ಬೆಂಗಳೂರು, ಜ.31 www.bengaluruwire.com : ಬಸವನಾಡು, ಗೊಮ್ಮಟ ಬೀಡು, ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ಷೇತ್ರ ವಿಜಯಪುರದಲ್ಲಿ ಫೆಬ್ರವರಿ 4 ಮತ್ತು 5 ರಂದು ಶನಿವಾರ ಮತ್ತು ಭಾನುವಾರ ಎರಡು ದಿನ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯಲಿದೆ.
ಈ ಕುರಿತಂತೆ ಬೆಂಗಳೂರು ವೈರ್ ಜೊತೆ ಮಾತನಾಡುತ್ತಾ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಮ್ಮೇಳನ ಐತಿಹಾಸಿಕ ವಿಜಯಪುರ ನಗರದಲ್ಲಿ ಪ್ರಪ್ರಥಮ ಬಾರಿಗೆ ಪತ್ರಕರ್ತರ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ. ಗಡಿಭಾಗದಲ್ಲಿ ನಡೆಯುವ ಈ ಸಮ್ಮೇಳನ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದರು.
ರಾಜ್ಯದ ಬೇರೆ- ಬೇರೆ ಜಿಲ್ಲೆಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಊಟ, ವಸತಿ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿ ಒಳ್ಳೆಯ ಆತಿಥ್ಯ ನೀಡಿದರೆ ಬೇರೆ ಜಿಲ್ಲೆಗಳಿಂದ ಬಂದ ಪ್ರತಿನಿಧಿಗಳು ಈ ಜಿಲ್ಲೆಯ ಬಗ್ಗೆ ಮನದಲ್ಲಿ ಸವಿನೆನಪು ಇಟ್ಟುಕೊಂಡು ತಮ್ಮೂರಿಗೆ ಹೋಗುವರು. ಈ ಸಮ್ಮೇಳನ ನಮ್ಮ ಮನೆಯ ಕಾರ್ಯಕ್ರಮವೆಂದು ತಿಳಿದು ಎಲ್ಲರೂ ಉತ್ಸಾಹದಿಂದ ಒಗ್ಗೂಡಿ ಕೆಲಸ ಮಾಡುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣರಾಗಬೇಕು ಎಂದು ಅವರು ಹೇಳಿದರು.
ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಜ.9 ಮತ್ತು 10ರಂದು ನಡೆಯಬೇಕಿದ್ದ ಸಮ್ಮೇಳನವನ್ನು ಮುಂದೂಡಲಾಗಿತ್ತು. ಮುಖ್ಯಮಂತ್ರಿ ಸಮ್ಮತಿಯೊಂದಿಗೆ ಇದೇ ಫೆ.4 ಮತ್ತು 5 ರಂದು ಸಮ್ಮೇಳನ ದಿನಾಂಕ ನಿಗದಿ ಮಾಡಲಾಗಿದೆ. ಶ್ರೀ ಸಿದ್ಧೇಶ್ವರ ಶ್ರೀಗಳು ಈ ಸಮ್ಮೇಳನದ ಸಾನಿಧ್ಯ ವಹಿಸಲು ಸಂತೋಷದಿಂದ ಒಪ್ಪಿಕೊಂಡು ಸಮ್ಮೇಳನ ಗಡಿಭಾಗದಲ್ಲಿ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದ್ದರು. ಅವರ ಸಾನಿಧ್ಯದಲ್ಲಿ ಈ ಸಮ್ಮೇಳನ ನಡೆಯಬೇಕಾಗಿತ್ತು. ಆದರೆ ಅವರು ನಮ್ಮನ್ನಗಲಿರುವುದು ನಮಗೆಲ್ಲ ತುಂಬಾ ದುಃಖವನ್ನುಂಟು ಮಾಡಿದೆ ಎಂದು ತಿಳಿಸಿದರು.
ಫೆ. 4 ರಂದು ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಇದರಲ್ಲಿ ಸಚಿವರು, ಸ್ಥಳೀಯ ಶಾಸಕರು ಸಮ್ಮೇಳನದಲ್ಲಿ ಭಾಗವಹಿಸುವರು. ಫೆ.5 ಪ್ರತಿನಿಧಿಗಳ ಸಮಾವೇಶ ನಡೆಯುವುದು. ನಂತರ ಸಮಾರೋಪ ಸಮಾರಂಭ ಹಾಗೂ ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜರುಗುವುದು. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಹಲವಾರು ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಈ ಬಾರಿ ಸಮ್ಮೇಳನದಲ್ಲಿ 3 ಗೋಷ್ಠಿಗಳನ್ನು ಆಯೋಜಿಸಲಾಗಿದೆ. ನವಮಾಧ್ಯಮ ಮತ್ತು ಪತ್ರಕರ್ತರು ಎಂಬ ವಿಷಯದ ಬಗ್ಗೆ ಒಂದು ಗೋಷ್ಠಿ ನಡೆದರೆ, ಸುದ್ದಿಮನೆ ಮತ್ತು ಮಹಿಳೆಯರು ಎಂಬ ವಿಷಯದ ಬಗ್ಗೆ ಮತ್ತೊಂದು ಗೋಷ್ಠಿ ನಡೆಯಲಿದೆ. ಗಡಿ ಭಾಗದ ಮಾಧ್ಯಮಗಳ ಪಾತ್ರ ಕುರಿತು ಈತನಕ ಚರ್ಚೆಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಮಾಧ್ಯಮ ಎಂಬ ವಿಷಯ ಕುರಿತು ವಿಶೇಷ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಸುದ್ದಿ ಮನೆಯಲ್ಲಿ ಪತ್ರಿಕಾ ವಿತರಕರು ಮಹತ್ವದ ಕೊಂಡಿಯಾಗಿದ್ದಾರೆ. ಆ ಕಾರಣಕ್ಕಾಗಿ ಪತ್ರಿಕಾ ವಿತರಕರ ಸಮಸ್ಯೆಗಳ ಕುರಿತು ಸಂವಾದ ನಡೆಯಲಿದೆ ಎಂದು ಶಿವಾನಂದ ತಗಡೂರು ಅವರು ವಿವರಿಸಿದರು.
ಇದೇ ಸಮ್ಮೇಳನದಲ್ಲಿ ವಿಜಯಪುರ ಜಿಲ್ಲೆಯ ಹತ್ತು ಜನ ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನವಿರುತ್ತದೆ. ಎರಡು ದಿನಗಳ ಈ ಸಮ್ಮೇಳನದಲ್ಲಿ ಐದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಎರಡೂವರೆ ಸಾವಿರ ಪತ್ರಕರ್ತರು ಪ್ರತಿನಿಧಿಗಳ ನೊಂದಾಯಿಸಿಕೊಂಡಿದ್ದಾರೆ ಎಂದರು.
ಜಿಲ್ಲಾ ಸಂಘಗಳಿಗೆ ಪ್ರಶಸ್ತಿ:
ಕಾರ್ಯನಿರತ ಪತ್ರಕರ್ತರ ಸಂಘಗಳನ್ನು ಸಂಘಟನಾತ್ಮಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅತ್ಯುತ್ತಮ ಜಿಲ್ಲಾ ಸಂಘ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಇದರ ಮೊದಲ ಪ್ರಶಸ್ತಿಯು ಸಮ್ಮೇಳನದಲ್ಲಿ ಸಾಂಘಿಕ ಚಟುವಟಿಕೆ ಮೂಲಕ ಉತ್ತಮ ಸಾಧನೆ ಮಾಡಿರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಸಂಘ ಹಾಗೂ ಯಾದಗಿರಿ ಜಿಲ್ಲಾ ಸಂಘಕ್ಕೆ ಪ್ರಶಸ್ತಿಯನ್ನು ನೀಡಲಾಗುವುದು. ಜಿಲ್ಲೆಯ ಎಲ್ಲ ತಾಲೂಕುಗಳ ಶಾಖೆಗಳೂ ಸಹ ಈ ಅವಧಿಯಲ್ಲಿ ನಡೆಸಿರುವ ರಚನಾತ್ಮಕ ಕಾರ್ಯಕ್ರಮಗಳು, ಜಿಲ್ಲಾ ಶಾಖೆಯೊಂದಿಗಿನ ನಿರಂತರ ಸಂಪರ್ಕ, ತಾಲೂಕು ಮಟ್ಟದಲ್ಲಿ ನಡೆಸಲಾದ ಕ್ರೀಡಾಕೂಟಗಳು, ಕಾರ್ಯಾಗಾರಗಳು, ಸಂವಾದಗಳು, ಪತ್ರಕರ್ತರ ಹಿತ ರಕ್ಷಣೆಯ ಕಾರ್ಯಚಟುವಟಿಕೆಗಳನ್ನು ಸಹ ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ತಿಳಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿಷ್ಟಿತ ಪ್ರಶಸ್ತಿಗೆ ಕಾರಣರಾದ ಹಿಂದಿನ ಸಾಲಿನ ಅಧ್ಯಕ್ಷರಾದ ಎನ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ ಹಾಗೂ ಅಂದಿನ ಕಾರ್ಯಕಾರೀ ಮಂಡಳಿ, ಪ್ರಸ್ತುತ ಪ್ರಧಾನ ಕಾರ್ಯದರ್ಶಿ ವಿ.ಟಿ. ಹಾಗೂ ಕಾರ್ಯಕಾರೀ ಮಂಡಳಿ, ಎಲ್ಲ ತಾಲೂಕುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿ ಮಂಡಳಿಯ ಸದಸ್ಯರುಗಳಿಗೆ ಶಿವಮೊಗ್ಗದ ಜಿಲ್ಲಾ ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.