ನವದೆಹಲಿ, ಮಾ.05 www.bengaluruwire.com : ಚಿನ್ನದ ಗ್ರಾಹಕರ ಹಿತದೃಷ್ಟಿಯಿಂದ ಇದೇ ಮಾ.31ರ ನಂತರ ಆರು ಅಕ್ಷರ ಮತ್ತು ಅಂಕಿಯನ್ನು ಹೊಂದಿದ ಆರು ಡಿಜಿಟ್ ನ ಹಾಲ್ಮಾರ್ಕ್ ವಿಶಿಷ್ಟ ಗುರುತು ಸಂಖ್ಯೆ (HUID) ಹೊಂದಿರದ ಚಿನ್ನಾಭರಣ ಮತ್ತು ಚಿನ್ನದ ಕಲಾಕೃತಿಗಳನ್ನು ಚಿನ್ನದ ವ್ಯಾಪಾರಿಗಳು ಮಾರುವಂತಿಲ್ಲ. ಏಕೆಂದರೆ ಎಚ್ಯುಐಡಿ ಇಲ್ಲದ ಚಿನ್ನದ ಆಭರಣಗಳ ಮಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ.
ಹಾಲ್ಮಾರ್ಕ್ ಯೂನಿಕ್ ಐಡೆಂಟಿಪಿಕೇಷನ್- ಎಚ್ಯುಐಡಿ ಎಂದು ಕರೆಯಲಾಗುವ ಇದು ವರ್ಣಮಾಲೆಗಳು ಮತ್ತು ಸಂಖ್ಯೆಗಳನ್ನು ಒಳಗೊಂಡಿರುವ 6 ಅಂಕಿಯ ಅಲ್ಪಾನ್ಯೂಮರಿಕ್ ಕೋಡ್ ಆಗಿದೆ. ಎಚ್ಯುಐಡಿ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ನಿಂದ (BIS) ಪ್ರಮಾಣೀಕೃತಗೊಂಡ ಕೇಂದ್ರಗಳಲ್ಲಿ (ಅಸ್ಸೇಯಿಂಗ್ ಮತ್ತು ಹಾಲ್ವಾರ್ಕಿಂಗ್ ಸೆಂಟರ್ ) ಈ ವಿಶಿಷ್ಟ ಗುರುತನ್ನು ಹಾಕುತ್ತದೆ. ಇದಕ್ಕೂ ಮೊದಲು ಎಚ್ಯುಐಡಿ ಕೇವಲ ನಾಲ್ಕು ಡಿಜಿಟ್ ಹೊಂದಿತ್ತು. ಮಾರ್ಚ್ 31ರ ನಂತರ 6 ಅಂಕಿಯ ಆಲ್ಪಾ ನ್ಯೂಮರಿಕ್ ಕೋಡ್ ಹೊಂದಿರುವ ಆಭರಣಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ.
ಬಿಐಎಸ್ ಕೇರ್ ಆಪ್ ನಲ್ಲಿ ಚಿನ್ನಾಭರಣದ ಅಸಲಿಯತ್ತು ಪರಿಶೀಲನೆ :
ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಾರ ಎಚ್ಯುಐಡಿ ಕೋಡ್ ಪ್ರತಿಯೊಂದು ಚಿನ್ನದ ಆಭರಣಕ್ಕೆ ವಿಶಿಷ್ಟ ಗುರುತನ್ನು ನೀಡುವುದರಿಂದ ಇದು ಕಳುವಾದ ಚಿನ್ನದ ಆಭರಣಗಳ ಪತ್ತೆ ಹಚ್ಚುವಿಕೆ ಸೇರಿದಂತೆ ಮತ್ತಿತರ ಕಾರ್ಯಗಳಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಆಭರಣಗಳ ಮೇಲಿನ ಹಾಲ್ಮಾರ್ಕಿಂಗ್ ಚಿಹ್ನೆಗಳು ಅವುಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ. ಬಿಐಎಸ್ ಸಂಸ್ಥೆಯು ಬಿಡುಗಡೆ ಮಾಡಿರುವ ಬಿಐಎಸ್ ಕೇರ್ ಆಪ್ (BIS CARE APP)ನಲ್ಲಿ ಎಚ್ಯುಐಡಿ ಕೋಡ್ನ ದೃಢೀಕರಣವನ್ನು ಪರಿಶೀಲಿಸಬಹುದು. ಬಿಐಎಲ್ ಕೇರ್ ಆಪ್ ನಲ್ಲಿ ಆ ಆಭರಣದ ಕುರಿತಂತೆ ನೀಡಿರುವ ಮಾಹಿತಿಗೂ, ಚಿನ್ನಾಭರಣ ಮಾಡುವವರು ನೀಡಿರುವ ಮಾಹಿತಿಗೂ ವ್ಯತ್ಯಾಸ ಕಂಡಬಂದಲ್ಲಿ ಈ ಬಗ್ಗೆ ಖರೀದಿದಾರರು ದೂರು ನೀಡಬಹುದು.
2021ರಲ್ಲಿ ಭಾರತದಲ್ಲಿ 611 ಟನ್ ಚಿನ್ನಾಭರಣ ವಹಿವಾಟು :
ಭಾರತವು ವಿಶ್ವದ ಅತಿದೊಡ್ಡ ಚಿನ್ನ ಬಳಕೆಯ ರಾಷ್ಟ್ರವಾಗಿದೆ. 2021ರಲ್ಲಿ ದೇಶವು 611 ಟನ್ ಚಿನ್ನಾಭರಣ ವಹಿವಾಟು ನಡೆಸಿದೆ. ಇನ್ನು ಚೀನಾವು 673 ಟನ್ ಚಿನ್ನವನ್ನು ಬಳಕೆ ಮಾಡಿದೆ. ಆದರೂ ಭಾರತವು ಚಿನ್ನದ ವಹಿವಾಟು ಮತ್ತು ಬಳಕೆಯಲ್ಲಿ ವಿಶ್ವದ ಇತರ ಮಾರುಕಟ್ಟೆಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ವಿಶ್ವ ಚಿನ್ನ ಪರಿಷತ್ತು ಜನವರಿ 19ರಂದು ಬಿಡುಗಡೆ ಮಾಡಿದ ಆಭರಣ ವ್ಯಾಪಾರ ಮತ್ತು ಬೇಡಿಕೆ ಕುರಿತ ವರದಿಯಲ್ಲಿ ತಿಳಿಸಿದೆ. ಪರಿಸ್ಥಿತಿ ಹೀಗಿರುವಾಗ ದೇಶದ ಚಿನ್ನದ ಗ್ರಾಹಕರ ಹಿತ ಕಾಯುವ ದೃಷ್ಟಿಯಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಎಚ್ ಯುಐಡಿ ಕೋಡ್ ಚಿನ್ನಾಭರಣಗಳಿಗೆ ಅಳವಡಿಸುವುದನ್ನು ಖಡ್ಡಾಯಗೊಳಿಸಿದೆ.
ಎಚ್ ಯುಐಡಿ ಹಾಲ್ ಮಾರ್ಕಿಂಗ್ ನೋಂದಣಿ ಆಟೊಮೇಟಿಕ್ :
ಎಚ್ಯುಐಡಿ ಆಧಾರಿತ ಹಾಲ್ಮಾರ್ಕಿಂಗ್ ಆಭರಣಗಳ ನೋಂದಣಿಯು ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿರುತ್ತದೆ. ಇದು ಹಾಲ್ಮಾರ್ಕ್ ಮಾಡಿದ ಆಭರಣಗಳ ಶುದ್ಧತೆ ಖಾತ್ರಿಪಡಿಸುವ ಮತ್ತು ಯಾವುದೇ ಮೋಸವನ್ನು ಪರಿಶೀಲಿಸುವ ಗುರಿ ಹೊಂದಿದೆ. ಡೇಟಾ ಗೌಪ್ಯತೆ ಕಾಪಾಡಲಾಗುತ್ತದೆ. ಅಲ್ಲದೆ ಪ್ರಮುಖ ಸುರಕ್ಷಿತ ವ್ಯವಸ್ಥೆಯಾಗಿದೆ.
ಕೇಂದ್ರ ಸರ್ಕಾರವು ಈಗಾಗಲೇ 2021ರ ಜೂ.16 ರಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಮಾರಾಟಕ್ಕೆ ಬಿಐಎಸ್ ಹಾಲ್ಮಾರ್ಕ್ ಕಡ್ಡಾಯಗೊಳಿಸಿದ್ದು, ಅವುಗಳ ಚಿಹ್ನೆಗಳನ್ನು ಪರಿಷ್ಕರಿಸಿದೆ. ಈಗಿನ ಪರಿಷ್ಕೃತ ಚಿಹ್ನೆಗಳೆಂದರೆ ಬಿಐಎಸ್ ಲಾಂಛನ, ಚಿನ್ನದ ಶುದ್ಧತೆ ಮತ್ತು ಅದರ ಉತ್ತಮತೆಯ ಗ್ರೇಡ್ ಹಾಗೂ 6 ಅಂಕಿಯ ಎಚ್ಯುಐಡಿ ಕೋಡ್. ಇಷ್ಟು ವಿಷಯಗಳು ಪ್ರತಿಯೊಂದು ಚಿನ್ನದ ಆಭರಣಗಳ ಮೇಲಿರಬೇಕು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.