷ 5. ಅಘೋರ ಎಂಬ ಐದು ಹೆಸರುಗಳಿಂದ ಪ್ರತಿಷ್ಠಿತನಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ.
ಪುರಾಣ ಕಾಲದಿಂದ ಕಲಿಯುಗದವರೆಗೆ ಇಲ್ಲಿ ಆಳ್ವಿಕೆ ಮಾಡಿದ ಹಲವು ಚಕ್ರವರ್ತಿಗಳು, ಮಹಾರಾಜರು ಬಾರಕೂರನ್ನು ರಾಜಧಾನಿಯಾಗಿ ಮಾಡಿಕೊಂಡು ಪಂಚಲಿಂಗೇಶ್ವರನನ್ನು ಸಂಸ್ಥಾನದ ಪ್ರಮುಖ ದೇವರಾಗಿ ಸೀಮೆಯ ಒಡೆಯನಾಗಿ ಪೂಜೆ ಮಾಡುತ್ತಾ ಬಂದರು. ದ್ವಾಪರಾಯುಗದಲ್ಲಿ ಧರ್ಮರಾಯನು ಕೂಡಾ ಪೂಜಿಸಿದ ಬಗ್ಗೆ ಕಥೆಗಳಲ್ಲಿ ಉಲ್ಲೇಖಗಳಿವೆ. ತುಳುನಾಡಿನ ಅಳಿಯಕಟ್ಟಳೆ ಪರಂಪರೆಯ ಕೊನೆಯಲ್ಲಿ ವಿಜಯನಗರದ ಅರಸರು, ಅಳುಪರು, ಪಂಚಲಿಂಗೇಶ್ವರನನ್ನು ಆರಾಧಿಸಿ ರಾಜ್ಯಭಾರ ಮಾಡಿದರು.
ಸುಮಾರು 18 ಸೀಮೆಯ ಜನರ ಆರಾಧ್ಯ ದೇವರು :
ಸುಮಾರು 18 ಸೀಮೆ (ಹಳ್ಳಿಯ) ಜನರ ಆರಾಧ್ಯ ದೇವರಾದ ಶ್ರೀ ಪಂಚಲಿಂಗೇಶ್ವರ ಸ್ವಾಮಿಯ ಉತ್ಸವದ ದಿನದಂದು ಬಿಲ್ಲ ಸೀಮೆಯಿಂದ-ವಡೇರ ಹೋಬಳಿ ಬೈಂದೂರಿನವರೆಗೆ ಸಾಮಂತರನ್ನು ಪ್ರಸಾದ ಸ್ವೀಕಾರಕ್ಕಾಗಿ ಆಮಂತ್ರಿಸುವ ಪದ್ಧತಿ ಇಂದು ಕೂಡಾ ಚಾಲ್ತಿಯಲ್ಲಿದೆ. ಕಣ್ಣೂರು, ಹೊಸಾಳ, ಹನೇಹಳ್ಳಿ, ಹೇರಾಡಿ, ಪಾಂಡೇಶ್ವರ, ಹಂದಾಡಿ, ಐರೋಡಿ, ಬಾಳೇಕುದ್ರು, ಚಾಂತಾರು, ಯಡ್ತಾಡಿ, ಕಾವಡಿ, ಕೋಡಿ- ಕನ್ಯಾನ, ಕುಮ್ರಗೋಡು ಯಡಬೆಟ್ಟು-ಕಚ್ಚೂರು ಹೆಬ್ರಿ-ಪೆರ್ಡೂರು ಶಿವಪುರ-ಸೂರಾಲು, ಅಲ್ಲಾರು ಮುಂತಾದ ಅನುಪಾಸಿನ ಹಳ್ಳಿಗಳಿಂದ (ಪತಿ ಮನೆಯಿಂದ ಕಾಣಿಕೆ ನೀಡಿ) ಶಿವಾನುಗ್ರಹಕ್ಕೆ ಪಾತ್ರರಾಗುತ್ತಿದ್ದರು.
ಯಾವೆಲ್ಲ ರೀತಿಯ ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ?:
ಅಭಿಷೇಕ ಪ್ರಿಯನಾದ ಈಶ್ವರನಿಗೆ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿನಿತ್ಯ ತ್ರಿಕಾಲಪೂಜೆ ಆಚರಣೆ ಇದ್ದು, ಯುಗಾದಿ, ಸಿಂಹ ಮಾಸದಲ್ಲಿ ಸೋಣೆ ಆರತಿ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಧನುರ್ಮಾಸದಲ್ಲಿ ಧನು ಪೂಜೆ, ಮಕರ ಸಂಕ್ರಾಂತಿ, ಶಿವರಾತ್ರಿ ಹಾಗೂ ವಾರ್ಷಿಕ ರಥೋತ್ಸವ ಪ್ರಮುಖ ಉತ್ಸವವಾಗಿರುತ್ತದೆ. ರುದಾಭಿಷೇಕ, ಬಿಲ್ವಾರ್ಚನೆ,
ಏಕಾದಶರುದ್ರ, ಕಿರಿರಂಗ ಪೂಜೆ, ಓಲಿರಂಗ ಪೂಜೆ, ಶತರುದ್ರಾಭಿಷೇಕ ಪ್ರಮುಖ ಸೇವೆಯಾಗಿರುತ್ತದೆ.
ಗರ್ಭಗುಡಿಯ ಒಳಗೆ 5 ಲಿಂಗಗಳಿದ್ದರೂ ಭಕ್ತರಿಗೆ 3 ಲಿಂಗಗಳು ಮಾತ್ರ ಗೋಚರಿಸುತ್ತವೆ. ಗರ್ಭಗುಡಿಯ ಹೊರ ಭಾಗದಲ್ಲಿ ಶ್ರೀ ಗಣಪತಿ ಹಾಗೂ ಲಕ್ಷ್ಮೀನಾರಾಯಣ ಸ್ವಾಮಿಯ ವಿಗ್ರಹಗಳದ್ದು, ಈಶ್ವರನ ಜತೆಯಲ್ಲಿ ವಿಷ್ಣು ಕೂಡಾ ಬಂದು ನೆಲೆಸಿದನೆಂಬ ಪುರಾಣ ಕಥೆ ಇದೆ.
ಬಾರ್ಕೂರು ಅಲುಪ ಸಾಮ್ರಾಜ್ಯದ ಪ್ರಾಚೀನ ರಾಜಧಾನಿಯಾಗಿತ್ತು. ಇದನ್ನು ಬಾರಹಕನ್ಯಾಪುರ ಎಂದು ಕರೆಯಲಾಗುತ್ತಿತ್ತು ಮತ್ತು ನಂತರ ಬರಕ್ಕನೂರು ಎಂದು ಕರೆಯಲಾಯಿತು. ಇಲ್ಲಿನ ಅರಸರನ್ನು ತುಳುವ ಅರಸರು ಎನ್ನಲಾಗುತ್ತಿತ್ತು. ಅವರು ತುಳು ಭಾಷೆಯನ್ನು ಮಾತನಾಡುತ್ತಿದ್ದರು. ಬಾರ್ಕೂರಿನಲ್ಲಿ ಕಂಡುಬರುವ ಅನೇಕ ಪ್ರಾಚೀನ ಶಾಸನಗಳು ತುಳು ಭಾಷೆಯಲ್ಲಿವೆ. ಇವು ತುಳುನಾಡಿನ ಇತಿಹಾಸದ ಅವಿಭಾಜ್ಯ ಅಂಗಗಳಾಗಿವೆ.