ನಾಗ್ಪುರ, ಮಾ.19 www.bengaluruwire.com : “ಸೃಜನಶೀಲತೆಯ ಹೆಸರಿನಲ್ಲಿ ನಿಂದನೀಯ ಭಾಷೆಯನ್ನು ಸಹಿಸುವುದಿಲ್ಲ. ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚುತ್ತಿರುವ ನಿಂದನೀಯ ಮತ್ತು ಅಶ್ಲೀಲ ವಿಷಯಗಳ ದೂರುಗಳ ಬಗ್ಗೆ ಸರ್ಕಾರವು ಗಂಭೀರವಾಗಿದೆ” ಎಂದು ಕೇಂದ್ರ ಮಾಹಿತಿ ಪ್ರಸಾರ ಮತ್ತು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರಾದ ಅನುರಾಗ್ ಠಾಕೂರ್ ಹೇಳಿದ್ದಾರೆ.
ಭಾನುವಾರ ಅವರು ಇಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಒಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ನಿಂದನೀಯ ಭಾಷೆ ಹಾಗೂ ಅಶ್ಲೀಲ ವಿಷಯಗಳ ದೂರುಗಳ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ನಿಯಮಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಅಗತ್ಯವಿದ್ದರೆ, ಅದನ್ನು ಪರಿಗಣಿಸಲು ಸಚಿವಾಲಯ ಸಿದ್ಧವಾಗಿದೆ. ಈ ವೇದಿಕೆಗಳಿಗೆ ಸೃಜನಶೀಲತೆಗೆ ಸ್ವಾತಂತ್ರ್ಯ ನೀಡಲಾಯಿತು, ಅಶ್ಲೀಲತೆಯಲ್ಲ. ಈ ಬಗ್ಗೆ ಏನೇ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದರೂ ಸರ್ಕಾರ ಅದರಿಂದ ಹಿಂದೆ ಸರಿಯುವುದಿಲ್ಲಎಂದಿದ್ದಾರೆ.
“ಇದುವರೆಗಿನ ಪ್ರಕ್ರಿಯೆ ಎಂದರೆ ನಿರ್ಮಾಪಕರು ಸ್ವೀಕರಿಸಿದ ದೂರುಗಳನ್ನು ಮೊದಲ ಹಂತದಲ್ಲಿ ಪರಿಹರಿಸಬೇಕು. ಶೇ.90 ರಿಂದ 92 ರಷ್ಟು ದೂರುಗಳನ್ನು ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಅವರು ಪರಿಹರಿಸುತ್ತಾರೆ. ದೂರು ಪರಿಹಾರದ ಮುಂದಿನ ಹಂತವು ಅವರ ಸಂಘದ ಮಟ್ಟದಲ್ಲಿದೆ, ಅಲ್ಲಿ ಹೆಚ್ಚಿನ ದೂರುಗಳನ್ನು ಪರಿಹರಿಸಲಾಗುತ್ತದೆ. ಕೊನೆಯ ಹಂತದಲ್ಲಿ ಅದು ಸರ್ಕಾರದ ಮಟ್ಟಕ್ಕೆ ಬರುತ್ತದೆ, ಅಲ್ಲಿ ನಿಯಮಗಳ ಪ್ರಕಾರ ಇಲಾಖಾ ಸಮಿತಿ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಕಳೆದ ಕೆಲ ದಿನಗಳಿಂದ ಕೆಲವೆಡೆ ದೂರುಗಳು ಹೆಚ್ಚಾಗುತ್ತಿದ್ದು, ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ನಿಯಮಗಳಲ್ಲಿ ಬದಲಾವಣೆ ಮಾಡುವ ಅಗತ್ಯವಿದ್ದಲ್ಲಿ ನಾವು ಅದನ್ನು ಗಂಭೀರವಾಗಿ ಪರಿಗಣಿಸಲು ಸಿದ್ಧರಿದ್ದೇವೆ.