ಬೆಂಗಳೂರು, ಮಾ.18 www.bengaluruwire.com : ಗೊಬ್ಬು ನಾರುತ್ತಿದ್ದ, ಮೂಗಿ ಹಿಡಿದುಕೊಂಡೇ ಸಾಗಬೇಕಿದ್ದ ಆ ಸ್ಥಳವೀಗ ಸಂಪೂರ್ಣ ಬದಲಾಗಿದೆ. ಹೌದು ಶಿವಾಜಿನಗರದ ಐತಿಹಾಸಿಕ ಚಾಂದಿನಿ ಚೌಕ್ ಜಾಗವೀಗ ನಗರದ ಪ್ರವಾಸಿ ಹಾಗೂ ಜನರು ಒಂದೆಡೆ ಸೇರುವ ತಾಣವಾಗಿ ಬದಲಾಗಿದೆ. ಏಳು ಕೋಟಿ ರೂ. ವೆಚ್ಚದಲ್ಲಿ ಐತಿಹಾಸಿಕ ಸ್ಥಳವನ್ನು ನವೀಕರಿಸಿದ್ದು ಇದೇ ಸ್ಥಳದಲ್ಲಿ ಶನಿವಾರ ಸಂಜೆ ಶಿವಾಜಿನಗರ ಹಬ್ಬ ನಡೆಯುತ್ತಿದೆ.
ಶಿವಾಜಿನಗರದ ಹೃದಯಭಾಗದಲ್ಲಿರುವ 200 ವರ್ಷಗಳಷ್ಟು ಹಳೆಯದಾದ ಚಾಂದಿನಿ ಚೌಕ್ ಶಿಥಿಲಾವಸ್ಥೆ ತಲುಪಿತ್ತು. 100 ವರ್ಷಗಳಷ್ಟು ಹಳೆಯದಾದ ರಸೆಲ್ ಮಾರ್ಕೆಟ್, 200 ವರ್ಷಗಳಷ್ಟು ಹಳೆಯದಾದ ಸೇಂಟ್ ಮೇರಿಸ್ ಬೆಸಿಲಿಕಾ ಮತ್ತು 250 ವರ್ಷಗಳ ಹಿಂದಿನ ಬಾವಿ ಕಸದಿಂದ ತುಂಬಿಹೋಗಿತ್ತು. ಅಲ್ಲಿ ಪ್ರತಿನಿತ್ಯ ಜನರು ಮೂಗು ಹಿಡಿದೇ ನಡೆದು ಹೋಗುವಷ್ಟು ಕಸಗಳಿಂದ ತುಂಬಿ ಹೋಗಿತ್ತು. ಮೂಲ ಸೌಕರ್ಯ ಕೊರತೆ ಎದುರಿಸುತ್ತಿದ್ದುದ್ದರಿಂದ ಇವುಗಳ ಪುನಶ್ಚೇತನ ಕಾರ್ಯ ಅಗತ್ಯವಿತ್ತು.
ಅವುಗಳ್ನು ಸ್ಮಾರ್ಟ್ ಸಿಟಿ ಯೋಜನೆಯಡಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಬಿಬಿಎಂಪಿ ಅನುದಾನದಡಿ ಮೂಲಕ ಸುಮಾರು 7 ಕೋಟಿ ಖರ್ಚು ಮಾಡಲಾಗಿದ್ದು, ಚಾಂದಿನಿ ಚೌಕ್ ಈಗ ಸಂಪೂರ್ಣ ಬದಲಾಗಿ ಹೊಸತನದೊಂದಿಗೆ ಜನರನ್ನು ಹಾಗೂ ಪ್ರವಾಸಿಗರನ್ನು ಕೈಬೀಸಿ ಕರೆಯುವಷ್ಟು ಸುಸಜ್ಜಿತವಾಗಿ ಬದಲಾಗಿದೆ. 120 ಮೀಟರ್ ಉದ್ದ ಹಾಗೂ 13 ಮೀಟರ್ ಅಗಲದ ಜಾಗದಲ್ಲಿ 8 ಪ್ಲಾಜಾಗಳನ್ನು ನಿರ್ಮಿಸಲಾಗಿದೆ. ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಎದುರಿನ ಮೊದಲ ಪ್ಲಾಜಾದಲ್ಲಿ ಎರಡು ಕಾರಂಜಿಗಳನ್ನು ನಿರ್ಮಿಸಲಾಗಿದೆ.
ಹೊಸದಾಗಿ ವಿನ್ಯಾಸಗೊಳಿಸಲಾದ ಪ್ಲಾಜಾವು ಹಚ್ಚ ಹಸಿರಿನಿಂದ ಕೂಡಿದೆ, ಕಾರಂಜಿಗಳು, ಆಸನ ವ್ಯವಸ್ಥೆಗಳು, ಹೊಸ ಶೌಚಾಲಯಗಳು, ವಾಹನ ನಿಲುಗಡೆ ಪ್ರದೇಶ ಮತ್ತು ಅಲಂಕಾರಿಕ ವಿದ್ಯುತ್ ದೀಪಗಳೊಂದಿಗೆ ಪ್ರವಾಸಿಗರಿಗೆ ವಿಶ್ರಾಂತಿಯ ಸಮಯ ಕಳೆಯಲು ನೆಮ್ಮದಿಯ ವಾತಾವರಣ ಕಲ್ಪಿಸಲಾಗಿದೆ. 35 ಸಿಸಿಟಿವಿ ಕ್ಯಾಮರಾಗಳನ್ನು ಭದ್ರತೆಗಾಗಿ ಅಳವಡಿಸಲಾಗಿದೆ. ಇನ್ನೊಂದೆಡೆ 50 ಅಡಿ ಎತ್ತರದ ಗಡಿಯಾರ ಗೋಪುರವನ್ನೂ ಸಹ ನಿರ್ಮಿಸಲಾಗಿದೆ. ಇನ್ನು 250 ವರ್ಷಕ್ಕೂ ಹಳೆದಾದ ಬಾವಿಯ ಸುತ್ತಲೂ ಜನರು ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ರೀತಿಯ ಅವಘಡವಾಗದಂತೆ ಬಾವಿಯ 2 ಅಡಿ ಆಳದಲ್ಲಿ ಗ್ರಿಲ್ ಅಳವಡಿಸಲಾಗಿದೆ. ಬಹುತೇಕ ಕಾಮಗಾರಿಗಳನ್ನು ಪೂರ್ಣವಾಗಿದ್ದು, ಇನ್ನು ಕೆಲವು ಮೂರು ನಾಲ್ಕು ದಿನಗಳಲ್ಲಿ ಮುಗಿಯಲಿದೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ.
ಶಿವಾಜಿ ನಗರ ಹಬ್ಬ ಶನಿವಾರ ಸಂಜೆ 4 ರಿಂದ ಆರಂಭ :
ಶಿವಾಜಿನಗರ ಹಬ್ಬವು ನಗರದ ವೈವಿಧ್ಯತೆಯನ್ನು ಸಂಭ್ರಮಿಸುವ ಮತ್ತು ವಿವಿಧ ಸಮುದಾಯಗಳ ಜನರನ್ನು ಒಟ್ಟುಗೂಡಿಸುವ ಸಾಂಸ್ಕೃತಿಕ ಹಬ್ಬವಾಗಿದೆ. ಈ ಕಾರ್ಯಕ್ರಮವು ಪ್ರಸಿದ್ಧ ಕಲಾವಿದರಿಂದ ಕಲಾ ಪ್ರದರ್ಶನ, ಆಹಾರ ಮಳಿಗೆಗಳು ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡಿದೆ. ಹೊಸ ಮತ್ತು ನವೀಕರಿಸಿದ ಚಾಂದಿನಿ ಚೌಕ್‌ನ ಲೋಕಾರ್ಪಣೆ ಕೂಡ ಈ ಹಬ್ಬದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿದೆ. ಇಂತಹ ವಿಭಿನ್ನಮಯ ಶಿವಾಜಿನಗರ ಹಬ್ಬಕ್ಕಾಗಿ ಶುಕ್ರವಾರದಿಂದಲೇ ತಯಾರಿ ನಡೆಸಲಾಗಿತ್ತು. ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿ ವಾರ್ಷಿಕೋತ್ಸವ ಸಮಾರಂಭದವು ಸಂಜೆ 4 ರಿಂದ ಆರಂಭಗೊಳ್ಳಲಿದೆ ಮತ್ತು ಮಕ್ಕಳಿಗಾಗಿ ವಿವಿಧ ಮನೋರಂಜನಾ ಚಟುವಟಿಕೆಗಳನ್ನು ಒಳಗೊಂಡಿರಲಿದೆ. ಸಂಜೆ 7 ರಿಂದ ಸಂಗೀತ ಸಂಜೆಯನ್ನು ಕೂಡ ಏರ್ಪಡಿಸಲಾಗಿದೆ.
‘ಶಿವಾಜಿನಗರದ ಈ ಐತಿಹಾಸಿಕ ಸ್ಥಳವು ಹಲವು ವರ್ಷಗಳಿಂದ ಅಭಿವೃದ್ಧಿಯನ್ನು ಕಂಡಿರಲಿಲ್ಲ. ನಗರದ ಇಂತಹ ಪ್ರಮುಖ ಸ್ಥಳಕ್ಕೆ ವಿಶೇಷ ಕಾಳಜಿ ವಹಿಸಿ ಹೊಸ ಮೆರಗು ನೀಡಲಾಗಿದೆ. ಮಳೆ ನೀರು, ರಸ್ತೆ ಹಾಗೂ ಅಂಗಡಿಗಳಿಗೆ ಹರಿಯದೇ ಸರಾಗವಾಗಿ ಮಳೆ ನೀರು ಚರಂಡಿಗೆ ಹೋಗುವಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಹೊಸದಾಗಿ ನವೀಕರಿಸಿದ ಚಾಂದಿನಿ ಚೌಕ್ ಸ್ಥಳದಲ್ಲಿ ಇಂದು ಶಿವಾಜಿನಗರ ಹಬ್ಬವನ್ನು ಆಚರಿಸುತ್ತಿದ್ದೇವೆ’ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.