ಬೆಂಗಳೂರು, ಮಾ.6 www.bengaluruwire.com : “ಕಾಂಗ್ರೆಸ್ ಹಿರಿಯ ಮುಖಂಡ ಸಿದ್ಧರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ಅವರ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR)ಯ ಅಂದಿನ ಅಧಿಕಾರಿಗಳು ಭಾಗಿಗಳಾಗಿ ಕೇವಲ ಕಾಫೀ ತಿಂಡಿ, ಬಿಸ್ಕೆಟ್ ಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ” ಎಂದು ಆರೋಪಿಸಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್ ಲೋಕಾಯುಕ್ತದಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.
“2013-14 ರಿಂದ 2017-18 ರವರೆಗಿನ 05 ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಛೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳು ಹಾಗೂ ಗಣ್ಯರ ಉಪಚಾರ ಕಾರ್ಯಗಳ ಹೆಸರಿನಲ್ಲಿ 200 (200,62,93,027 ರೂ.) ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ. ಈ ಬಗ್ಗೆ ಲೋಕಾಯುಕ್ತದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ, ಡಿಎಪಿಆರ್ ನ ಪ್ರಧಾ ಕಾರ್ಯದರ್ಶಿಗಳಾಗಿದ್ದ ಎಲ್.ಕೆ.ಅತೀಕ್, ಡಾ.ಡಿ.ವಿ.ರಮಣರೆಡ್ಡಿ ಅವರ ವಿರುದ್ಧ ದೂರು ದಾಖಲಿಸಿದ್ದೇನೆ” ಎಂದು ಮಾಧ್ಯಮದವರಿಗೆ ಅವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ “ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ” ಹಾಗೂ “ರಾಜ್ಯ ಅತಿಥಿ ಗೃಹಗಳ ವಿಭಾಗ”ದ ಅಧಿಕಾರಿಗಳು ಆರ್ ಟಿಐ ಕಾಯ್ದೆಯಡಿಯಲ್ಲಿ ನೀಡಿರುವ ಅಧಿಕೃತ ದಾಖಲೆಗಳಿಂದ ಈ ಆಘಾತಕಾರಿ ಮಾಹಿತಿಗಳು ಬಯಲಾಗಿದೆ. 5 ವರ್ಷಗಳಲ್ಲಿನ 1,825 ದಿನಗಳಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ 410 ರಜಾ ದಿನಗಳನ್ನೂ ಸೇರಿಸಿಕೊಂಡರೆ ಪ್ರತಿಯೊಂದು ದಿನಕ್ಕೆ ಸರಾಸರಿ 11 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. 410 ರಜಾ ದಿನಗಳನ್ನು ಹೊರತುಪಡಿಸಿದರೆ ಪ್ರತಿಯೊಂದು ದಿನಕ್ಕೆ ಸರಾಸರಿ 14 ಲಕ್ಷ ರೂಪಾಯಿ ವೆಚ್ಚ ಮಾಡಿರೋದು ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ಆರ್ ಟಿಐ ಅಧಿಕೃತ ದಾಖಲೆಗಳು ಹೇಳುವಂತೆ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ಅಂದಿನ ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಅತಿಥಿ – ಗಣ್ಯರ ಉಪಚಾರಗಳಿಗೆಂದು ವೆಚ್ಚ ಮಾಡಿರುವ ವರ್ಷಾವಾರು ವಿವರ ಈ ಕೆಳಕಂಡಂತಿದೆ.
ವರ್ಷ | ಅತಿಥಿಗಳು- ಸಭೆಗಳಿಗೆ ಮಾಡಿರುವ ವೆಚ್ಚ |
2013-14 : | ₹. 36,03,03,078/- |
2014-15 : | ₹. 38,26,68,575/- |
2015-16 : | ₹. 36,66,19,743/- |
2016-17 : | ₹. 44,73,92,077/- |
2017-18 : | ₹. 44,93,09,554/- |
ಒಟ್ಟು | ₹. 200,62,93,027/- |
ಇದು ಕೇಳಲು ಹಾಸ್ಯ ಪ್ರಸಂಗದಂತಿದ್ದರೂ ಸಹ ದಾಖಲೆಗಳು ಅಸಲೀ ಸತ್ಯವನ್ನು ಬಿಚ್ಚಿಡುತ್ತಿವೆ. ಈ ನಂಬಲಸಾಧ್ಯವಾದಂತಹ ದಾಖಲೆಗಳಿಂದ 2013-14 ರಿಂದ 2017-18 ರವರೆಗಿನ 5 ವರ್ಷಗಳಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿ ಒಟ್ಟು ₹. 200,62,93,027/- ಗಳನ್ನು ಲೂಟಿ ಮಾಡಿರುವುದು ಬಟಾಬಯಲಾಗಿದೆ. ಅಂದಿನ ಮುಖ್ಯಮಂತ್ರಿಗಳ ಕಛೇರಿಯ ಈ ನಂಬಲ ಸಾಧ್ಯವಾದ ವೆಚ್ಚಗಳ ಬಗ್ಗೆ ರಾಜ್ಯದ ಪ್ರಧಾನ ಲೆಕ್ಕಾಧಿಕಾರಿಗಳ ಕಚೇರಿ (Office of the Principal Accountant General, Karnataka) ರವರು ನೀಡಿರುವ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ಬಗ್ಗೆ ತಮ್ಮ ತೀವ್ರ ಆಕ್ಷೇಪಣೆಗಳನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಿದ್ದಾರೆ ಎಂದು ಎನ್.ಆರ್.ರಮೇಶ್ ದೂರಿದ್ದಾರೆ.
ಕಳೆದ 75 ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ 25 ಮಂದಿ ಮುಖ್ಯಮಂತ್ರಿಗಳ ಪೈಕಿ, ಬೇರೆ ಇನ್ಯಾವ ಮುಖ್ಯಮಂತ್ರಿಗಳ ಅವಧಿಯಲ್ಲೂ ಸಹ ನಡೆಯದ “ಅತಿಥಿ ಉಪಚಾರ”ದ ಹೆಸರಿನ ಇಂತಹ ಭ್ರಷ್ಟಾಚಾರ ಸಿದ್ಧರಾಮಯ್ಯನವರ ಅವಧಿಯಲ್ಲಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಹಾಸಿಗೆ – ದಿಂಬು, ಇಂದಿರಾ ಕ್ಯಾಂಟೀನ್ (Indira Canteen) ತಿಂಡಿ, ನೆಲದಡಿಯ ಕಸದ ಡಬ್ಬಗಳು ಮತ್ತು ಎಲ್ ಇಡಿ (LED) ದೀಪಗಳ ಅಳವಡಿಕೆಯಂತಹ ಯೋಜನೆಗಳ ಹೆಸರಿನಲ್ಲೂ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಛೇರಿಯ ಕಾರ್ಯಗಳಿಗೆ ಕಾಫೀ – ತಿಂಡಿ – ಬಿಸ್ಕೇಟ್ ಪೂರೈಕೆ ಹೆಸರಿನಲ್ಲೂ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವುದನ್ನು ನೋಡಿದರೆ, ಇಂತಹ ಬೃಹತ್ ಭ್ರಷ್ಟಾಚಾರಗಳ ಸರ್ಕಾರ ದೇಶದಲ್ಲಿ ಮತ್ತೊಂದಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಕಿಡಿಕಾರಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಬಿಎ (CBI) ಅಥವಾ ಸಿಐಡಿ (CID) ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿಗಳನ್ನು ಸೂಕ್ತ ದಾಖಲೆಗಳೊಂದಿಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.