ಬೆಂಗಳೂರು, ಮಾ.4 www.bengaluruwire.com :
ಕರ್ನಾಟಕ ಸೋಪು ಮತ್ತು ಮಾರ್ಜಕ ಸಂಸ್ಥೆ (KSDL)ಯ ಅಧ್ಯಕ್ಷರ ಪರವಾಗಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ದಾಳಿಯಲ್ಲಿ ಸಿಲುಕಿ ಬಂಧನವಾಗಿರುವ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಕೆಎಎಸ್ ಅಧಿಕಾರಿಯಲ್ಲ. ಬದಲಿಗೆ ಅವರು ಕರ್ನಾಟಕ ಲೆಕ್ಕ ಪರಿಶೋಧಕ ಇಲಾಖೆಗೆ ಸೇರಿದವರು ಎಂದು ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ.ಬಿ.ಆರ್.ಹರೀಶ್ ನಾಯ್ಕ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯಾರೆ ಅಧಿಕಾರಿಗಳು ಲೋಕಾಯುಕ್ತ ಟ್ರಾಪ್’, ರೈಡ್ ಮತ್ತು ವಿವಿಧ ನ್ಯಾಯಲಯಗಳಲ್ಲಿ ದೋಷಾರೋಪಣೆಗೆ ಒಳಗಾದಾಗ ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಎಎಸ್ ಅಧಿಕಾರಿಗಳು ಎಂದು ಬಿಂಬಿಸುತ್ತಿರುವುದು ಕೆಎಎಸ್ ವೃಂದಕ್ಕೆ ಅಗೌರವವನ್ನು ಉಂಟು ಮಾಡುತ್ತಿದೆ ಎಂದು ಕೆ. ಎ.ಎಸ್. ಅಧಿಕಾರಿಗಳ ಸಂಘ ಬೇಸರ ವ್ಯಕ್ತಪಡಿಸಿದೆ.
ಮಾ.2ರಂದು ಲೋಕಾಯುಕ್ತ ಟ್ರಾಪ್ ಗೆ ಒಳಗಾದ ಪ್ರಶಾಂತ್ ಮಾಡಾಳ್ ರವರು ಕರ್ನಾಟಕ ಲೆಕ್ಕ ಪರಿಶೋಧಕ ಇಲಾಖೆಗೆ ಸೇರಿದವರಾಗಿದ್ದು, ವಿವಿಧ ಮಾಧ್ಯಮಗಳಲ್ಲಿ ಕೆಎಎಸ್ ಅಧಿಕಾರಿ ಎಂದು ತೋರಿಸುತ್ತಿರುವುದು ಕೆಎಎಸ್ ಅಧಿಕಾರಿಗಳ ಘನತೆಗೆ ಕುಂದು ಉಂಟು ಮಾಡುತ್ತಿದೆ..
ಆದ್ದರಿಂದ ಇನ್ನು ಮುಂದೆ ಯಾವುದೇ ಇಲಾಖೆಗಳ ಅಧಿಕಾರಿಗಳನ್ನು ಕೆಎಎಸ್ ಅಧಿಕಾರಿ ಎಂದು ಮಾಧ್ಯಮದಲ್ಲಿ ತೋರಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಅಥವಾ ಸಂಘದಿಂದ ಸ್ಪಷ್ಟಿಕರಣ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.