ಬೆಂಗಳೂರು, ಫೆ.11 www.bengaluruwire.com : ಕಿವಿಗಡಚ್ಚಿಕ್ಕುವ ಶಬ್ದ ಕೇಳುವ ಮುನ್ನವೇ ಆಕಾಶದಲ್ಲಿ ಕಂಡು ಆ ಲೋಹದ ಹಕ್ಕಿ ಮಾಯವಾಗುತ್ತಿತ್ತು. ಅಗಸದಲ್ಲಿ ಇನ್ನೆರಡು ವಿಮಾನಗಳು ಹಾರುತ್ತಲೇ ಗಾಳಿಯಲ್ಲಿ ಹೊಗೆಯಿಂದ ಹೃದಯ ಆಕೃತಿ ಮೂಡಿಸುತ್ತಿದ್ದವು. ಒಂದರ ಮೇಲೊಂದು ಹೆಲಿಕಾಪ್ಟರ್ ಗಳು ಚಲಿಸುತ್ತಲೇ ಸಮರಕ್ಕೆ ಸನ್ನದ್ಧವಾಗುವಂತೆ ಸಾಗುತ್ತಿದ್ದವು.
ಇದು ಯಲಹಂಕ ಏರೊ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಯುದ್ಧವಿಮಾನಗಳು, ಹೆಲಿಕಾಪ್ಟರ್ ಗಳು ನೀಲಾಕಾಶದಲ್ಲಿ ಪೂರ್ಣ ರೀತಿಯ ಪೂರ್ವಾಭ್ಯಾಸ ನಡೆಸಿದ ಸಂದರ್ಭದಲ್ಲಿ ಕಂಡು ಬಂದ ಕೆಲವು ದೃಶ್ಯಗಳಿವು.
14ನೇ ಆವೃತ್ತಿಯ ಏರ್ ಶೋ ಫೆ.13 ರಿಂದ ಐದು ದಿನಗಳ ಕಾಲ ನಗರದಲ್ಲಿ ನಡೆಯಲಿದ್ದು, ಶನಿವಾರ ವಾಯುಪಡೆ, ನೌಕಾಪಡೆ, ಸೇನಾಪಡೆ ಹಾಗೂ ಮಾಧ್ಯಮ ಹಾಗೂ ಅವರ ಕುಟುಂಬದವರಿಗೆ ವೈಮಾನಿಕ ಕಸರತ್ತು ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಬೆಳಗ್ಗೆ 8.30ರ ಒಳಗಾಗಿ ವಾಯುನೆಲೆಯ ಪಕ್ಕದ ನಿಟ್ಟೆ ಕಾಲೇಜು ರಸ್ತೆಯ ಕಡೆಯಿಂದ ಗೇಟ್ ನಂಬರ್ 8 ಹಾಗೂ 8ಎ ಪ್ರವೇಶದ್ವಾರದ ಮೂಲಕ ಪ್ರವೇಶ ಕಲ್ಪಿಸಲಾಗಿತ್ತು.
ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯ ವೈಮಾನಿಕ ಪ್ರದರ್ಶನ :
ಬೆಳಗ್ಗೆ 9:30 ರಿಂದಲೇ ಪೂರ್ಣರೂಪದ ಪೂರ್ವಸಿದ್ಧತಾ ವೈಮಾನಿಕ ಪ್ರದರ್ಶನ ಆರಂಭವಾಗಿ 12 ಗಂಟೆಯವರೆಗೆ ನಡೆಯಿತು. ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆಯಲ್ಲಿ ಎಚ್ ಎಎಲ್ ನಿರ್ಮಿತ 15 ಹೆಲಿಕಾಪ್ಟರ್ ಯಲಹಂಕ ವಾಯುನೆಲೆಯಲ್ಲಿ ನಡೆಸಿದ ವ್ಯವಸ್ಥಿತ ಹಾರಾಟ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯಿತು.
ತಲಾ 6 ಸುಧಾರಿತ ಹಗುರ ಹೆಲಿಕಾಪ್ಟರ್ (ALH), ಹಗುರ ಉಪಯೋಗಿ ಹೆಲಿಕಾಪ್ಟರ್ (LUH) ಹಾಗೂ ಮೂರು ಹಗುರ ಯುದ್ಧ ಹೆಲಿಕಾಪ್ಟರ್ (LCH) ಬಾನಲ್ಲಿ ತಮ್ಮ ವೈಮಾನಿಕ ಕಸರತ್ತು ಪ್ರದರ್ಶಿಸಿದವು. ಬೆಳಗ್ಗೆಯಿಂದಲೇ ಬಿಸಿಲ ಝಳವಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಲೋಹದಹಕ್ಕಿಗಳ ಪ್ರೇಮಿಗಳು, ಆಕಾಶದತ್ತ ನೋಟ ಹರಿಸಿ ಕ್ಷಣ ಕ್ಷಣಕ್ಕೂ ತರಹೇವಾರಿ ಹೆಲಿಕಾಪ್ಟರ್ ಹಾಗೂ ವಿಮಾನಗಳ ಪ್ರದರ್ಶನವನ್ನು ನೋಡುತ್ತಾ ತಮ್ಮನ್ನೇ ತಾವು ಮರೆತಿದ್ದರು. ಹಲವರು ತಮ್ಮ ಮೊಬೈಲ್‌ನಲ್ಲಿ ವೈಮಾನಿಕ ಪ್ರದರ್ಶನವನ್ನು ಸೆರೆಹಿಡಿದಿದ್ದರು.
ಅಮೆರಿಕ ನಿರ್ಮಿತ ಗ್ಲೋಬ್ ಮಾಸ್ಟರ್ ದೇಶೀಯ ರಕ್ಷಣಾಪಡೆಗೆ ಸೇರ್ಪಡೆಯಾಗಿದ್ದು, ಸೂರ್ಯ ಕಿರಣ್ ಜೊತೆ ರಾಜ ಗಾಂಭೀರ್ಯದಲ್ಲಿ ಹಾರಾಟ ನಡೆಸಿತು.
ಎಂದಿನಂತೆ ತೇಜಸ್ ಯುದ್ಧ ವಿಮಾನ ಶಬ್ದಾತೀತವಾಗಿ ಬಾನಲ್ಲಿ ಗೀಳಿಡುತ್ತಾ ಸಾಗುತ್ತಾ, ಮೇಲ್ಮುಖ, ಕೆಳಮುಖವಾಗಿ ವೇಗವಾಗಿ ಸಾಗುತ್ತಿದ್ದರೆ, ವೈಮಾನಿಕ ಪ್ರದರ್ಶನ ಸ್ಥಳದಲ್ಲಿದ್ದು ಅಗಸದತ್ತ ನೋಟ ಹರಿಸಿದವರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಸುಧಾರಿತ ಯುದ್ಧ ವಿಮಾನಕ್ಕೆ ಸಮರ್ಥ ಪೈಲೆಟ್ ಗಳನ್ನು ತಯಾರು ಮಾಡಲು ತರಬೇತಿ ನೀಡುವ ರಫಲ್ ಯುದ್ಧ ವಿಮಾನ ಪ್ರದರ್ಶನದ ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಹಾರಿ ತನ್ನ ಚಮತ್ಕಾರವನ್ನು ತೋರಿತು.
ಪ್ರತಿ ಏರೊ ಇಂಡಿಯಾ ಪ್ರದರ್ಶನದಲ್ಲಿ ಜನರನ್ನು ತನ್ನತ್ತ ವಿಶೇಷವಾಗಿ ಸೆಳೆಯುವ ಸೂರ್ಯಕಿರಣ್ ವಿಮಾನ, ಕೆಲವೊಮ್ಮೆ ಭೂಮಿಯ ಸನಿಹಕ್ಕೆ, ಮತ್ತೋಮ್ಮೆ ಏಕಾಏಕಿ ಆಕಾಶದೆತ್ತರಕ್ಕೆ ಅತ್ಯಧಿಕ ವೇಗದಲ್ಲಿ ಸಾಗಿ, ಮಗದೊಮ್ಮೆ ವಿರುದ್ಧ ದಿಕ್ಕಿನಲ್ಲಿ ಸೂರ್ಯಕಿರಣ್ ವಿಮಾನವು ಸಾಗುತ್ತಿದ್ದರೆ ವಾಯುನೆಲೆಗೆ ಬಂದವರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಏರೊ ಇಂಡಿಯಾ ಪೂರ್ವಭ್ಯಾಸದಲ್ಲಿ ಗಮನ ಸೆಳೆದ ಡಕೋಟಾ ವಿಮಾನ :
ಏರ್ ಶೋನಲ್ಲಿ 74 ವರ್ಷಗಳ ಹಿಂದಿನ ‘ಡಕೋಟಾ ಡಿ.ಸಿ.3’ ಯುದ್ಧ ವಿಮಾನ ಪೂರ್ವಸಿದ್ಧತಾ ಹಾರಾಟ ನಡೆಸಿದಾಗ, ದೇಶದ ಅತ್ಯಂತ ಹಳೆಯ ವಿಮಾನವನ್ನು ಕಂಡು ನೋಡುಗರು ಪುಳಕಿತರಾದರು. 1947ರಿಂದ 1971ರವರೆಗೆ ನಾಲ್ಕು ದಶಕಗಳ ಕಾಲ ಭಾರತ ಮಾತೆಗೆ ಸೇವೆ ಸಲ್ಲಿಸಿದ್ದ ‘ಡಕೋಟಾ ಡಿ.ಸಿ.3’ ಯುದ್ಧ ವಿಮಾನ ಹಾರಾಟಕ್ಕೆ ಅಸಮರ್ಥವಾಗಿ ಗುಜರಿಗೆ ಸೇರಿತ್ತು. ಈ ವಿಮಾನ ಬ್ರಿಟನ್‌ನಲ್ಲಿರುವುದನ್ನು ಅರಿತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು 2011ರಿಂದ ಏಳು ವರ್ಷಗಳ ಕಾಲ ಅಲ್ಲೇ ಅದನ್ನು ದುರಸ್ತಿ ಮಾಡಿಸಿದರು. ನಂತರ ಬ್ರಿಟನ್‌ನಿಂದ ಒಂಬತ್ತು ದಿನಗಳ ಕಾಲ ಹಾರಾಟ ಮಾಡಿ ಕಳೆದ ವರ್ಷ ಭಾರತದ ನೆಲಕ್ಕೆ ಮುತ್ತಿಟ್ಟಈ ವಿಮಾನವನ್ನು ರಾಜೀವ್ ಚಂದ್ರಶೇಖರ್ ಅವರು 2018ರ ಫೆಬ್ರವರಿಯಲ್ಲಿ ಭಾರತೀಯ ವಾಯುಸೇನೆಗೆ (ಐಎಎಫ್) ಕಾಣಿಕೆಯಾಗಿ ಹಸ್ತಾಂತರಿಸಿದರು.
ಡಕೋಟ ಯುದ್ಧ ವಿಮಾನದ ಇತಿಹಾಸ :
ಅಮೆರಿಕದ ಡಗ್ಲಸ್ ಏರ್‌ಕ್ರಾಫ್ಟ್ ಕಂಪನಿ 1935ರಲ್ಲಿ ಈ ವಿಮಾನ ವಿನ್ಯಾಸ ಮಾಡಿ ಉತ್ಪಾದನೆ ಆರಂಭಿಸಿತ್ತು. 27 ಮಂದಿಯನ್ನು ಹೊತ್ತೊಯ್ಯ ಬಲ್ಲ ಸಾಮರ್ಥ್ಯದ ಈ ವಿಮಾನ ಗಂಟೆಗೆ 346 ಕಿ.ಮೀ. ವೇಗದಲ್ಲಿ ಹಾರಬಲ್ಲದು.
ಪ್ರಥಮ ಬಾರಿಗೆ ಎಚ್ ಎಲ್ ಎಫ್ ಟಿ-42 ವಿಮಾನ ಪ್ರದರ್ಶನ :
ಸೂರ್ಯಕಿರಣ್, ಎಂಐ17, ಹಗುರ ಉಪಯೋಗಿ ಹೆಲಿಕಾಪ್ಟರ್ (LUH), ಸುಧಾರಿತ ಹಗುರ ಹೆಲಿಕಾಪ್ಟರ್ ಎಂಕೆ3 (ALH-MKlll), ಹಗುರ ಯುದ್ಧ ಹೆಲಿಕಾಪ್ಟರ್ (LCH), ತೇಜಸ್ ಯುದ್ಧ ವಿಮಾನ, ಹಾಕ್, ಸುಖೋಯ್, ಐಜೆಟಿ, ಎಚ್ ಟಿಟಿ-40 ತರಬೇತಿ ವಿಮಾನ, ಸುಖೋಯ್-30 ಎಂಕೆಐ, ಮಿಗ್-29, ಜಾಗ್ವಾರ್ ವೈಮಾನಿಕ ಪ್ರದರ್ಶನದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿದ್ಧವಾಗಿವೆ. ಎಚ್ ಎಎಲ್ ಇದೇ ಮೊದಲ ಬಾರಿಗೆ ಎಚ್ ಎಲ್ ಎಫ್ ಟಿ-42 (HLFT-42) ಮುಂದಿನ ತಲೆಮಾರಿನ ಸುಧಾರಿತ ಸೂಪರ್ ಸಾನಿಕ್ ತರಬೇತಿ ಜೆಟ್ ವಿಮಾನದ ಸಾಮರ್ಥ್ಯವನ್ನು ನೀಲಾಕಾಶದಲ್ಲಿ ಪ್ರದರ್ಶಿಸಲಿದೆ.
ಮೊರಾರ್ಜಿ ವಸತಿ ಶಾಲಾ ಮಕ್ಕಳು ಏರ್ ಶೋನಲ್ಲಿ ಭಾಗಿ :
ಬೆಳಗ್ಗೆ 9.30 ರಿಂದ ಪೂರ್ವಾಹ್ನ 12 ಗಂಟೆಯವರೆಗೆ ಯಲಹಂಕ ವಾಯುನೆಲೆ ಕೇಂದ್ರದಲ್ಲಿ ವಿಮಾನ, ಹೆಲಿಕಾಪ್ಟರ್ ಗಳು ನಡೆಸಿದ ನಡೆದ ಪೂರ್ವಭ್ಯಾಸ ಕಾರ್ಯವನ್ನು ಇದೇ ಮೊದಲ ಬಾರಿ ನೇರವಾಗಿ ಕಂಡ ದೇವನಹಳ್ಳಿ ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಬಹಳ ಖುಷಿಪಟ್ಟರು. ಈ ಪೂರ್ವಸಿದ್ಧತಾ ವೈಮಾನಿಕ ಪ್ರದರ್ಶನದಲ್ಲಿ ಸರ್ಕಾರಿ ಶಾಲಾ ಮಕ್ಕಳು ಪಾಲ್ಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್ ವಿಶೇಷ ಮುತುವರ್ಜಿ ವಹಿಸಿ ಸರ್ಕಾರಿ ಶಾಲಾ ಮಕ್ಕಳು ಈ ಮಹತ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಿದ್ದರು.
ಈ ಏರ್ ಶೋ ಪೂರ್ವಭ್ಯಾಸ ಏರ್ ಶೋನಲ್ಲಿ ಭಾಗವಹಿಸಿದ
ಧನುಶ್, 9ನೇ ತರಗತಿಯ ವಿದ್ಯಾರ್ಥಿ ಧನುಶ್, “ಏರೊ ಇಂಡಿಯಾ ಶೋ ಚೆನ್ನಾಗಿತ್ತು, ಫಾರ್ಮೇಶನ್ ಚೆನ್ನಾಗಿ ಪ್ರದರ್ಶನ ಮಾಡಿದ್ದರು. ಇದೇ ಮೊದಲ ಬಾರಿಗೆ ಏರೊ ಶೋ ನಲ್ಲಿ ಭಾಗವಹಿಸಿ ವಿಶೇಷ ಅನುಭವವಾಯ್ತು. ಸೂರ್ಯಕಿರಣ್ ವಿಮಾನಗಳು ಬಾನಿನಲ್ಲಿ ರೂಪಿಸಿದ ಹಾರ್ಟ್ ಶೇಪ್ ಚೆನ್ನಾಗಿತ್ತು. ಏರೊ ಇಂಡಿಯಾ ಶೋಗೆ ನನ್ನದೊಂದು ಸಲ್ಯೂಟ್” ಎಂದು ಬೆಂಗಳೂರು ವೈರ್ ಜೊತೆ ತನ್ನ ಸಂತಸ ಹಂಚಿಕೊಂಡನು.
ಇನ್ನು ಅದೇ ಶಾಲೆಯ ವಿದ್ಯಾರ್ಥಿನಿ
ಯಶಸ್ವಿನಿ, “ಬೆಂಗಳೂರು ಗ್ರಾಮಾಂತರದಲ್ಲಿನ ಶಾಲಾಮಕ್ಕಳಿಗೆ ಏರ್ ಶೋನಲ್ಲಿ ಇಷ್ಟು ಸುಲಭವಾಗಿ ವೀಕ್ಷಿಸಲು ಅವಕಾಶ ಲಭಿಸುತ್ತೆ ಅಂತ ಅಂದುಕೊಂಡಿರಲಿಲ್ಲ. ಯಲಹಂಕ ವಾಯುನೆಲೆಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿ, ಏರ್ ಶೋ ಪ್ರದರ್ಶನ ಕಂಡು ಖುಷಿಯಾಯ್ತು. ಸೂರ್ಯಕಿರಣ್ ಶೋ ಚೆನ್ನಾಗಿತ್ತು. ಎರಡು ಸೂರ್ಯ ಕಿರಣ್ ಮುಖಾ ಮುಖಿಯಾಗಿ ಸಾಗಿದ್ದು ಸಖತ್ ರೋಮಾಂಚನವಾಯ್ತು. 7ನೇ ತರಗತಿಯಿಂದ 10ನೇ ತರಗತಿವರೆಗೆ ಒಟ್ಟು 200 ವಿದ್ಯಾರ್ಥಿಗಳು ನಮ್ಮ ಶಿಕ್ಷಕರೊಂದಿಗೆ ಬಂದಿದ್ದೆವು. ಜೀವನದಲ್ಲಿ ಇದೊಂದು ಅವಿಸ್ಮರಣೀಯ ದಿನ” ಎಂದು ಬಣ್ಣಿಸಿದರು.
ಯಲಹಂಕ ವಾಯುನೆಲೆ ಸುತ್ತಮುತ್ತ ಟ್ರಾಫಿಕ್ ದಟ್ಟಣೆ :
ವಾಯುಪಡೆಯ ಸಮೀಪ್ ಏರ್ ಶೋ ಹಿನ್ನಲೆಯಲ್ಲಿ ವಾಯುನೆಲೆಯ ಮುಖ್ಯ ಪ್ರವೇಶದ್ವಾರ ಬಳಿ ರಕ್ಷಣಾ ಪಡೆಯ ವಾಹನಗಳು ಓಡಾಡಲು ಪ್ರತ್ಯೇಕ ಬ್ಯಾರಿಕೇಡ್ ಅಳವಡಿಸಿದ ಕಾರಣ ಬೆಳಗ್ಗೆಯಿಂದಲೇ ಈ ಭಾಗದಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಕಂಡು ಬಂತು. ವಾಯುಪ್ರದರ್ಶನ ಸ್ಥಳಕ್ಕೆ ಬರಲು ಸಾವಿರಾರು ಜನ ಹರಸಾಹಸಪಟ್ಟರು. ಹೆಬ್ಬಾಳದಿಂದ ಯಲಹಂಕ ವಾಯುನೆಲೆ ದಾಟಿದರೂ ಎರಡೂ ಬದಿಯಲ್ಲೂ ವಾಹನ ದಟ್ಟಣೆ ಕಂಡು ಬಂತು.