ಬೆಂಗಳೂರು, ಮಾ.4 www.bengaluruwire.com : ಬೆಂಗಳೂರು ವ್ಯಾಪ್ತಿಯಲ್ಲಿ ಶೇ.65 ಮತದಾನ ಆಗುವ ಗುರಿಯನ್ನು ಕೇಂದ್ರ ಚುನಾವಣಾ ಆಯೋಗ ನೀಡಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್ ಹೇಳಿದರು.
ಸಾರ್ವತ್ರಿಕ ಚುನಾವಣಾ ವಿಧಾನಸಭಾ ಚುನಾವಣೆ 2023ರ ಹಿನ್ನಲೆಯಲ್ಲಿ ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ, ವಿದ್ಯುನ್ಮಾನ ಮತಯಂತ್ರ (EVM)ಗಳ ಬಳಕೆ ಕುರಿತು ಮಾಧ್ಯಮದವರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
2018 ರ ವಿಧಾನಸಭಾ ಚುನಟವಣೆಯಲ್ಲಿ ಬೆಂಗಳೂರಿನಲ್ಲಿ ಸರಾಸರಿ ಕಡಿಮೆ ಮತದಾನವಾಗಿತ್ತು. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರವಿದೆ. ಈ ವ್ಯಾಪ್ತಿಯಲ್ಲಿ ಸರಾಸರಿ ಕೇವಲ ಶೇ.57.8 ರಷ್ಟು ಮತದಾನವಾಗಿತ್ತು. ನಗರದ ಇತರೆಡೆಯೂ ಕಡಿಮೆ ಮತದಾನವಾಗಿತ್ತು. ಈ ಹಿನ್ನಲೆಯಲ್ಲಿ ಸರಾಸರಿ ಶೇ.65ರಷ್ಟು ಮತದಾನವಾಗಬೇಕೆಂದು ಚುನಾವಣಾ ಆಯೋಗ ಗುರಿ ನೀಡಿದೆ.
ಈ ಹಿನ್ನಲೆಯಲ್ಲಿ ಹಿಂದೆಂದಿಗಿಂತ ಈ ಬಾರಿಯೂ ಚುನಾವಣಾ ದಿನಾಂಕ ಘೋಷಣೆಗೂ ಸಾಕಷ್ಟು ಮುನ್ನ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸಾಕಷ್ಟು ಚುನಾವಣಾ ಪೂರ್ವಸಿದ್ಧತಾ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳ ನೇಮಕ, ಪ್ರತಿ ಮತಗಟ್ಟೆಗಳಿಗೆ ಕನಿಷ್ಠ ಸೌಲಭ್ಯ, ಮತದಾನ ಜಾಗೃತಿ ಕಾರ್ಯ ಆರಂಭವಾಗಿದೆ. ಪಾರದರ್ಶಕ ಚುನಾವಣೆಯಲ್ಲಿ ನಿರ್ಣಾಯಕವಾಗಿರುವ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ನೇಮಕವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ಪಟ್ಟಿ ಸಿದ್ಧಪಡಿಸಲಾಗಿದೆ ಎಂದರು.
ಈವರೆಗೆ 3 ರೌಡಿ ಶೀಟರ್ ಜೈಲಿಗೆ, 10 ಮಂದಿಗೆ ನೋಟಿಸ್ :
ಚುನಾವಣೆ ಸಂದರ್ಭದಲ್ಲಿ ಗಲಭೆ, ಅಶಾಂತಿ ವಾತಾವರಣ ನಿರ್ಮಾಣ ಮಾಡುವ ರೌಡಿಗಳನ್ನು ಗೂಂಡಾ ಕಾಯ್ದೆಯಡಿ ಮುಂಜಾಗ್ರತಾ ಕ್ರಮವಾಗಿ ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದೇವೆ. ಪ್ರಸ್ತುತ ಮೂವರು ರೌಡಿ ಶೀಟರ್ ಗಳನ್ನು ಕಳೆದ ವಾರ ಜೈಲಿಗೆ ಕಳುಹಿಸಿದ್ದು, ಚುನಾವಣೆ ಮುಗಿಯುವ ತನಕ ಅವರನ್ನೆಲ್ಲ ಹೊರಗೆ ಬಿಡುವುದಿಲ್ಲ. ಇದಲ್ಲದೆ 10 ಜನ ರೌಡಿ ಶೀಟರ್ ಗಳಿಗೆ ಪೊಲೀಸರ ವರದಿ ಆಧಾರದ ಮೇಲೆ ವಿಚಾರಣಾ ನೋಟಿಸ್ ನೀಡಿದ್ದೇವೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 38 ಚುನಾವಣಾ ದೂರುಗಳು ಬಂದಿದ್ದು ಅದರಲ್ಲಿ 26 ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 10 ಪ್ರಕರಣಗಳಲ್ಲಿ ಬಿ ರಿಪೋರ್ಟ್, 2 ಪ್ರಕರಣಗಳಲ್ಲಿ ಸಿ ರಿಪೋರ್ಟ್, 8 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. 14 ಜನರು ಖುಲಾಸೆಯಾಗಿದ್ದಾರೆ.
ಬೆಂಗಳೂರಿನಲ್ಲಿ 90 ಲಕ್ಷ ಮತದಾರರಿದ್ದರೆ, 7 ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ನಗರ ಜಿಲ್ಲೆಯಲ್ಲಿ 32 ಲಕ್ಷ ಮತದಾರರಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 6.5 ಲಕ್ಷ ಮತದಾರರಿದ್ದು, ದೇಶದಲ್ಲೇ ಅತಿದೊಡ್ಡ ವಿಧಾನಸಭಾ ಕ್ಷೇತ್ರವೆಂಬ ಹೆಗ್ಗಳಿಕೆ ಹೊಂದಿದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.
ಈ ಬಾರಿ ಅತ್ಯಾಧುನಿಕ ಎಂ3 ಮತಯಂತ್ರ ಬಳಕೆ :
ಈ ಬಾರಿ ಎಂ3 ಹೆಸರಿನ ಸುಧಾರಿತ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಈ ಮತಯಂತ್ರ ಈ ಹಿಂದಿನ ಮತಯಂತ್ರಕ್ಕಿಂತ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಈ ಮತಯಂತ್ರದಲ್ಲಿನ ಕಂಟ್ರೋಲ್ ಯೂನಿಟ್ (CU) ಒಂದೇ ಬಾರಿಗೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ 384 ಅಭ್ಯರ್ಥಿಗಳ ತನಕ ಮತ ಹಾಕಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಅದೇ ರೀತಿ 16 ಅಭ್ಯರ್ಥಿಗಳ ಒಂದು ಬ್ಯಾಲೇಟ್ ಯೂನಿಟ್ ರೀತಿ ಗರಿಷ್ಠ 4 ಬ್ಯಾಲೇಟ್ ಯೂನಿಟ್ ಗಳನ್ನಷ್ಟೇ ಕಂಟ್ರೋಲ್ ಯೂನಿಟ್ ಗೆ ಸಂಪರ್ಕ ಕಲ್ಪಿಸಬಹುದಾಗಿತ್ತು.
ಎಂ3 ಮತಯಂತ್ರದ ಕಂಟ್ರೋಲ್ ಯೂನಿಟ್ ಗೆ 24 ಬ್ಯಾಲೇಟ್ ಯೂನಿಟ್ ಗಳನ್ನು ಒಂದೇ ಬಾರಿಗೆ ಸಂಪರ್ಕ ಕಲ್ಪಿಸಬಹುದು. ಇದರಿಂದ ಹೆಚ್ಚಿನ ಕಂಟ್ರೋಲ್ ಯೂನಿಟ್ ಬಳಕೆ ತಪ್ಪಿದಂತಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿನ 7 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3,083 ಮತಗಟ್ಟೆಗಳಿದ್ದು, ಈ ಬಾರಿಯ ಚುನಾವಣೆಗೆ ಕನಿಷ್ಠ 15 ಸಾವಿರ ಸಿಬ್ಬಂದಿ ಅವಶ್ಯಕತೆಯಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಬಾರಿ ಒಂದು ಲಕ್ಷ ಯುವ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ ಎಂದು ದಯಾನಂದ್ ಹೇಳಿದರು.
ಕಾರ್ಯಕ್ರಮದಲ್ಲಿ ಚುನಾವಣಾ ತಹಸೀಲ್ದಾರ್ ಮಂಜುನಾಥ್, ಮಾಸ್ಟರ್ ಟ್ರೈನರ್ ಮಂಜುನಾಥ್ ಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.