ಬೆಂಗಳೂರು, ಜ.31 www.bengaluruwire.com : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆಯಾದ ಬಳಿಕ ಕಳೆದ ವರ್ಷ ಜುಲೈನಲ್ಲಿ ಅನುಷ್ಠಾನಕ್ಕೆ ಬಂದ “ಕರ್ನಾಟಕ ಪುಣ್ಯಕೋಟಿ ದತ್ತು ಯೋಜನೆ”( Karnataka Cow Adoption Scheme)ಯಡಿ 23,229 ಜಾನುವಾರುಗಳು ನೊಂದಣೆಯಾಗಿದೆ. ಆದರೆ ಈವರೆಗೆ ರಾಜ್ಯದಲ್ಲಿ ಕೇವಲ 175 ಮಂದಿ ಸಾರ್ವಜನಿಕರು ಗೋವುಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈ ಮೂಲಕ ಪುಣ್ಯಕೋಟಿ ಯೋಜನೆಯಡಿ ಜಾನುವರುಗಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ನಾಗರೀಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜ್ಯದಲ್ಲಿ ಹೀಗೆ 174 ಜಾನುವಾರುಗಳನ್ನು ಸಾರ್ವಜನಿಕರು ದತ್ತು ಸ್ವೀಕರಿಸಿದ್ದರಿಂದ 18,12,250 ರೂ. ಹಣವನ್ನು ಪಶು ಸಂಗೋಪನಾ ಇಲಾಖೆ(Animal Husbandry Department) ಸಂಗ್ರಹಿಸಿದೆ. 2,075 ಜಾನುವಾರುಗಳಿಗೆ 4,22,532 ರೂ. ದೇಣಿಗೆ (Donation)ಯನ್ನು ನೀಡಿರುತ್ತಾರೆ ಹಾಗು 426 ಜಾನುವಾರುಗಳಿಗೆ ಆಹಾರಕ್ಕಾಗಿ ದೇಣಿಗೆ ನೀಡಿದ್ದಾರೆ.
ಗೋಹತ್ಯೆ(cow slaughter) ನಿಷೇಧದ ಬಳಿಕ ರಾಜ್ಯದಲ್ಲಿ ಹಲವು ಗೋಶಾಲೆಗಳ ಮೂಲಕ ಗೋವುಗಳ ರಕ್ಷಣೆ ಮಾಡಲಾಗುತ್ತಿದೆ. ಆದರೆ ಗೋವುಗಳ ರಕ್ಷಣೆ ಮತ್ತು ನಿರ್ವಹಣೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರ ಪಡೆಯಲು ಪಶು ಸಂಗೋಪನಾ ಇಲಾಖೆ(Animal Husbandry Department) “ಪುಣ್ಯಕೋಟಿ ದತ್ತು ಯೋಜನೆ”ಯನ್ನು ಜಾರಿಗೆ ತಂದಿತ್ತು. ಈ ಯೋಜನೆಯ ಮೂಲಕ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿರುವ ಗೋವುಗಳನ್ನು ಸಾರ್ವಜನಿಕರು ನೇರವಾಗಿ ದತ್ತು ಪಡೆಯಬಹುದು.
ಸರ್ಕಾರ ಆರಂಭ ಮಾಡಿರುವ https://punyakoti.karahvs.in/ ವೆಬ್ ಸೈಟ್(Website) ಮೂಲಕ ನೊಂದಣಿ (Register) ಮಾಡಿಸಿಕೊಂಡು, ಗೋವುಗಳನ್ನು ದತ್ತು ಪಡೆಯಲು, ದೇಣಿಗೆ ನೀಡಲು ಹಾಗೂ ರಾಸುಗಳಿಗೆ ಆಹಾರ ವಿತರಣೆಗೆ ಹಣ ನೀಡಲು ಅವಕಾಶ ಕಲ್ಪಿಸಿತ್ತು. ಆದರೆ ಸಾರ್ವಜನಿಕರು ಗೋವುಗಳನ್ನು ದತ್ತು ಪಡೆಯಲು, ದೇಣಿಗೆ ನೀಡಲು ಆಸಕ್ತಿ ತೋರದಿರುವುದು ಈ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಪುಣ್ಯಕೋಟಿ ವೆಬ್ ಪೋರ್ಟಲ್ ನಲ್ಲಿ 215 ಗೋಶಾಲೆ ನೋಂದಣಿ :
ರಾಜ್ಯದಲ್ಲಿ ಒಟ್ಟಾರೆ 300 ಗೋಶಾಲೆಗಳಿದ್ದು, ಅವುಗಳ ಪೈಕಿ 270 ಖಾಸಗಿ ಗೋಶಾಲೆಗಳು ಹಾಗೂ 30 ಸರ್ಕಾರಿ ಗೋಶಾಲೆಗಳಿವೆ (ಅವುಗಳ ಪೈಕಿ 9 ಗೋಶಾಲೆಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದೆ). ಈ ಖಾಸಗಿ ಮತ್ತು ಸರ್ಕಾರಿ ಗೋಶಾಲೆಗಳಲ್ಲಿ ಒಟ್ಟಾರೆ 44,000 ಜಾನುವಾರುಗಳಿವೆ. ಪ್ರಸ್ತುತ ಪುಣ್ಯಕೋಟಿ Web Portal ನಲ್ಲಿ 215 ಗೋಶಾಲೆಗಳು ನೊಂದಣೆಯಾಗಿದ್ದು, ಅವುಗಳಲ್ಲಿ 183 ಗೋಶಾಲೆಗಳು ಸಕ್ರಿಯವಾಗಿದ್ದು, 23,229 ಜಾನುವಾರುಗಳು ನೊಂದಣೆಯಾಗಿರುತ್ತವೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆಯ ಬಳಿಕ 1,329 ಎಫ್ ಐಆರ್ :
ಕರ್ನಾಟಕ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ (ಗೋ ಹತ್ಯೆ ನಿಷೇಧ) ಕಾಯ್ದೆಯು 2021ರ ಮೇ ತಿಂಗಳಿನಿಂದ ಜಾರಿಗೆ ಬಂದಿದ್ದು, ಗೋಹತ್ಯೆ ನಿಷೇದ ಕಾಯ್ದೆ ಜಾರಿಗೆ ಬಂದಾಗಿನಿಂದ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ 30 ಜಿಲ್ಲೆಗಳಿಂದ 1,329 ಎಫ್ ಐಆರ್ (FIR) ದಾಖಲಾಗಿದ್ದು 8,465 ಜಾನುವಾರುಗಳನ್ನು ರಕ್ಷಿಸಲಾಗಿದೆ. ಗೋಹತ್ಯೆ ಕಾಯ್ದೆ ಜಾರಿಗೆ ತಂದ ನಂತರ ರಾಜ್ಯದಲ್ಲಿ ಅನಧಿಕೃತವಾಗಿ ಗೋವುಗಳ ಸಾಗಾಣಿಕೆ ತಡೆಗಟ್ಟಲು ಹಾಗೂ ಪಶು ಸಂಗೋಪನೆ ಮತ್ತು ಕೃಷಿ ಚಟುವಟಿಕೆಗಳಿಗೆ ಮಾತ್ರ ರೈತರು ಜಾನುವಾರು ಸಾಗಾಣಿಕೆ ಮಾಡಲು ಇಲಾಖೆಯು ಆನ್ ಲೈನ್ ತಂತ್ರಾಂಶವನ್ನು (https://animaltrans.karahvs.in) ಅಭಿವೃದ್ಧಿ ಪಡಿಸಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆಗೊಳಿಸಲು ಪಶುಸಂಗೋಪನಾ ಇಲಾಖೆಯು ನಿರ್ಧರಿಸಿದೆ.
ಸರ್ಕಾರಿ ಗೋಶಾಲೆಗಳ ನಿರ್ಮಾಣ, ಅನುದಾನದ ವಿವರ :
2021-22 ನೇ ಸಾಲಿನಲ್ಲಿ ರಾಜ್ಯದಲ್ಲಿ 30 ಸರ್ಕಾರಿ ಗೋಶಾಲೆಗಳನ್ನು ಸ್ಥಾಪಿಸಲು ರೂ.15 ಕೋಟಿಯನ್ನು ನೀಡಲಾಗಿದೆ. 2022-23 ನೇ ಸಾಲಿನಲ್ಲಿ ರಾಜ್ಯದಲ್ಲಿ ಹೆಚ್ಚುವರಿಯಾಗಿ 70 ಸರ್ಕಾರಿ ಗೋಶಾಲೆಗಳನ್ನು ಸ್ಥಾಪಿಸಲು ಹಾಗೂ 2021-22 ನೇ ಸಾಲಿನ 30 ಸರ್ಕಾರಿ ಗೋಶಾಲೆಗಳ ಮುಂದುವರಿದ ಕಾಮಗಾರಿಗಾಗಿ 50 ಕೋಟಿ ರೂ. ಹಣವನ್ನು ಪಶುಸಂಗೋಪನಾ ಇಲಾಖೆಯು ಒದಗಿಸಿದೆ. 2021-22 ನೇ ಸಾಲಿನ 20 ಸರ್ಕಾರಿ ಗೋಶಾಲೆಗಳು ಕಾರ್ಯರಂಭ ಮಾಡುತ್ತಿವೆ. ಉಳಿದ 10 ಗೋಶಾಲೆಗಳ ಕಾಮಗಾರಿಯು ಅಂತಿಮ ಹಂತದಲ್ಲಿದೆ. 2022-23 ನೇ ಸಾಲಿನಲ್ಲಿ 31 ಗೋಶಾಲೆಗಳಿಗೆ ಜಮೀನು ಮಂಜೂರಾಗಿದ್ದು, 21 ಗೋಶಾಲೆಗಳ ಕಾಮಗಾರಿಗೆ ಪ್ರತಿ ಗೋಶಾಲೆಗೆ 50 ಲಕ್ಷ ರೂ. ನಂತೆ 10.50 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಉಳಿದ 27 ಗೋಶಾಲೆಗಳಿಗೆ ಜಮೀನು ಗುರುತಿಸಿದ್ದು, ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಲಾಗುತ್ತಿದೆ. 12 ಗೋಶಾಲೆಗಳಿಗೆ ಸೂಕ್ತ ಜಮೀನು ಗುರುತಿಸಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗೋಮಾತಾ ಸಹಕಾರ ಸಂಘದ ಸ್ಥಾಪನೆ :
ಪಿಂಜಿರಾಪೋಲ್ ಯೋಜನೆಯಡಿ 97 ಖಾಸಗಿ ಗೋಶಾಲೆಗಳಲ್ಲಿನ ಜಾನುವಾರುಗಳ ನಿರ್ವಹಣೆಗೆ 1.62 ಕೋಟಿ ರೂ.ಗಳನ್ನು ಹಾಗೂ ಪೋಲಿಸ್ ಇಲಾಖೆಯಿಂದ ಜಪ್ತಿ ಮಾಡಿದ ಜಾನುವಾರುಗಳ ನಿರ್ವಹಣೆಗೆ 64 ಖಾಸಗಿ ಗೋಶಾಲೆಗಳಿಗೆ 92.4 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಗೋಶಾಲೆಗಳನ್ನು ಸಂಘಟಿಸಲು ಹಾಗೂ ಅವುಗಳನ್ನು ಆರ್ಥಿಕವಾಗಿ ಸಬಲಗೊಳಿಸಲು “ಗೋಮಾತಾ ಸಹಕಾರ ಸಂಘದ ಸ್ಥಾಪನೆ” ಮಾಡಲು ಗೋಶಾಲೆಗಳಿಂದ ಷೇರುಗಳನ್ನು ಸಂಗ್ರಹಿಸಿ, ನೋಂದಣಿಗೆ ಸಹಕಾರ ಇಲಾಖೆಗೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಗೋಶಾಲೆಯಲ್ಲಿ ತಯಾರು ಮಾಡುವ ಗೋ ಉತ್ಪನ್ನಗಳನ್ನು ಸಹಕಾರ ಸಂಘದ ಮೂಲಕ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಗೋಶಾಲೆಗಳು ಆತ್ಮ ನಿರ್ಬರವಾಗಲು ಗೋ ಶಾಲೆಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳಿಂದ ಎರೆಹುಳು ಘಟಕಗಳಿಗೆ ಪ್ರತಿ ಘಟಕಕ್ಕೆ 45 ಸಾವಿರ ರೂ.ನಂತೆ 25 ಘಟಕಗಳಿಗೆ ಅನುದಾನ ನೀಡಲಾಗಿದೆ. ಗೋ ಉತ್ಪನ್ನಗಳ ತಾಂತ್ರಿಕತೆ ಮತ್ತು ಪ್ರಾಮಾಣಿಕರಣದ ಅಭಿವೃದ್ದಿಗಾಗಿ ಶಿವಮೊಗ್ಗದಲ್ಲಿನ ಪಶು ವೈದ್ಯಕೀಯ ಕಾಲೇಜಿನಲ್ಲಿ ಸಂಶೋಧನಾ ಕೋಶವನ್ನು ಸ್ಥಾಪಿಸಲು 36.97 ಲಕ್ಷ ರೂ. ಅನುದಾನ ನೀಡಲಾಗಿದೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಏನಂತಾರೆ? :
“ಕಳೆದ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಸರ್ಕಾರಿ ನೌಕರರಿಂದ ಎ- ವೃಂದದ ಅಧಿಕಾರಿಗಳು 11 ಸಾವಿರ, ಬಿ- ವೃಂದದ ಅಧಿಕಾರಿಗಳಿಂದ 4 ಸಾವಿರ ಹಾಗೂ ಸಿ- ವೃಂದದ ಅಧಿಕಾರಿಗಳಿಂದ 400 ರೂ. ಆ ತಿಂಗಳ ಸಂಬಳದಲ್ಲಿ ಕಡಿತಗೊಳಿಸಲು ಸರ್ಕಾರಕ್ಕೆ ಒಪ್ಪಿಗೆ ಪತ್ರ ನೀಡಿದ್ದೆವು. ಅದರಂತೆ ಸರ್ಕಾರಕ್ಕೆ ಸರ್ಕಾರಿ ನೌಕರರ ಸಂಬಳದಿಂದ 40 ಕೋಟಿ ರೂ. ಸಂದಾಯವಾಗಿದೆ. ಶೇ.90ರಷ್ಟು ಅಧಿಕಾರಿ, ನೌಕರರು ದೇಣಿಗೆ ನೀಡಿದ್ದಾರೆ. ಆ ಮೂಲಕ “ಪುಣ್ಯಕೋಟಿ ದತ್ತು ಯೋಜನೆ”ಯಡಿ ಸಾವಿರಾರು ಜಾನುವಾರುಗಳನ್ನು ದತ್ತುಪಡೆಯಲು ಸಹಾಯ ಮಾಡಿದ ತೃಪ್ತಿ ನಮಗೆ ಲಭಿಸಿದೆ. ಮುಂದೆ ಈ ದತ್ತು ಯೋಜನೆಗೆ ಹಣ ನೀಡುವ ಆಲೋಚನೆಯಿಲ್ಲ ಸದ್ಯಕ್ಕಿಲ್ಲ.”
– ಷಡಕ್ಷರಿ, ರಾಜ್ಯಾಧ್ಯಕ್ಷ, ಕರ್ನಾಟಕ ಸರ್ಕಾರಿ ನೌಕರರ ಸಂಘ
“ಬೆಂಗಳೂರು ವೈರ್” ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.