ಬೆಂಗಳೂರು, ಫೆ.09 www.bengaluruwire.com : ಸಿಲಿಕಾನ್ ಸಿಟಿಯಲ್ಲಿ ಮುಂದಿನ ವರ್ಷದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಲು 59 ನಗರದ ಶಾಸಕರು, ಸಚಿವರು, ರಾಜ್ಯಸಭಾ ಸಚಿವರು, ಸಂಸದರಿಗೆ ಸಲಹೆ ಸೂಚನೆ ನೀಡಲು ಬಿಬಿಎಂಪಿಯಿಂದ ಫೆ.9ರಂದು ನಡೆದ ಸಭೆಗೆ ಕೇವಲ 3 ದಿನದ ಹಿಂದೆ ನೋಟಿಸ್ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ಕೇವಲ ಮೂರು ದಿನಗಳ ನೋಟಿಸ್ ನೀಡಿದ ಕಾರಣಕ್ಕೆ ವಿವಿಧ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ನಗರದ ಅಭಿವೃದ್ಧಿಯ ದಿಕ್ಸೂಚಿಯಾದ ಪಾಲಿಕೆ ಬಜೆಟ್ ಗೆ ಸಲಹೆ- ಸೂಚನೆ ನೀಡುವ ಮಹತ್ವದ ಸಭೆಗೆ ಸಮಯ ಹೊಂದಿಸಿಕೊಂಡು ಬರಲು ಸಾಧ್ಯವಾಗಿಲ್ಲ. ಹೀಗಾಗಿ ಶುಕ್ರವಾರದ ಸಭೆಯಲ್ಲಿ ಕೇವಲ 7 ಜನಪ್ರತಿನಿಧಿಗಳು ಹಾಜರಾಗಿದ್ದಾರೆ. ಕೇವಲ ಕಣ್ಣೊರೆಸಲು, ಹೆಚ್ಚಿನ ಜನಪ್ರತಿನಿಧಿಗಳು ಸಭೆಗೆ ಆಗಮಿಸಿದರೆ ತಮಗೆ ಬಿಜೆಪಿ ನೇತೃತ್ವದ ಆಡಳಿತ ನಡೆಸುವ ಸರ್ಕಾರ ತನಗೆ ಬೇಕಾದಂತೆ ಪಾಲಿಕೆ ಬಜೆಟ್ ಮಂಡಿಸಲು ಒತ್ತಡ ಬರುತ್ತದೆಂಬ ಕಾರಣಕ್ಕೆ ಸಭೆಯ ಶಾಸ್ತ್ರ ಮಾಡಿ ಮುಗಿಸಿದ್ದಾರೆ ಎಂದು ನಗರದ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಆಕ್ರೋಶ ಹೊರಹಾಕಿವೆ.
ಫೆ.9ರಂದು ವಿಕಾಸಸೌಧದಲ್ಲಿ 2023-24ನೇ ಸಾಲಿನ ಬಿಬಿಎಂಪಿ ಬಜೆಟ್ ಗೆ ಆಗಮಿಸುವಂತೆ ಫೆ.6ರಂದು ಸಭಾ ನೋಟಿಸ್ ಕಳುಹಿಸಲಾಗಿತ್ತು. ಕೇವಲ ಮೂರು ದಿನಗಳಲ್ಲಿ ಮೀಟಿಂಗ್ ನೋಟಿಸ್ ಕೊಟ್ಟರೆ ಹೆಚ್ಚಿನ ಜನಪ್ರತಿನಿಧಿಗಳು ಸಭೆಗೆ ಆಗಮಿಸುವುದಾದರೂ ಹೇಗೆ ಎಂದು ನಗರದ ಕೆಲವು ಶಾಸಕರು, ಸಂಘಸಂಸ್ಥೆಗಳ ಕಾರ್ಯಕರ್ತರು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿಯ ಆಡಳಿತಾಧಿಕಾರಿ ಕಚೇರಿಯಿಂದ ಫೆ.6ರಂದೇ ನಗರದಿಂದ ಆರಿಸಿಬಂದ 7 ಜನ ಸಚಿವರು ಸೇರಿದಂತೆ 27 ಶಾಸಕರು, 14 ವಿಧಾನಪರಿಷತ್ ಸದ್ಯರು, 8 ಜನ ರಾಜ್ಯಸಭಾ ಸದಸ್ಯರು, 5 ಸಂಸದರು, ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಸೇರಿದಂತೆ 59 ಜನಪ್ರತಿನಿಧಿಗಳಿಗೆ ಬಜೆಟ್ ಸಲಹೆ ಸೂಚನೆ ನೀಡುವಂತೆ ಅಧಿಕೃತವಾಗಿ ಆಹ್ವಾನ ನೀಡಿದರೆ ಶುಕ್ರವಾರ ನಡೆದ ಸಭೆಗೆ ಕೇವಲ 7 ಜನ ಜನಪ್ರತಿನಿಧಿಗಳು ಆಗಮಿಸಿದ್ದರು. ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿಯ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅಲ್ಪಾವಧಿಯಲ್ಲಿ ಸಭೆ ನಡೆಸುವ ನೋಟಿಸ್ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
ಫೆ.9 ಸಲಹಾ ಸಭೆಯಲ್ಲಿ ಹಾಜರಾದ ಜನಪ್ರತಿಧಿಗಳು ಯಾರು?
ನಗರದಲ್ಲಿನ 59 ಜನಪ್ರತಿನಿಧಿಗಳ ಪೈಕಿ ಕೇವಲ ಒಬ್ಬ ಸಚಿವ, ತಲಾ ಮೂವರು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಭಾಗವಹಿಸಿದ್ದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶಾಸಕರಾದ ರವಿಸುಬ್ರಮಣ್ಯ, ಉದಯ್ ಬಿ. ಗರುಡಾಚಾರ್, ಅಖಂಡ ಶ್ರೀನಿವಾಸ್ ಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಪಿ.ಆರ್.ರಮೇಶ್, ಪುಟ್ಟಣ್ಣ ಹಾಗೂ ಗೋಪಿನಾಥ್ ರೆಡ್ಡಿ ಮಾತ್ರ ಪಾಲ್ಗೊಂಡಿದ್ದರು.
ನಗರದಲ್ಲಿವೆ ನೂರಾರು ಸಮಸ್ಯೆಗಳು :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸೆಪ್ಟೆಂಬರ್ 2020ರಿಂದ 2 ವರ್ಷ 5 ತಿಂಗಳಿನಿಂದ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಕೇವಲ ಆಡಳಿತಾಗರರ ನೇತೃತ್ವದಲ್ಲಿ ಪಾಲಿಕೆ ಆಡಳಿತದ ಚಕ್ರ ನಡೆಯುತ್ತಿದೆ. ಈ ಮಧ್ಯೆ ನಗರದಲ್ಲಿ ಕೋವಿಡ್, ಹೆಚ್ಚಿನ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ, ರಸ್ತೆ ಗುಂಡಿ ಗಂಡಾಂತರದಿಂದ ಹತ್ತಾರು ನಾಗರೀಕರು ಪ್ರಾಣ ಕಳೆದುಕೊಂಡಿದ್ದಾರೆ, ಸೂಕ್ತ ಕಾಲಾವಧಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಬಜೆಟ್ ನಲ್ಲಿ ಘೋಷಿಸಿದಂತೆ ಪೂರ್ಣ ರೂಪದಲ್ಲಿ ಪ್ರತಿ ವರ್ಷವೂ ಯೋಜನೆಗಳು, ಬಜೆಟ್ ನಲ್ಲಿ ಮೀಸಲಿಟ್ಟ ಹಣ ಕರ್ಚಾಗದೆ ಉಳಿದಿದೆ.
ಕಲ್ಯಾಣ ಕಾರ್ಯಕ್ರಮಗಳಾಗಲಿ, ಪಾಲಿಕೆ ಶಿಕ್ಷಣ ಇಲಾಖೆಯಾಗಲಿ, ಅರಣ್ಯ ವಿಭಾಗವಾಗಲಿ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಿನಿರ್ವಹಿಸುತ್ತಿಲ್ಲ. ನಗರದಲ್ಲಿ ಸ್ವಚ್ಛ ಭಾರತ್ ಹೆಸರಿನಲ್ಲಿ ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ಹರಿದು ಬಂದಿದ್ದರೂ ನಗರದ ಸ್ವಚ್ಛತೆಯಾಗಿಲ್ಲ. ಬೀದಿ ಬೀದಿಯಲ್ಲಿ ಕಸ ಬಿದ್ದಿದೆ. ಹೆಸರಿಗೆ ಬಿಬಿಎಂಪಿಯಲ್ಲಿ ಬಜೆಟ್ ಮಂಡಿಸುತ್ತಿದ್ದರೂ, ಸೂಕ್ತ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಗರದ ಜನತೆಗೆ ಜನಪ್ರತಿನಿಧಿಗಳ ಆಡಳಿತಕ್ಕೆ ಆಗ್ರಹಿಸುತ್ತಿದ್ದರೂ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಇದ್ಯಾವುದಕ್ಕೂ ತಲೆ ಕೆಡೆಸಿಕೊಂಡಿಲ್ಲ.
“ಬಜೆಟ್ ಸಲಹಾ ಸಭೆ ಕೇವಲ ನಾಮಕಾವಸ್ತೆ” :
“ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಸಲಹಾ ಸಭೆ ಕೇವಲ ನಾಮಕಾವಸ್ತೆ ಸಭೆ. ಇದರ ಬಗ್ಗೆ ಹೇಳಿ ಪ್ರಯೋಜನವಿಲ್ಲ. 2022-23ನೇ ಸಾಲಿನ ಬಜೆಟ್ ನಲ್ಲಿ ನಗರದ ಪ್ರತಿಯೊಂದು ವಾರ್ಡಿಗೆ 2 ರಿಂದ 4 ಕೋಟಿ ರೂ. ಅನುದಾನ ನಿಗದಿಪಡಿಸಿದ್ದರೂ, ಈತನಕ ಕಾಮಗಾರಿ ನಡೆಸಲು ಪಾಲಿಕೆಯಿಂದ ಕಾರ್ಯಾದೇಶವೇ ಆಗಿಲ್ಲ. ಹೀಗಿರುವಾಗ ಕಾಟಚಾರಕ್ಕೆ ಬಜೆಟ್, ಬಜೆಟ್ ಮೀಟಿಂಗ್ ಮಾಡೋದು ಯಾಕೆ? ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಸಲಹೆ ಸೂಚನೆ ಪಡೆಯುವವರು, ಸಾಮಾನ್ಯ ಸಂದರ್ಭದಲ್ಲೇ ಹೆಚ್ಚಿನ ಸಮಯ ಕೊಡುವವರು ಈಗ ಕೇವಲ ಮೂರು ದಿನದಲ್ಲಿ ಮೀಟಿಂಗ್ ನೋಟಿಸ್ ಕೊಟ್ಟಿದ್ದಾರೆ. ಇದರಲ್ಲೇ ಎಲ್ಲಾ ತಿಳಿಯುತ್ತೆ”
ರಾಮಲಿಂಗಾರೆಡ್ಡಿ, ಮಾಜಿ ಸಚಿವರು ಮತ್ತು ಶಾಸಕರು, ಬಿಟಿಎಂ ವಿಧಾನಸಭಾ ಕ್ಷೇತ್ರ
ಸಾರ್ವತ್ರಿಕ ಚುನಾವಣೆಯ ಕರಿನೆರಳಲ್ಲಿ ಪಾಲಿಕೆ ಬಜೆಟ್ :
ಈ ಮಧ್ಯೆ ಏಪ್ರಿಲ್ ಕೊನೇವಾರ ಹಾಗೂ ಮೇ ಮೊದಲ ವಾರದಲ್ಲಿ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆಯಿದೆ. ಜನರಿಗೆ ಉತ್ತಮ ಮೂಲಭೂತ ಸೌಕರ್ಯ, ಅಗತ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪೂರಕವಾಗುವಂತೆ ಸಲಹೆ, ಸೂಚನೆಗಳನ್ನು ನಗರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಲು ಕೊಡಬಹುದಿತ್ತು. ಇದಕ್ಕಾಗಿ ಒಂದು ವಾರಗಳ ಕಾಲವಕಾಶ ನೀಡಿದ್ದರೂ ಇರುವ 59 ನಗರದ ಜನಪ್ರತಿನಿಧಿಗಳಲ್ಲಿ ಅರ್ಧದಷ್ಟಾದರೂ ಮಂದಿ ವಿಕಾಸ ಸೌಧದಲ್ಲಿ ಶುಕ್ರವಾರ (ಫೆ.9) ನಡೆಸಿದ ಸಲಹಾ ಸೂಚನಾ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆ ನೀಡುತ್ತಿದ್ದರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
“ಫೆ.9 ಮೀಟಿಂಗ್ ನೋಟಿಸ್ ನಮಗೆ ತಲುಪಿಲ್ಲ” :
“ನಮಗೆ ಬಿಬಿಎಂಪಿ ಬಜೆಟ್ ಸಲಹಾ ಸಭೆ ಫೆ.9ರಂದು ಇರೋ ವಿಚಾರವೇ ಗೊತ್ತಿಲ್ಲ. ಏಕಂದ್ರೆ ಈ ಬಗ್ಗೆ ನಮಗೆ ಅಧಿಕೃತವಾಗಿ ಯಾವುದೇ ಮೀಟಿಂಗ್ ನೋಟಿಸ್ ಬಂದಿಲ್ಲ. ಈ ಸಭೆ ಶುಕ್ರಮವಾರ ನಡೆಯುತ್ತಿರುವ ವಿಚಾರವೇ ಗೊತ್ತಿಲ್ಲ. ಹೀಗಿರುವಾಗ ಹೇಗೆ ಆ ಸಭೆಯಲ್ಲಿ ಭಾಗವಹಿಸೋಕೆ ಸಾಧ್ಯ? ತಮಗೆ ಬೇಕಾದವರಿಗೆ ಮೀಟಿಂಗ್ ನೋಟಿಸ್ ಕೊಟ್ಟು, ತಮಗೆ ಬೇಕಾದಂತೆ ಬಿಬಿಎಂಪಿ ಬಜೆಟ್ ಮಾಡಿಕೊಳ್ಳಲು ಹೊರಟಂತಿದೆ.”
- ಯು.ಬಿ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯರು
ಬಜೆಟ್ ಗೆ 16,261 ನಾಗರೀಕರು ಸಲಹೆ ಕೊಟ್ಟಿದ್ದರು :
ಇತ್ತೀಚೆಗಷ್ಟೇ ಬೆಂಗಳೂರಿನ ಕ್ಷೇಮಾಭಿವೃದ್ಧಿ ಸಂಘಗಳು, ಬೆಂಗಳೂರು ವಾರ್ಡ್ ಸಮಿತಿ ಬಳಗ ಹಾಗೂ ಜನಾಗ್ರಹ ಸಂಸ್ಥೆಯ ಸಹಯೋಗದೊಂದಿಗೆ ನಾಗರೀಕರ ಸಹಭಾಗಿತ್ವದ 2023-24ನೇ ಸಾಲಿನ ಬಜೆಟ್ ಬಗ್ಗೆ, ಬೆಂಗಳೂರಿನ ‘ನನ್ನ ನಗರ ನನ್ನ ಬಜೆಟ್ ಅಭಿಯಾನ’ ಮೂಲಕ ಜನಾಭಿಪ್ರಾಯ ಸಂಗ್ರಹಣೆ ಮಾಡಿತ್ತು. ಇದರಲ್ಲಿ ಪಾಲಿಕೆಯ 8 ವಲಯಗಳ 243 ವಾರ್ಡ್ ಗಳಿಂದ 16,261 ನಾಗರೀಕರು- ಸಂಘ ಸಂಸ್ಥೆಗಳು ತಮ್ಮ ಸಲಹೆಗಳನ್ನು ನೀಡಿದ್ದರು. ನಾಗರೀಕರು ನಗರದ ಬಜೆಟ್ ಗೆ ತಮ್ಮ ಸಲಹೆ, ಅಭಿಪ್ರಾಯ ನೀಡಿರುವಾಗ ಬೆಂಗಳೂರಿನ ಜನತೆಯನ್ನು ಪ್ರತಿನಿಧಿಸುವ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ರಾಜ್ಯ ಸಭಾ ಸದಸ್ಯರು ಸಭೆಯಲ್ಲಿ ಹಾಜರಾಗುವಂತೆ ಮುಂಚೆಯೇ ಸಭಾ ನೋಟಿಸ್ ಕೊಡಬಹುದಿತ್ತು. ಇದು ಸಭೆಗೆ ಹೆಚ್ಚಿನ ಜನಪ್ರತಿನಿಥಿಗಳು ಆಗಮಿಸಲು ತಡೆಯುವ ಹುನ್ನಾರದಂತೆ ಕಂಡು ಬರುತ್ತಿದೆ ಎಂದು ನಾಗರೀಕ ಸಂಘಟನೆಗಳು ದೂರಿವೆ.
“ಬಜೆಟ್ ಮೀಟಿಂಗ್ ಅನ್ನೋ ಕಣ್ಣೊರೆಸುವ ಹುನ್ನಾರ” :
“ಬೆಂಗಳೂರಿನ ಅಭಿವೃದ್ಧಿಗೆ ಬಿಬಿಎಂಪಿ ಬಜೆಟ್ ಒಂದು ಮುನ್ನೋಟ ನೀಡುವ ಪ್ರಮುಖ ವಿಷಯ. ಹೀಗಿರುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ, ಬಿಬಿಎಂಪಿ ಬಜೆಟ್ ಗೆ ಜನಪ್ರತಿನಿಧಿಗಳು ಸಲಹೆ ನೀಡುವ ಸಭೆಯನ್ನು ಫೆ.9ಕ್ಕೆ ನಿಗಧಿ ಮಾಡಿ ಕೇವಲ 3 ದಿನಗಳ ಮೀಟಿಂಗ್ ನೋಟಿಸ್ ನೀಡಿರುವುದು ಸರಿಯಾದ ಕ್ರಮವಲ್ಲ. ಸಭೆ ನಡೆಸಿದಂತೆ ನಾಟಕ ಮಾಡಿ ತಮಗೆ ಬೇಕಾದಂತೆ ಪಾಲಿಕೆ ಬಜೆಟ್ ತಯಾರಿಸುವ ಹುನ್ನಾರವಲ್ಲದೇ ಮತ್ತೇನಲ್ಲ. ಪಾಲಿಕೆ ಸದಸ್ಯರ ಅವಧಿ ಮುಗಿದ ಕೂಡಲೇ ಚುನಾವಣೆ ಮಾಡುವುದನ್ನು ಬಿಟ್ಟು, ಅವರ ಅವಧಿ ಮುಗಿದ ಬಳಿಕ ಕಮಿಷನ್ ಆಸೆಗೆ ನಗರದ ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿ ನಡೆಸಿ ನೂರಾರು ಕೋಟಿ ರೂ. ಹಣ ಹೊಡೆಯುವ ಯೋಜನೆ ಮಾಡಿದ್ದಾರೆ. ಹೀಗಾಗಿ ನಗರದ ಎಲ್ಲೆಡೆ ರಸ್ತೆ, ಮೋರಿ ಕಿತ್ತು ಹಾಕಿ ನಾವೆಲ್ಲಿ ಯುದ್ಧಪೀಡಿತ ಉಕ್ರೇನ್ ನಲ್ಲಿದ್ದೇವಾ ಅನ್ನೋ ರೀತಿ ಆಗಿದೆ.”
ಆದರ್ಶ್ ಅಯ್ಯರ್.ಆರ್, ಸಹ ಅಧ್ಯಕ್ಷರು, ಜನಾಧಿಕಾರ ಸಂಘರ್ಷ ಪರಿಷತ್ತು
ಸಭೆಯಲ್ಲಿ ಚರ್ಚೆಯಾದ ಪ್ರಮುಖ ಸಲಹೆ-ಸೂಚನೆಗಳು :
• ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಮಾಡುವುದು.
• ಉದ್ಯಾನವನಗಳ ನಿರ್ವಹಣೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಭದ್ರತಾ ಸಿಬ್ಬಂದಿಯ ನಿಯೋಜನೆ ಮಾಡುವುದು.
• ಬೀದಿ ಬದಿ ಕಸ ಸುರಿಯುವ ಸ್ಥಳ(ಬ್ಲಾಕ್ ಸ್ಪಾಟ್ ಗಳು)ಗಳಿಲ್ಲದಂತೆ ಮಾಡುವುದು.
• ಕಲ್ಯಾಣ ಕಾರ್ಯಕ್ರಮಗಳಾದ ಲ್ಯಾಪ್‌ಟಾಪ್, ಹೊಲಿಗೆ ಯಂತ್ರ, ಒಂಟಿ ಮೆನೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿಗೆ ಅನುದಾನ ಮೀಸಲಿಡುವುದು.
• ಪಾಲಿಕೆ ವ್ಯಾಪ್ತಿಯಲ್ಲಿ ಭಿಕ್ಷಾಟಣೆ, ಗ್ರಂಥಾಲಯ ಹಾಗೂ ಡಲ್ಟ್ ಸೆಸ್ ಗಳನ್ನು ಸಂಗ್ರಹಿಸುತ್ತಿದ್ದು, ಅದನ್ನು ಸರಿಯಾಗಿ ವಿನಿಯೋಗ ಮಾಡಲು ಕ್ರಮಕೈಗೊಳ್ಳುವುದು.
• ರಸ್ತೆಗಳ ಅಗಲೀಕರಣಕ್ಕಾಗಿ ಅನುದಾನ ಮೀಸಲಿಡುವುದು.
• ಪ್ರತಿ ವಾರ್ಡ್ ಗೆ ಸಾರ್ವಜನಿಕ ಕಾಮಗಾರಿಗಳಿಗೆ(ಪಿಒಡಬ್ಲ್ಯೂ) ಅನುದಾನ ಮೀಸಲಿಡುವುದು.
• ರಾಜಕಾಲುವೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು.
• ಪಾದಚಾರಿ ಮಾರ್ಗಗಳ ನಿರ್ವಹಣೆಗಾಗಿ ಅನುದಾನ ಮೀಸಲಿಡುವುದು.
• ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡುವುದು.
7 ಜನಪ್ರತಿನಿಧಿಗಳನ್ನು ಬಿಟ್ಟರೆ ವಿಕಾಸ ಸೌಧದಲ್ಲಿನ ಬಜೆಟ್ ಸಲಹಾ ಸೂಚನಾ ಸಭೆಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರು, ಜಂಟಿ ಆಯುಕ್ತರಗಳೇ ಸಭೆಯಲ್ಲಿ ಪಾಲ್ಗೊಂಡಿದ್ದರು. ಒಟ್ಟಿನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿಯಾಗಿರುವ ಬಜೆಟ್ ತಯಾರಿಯಲ್ಲಿ ಜನಪ್ರತಿನಿಧಿಗಳನ್ನು ಒಳಗೊಳ್ಳುವಿಕೆ ಯಾವ ಮಟ್ಟಿಗೆ ಆಗಿದೆ, ಆಗುತ್ತಿದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ.