ಬೆಂಗಳೂರು, ಫೆ.13 www.bengaluruwire.com : ಸಿಲಿಕಾನ್ ಸಿಟಿಯ 14ನೇ ಆವೃತ್ತಿಯ ಏರೊ ಇಂಡಿಯಾ 2023ರ ಮಹತ್ವದ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು.
ಈ ಮೂಲಕ ಐದು ದಿನಗಳ ಕಾಲ ದೇಶ ವಿದೇಶಗಳ ಯುದ್ಧ ವಿಮಾನಗಳ ಹಾರಾಟ, ಯುದ್ಧೋಪಕರಣ ಹಾಗೂ ಶಸ್ತ್ರಾಸ್ತ್ರಗಳ ಪ್ರದರ್ಶನ, ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದ ವಿಚಾರ ಸಂಕಿರಣ, ರಕ್ಷಣಾ ಸಚಿವರ ಸಭೆ ಮತ್ತಿತರ ಕಾರ್ಯಕ್ರಮಗಳಿಗೆ ರಾಜಧಾನಿ ಸಾಕ್ಷಿಯಾಗಲಿದೆ.
ಏರ್ ಶೋ 2023 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೊದಲು ಭಾರತ ರಕ್ಷಣಾ ಕ್ಷೇತ್ರದಲ್ಲಿ ಆಮದು ಮಾಡಿಕೊಳ್ಳುತ್ತಿತ್ತು. ಈಗ ಬೇರೆ ದೇಶಗಳಿಗೆ ಯುದ್ಧ ಸಾಮಗ್ರಿಗಳನ್ನು ರಫ್ತು ಮಾಡುತ್ತಿದೆ. ಭಾರತದ ರಕ್ಷಣಾ ಕ್ಷೇತ್ರದ ಮೂಲಕ ಈಗ 1.5 ಬಿಲಿಯನ್ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಲಾಗುತ್ತಿದ್ದು, 2024- 25ರಲ್ಲಿ 5 ಬಿಲಿಯನ್ ಮೌಲ್ಯದ ಸರಕುಗಳನ್ನು ರಫ್ತು ಮಾಡುವ ಗುರಿಯಿದೆ. ದೇಶದ ಖಾಸಗಿ ಹೂಡಿಕೆದಾರರಿಗೆ ದೇಶದ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ವಿಫುಲ ಅವಕಾಶವಿದೆ ಎಂದು ಹೇಳಿದರು.
ದೇಶದಲ್ಲಿ ಕೇಂದ್ರದಲ್ಲಿ ನೀತಿ ಹಾಗೂ ಪ್ರಾಮಾಣಿಕತೆಯಿದೆ. ಇದನ್ನು ಖಾಸಗಿ ಹೂಡಿಕೆದಾರರು ಬಳಸಿಕೊಳ್ಳಬೇಕು. ಉದ್ದಿಮೆ ನಡೆಸಲು ಹೆಚ್ಚಿನ ಅನುಕೂಲವಿದೆ. ಕೇಂದ್ರ ಸರ್ಕಾರ ತಯಾರಿಕೆ ಕೈಗಾರಿಕೆಗಳಿಗೆ ತೆರಿಗೆ ರಿಯಾಯಿತಿ ನೀಡಿದೆ. ಏರೊ ಇಂಡಿಯಾ ಪ್ರದರ್ಶನ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಭವಿಷ್ಯ ನುಡಿದರು.
ಏರೊ ಇಂಡಿಯಾವನ್ನು ರೋಮಾಂಚನಗೊಂಡಿದ್ದೇನೆ. ಏರ್ ಶೋ ಮೂಲಕ ಬೆಂಗಳೂರಿನ ಆಕಾಶ ಹೊಸ ಉತ್ತುಂಗವನ್ನು ಮುಟ್ಟಿದೆ. ಇದು ಹೊಸ ಭಾರತದ ಸತ್ಯವಾಗಿದೆ. ಅಲ್ಲದೆ ಭಾರತದ ಸಾಮರ್ಥ್ಯದ ಪ್ರತೀಕವಾಗಿದೆ. ವಿಶ್ವಮಟ್ಟದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ದೇಶದ ಹೆಸರು ಉನ್ನತಮಟ್ಟವನ್ನು ತಲುಪಿದೆ. ಶತಕೋಟಿ ಅವಕಾಶಗಳ ಹಾದಿ ಪರಿಕಲ್ಪನೆಯು ನಮ್ಮಲ್ಲಿ ಸಾಕಾರಗೊಳ್ಳುತ್ತಿದೆ.
ಅತ್ಯಾಧುನಿಕ ತಂತ್ರಙ್ಞನ ಅಳವಡಿಸಿಕೊಂಡು ಕರ್ನಾಟಕ ರಕ್ಷಣಾ ಕ್ಷೇತ್ರವನ್ನು ಬಲಪಡಿಸುತ್ತಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಹೊಸ ಅವಿಷ್ಕಾರಗಳಾಗಬೇಕಿದೆ. ಹೊಸ ಅಲೋಚನೆ, ಯುವಕರನ್ನು ಬಳಸಿಕೊಂಡು ಇದನ್ನು ಸಾಕಾರಗೊಳಿಸಬೇಕಿದೆ. ಏರ್ ಶೋ ಕೇವಲ ವೈಮಾನಿಕ ಪ್ರದರ್ಶನವಷ್ಟೇ ಅಲ್ಲ, ಇದು ಭಾರತದ ಶಕ್ತಿಯಾಗಿದೆ. ಅಲ್ಲದೆ ವೈಮಾನಿಕ ಪ್ರದರ್ಶನ ದೇಶದ ರಕ್ಷಣಾ ಕ್ಷೇತ್ರಕ್ಕೆ ಬಲ ತುಂಬುತ್ತಿದೆ. ಏರೋ ಇಂಡಿಯಾದ ಕಿವಿಗಡಚಿಕ್ಕುವ ಘರ್ಜನೆಯು ಭಾರತದ ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರದ ಸಂದೇಶವನ್ನು ಪ್ರತಿಧ್ವನಿಸುತ್ತದೆ ಎಂದರು.
ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು ಎಂಬಂತೆ ತೇಜಸ್ ಆಕಾಶದಲ್ಲಿ ಘರ್ಜಿಸುತ್ತಿದೆ, ತುಮಕೂರಿನ ಹೆಲಿಕಾಪ್ಟರ್ ತಯಾರಿಕಾ ಕೇಂದ್ರ ಇವೆಲ್ಲ ಆತ್ಮನಿರ್ಭರ್ ಭಾರತಕ್ಕೆ ಸಾಕ್ಷಿಯಾಗಿದೆ. ಹೊಸ ಹೊಸ ಅವಕಾಶವಿದೆ. ಭಾರತದಲ್ಲೀಗ ಅಮೃತ್ ಕಾಲವಿದೆ. ನಮ್ಮ ದೇಶವು ಫೈಟರ್ ವಿಮಾನದ ರೀತಿ ಮುನ್ನಗ್ಗುತ್ತಿದೆ ಎಂದು ಪ್ರಧಾನಮಂತ್ರಿ ಬಣ್ಣಿಸಿದರು.
ಕರ್ನಾಟಕದ ಯುವಕರು ದೇಶವನ್ನು ಬಲಪಡಿಸಲು ರಕ್ಷಣಾ ಕ್ಷೇತ್ರದಲ್ಲಿ ತಮ್ಮ ತಾಂತ್ರಿಕ ಪರಿಣತಿಯನ್ನು ನಿಯೋಜಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಮ್ಮ ದೇಶದ ರಕ್ಷಣಾ ಕ್ಷೇತ್ರ ಸಶಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿದೆ. ಅದರಲ್ಲಿ ಏರ್ ಶೋ ಕಾರ್ಯಕ್ರಮ ಕೂಡ ಒಂದು. ದೇಶದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆ ಪ್ರಮುಖವಾಗಿದೆ. ತುಮಕೂರು, ಲಕ್ನೋ ಹಾಗೂ ಈಗ ಬೆಂಗಳೂರಿನಲ್ಲಿ ದೇಶದ ಕೈಗಾರಿಕೆ ವಿಚಾರದಲ್ಲಿ ಪ್ರಮುಖ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಕರ್ನಾಟಕ ರಾಜ್ಯ ಶ್ರಿಗಂಧದ ನಾಡು. ಈ ನೆಲದ ಸುಗಂಧ ದೇಶಾದ್ಯಂತ ಪಸರಿಸಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ರಕ್ಷಣಾ ಕ್ಷೇತ್ರದ ಸಾಮಗ್ರಿಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಅದಕ್ಕೆ ಸಂತಸವಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಈ ಏರ್ ಶೋನಲ್ಲಿ ಹಲವು ದೇಶಗಳ ರಕ್ಷಣಾ ಸಚಿವರು, ವಿವಿಧ ಕಂಪನಿಗಳ ಸಿಎಒ, ವಿವಿಧ ದೇಶಗಳ ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ಬಾರಿಯ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ ವಿಸ್ತೀರ್ಣ, ಪ್ರದರ್ಶಕರು, ವಿದೇಶಿಗರ ಪಾಲ್ಗೊಳ್ಳುವಿಕೆ ದೃಷ್ಟಿಯಿಂದ ವಿಶೇಷವಾಗಿದೆ. ದೇಶದ ರಕ್ಷಣಾ ಕ್ಷೇತ್ರದ ಶೇ.60ರಷ್ಟು ಅವಶ್ಯಕತೆಯನ್ನು ಬೆಂಗಳೂರು ಪೂರೈಸುತ್ತಿದೆ. ನಮ್ಮಲ್ಲಿ ಏರೊ ಸ್ಪೇಸ್ ನೀತಿ ರೂಪಿಸಲಾಗಿದೆ. ದೇಶದ ರಕ್ಷಣಾ ಕ್ಷೇತ್ರ ಬಲಪಡಿಸುವಲ್ಲಿ ಕರ್ನಾಟಕದ ಕೊಡುಗೆ ಮತ್ತಷ್ಟು ಹೆಚ್ಚಿಸಿ, ಉದ್ಯೋಗವಕಾಶವನ್ನು ಹೆಚ್ಚಿಸಲಾಗುವುದು. ನಮ್ಮ ಪ್ರಧಾನಿ ಗ್ರೇಟರ್ ಇಂಡಿಯಾ ಮಾಡುವ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಏರೊ ಇಂಡಿಯಾ 2023 ಕಾರ್ಯಕ್ರಮದ ನೆನಪಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂಚೆಚೀಟಿ ಬಿಡುಗಡೆಗೊಳಿಸಲಾಯಿತು. ಬೆಳಗ್ಗೆ 9:30ರ ಏರ್ ಶೋ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ 9.40ಕ್ಕೆ ಆಗಮಿಸಿದರು. ಬಳಿಕ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ವಾಯುನೆಲೆ ಸಾಕ್ಷಿಯಾಯಿತು. ದೇಶದ ವಿವಿಧ ಯುದ್ಧ ವಿಮಾನ, ಹೆಲಿಕಾಪ್ಟರ್ ಗಳು ಬಾನಂಚಿನಲ್ಲಿ ಸಾಗಿ ವೈಮಾನಿಕ ಪ್ರದರ್ಶನ ನೀಡಿ ದೇಶದ ಏರೊಸ್ಪೇಸ್ ಸಾಮರ್ಥ್ಯವನ್ನು ತೋರ್ಪಡಿಸಿದವು.
ವೇದಿಕೆ ಕಾರ್ಯಕ್ರಮದ ಬಳಿಕ ರಕ್ಷಣಾ ಇಲಾಖೆಯ ವಿವಿಧ ಪ್ರದರ್ಶನ ಮಳಿಗೆ ಹಾಗೂ ಇಂಡಿಯನ್ ಪೆವಿಲಿಯನ್, ಸ್ಥಿರ ಪ್ರದರ್ಶನ ಸ್ಟಾಲ್ ಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟರು. ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗಿದ್ದರು.