ಬೆಂಗಳೂರು, ಫೆ.09 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಎಲ್ಲಾ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರದಿಂದ (ಫೆ.09) ಸರಕಾರದ ವಿರುದ್ಧ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಎಲ್ಲ ಬಿಬಿಎಂಪಿ ಕಚೇರಿಗಳು ಬಂದ್ ಆಗಿವೆ.
ಬೆಳಗ್ಗೆಯಿಂದಲೇ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ನೇತೃತ್ವದಲ್ಲಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ತೆರಳಿ ಮುಷ್ಕರ ಆರಂಭಿಸಿದ್ದಾರೆ.
ಇದರಿಂದ ತೆರಿಗೆ ಪಾವತಿ, ಖಾತೆ ಮತ್ತಿತರ ಕೆಲಸ ಕಾರ್ಯಗಳಿಗಾಗಿ ಪಾಲಿಕೆ ಕಚೇರಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈಗಾಗಲೇ ಹಲವು ಬಾರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರೂ ಸರ್ಕಾರದಿಂದ ಪಾಲಿಕೆ ಅಧಿಕಾರಿ ಮತ್ತು ನೌಕರರ ಬೇಡಿಕೆ ಈಡೇರಿರಲಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಮತ್ತು ಮುಖಂಡರೊಂದಿಗೆ ಚರ್ಚೆ ನಡೆಸಿ ಬೇಡಿಕೆ ಈಡೇರಿಸುವುದಾಗಿ ಈ ಹಿಂದೆ ಭರವಸೆ ನೀಡಿದ್ದರು.
ಆದರೂ ಸುಮಾರು ನಾಲ್ಕೈದು ತಿಂಗಳಾದರೂ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆಡಳಿತದ ಕೊನೆಯ ಬಜೆಟ್ ಮಂಡನೆಗೂ ಮುನ್ನ ನೌಕರರ ಸಂಘ ಪ್ರತಿಭಟನೆಗೆ ಮುಂದಾಗಿದೆ. ಈ ಬಾರಿ ಎಲ್ಲ ನೌಕರರು ಕೂಡ ಬೇಡಿಕೆ ಈಡೇರಿಸುವವರೆಗೂ ಸರಕಾರದ ಭರವಸೆಗಳಿಗೆ ಮಣಿಯದೇ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಸುಮಾರು ಏಳು ಸಾವಿರ ನೌಕರರು ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ನಗರದಾದ್ಯಂತ ಗುರುವಾರ ಮಹಾನಗರ ಪಾಲಿಕೆ ಕಚೇರಿಗಳು ಬಂದ್ ಆಗಲಿದ್ದು, ಸರಕಾರದ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರು ರಸ್ತೆಗಿಳಿಯಲಿದ್ದಾರೆ.
ಅಧಿಕಾರಿ ಮತ್ತು ನೌಕರರ ಪ್ರಮುಖ ಬೇಡಿಕೆಗಳು :
*ನಿಯಮಾವಳಿಯಂತೆ ಸಕಾಲದಲ್ಲಿ ಅಧಿಕಾರಿ, ನೌಕರರಿಗೆ
ಆರೋಗ್ಯ ಕಾರ್ಡ್ ನೀಡುವುದಾಗಿ ಕೊಟ್ಟ ಮಾತು ಈಡೇರಿಸಬೇಕು
*ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೌಲಭ್ಯ
*ಖಾಲಿ ಇರುವ ಎಲ್ಲಾ ವೃಂದದವರಿಗೆ ಮುಂಬಡ್ತಿ ನೀಡಬೇಕು.
*ಪಾಲಿಕೆಯಲ್ಲಿ ವಿಲೀನಗೊಂಡಿರುವ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.