ಬೆಂಗಳೂರು/ಜಮ್ಮು, ಫೆ.12 www.bengaluruwire.com : ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಹಾಗೂ ಸೌರ ಫಲಕಗಳ ತಯಾರಿಕೆಯಲ್ಲಿ ಮಹತ್ವದ ಖನಿಜ ಲೀಥಿಯಮ್ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಗ್ರಾಮದಲ್ಲಿ ಪತ್ತೆಯಾಗಿದ್ದು ಈಗಲ್ಲ ಬರೋಬ್ಬರಿ 25 ವರ್ಷಗಳ ಹಿಂದೆಯೇ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (GSI)ಯು ಅಧ್ಯಯನ ನಡೆಸಿ ವರದಿ ನೀಡಿತ್ತು.
ಆದರೀಗ ಲೀಥಿಯಮ್ ನಿಕ್ಷೇಪಕ್ಕೆ ಸಾಕಷ್ಟು ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ 2021-22ನೇ ಇಸವಿಯಲ್ಲಿ ಇದರ ಬಗ್ಗೆ ಎರಡನೇ ಹಂತದ ಅಧ್ಯಯನ (G-3) ಕೈಗೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಗ್ರಾಮದಲ್ಲಿ ಕಂಡು ಬಂದಿರುವ 59 ಲಕ್ಷ ಟನ್ ಗಳಷ್ಟು ಲೀಥಿಯಮ್ ನಿಕ್ಷೇಪ ಉತ್ಕೃಷ್ಟ ಗುಣಮಟ್ಟದ್ದು ಎಂಬ ಅಂಶವು ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ಬ್ರೆಜಿಲ್, ಕೊಲಂಬಿಯಾ, ರಷ್ಯಾ ಹಾಗೂ ಚೈನಾ ರಾಷ್ಟ್ರಗಳಲ್ಲಿ ಮಾತ್ರ ಲೀಥಿಯಂ ಖನಿಜ ನಿಕ್ಷೇಪವಿದೆ. ಆದರೆ ಈ ಪಟ್ಟಿಗಳ ಸಾಲಿಗೆ ಈಗ ಭಾರತವೂ ಸೇರ್ಪಡೆಯಾದಂತಾಗಿದೆ. 1995-96 ಹಾಗೂ 1996-97ರ ತನಿಖೆಯ ಸಂದರ್ಭದಲ್ಲಿ, 350 ಚ.ಕಿ. ಕಿಮೀ ಭೂರಾಸಾಯನಿಕವಾಗಿ ಸಮೀಕ್ಷೆ ನಡೆಸಲಾಗಿತ್ತು. 1:50,000 ಮಾಪಕದಲ್ಲಿ ಕತ್ರಾ- ಮುತ್ತಲ್- ಪ್ರೆಸ್- ಸೆರ್ಸಂದು- ಸಲಾಲ್- ಪನಾಸ- ಪಯೋನಿ- ರಂಸುಹ್- ಚಕರ್ ಪ್ರದೇಶದಲ್ಲಿ ಬೇಸ್ ಮೆಟಲ್ ಮತ್ತು ಲಿಥಿಯಂ ನಿಕ್ಷೇಪ ಪತ್ತೆಗಾಗಿ ಈ ಪ್ರದೇಶಗಳಲ್ಲಿ 804 ಮಾದರಿಗಳ ಸಂಗ್ರಹದೊಂದಿಗೆ 17 Cu.m ಗುಂಡಿ ಅಥವಾ ಕಂದಕವನ್ನು ನೋಡಿ ಜಿಎಎಸ್ಐ ಅಧ್ಯಯನ ಕೈಗೊಂಡಿತ್ತು. ಭೂವಿಜ್ಞಾನಿಗಳಾದ ಕೆ.ಕೆ.ಶರ್ಮ ಹಾಗೂ ಎಸ್.ಸಿ.ಉಪ್ಪಲ್ ನವರು ಈ ಕುರಿತಂತೆ ಸರ್ಕಾರಕ್ಕೆ 1997ರಲ್ಲಿ ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದ್ದರು.
ಬಾಕ್ಸೈಟ್ ನಿಕ್ಷೇಪದಲ್ಲಿ ಅಲ್ಯುಮಿನಿಯಂ ಜೊತೆ ಸಿಕ್ಕ ಲೀಥಿಯಮ್ :
“1997ರಲ್ಲಿ ಜಿಎಸ್ಐ ಅಧಿಕಾರಿಗಳು ಈ ಪ್ರದೇಶದಲ್ಲಿ ವೈಜ್ಞಾನಿಕ ಸರ್ವೇಕ್ಷಣಾ ಅಧ್ಯಯನ ಕೈಗೊಂಡಾಗ ಲೀಥಿಯಮ್ ಖನಿಜವು ಬಾಕ್ಸೈಟ್ ನಿಕ್ಷೇಪದಲ್ಲಿ ಅಲ್ಯೂಮಿನಿಯಂ ಖನಿಜದೊಂದಿಗೆ ಲಭ್ಯವಾಗಿತ್ತು. ಈ ಕುರಿತಂತೆ ಆಗಿನ ಜಿಎಸ್ಐ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆಗ ಲೀಥಿಯಮ್ ಖನಿಜಕ್ಕೆ ಹೆಚ್ಚಿನ ಬೇಡಿಕೆಯಿರದ ಕಾರಣ ಈ ವರದಿಯು ಸರ್ಕಾರಿ ಕಪಾಟಿನಲ್ಲೇ ಭದ್ರವಾಗಿತ್ತು. ಯಾವಾಗ ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗಾಗಿ ಲೀಥಿಯಂ ಖನಿಜಕ್ಕೆ ಬೇಡಿಕೆ ಬಂದಿತ್ತೋ ಆಗ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಜಿಎಸ್ ಐನ ಅಧಿಕಾರಿಗಳು 2021-22ರಲ್ಲಿ ಸಲಾಲ್ ಗ್ರಾಮದಲ್ಲಿರುವ ವೈಷ್ಣವೋದೇವಿ ದೇಗುಲದ ತಪ್ಪಲಿನ ಸುತ್ತಮುತ್ತ ಅಧ್ಯಯನ ಜಿ-3 ಉನ್ನತ ಮಟ್ಟದ ಅಧ್ಯಯನ ಕೈಗೊಂಡಿತ್ತು” ಎಂದು ಜಿಎಸ್ಐ ಇಲಾಖೆ (ಬೆಂಗಳೂರು)ಯ ನಿವೃತ್ತ ಉಪ ಮಹಾನಿರ್ದೇಶಕರಾದ ಡಾ.ಪ್ರಕಾಶ್.ಎಚ್.ಎಸ್.ಎಮ್ ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ಖನಿಜ ನಿಕ್ಷೇಪ ಪತ್ತೆಗೆ ನಾಲ್ಕು ಹಂತದ ಅಧ್ಯಯನ :
ಯಾವುದೇ ಖನಿಜ ನಿಕ್ಷೇಪದ ಕುರಿತಂತೆ ಭೂವೈಜ್ಞಾನಿಕ ಸರ್ವೇಕ್ಷಣಾ ನಡೆಸುವಾಗ ನಾಲ್ಕು ಹಂತಗಳ ಅಧ್ಯಯನವನ್ನು ಕೈಗೊಳ್ಳಲಾಗುತ್ತದೆ. ಜಿ-4, ಜಿ-3, ಜಿ-2 ಹಾಗೂ ಜಿ-1 ಎಂಬ ಹಂತಗಳಲ್ಲಿ ಅಧ್ಯಯನ ಕೈಗೊಂಡ ಮೇಲಷ್ಟೇ, ಗಣಿಗಾರಿಕೆ ನಡೆಸಬೇಕಾ? ಅಥವಾ ಬೇಡವೇ? ಎಂಬ ನಿರ್ಧಾರ ಕೈಗೊಳ್ಳಲಾಗುತ್ತದೆ.
ಖನಿಜ ನಿಕ್ಷೇಪ ಅಧ್ಯಯನದಲ್ಲಿ ಪ್ರಥಮವಾಗಿ ಜಿ-4 ಅಧ್ಯಯನದ ಮೂಲಕ ಆರಂಭವಾಗುತ್ತದೆ. ಈ ಸ್ಟೇಜ್ ನಲ್ಲಿ ಖನಿಜ ನಿಕ್ಷೇಪ ಪತ್ತೆಯಾಗಿರುವ ಸ್ಥಳಧ ಮ್ಯಾಪಿಂಗ್ ಮಾಡಲಾಗುತ್ತದೆ. 1: 50,000 ಸ್ಕೇಲಿಂಗ್ ನಲ್ಲಿ 350 ಚದರ ಕಿ.ಮೀ ವ್ಯಾಪ್ತಿಯಲ್ಲಿ ಅಧ್ಯಯನ ಆರಂಭಿಸಲಾಗುತ್ತದೆ. ಸ್ಥಳದಲ್ಲಿ 200 ಮೀಟರ್ * 200 ಮೀಟರ್ ಗ್ರಿಡ್ ನಲ್ಲಿ ಮಾದರಿಯನ್ನು ಸಂಗ್ರಹಿಸಿ, ಅವುಗಳನ್ನು ವೈಜ್ಞಾನಿಕ ಪ್ರಕ್ರಿಯೆಗೆ ಒಳಪಡಿಸಿ ವಿಶ್ಲೇಷಣೆ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ಸಲಾಲ್ ಗ್ರಾಮದಲ್ಲಿನ ಭೂಮಿಯಲ್ಲಿ ಸರಾಸರಿಯಾಗಿ 300 ರಿಂದ 340 ಪಾರ್ಟ್ಸ್ ಪರ್ ಮಿಲಿಯನ್ (PPM) ಗ್ರೇಡ್ ಲೀಥಿಯಂ ಖನಿಜವಿರುವುದು ತಿಳಿದು ಬಂದಿತ್ತು. ಈ ಅಧ್ಯಯನ ನಡೆಸಲು ಭೂವಿಜ್ಞಾನಿಗಳಿಗೆ 1 ವರ್ಷ ಸಮಯ ಹಿಡಿದಿತ್ತು.
ಇದಾದ ಬಳಿಕ ಜಿಎಸ್ಐನ ಭೂವಿಜ್ಞಾನಿಗಳು ಜಿ-3 ಅಧ್ಯಯನವನ್ನು 2021-22ರಲ್ಲಿ ಆರಂಭಿಸಿದರು. ಈ ಸಂದರ್ಭದಲ್ಲಿ ಖನಿಜ ನಿಕ್ಷೇಪ ಪತ್ತೆಯಾದ ಸ್ಥಳದಲ್ಲಿ 8 ರಿಂದ 10 ಮೀಟರ್ ಆಳದಲ್ಲಿ ಭೂಮಿಯನ್ನು ಕೊರೆದು ಅರ್ಧ ಮೀಟರ್ ನಷ್ಟು ಮಾದರಿಯನ್ನು ಸಂಗ್ರಹಿಸಿ, ಅವುಗಳನ್ನು ಸಹ ಹಲವು ಹಂತದ ಪ್ರಕ್ರಿಯೆಗಳಿಗೆ ಒಳಪಡಿಸಿ, ವೈಜ್ಞಾನಿಕ ವಿಶ್ಲೇಷಣೆ ನಡೆಸಿದ ಬಳಿಕವಷ್ಟೇ ಲೀಥಿಯಮ್ ಖನಿಜ 550 ಪಾರ್ಟ್ಸ್ ಪರ್ ಮಿಲಿಯನ್ ಗ್ರೇಡ್ ಉತ್ಕೃಷ್ಣ ಗುಣಮಟ್ಟ ಹೊಂದಿರುವುದು ಪತ್ತೆಯಾಗಿದೆ. ಈ ಅಧ್ಯಯನ ನಡೆಸಲು 1 ವರ್ಷ ಕಾಲಾವಧಿ ಹಿಡಿದಿದೆ ಎಂದು ಹಿರಿಯ ಭೂವಿಜ್ಞಾನಿ ಡಾ.ಪ್ರಕಾಶ್.ಎಚ್.ಎಸ್.ಎಮ್ ಹೇಳಿದ್ದಾರೆ.
ಇನ್ನು ಎರಡು ಹಂತದ ಅಧ್ಯಯನ ಬಾಕಿಯಿದೆ :
ಮುಂದಿನ ದಿನಗಳಲ್ಲಿ ಜಿಎಸ್ ಐ ವಿಜ್ಞಾನಿಗಳು ಜಿ-2 ಅಧ್ಯಯನವನ್ನು ಆರಂಭಿಸಲಿದ್ದಾರೆ. ಇದಕ್ಕೆ ಏನಿಲ್ಲವೆಂದರೂ 1 ರಿಂದ 2 ವರ್ಷ ಕಾಲಾವಧಿ ಬೇಕಾಗಬಹುದು. ಕೇಂದ್ರ ಸರ್ಕಾರ ಹೆಚ್ಚಿನ ಒತ್ತಾಸೆ ನೀಡಿ, ವೇಗವಾಗಿ ಕಾರ್ಯ ನಡೆಸಿದರೆ ಒಂದು ವರ್ಷದಲ್ಲಿ ಜಿ-2 ಅಧ್ಯಯನ ಪೂರ್ಣಗೊಳ್ಳಬಹುದು. ಈ ಹಂತದಲ್ಲಿ ಲಿಥಿಯಂ ಖನಿಜ ನಿಕ್ಷೇಪದ ಕುರಿತಂತೆ ವಿಸ್ತಾರವಾದ ವಿಶ್ಲೇಷಣೆ ನಡೆಸಲಾಗುತ್ತದೆ.
ಇನ್ನು ಖನಿಜ ನಿಕ್ಷೇಪದ ಕುರಿತಂತೆ ಜಿ-1 ಕೊನೆಯ ಹಂತವಾಗಿದ್ದು, ಖನಿಜ ನಿಕ್ಷೇಪವನ್ನು ವರ್ಗೀಕರಿಸುವ, ಈ ಖನಿಜದ ಅಂಶ, ಗುಣಮಟ್ಟ, ಲಭ್ಯತೆಯ ಪ್ರಮಾಣವನ್ನು ಪರಿಶೀಲನೆ ನಡೆಸಿ ಗಣಿಕಾರಿಕೆ ನಡೆಸಲು ಸೂಕ್ತವಾಗಿರುವ ಸ್ಥಳಗಳು ಯಾವುದು? ಯಾವ ರೀತಿಯಲ್ಲಿ ಗಣಿಕಾರಿಕೆಯನ್ನು ನಡೆಸಬಹುದು? ಈ ಖನಿಜದ ಗುಣಮಟ್ಟದ ಮಾರುಕಟ್ಟೆ ಮೌಲ್ಯವನ್ನು ಲೆಕ್ಕಹಾಕಿ, ಲಾಭವನ್ನು ಅಳೆದು ತೂಗಿ ಹಾಕಿ ಗಣಿಕಾರಿ ನಡೆಸಲು ಸೂಕ್ತವೇ ಎಂಬಂತಹ ಸಂಪೂರ್ಣ ವಿಶ್ಲೇಷಣೆ ನಡೆಸಲಾಗುತ್ತದೆ. ಇದಾದ ನಂತರ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ತನ್ನ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಕುರಿತಂತೆ ಲೀಥಿಯಮ್ ಗಣಿಗಾರಿಕೆ ಕುರಿತಂತೆ ತನ್ನಲ್ಲಿನ ನಿಕ್ಷೇಪಗಳಿಗೆ ರಾಯಧನ (Royalty) ನಿಗದಿ ಮಾಡಿ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡುವ ಕಾರ್ಯ ನಡೆಸಲಿದೆ.
59 ಲಕ್ಷ ಟನ್ ಲೀಥಿಯಮ್ ಪ್ರಮಾಣ ಕಡಿಮೆಯಾಗಬಹುದು!! :
ಸದ್ಯ ಜಿಎಸ್ ಐ ಭೂವಿಜ್ಞಾನಿಗಳು ಸಲಾಲ್ ಗ್ರಾಮದಲ್ಲಿ 59 ಲಕ್ಷ ಟನ್ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಅಂದಾಜಿಸಿದ್ದಾರೆ. ಆದರೆ ಜಿ-1 ಹಂತದ ಉನ್ನತ ಅಧ್ಯಯನದ ಬಳಿಕ ಗಣಿಕಾರಿಕೆ ನಡೆಸಬಹುದಾದ ಲೀಥಿಯಂ ನಿಕ್ಷೇಪದ ಪ್ರಮಾಣ 10 ಲಕ್ಷ ಟನ್ ನಷ್ಟು ಇಳಿಕೆಯಾಗಲೂ ಬಹುದು. ಇದಲ್ಲಾ ಅಧ್ಯಯನದಿಂದ ತಿಳಿದು ಬರಬೇಕಿದೆ ಎಂದು ಡಾ.ಪ್ರಕಾಶ್.ಎಚ್.ಎಸ್.ಎಮ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
2-3 ವರ್ಷಗಳ ದೇಶದ ಬೇಡಿಕೆ ಪೂರೈಸುವ ಸಾಧ್ಯತೆಯಿದೆ :
ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಬಾಕಿ ಉಳಿದ ಜಿ-2 ಹಾಗೂ ಜಿ-1 ಅಧ್ಯಯನವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿದರೂ 2025ನೇ ಇಸವಿಯ ವೇಳೆಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಗ್ರಾಮದಲ್ಲಿ ಲೀಥಿಯಮ್ ಗಣಿಗಾರಿಕೆ ಆರಂಭಿಸುವ ಸಾಧ್ಯತೆಯಿದೆ. ಈ ಇಡೀ ಲೀಥಿಯಂ ನಿಕ್ಷೇಪವನ್ನು ಹೊರತೆಗೆದರೆ ಅಂದಾಜು ಎರಡು ಮೂರು ವರ್ಷಗಳ ತನಕ ದೇಶದ ಲೀಥಿಯಂ ಬೇಡಿಕೆಯನ್ನು ಪೂರೈಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಮೊಗದಲ್ಲಿ ಸಂತಸ :
ಲೀಥಿಯಮ್ ನಿಕ್ಷೇಪ ಪತ್ತೆಯಾಗಿರುವುದಕ್ಕೆ ಸ್ಥಳೀಯರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಸ್ಥಳೀಯರು ತಮ್ಮ ಬದುಕು ಹಸನಾಗುವ ನಿರೀಕ್ಷೆಯಲ್ಲಿದ್ದು, ಈ ಯೋಜನೆಯಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ಕೊಡಲಾಗುತ್ತದೆ. ಲಿಥಿಯಂ ನಿಕ್ಷೇಪ ಗಣಿಗಾರಿಕೆ ಯೋಜನೆಯಲ್ಲಿ ಮನೆ, ಭೂಮಿ ಕಳೆದುಕೊಳ್ಳುವವರಿಗೆ ಕಾನೂನು, ನಿಯಮಾವಳಿಯ ಪ್ರಕಾರ ಪರಿಹಾರ ನೀಡಲಾಗುತ್ತದೆ. ಅದೇ ರೀತಿ ಪುನರ್ವಸತಿ ಕಲ್ಪಿಸಲಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಗಣಿ ಇಲಾಖೆ ಕಾರ್ಯದರ್ಶಿ ಅಮಿತ್ ಶರ್ಮ ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಲಾಲ್ ಗ್ರಾಮದಲ್ಲಿ ಕಂಡು ಬಂದಿರುವ ಲೀಥಿಯಮ್ ಖನಿಜವು, ದೇಶದ ಎಲೆಕ್ಟ್ರಾನಿಕ್ ವಾಹನಗಳು ಮತ್ತು ಸೌರ ಫಲಕಗಳ ತಯಾರಿಕೆಗೆ ಮಹತ್ವದ ಕೊಡುಗೆ ನೀಡುವಂತಾದರೆ ಅಷ್ಟರ ಮಟ್ಟಿಗೆ ದೇಶದ ಅರ್ಥವ್ಯವಸ್ಥೆಗೆ ಸಹಾಯಕವಾಗಲಿದೆ.