ಬೆಂಗಳೂರು, ಫೆ.14 www.bengaluruwire.com : ವೈಮಾಂತರಿಕ್ಷ ಕ್ಷೇತ್ರದಲ್ಲಿ 84,000 ಕೋಟಿ ರೂ.ಗಳ ಆರ್ಡರ್ ಹೊಂದಿದೆ. ಇನ್ನೂ ರೂ. 50 ಸಾವಿರ ಕೋಟಿ ರೂ.ಗಳ ಮೌಲ್ಯದ ಆರ್ಡರ್‌ಗಳು ಕಾರ್ಯಗತಗೊಳ್ಳಬೇಕಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ ಅನಂಥಕೃಷ್ಣನ್ ಮಂಗಳವಾರ ತಿಳಿಸಿದ್ದಾರೆ.
ಅರ್ಜೆಂಟೀನಾ ಮತ್ತು ಈಜಿಪ್ಟ್‌ಗಳು ಎಚ್‌ಎಎಲ್ ನಿರ್ಮಿಸಿದ ಲಘು ಯುದ್ಧ ವಿಮಾನ ‘ತೇಜಸ್’ ಅನ್ನು ಖರೀದಿಸಲು ಆಸಕ್ತಿ ತೋರಿವೆ ಎಂದು ಅವರು ಹೇಳಿದರು.
ಅರ್ಜೆಂಟೀನಾಕ್ಕೆ 15 ವಿಮಾನಗಳ ಅವಶ್ಯಕತೆಯಿದ್ದರೆ, ಈಜಿಪ್ಟ್ 20 ಹಗುರ ಯುದ್ಧ ವಿಮಾನ (LCA)ಗಳನ್ನು ಬಯಸಿದೆ ಎಂದು ಅನಂತಕೃಷ್ಣನ್ ಇಲ್ಲಿಯ ಯಲಹಂಕ ಏರ್ ಫೋರ್ಸ್ ಸ್ಟೇಷನ್ ನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2023 ರ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
“84,000 ಕೋಟಿ ರೂಪಾಯಿಗಳ ಆರ್ಡರ್‌ನೊಂದಿಗೆ ನಾವು ಇಂದು ಆರಾಮದಾಯಕ ಸ್ಥಿತಿಯಲ್ಲಿದ್ದೇವೆ ಮತ್ತು ಪೈಪ್‌ಲೈನ್‌ನಲ್ಲಿ ಸುಮಾರು 50 ಸಾವಿರ ಕೋಟಿ ರೂ.ಗಳ ಆರ್ಡರ್‌ಗಳಿನ್ನು ಕಾರ್ಯಗತವಾಗುವ ಹಂತದಲ್ಲಿದೆ” ಎಂದು ಅವರು ಹೇಳಿದರು.
‘ಆತ್ಮ ನಿರ್ಭರ ಭಾರತ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಒತ್ತಿನಿಂದಾಗಿ ಸ್ವದೇಶೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಅನಂತಕೃಷ್ಣನ್ ತಿಳಿಸಿದರು.
ನಮ್ಮ ಮುಖ್ಯ ಉದ್ದೇಶ ಸಂಶೋಧನೆ ಮತ್ತು ಅಭಿವೃದ್ಧಿಯಾಗಿದೆ. ಇದಕ್ಕಾಗಿ ಹೆಚ್ಚುವರಿ ಹಣವನ್ನು ಇದಕ್ಕಾಗಿ ತೊಡಗಿಸಲಾಗುತ್ತದೆ. ಏರ್ ಶೋ ಮೊದಲ ದಿನ ಎಚ್ ಎ ಎಲ್ ಸ್ವದೇಶಿ ಸಾಮರ್ಥ್ಯ ಪ್ರದರ್ಶನ ಮಾಡಲಾಗಿದೆ. ಬೆಂಗಳೂರು ಹಾಗೂ ತುಮಕೂರು ಹೆಲಿಕಾಪ್ಟರ್ ಕೇಂದ್ರ ಹೊಸ ಆರ್ಡರ್ ಬಂದರೆ ಹೆಲಿಕಾಪ್ಟರ್ ಉತ್ಪಾದನೆಗೆ ಸಿದ್ಧವಾಗಿದೆ.
ಎಚ್ ಎಲ್ ಎಫ್ ಟಿ-40 ಕಡಿಮೆ ವೆಚ್ಚದಲ್ಲಿ ತರಬೇತಿ ನೀಡುವ ಯುದ್ಧ ವಿಮಾನವಾಗಿದೆ. ನಾಗರೀಕ ಹಾಗೂ ತರಬೇತಿ ಯುದ್ಧ ವಿಮಾನ ತಯಾರಿಕೆಯಲ್ಲಿ ಎಚ್ ಎಎಲ್ ಕ್ರಮ ಕೈಗೊಳ್ಳಲಿದೆ. ಹೊಸ ಆರ್ಡರ್ ಬಂದರೂ ಅದನ್ನು ಅನುಷ್ಠಾನಗೊಳಿಸಲು ಎಚ್ ಎಎಲ್ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಸಂಸ್ಥೆಗಳೊಂದಿಗೆ ಮೊದಲ ಹಾಗೂ ಎರಡನೇ ಹಂತದಲ್ಲಿ ಜೊತೆಗೆ ಕೆಲಸ ಮಾಡಲು ಸಿದ್ಧವಿದೆ. ಮುಂದಿನ ದಿನಗಳಲ್ಲಿ ಸೂಕ್ತ ಗಡುವಿನೊಳಗೆ ಗ್ರಾಹಕರಿಗೆ ಒಪ್ಪಂದದಂತೆ ಹೆಲಿಕಾಪ್ಟರ್ ಮತ್ತಿತರ ಉತ್ಪನ್ನಗಳನ್ನು ಹಸ್ತಾಂತರಿಸಲಿದ್ದೇವೆ.
ಫೆಬ್ರವರಿ 2024ರಲ್ಲಿ ಎಲ್ ಸಿಎ ಮಾರ್ಕ್ -2 ವರ್ಗದ 16 ಏರ್ ಕ್ರಾಫ್ಟ್ ಗಳ ಮೊದಲ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ನೀಡಲಿದ್ದೇವೆ. 12 ಹಗುರ ಉಪಯೋಗಿ ಹೆಲಿಕಾಪ್ಟರ್ (LUH) ಉತ್ಪಾದಿಸಿ 6 ಸೇನಾಪಡೆಗೆ ಹಾಗೂ 6 ವಾಯುಪಡೆಗೆ ನೀಡಲಿದ್ದೇವೆ ಎಂದರು.
ಎಚ್ ಎಲ್ ಎಫ್ ಟಿ-42 ವಿಮಾನದಲ್ಲಿದ್ದ ಹನುಮಾನ್ ಮಾಯ? :
ಏರ್ ಶೋ ನಡೆಯುವ ಎಚ್ ಎಎಲ್ ಪ್ರದರ್ಶನ ಸ್ಥಳದಲ್ಲಿ ಸೋಮವಾರ ಪ್ರದರ್ಶಿಸಲಾಗಿದ್ದ ತನ್ನ ಎಚ್ ಎಲ್ ಎಫ್ ಟಿ-42 (HLFT-42) ವಿಮಾನದ ಹಿಂಭಾಗದ ರೆಕ್ಕೆಯ ಮೇಲೆ ಲಂಬವಾಗಿ ಹಾಕಲಾಗಿದ್ದ ಭಗವಾನ್ ಹನುಮಾನ್ ಚಿತ್ರವನ್ನು ತೆಗೆದುಹಾಕಿದೆ. ಹನುಮಾನ್ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಈ ಚಿತ್ರವನ್ನು ತೆಗೆದು ಹಾಕಿರುವುದಕ್ಕೆ ಹಲವರು ಪ್ರಶ್ನಿಸಲಾರಂಭಿಸಿದ್ದಾರೆ.
ಈ ಚಿತ್ರದ ಮುಂದೆ ಕುತೂಹಲವನ್ನು ಕೆರಳಿಸಲು “ಚಂಡಮಾರುತವು ಬರುತ್ತಿದೆ” ಎಂಬ ಘೋಷಣೆಯೊಂದಿಗೆ ಭಗವಾನ್ ಹನುಮಾನ್ ಚಿತ್ರವು ಸ್ಥಿರ ಪ್ರದರ್ಶನದಲ್ಲಿ ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ ನಲ್ಲಿ ಅಳವಡಿಸಲಾಗಿತ್ತು.
ಆದಾಗ್ಯೂ, ನಿರ್ದಿಷ್ಟವಾಗಿ ಆ ಚಿತ್ರವನ್ನು ಹಿಂಪಡೆಯಲು ಏನೂ ಇಲ್ಲ ಎಂದು ಎಚ್ ಎಎಲ್‌ನ ಅಧಿಕಾರಿಗಳು ಹೇಳಿದ್ದಾರೆ.
“ಎಚ್ ಎಫ್ – 24 (HF-24 Marut – ಅಂದರೆ ಗಾಳಿ) ಎಂಬ ಎಚ್ ಎಎಲ್ ನಿರ್ಮಿತ ಮೊದಲ ಸ್ವದೇಶಿ ವಿಮಾನವಿತ್ತು. ಅದನ್ನು ಹಿಂದಕ್ಕೆ ಪಡೆಯಲಾಗಿತ್ತು. ವಾಯುಪುತ್ರ ಹನುಮಂತ ಎಂಬ ಕಾರಣಕ್ಕೆ ತರಬೇತಿ ಮಾದರಿ ವಿಮಾನಕ್ಕೆ ಹನುಮಾನ್ ಚಿತ್ರ ಹಾಕಲಾಗಿತ್ತು. ಈ ರೀತಿ ಚಿತ್ರವನ್ನು ಹಿಂಪಡೆಯುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳಿಲ್ಲ. ವಿಮಾನದ ಶಕ್ತಿಯನ್ನು ತೋರಿಸುವುದು ಇದರ ಉದ್ದೇಶವಾಗಿತ್ತು ಅಷ್ಟೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.