ಬೆಂಗಳೂರು, ಫೆ.15 www.bengaluruwire.com : ಪವರ್ ಫುಲ್ ಸೂಟ್ ಕೇಸ್, ಆಕಾಶದ ಮೇಲಿಂದ ಲೈವ್ ಸಿಸಿಟಿವಿಯಂತೆ ಕೆಲಸ ಮಾಡುವ ಪೇಲೋಡ್, ನಿಶ್ಯಬ್ದವಾಗಿ ಕೆಲಸ ಮಾಡೊ ನ್ಯಾನೋ ದ್ರೋಣ್….!
ಇದು ಏರೊ ಇಂಡಿಯಾ 2023ರಲ್ಲಿ ಸ್ಟಾರ್ಟಪ್ ಸಂಸ್ಥೆಗಳು ಪ್ರದರ್ಶನಕ್ಕಿಟ್ಟಿರುವ ವೈಙ್ಞನಿಕ ಉಪಕರಣಗಳು ಒಂದಕ್ಕಿಂತ ವಿಭಿನ್ನವಾಗಿದೆ. ರಕ್ಷಣಾ ಇಲಾಖೆಯ ಐಡೆಕ್ಸ್ ಇನೊವೇಷನ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ ಹಾಲ್ ನಲ್ಲಿ ನೂತನವಾಗಿ ರಕ್ಷಣಾ ತಂತ್ರಙ್ಞಾನಕ್ಕೆ ಸಂಬಂಧಿಸಿದಂತೆ ಸ್ಟಾರ್ಟಪ್ ಕಂಪನಿಗಳು ಅಭಿವೃದ್ಧಿಪಡಿಸಿದ ಉತ್ಪನ್ನ, ಉಪಕರಣಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅವುಗಳ ಪೈಕಿ ಮೇಲೆ ತಿಳಿಸಿದ ಉಪಕರಣಗಳು ಎಲ್ಲರ ಕುತೂಹಲ ಹಾಗೂ ಗಮನವನ್ನು ಸೆಳೆಯುತ್ತಿದೆ.
ಫೋರೆನ್ಸಿಕ್ ಸೈಬರ್ ಸ್ಮಾರ್ಟ್ ಸೂಟ್ ಕೇಸ್ :
ಫೋರೆನ್ಸಿಕ್ ಸೈಬರ್ ಟೆಕ್ ಎಂಬ ಸ್ಮಾರ್ಟಪ್ ಕಂಪನಿ ಐಐಟಿ ಬಾಂಬೆ ಬೆಂಬಲದಲ್ಲಿ ಪ್ರಾಜೆಕ್ಟ್ ಎಕ್ಸ್ ಸ್ಮಾರ್ಟ್ ಸೂಟ್ ಕೇಸ್ ಡೆವಲಪ್ ಮಾಡಿದೆ. ಸುಮಾರು 11 ಕೆಜಿ ತೂಕದ ಈ ಸೂಟ್ ಕೇಸ್ ಮಿನಿ ವಿಧಿ ವಿಙ್ಞನ ಪ್ರಯೋಗಾಲಯದಂತೆ ಕೆಲಸ ಮಾಡುತ್ತೆ. ಹೌದಾ ಎಂದು ಹುಬ್ಬೇರಿಸಬೇಡಿ. ಇದು ನಿಜ.
ಪೊಲೀಸ್, ಆದಾಯ ತೆರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಇನ್ನಿತರ ಸಂಸ್ಥೆಗಳು ತನಿಖೆ, ದಾಳಿ ಸಂದರ್ಭದಲ್ಲಿ ಸಿಕ್ಕ ಕಂಪ್ಯೂಟರ್, ಲ್ಯಾಪ್ ಟಾಪ್ ಗಳನ್ನು ಇಷ್ಟು ದಿನ ಸೀಜ್ ಮಾಡಿ ತಮ್ಮ ಕಚೇರಿ ಸ್ಥಳಕ್ಕೆ ತಂದು ಆ ಕಂಪ್ಯೂಟರ್ ಹಾರ್ಡರ ಡಿಸ್ಕ್ ಗಳನ್ನು ತೆಗೆದು ಅದರಲ್ಲಿ ದತ್ತಾಂಶಗಳನ್ನು ಕಾಪಿ ಮಾಡಬೇಕಿತ್ತು.
ಆದರೀಗ ಫೋರೆನ್ಸಿಕ್ ಸೈಬರ್ ಟೆಕ್ ಎಂಬ ಸ್ಮಾರ್ಟಪ್ ಕಂಪನಿ ಪ್ರಾಜೆಕ್ಟ್ ಎಕ್ಸ್ ಸ್ಮಾರ್ಟ್ ಸೂಟ್ ಕೇಸ್ ನಲ್ಲಿಯೇ “ಟಿಬಿ”ಗಟ್ಟಲೆ ಸಾಮರ್ಥ್ಯದ ಹಾರ್ಡ್ ಡಿಸ್ಕ್ ಗಳನ್ನು, ಪೆನ್ ಡ್ರೈವ್, ಎಸ್ ಎಸ್ ಡಿ ಗಳನ್ನು ಈ ಸೂಟ್ ಕೇಸಿನೊಳಗಿನ ಸ್ಲಾಟ್ ನಲ್ಲಿ ಕನೆಕ್ಟ್ ಮಾಡಿ ಅದರಲ್ಲಿ ಅಳಸಿ ಹಾಕಲಾದ ದತ್ತಾಂಶಗಳನ್ನು, ಸಾಮಾನ್ಯ ಸ್ಥಿತಿಯಲ್ಲಿ ಸಂಗ್ರಹಿಸಿದ ಹಾಗೂ ಮುಚ್ಚಿಡಲಾದ (Hidden information) ಮಾಹಿತಿಗಳನ್ನು ಈ ಉಪಕರಣದಿಂದ ಮರಳಿ ಪಡೆಯಬಹುದು. ಇದು ತನಿಖೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ವಿದೇಶಗಳಿಂದ ಇಷ್ಟು ದಿನ ಇಂತಹ ಉಪಕರಣಗಳನ್ನು ಭಾರತದ ತನಿಖಾ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಖರೀದಿಸುತ್ತಿದ್ದವು. ಅದನ್ನೀಗ ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಒಂದು ಬಾರಿ ತನಿಖಾ ಸ್ಥಳದಲ್ಲಿ ಸಂಗ್ರಹಿಸಿದ ನಂತರ, ಆ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಟ್ಯಾಂಪರ್ ಮಾಡಿ ಹೊಸದಾಗಿ ಮಾಹಿತಿ, ದತ್ತಾಂಶ ಸೇರಿಸಲಾಗದು. ಒಮ್ಮೆ ಈ ಉಪಕರಣ ಬಳಸಿ ಕಾಪಿ ಮಾಡಿದ ಮಾಹಿತಿಯು # ಹ್ಯಾಷ್ ವ್ಯಾಲ್ಯೂ ರೂಪದಲ್ಲಿ ವಿಶೇಷ ಕೋಡಿಂಗ್ ನಲ್ಲಿ ಸೇವ್ ಆಗುತ್ತದೆ. ಹಾಗಾಗಿ ಮಾಹಿತಿ ಟ್ಯಾಂಪರ್ ಗೆ ಅವಕಾಶವಿಲ್ಲ.
ಭವಿಷ್ಯದಲ್ಲಿ 2.5 ಕೆಜಿ ತೂಕದ ಸೂಟ್ ಕೇಸ್ ನಿರ್ಮಾಣ ಗುರಿ :
ಇಂತಹ ಉಪಕರಣದಿಂದ ರಿಟ್ರೈವ್ ಮಾಡಿದ ದತ್ತಾಂಶವನ್ನು ಸಾಕ್ಷಿಯಾಗಿ ಪರಿಗಣಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಫೋರೆನ್ಸಿಕ್ ಸೈಬರ್ ಸೂಟ್ ಕೇಸ್ ನಲ್ಲಿ ಮುಂದೆ ಮೊಬೈಲ್, ಇಮೇಲ್, ಕ್ಲೌಡ್ ಡಾಟಾ ಹಾಗೂ ಸರ್ವರ್ ನಲ್ಲಿನ ಮಾಹಿತಿಗಳನ್ನು ಆರೋಪಿಗಳು/ಅಪರಾಧಿಗಳು ಅಳಸಿ ಹಾಕಿದ್ದರೂ ತೊಂದರೆಯಿಲ್ಲ. ಈ ಉಪಕರಣದಿಂದ ಮರಳಿ ಪಡೆಯಲು ಅವಕಾಶವಿರುವಂತೆ ಕೇವಲ 2.5 ಕೆಜಿ ತೂಕದ ಸೂಟ್ ಕೇಸ್ ಉಪಕರಣ ಅಭಿವೃದ್ಧಿಪಡಿಸಲು ಫೋರೆನ್ಸಿಕ್ ಸೈಬರ್ ಟೆಕ್ ಸಂಸ್ಥೆಯು ಯೋಜಿಸಿದೆ.
ಆಕಾಶದಿಂದ ಭೂಮಿಯ ಲೈವ್ ಸಿಸಿಟಿವಿ ವಿಡಿಯೋ :
ಇಸ್ರೊ ನಭಕ್ಕೆ ಹಾರಿಬಿಟ್ಟಿರುವ ಸಾಕಷ್ಟು ಉಪಗ್ರಹಗಳಲ್ಲಿನ ಆಪ್ಟಿಕಲ್ ಉಪಕರಣ (Optical Payload)ಗಳಿಂದ ಈ ತನಕ ಭೂಮಿಯ ಮೇಲ್ಭಾಗದ ಸ್ಥಿರ ಚಿತ್ರಣವನ್ನಷ್ಟೇ ತೆಗೆಯಲಾಗುತ್ತಿತ್ತು. ಐಡೆಕ್ಸ್ ಸ್ಟಾಲ್ ನಲ್ಲಿ ಬೆಂಗಳೂರು ಮೂಲದ ಗೃಹಸ್ಪೇಸ್ (Grahaa Space) ಸಂಸ್ಥೆಯು 3ಯು ನ್ಯಾನೊ ಸ್ಯಾಟಲೈಟ್ ಹೆಸರಿನ ಆಪ್ಟಿಕಲ್ ಪೇಲೋಡ್ ಉಪಕರಣವನ್ನು ಅಭಿವೃದ್ದಿಪಡಿಸಿದೆ. ಈ ಪೇಲೋಡ್ ಅನ್ನು ಭೂವೀಕ್ಷಣಾ ಉಪಗ್ರಹ (Earth Observatory Satallite)ದಲ್ಲಿ ಇಡೀ ಭೂಮಿಯನ್ನು 24*7 ಅವಧಿವರೆಗೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡುವ ರೀತಿ ಅಭಿವೃದ್ಧಿಪಡಿಸಲಾಗುತ್ತಿದೆ.
“ಇಲ್ಲಿಯವರೆಗೆ ಅರ್ಥ್ ಅಬ್ಸರ್ವೇಟರಿ ಸ್ಯಾಟಲೈಟ್ ಗಳಲ್ಲಿ ಜಿಯೋಸ್ಪೇಟಿಯಲ್ ಪೋಟೊಗಳನ್ನಷ್ಟೇ ತೆಗೆಯುವ ಪೇಲೋಡ್ ಅಳವಡಿಸಲಾಗುತ್ತಿತ್ತು. ಗೃಹಸ್ಪೇಸ್ ಸಂಸ್ಥೆಯು 2019 ಇಸವಿಯಿಂದ 3ಯು ನ್ಯಾನೊ ಸ್ಯಾಟಲೈಟ್ ಹೆಸರಿನ ಆಪ್ಟಿಕಲ್ ಪೇಲೋಡ್ ಉಪಕರಣವನ್ನು ಅಭಿವೃದ್ದಿಪಡಿಸುತ್ತಿದೆ. ಕರೋನಾ ಕಾರಣಕ್ಕೆ ನಮ್ಮ ಸಂಶೋಧನೆಗೆ ಕೊಂಚ ಹಿನ್ನಡೆಯಾಗಿತ್ತು. ಇನ್ನೊಂದು ವರ್ಷದಲ್ಲಿ ಈ ಆಪ್ಟಿಕಲ್ ಪೇಲೋಡನ್ನು ಪೂರ್ಣ ರೂಪದಲ್ಲಿ ಡೆವಲಪ್ ಮಾಡುತ್ತೇವೆ ಎನ್ನುತ್ತಾರೆ ಗೃಹಸ್ಪೇಸ್ ಸಂಸ್ಥೆಯ ಸಹ ಸಂಸ್ಥಾಪಕ ರಮೇಶ್ ಕುಮಾರ್.
” ಇಸ್ರೋ ನಿವೃತ್ತ ವಿಜ್ಞಾನಿ ಲೋಕನಾಥನ್ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಅವರ ನೇತೃತ್ವದಲ್ಲಿ ಈ ನೂತನ ತಂತ್ರಙ್ಞನವನ್ನು ರೂಪಿಸಲಾಗುತ್ತಿದೆ. 3ಯು ನ್ಯಾನೊ ಸ್ಯಾಟಲೈಟ್ ಹೆಸರಿನ ಆಪ್ಟಿಕಲ್ ಪೇಲೋಡ್ ಉಪಕರಣದ ಸಹಾಯದಿಂದ 520 ಕಿ.ಮೀ ಎತ್ತರದಿಂದ ಭೂಮಿ ಮೇಲಿನ ದೃಶ್ಯಗಳನ್ನು ಚಿತ್ರೀಕರಿಸಬಹುದಾಗಿದೆ. ಸೌರಫಲಕ ಬಳಸಿ ಬ್ಯಾಟರಿಯಲ್ಲಿ ಸಂಗ್ರಹವಾಗುವ ವಿದ್ಯುತ್ ನಿಂದ ಈ ಪೆಲೋಡ್ ಕಾರ್ಯನಿರ್ವಹಿಸುತ್ತದೆ ” ಎಂದು ಅವರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಪಾಕೇಟ್ ಗಾತ್ರದ ಸೈಲೆಂಟ್ ದ್ರೋಣ್ !! :
ಜೋಬಿನೊಳಗಿಟ್ಟುಕೊಂಡು ಬೇಕಾದ ಕಡೆ ಕೊಂಡೊಯ್ಯಬಹುದಾದ ಏರಿಯಲ್ ಇಂಟೆಲಿಜಿನ್ಸ್ ಟೈಲರ್ ಬರ್ಡ್ ನ್ಯಾನೊ ದ್ರೋಣ್ ಅನ್ನು ಬೆಂಗಳೂರು ಮೂಲದ ನ್ಯೂರಲ್ ನೆಟ್ ವರ್ಕ್ (Neural Network) ಸಂಸ್ಥೆಯು ವೈಮಾನಿ ಬುದ್ಧಿಮತ್ತೆ (Aerial Intelligence – AI) ತಂತ್ರಙ್ಞನ ಸಹಾಯದಿಂದ ಕಾರ್ಯನಿರ್ವಹಿಸುವ ದ್ರೋಣ್ ಅನ್ನು ಅಭಿವೃದ್ಧಿಪಡಿಸಿದೆ.
ಶಬ್ದರಹಿತವಾಗಿ ಕೆಲಸ ಮಾಡುವುದು ಈ ದ್ರೋಣ್ ವಿಶೇಷ. ಎಐ 4ಕೆ ಆರ್ ಜಿಬಿ ಕ್ಯಾಮರಾ ಹಾಗೂ ಆನ್ ಬೋರ್ಡ್ ಪ್ರೊಸಿಸಿಂಗ್ ಸಿಸ್ಟಮ್ ಮೂಲಕ ಸ್ವಯಂಚಾಲಿತವಾಗಿ ಕೆಲಸ ಮಾಡುವ ಈ ದ್ರೋಣ್ ಒಳಾಂಗಣವಾಗಲಿ ಅಥವಾ ಹೊರಾಂಗಣವಾಗಲಿ ಜಿಪಿಎಸ್ ಸಹಾಯ ರಹಿತವಾಗಿ ಚಿತ್ರೀಕರಿಸಿ ಮಾಹಿತಿ ಸಂಗ್ರಹಿಸುವ ರೀತಿ ನಿರ್ಮಾಣ ಮಾಡಲಾಗಿದೆ.
“ಈ ನ್ಯಾನೊ ದ್ರೋಣ್ ಹಾರುವಾಗ ಯಾವುದಾದರೂ ವಸ್ತುಗಳು ಅಡ್ಡ ಬಂದರೂ ಅದನ್ನು ನಿವಾರಿಸಿಕೊಂಡು ಮುಂದೆ ಹಾರಾಟ ನಡೆಸುವ ಹಾಗೂ ದೃಷ್ಟಿ ಆಧಾರಿತ ಆಟೊ ಟೇಕಾಫ್ ಮತ್ತು ಲ್ಯಾಂಡಿಂಗ್ ಆಗಲಿದೆ. ಬೇರೆ ದ್ರೋಣ್ ರೀತಿ ಇದನ್ನು ಹೊರಗಿನಿಂದ ರಿಮೋಟ್ ಮೂಲಕ ಚಲಾಯಿಸುವ ಅವಶ್ಯಕತೆಯಿಲ್ಲ. ನಿಗಧಿತ ಕಾರ್ಯವನ್ನು ಸ್ವಯಂಚಾಲಿತವಾಗಿ ಪೂರ್ಣ ರೂಪದಲ್ಲಿ ಮುಗಿಸಲಿದೆ. ಐಐಟಿ ಹೈದರಾಬಾದ್ ನೆರವಿನೊಂದಿಗೆ ಈ ದ್ರೋಣ್ ಅಭಿವೃದ್ಧಿಪಡಿಸಲಾಗುತ್ತಿದೆ. 5ಜಿ ಕಾಂಪ್ಯಾಲಿಬಿಟಿಯನ್ನು ಈ ಸಣ್ಣ ದ್ರೋಣ್ ಹೊಂದಿದೆ. ಇದರ ಪ್ರೊಟೊಟೈಪ್ ಸದ್ಯದಲ್ಲೇ ಅಂತಿಮಗೊಳಿಸಲಾಗುತ್ತದೆ ” ಎಂದು ನ್ಯೂರಲ್ ನೆಟ್ ವರ್ಕ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ದೇಶದ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಈ ರೀತಿ ಖಾಸಗಿ ಸ್ಟಾರ್ಟಪ್ ಗಳು ದಿನೇ ದಿನೇ ಆಧುನಿಕ ಅವಿಷ್ಕಾರ ಮತ್ತು ಸಂಶೋಧನೆಗಳು ವಿಶ್ವ ಮಟ್ಟದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವುದು ಸಂತೋಷದ ವಿಷಯ.